ಇಂದು ಮಹಿಳೆಯರು ಸಾಧನೆಗೈಯದ ಕ್ಷೇತ್ರಗಳಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಯಾರಿಗೂ ಕಮ್ಮಿಯಿಲ್ಲ ಎನ್ನುವ ಹಾಗೆ ಮಹಿಳಾ ವರ್ಗದ ಸಬಲೀಕರಣಗೊಂಡಿದೆ. ಹಳ್ಳಿಯಿಂದ ದಿಲ್ಲಿಯವರೆಗಿನ ಮಹಿಳಾ ಸಮಾಜ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಷ್ಟು ಬೆಳೆದಿರುವುದು ಸಂತಷದ ವಿಷಯ.
ಮಾಹಿತಿ ತಂತ್ರಜ್ಞಾನ ಅಷ್ಟಾಗಿ ಮುಂದಯವರೆಯದ 1959 ರ ಕಾಲದಲ್ಲಿ ಏಳು ಜನರನ್ನು ಒಳಗೊಂಡ ಮಹಿಳೆಯರ ತಂಡವೊಂದು ಸ್ವತಂತ್ರವಾಗಿ ಮುಂದೆ ಬಂದು ದೇಶ ವಿದೇಶದ ಗಮನ ಸೆಳೆದ “ಲಿಜತ್ ಪಾಪಡ್” (ಹಪ್ಪಳ) ಕಂಪೆನಿ ಬೆಳೆದು ಬಂದ ರೋಚಕ ಪಯಣವಿದು.
ಇದು ಮಾರ್ಚ್ 1959 ರಲ್ಲಿ ಪ್ರಾರಂಭವಾದ ಪಯಣ. ಏಳು ಗುಜರಾತಿ ಮೂಲದ ಗೃಹಿಣಿಯರು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗುವ ಏನಾದ್ರು ಕೆಲಸವನ್ನು ಆರಂಭಿಸಬೇಕೆನ್ನುವಾಗ ಹುಟ್ಟಿಕೊಳ್ಳುವ ಯೋಚನೆ ಅಂದು ಎಲ್ಲರ ಮನೆಯಲ್ಲೂ ಊಟದೊಟ್ಟಿನ ರುಚಿಗೆ ಬಳಸುವ ಹಪ್ಪಳವನ್ನು ತಯಾರಿಸ ಬೇಕೆನ್ನುವುದು. ಮನೆ ಸ್ವಚ್ಛತೆ, ಮಕ್ಕಳ ಆರೈಕೆ, ಗಂಡಂದಿರ ಸೇವೆ ಎಲ್ಲಾ ಮುಗಿದ ಬಳಿಕ 12 ಗಂಟೆಯ ಬಳಿಕ ಮಾಡುವ ಕೆಲಸ ಏನಾದ್ರು ಮಾಡಬೇಕೆನ್ನುವ ಜಶ್ವಂತಿಬೇನ್ ಅವರ ಯೋಜನೆಗೆ ಉಳಿದ ಆರು ಮಂದಿ ಗೃಹಿಣಿಯರು ಕೈ ಜೋಡಿಸುತ್ತಾರೆ. ಹಪ್ಪಳವನ್ನು ಉತ್ಪಾದಿಸುವ ಉತ್ಸಾಹದೊಂದಿಗೆ ಮಹಿಳೆಯರು ಅಂದು ಸಾಮಾಜಿಕ ಸೇವೆಯಲ್ಲಿ ಜನಪ್ರಿಯರಾಗಿದ್ದ ಚಕ್ರಲಾಲ್ ಕಲಸ್ರಿ ಪಾರೇಕ್ ಅವರಿಂದ 80 ರೂಪಾಯಿಯ ಸಾಲವನ್ನು ಪಡೆಯುತ್ತಾರೆ.
ಒಗ್ಗಟ್ಟಿನಲ್ಲಿ ಬಲವಿದೆ ; ಸಂಕಷ್ಟದ ಮುಂದೆ ಜಯವಿದೆ.. : 1959 ಮಾರ್ಚ್ 15 ರಂದು ಇವರ ಮೊದಲ ಹಪ್ಪಳ ತಯಾರಿಕೆಯ ಕೆಲಸ ಆರಂಭವಾಗುತ್ತದೆ. ಮನೆಯ ಮಾಳಿಗೆ ಮೇಲೆ ಏಳು ಜನರು ಕೂತು ಪ್ರಾರಂಭಿಕವಾಗಿ 4 ಪ್ಯಾಕೆಟ್ ಹಪ್ಪಳವನ್ನು ತಯಾರಿಸುತ್ತಾರೆ. ಇವರ ಉಮೇದನ್ನು ನೋಡಿ ಚಗನ್ ಬಾಬಾ ಎನ್ನುವವರು ಇವರ ಮಾರ್ಗದರ್ಶಕರಾಗುತ್ತಾರೆ. ಮಹಿಳೆಯರು ಮೊದಲು ಎರಡು ರೀತಿಯ ಹಪ್ಪಳವನ್ನು ತಯಾರಿಸಲು ಆರಂಭಿಸುತ್ತಾರೆ. ಒಂದು ಉತ್ತಮ ಗುಣಮಟ್ಟ ಇದನ್ನು ಅಧಿಕ ಬೆಲೆಯಲ್ಲಿ ಮಾರುತ್ತಾರೆ. ಎರಡನೇಯದು ಕಡಿಮೆ ಗುಣಮಟ್ಟದು ಇದನ್ನು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಆದರೆ ಚಗನ್ ಈ ಮಹಿಳೆಯರ ಉತ್ಸಾಹವನ್ನು ನೋಡಿ ಕೇವಲ ಉತ್ತಮ ಗುಣಮಟ್ಟದ ಹಪ್ಪಳವನ್ನು ಮಾತ್ರ ತಯಾರಿಸಿ ಎಂದು ಸಲಹೆಯನ್ನು ನೀಡುತ್ತಾರೆ. ನಿಧಾನವಾಗಿ ಇವರ ಈ ಕಾಯಕ ವ್ಯಾಪಾರವಾಗಿ ಬೆಳೆಯಲು ಆರಂಭವಾಗುತ್ತದೆ. ಆರಂಭದಲ್ಲಿ ಇವರೊಂದಿಗೆ ಕೈ ಜೋಡಿಸದ ಮಹಿಳೆಯರು ಬಳಿಕ ಇದರ ಜನಪ್ರಿಯತೆಯನ್ನು ನೋಡಿ ಇದರಲ್ಲಿ ಉದ್ಯೋಗವನ್ನು ಮಾಡಲು ಸೇರಿಕೊಳ್ಳುತ್ತಾರೆ. ಎಲ್ಲರಿಗೂ ಉದ್ಯೋಗ ನೀಡಲು ಕಷ್ಟವಾದುದ್ದರಿಂದ ಇವರ ಕಂಪನಿ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಉದ್ಯೋಗ ಪಡೆಯಲು ಅವಕಾಶ ಮಾಡಿಕೊಡುತ್ತದೆ.
ಒಂದೊಂದು ನಡೆ ಮುನ್ನುಡೆಗೆ ದಾರಿ ಆಯಿತು : ಇವರ ಹಪ್ಪಳ ತಯಾರಿಕೆ ನೋಡು ನೋಡುತ್ತಿದ್ದಂತೆ ಜನಮಾನಸದಲ್ಲಿ ನೆಲೆಯೂರಲು ಪ್ರಾರಂಭವಾಗುತ್ತದೆ. ಮೊದಲಿಗೆ ಇವರೊಂದಿಗೆ ಸೇರಲು ಹಿಂಜರಿಯುತ್ತಿದ್ದ ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಉದ್ಯೋಗಕ್ಕಾಗಿ ಇವರೊಂದಿಗೆ ಸೇರುತ್ತಾರೆ. ಮೊದಲ ವರ್ಷದಲ್ಲಿ ನಾಲ್ಕು ತಿಂಗಳು ಮಳೆಯ ಕಾರಣದಿಂದ ಹಪ್ಪಳ ತಯಾರಿಕೆಯನ್ನು ನಿಲ್ಲಿಸುವ ಸಂಕಷ್ಟ ಎದುರಾಗುತ್ತದೆ. ಮುಂದೆ ಹಪ್ಪಳ ಒಣಗಿಸಲು ಸ್ಟೌವ್ ಉಪಯೋಗಿಸುತ್ತಾರೆ. ಉದ್ಯೋಗ ಆರಂಭಿಸಿದ ವರ್ಷದಲ್ಲಿ ವಾರ್ಷಿಕವಾಗಿ 1693 ರೂಪಾಯಿಯ ಲಾಭವನ್ನು ಗಳಿಸುತ್ತಾರೆ. ಮೂರು ತಿಂಗಳ ಅಂತರದಲ್ಲಿ 25 ಮಹಿಳೆಯರು ಜೊತೆ ಸೇರಿ ಒಟ್ಟಾಗಿ ಕೆಲಸವನ್ನು ಮಾಡಲು ಶುರು ಮಾಡುತ್ತಾರೆ. ಎರಡನೇ ವರ್ಷದಲ್ಲಿ ಇದರ ಖ್ಯಾತಿ ಇನ್ನಷ್ಟು ಹೆಚ್ಚಾಗಿ 150 ಮಹಿಳೆಯರು ಸೇರಿ ಹಪ್ಪಳ ತಯಾರಿಸುವ ಮಟ್ಟಿಗೆ ಬೆಳೆಯುವುದರ ಜೊತೆಗೆ ಸ್ಥಳೀಯ ಪತ್ರಿಕೆಗಳಲ್ಲಿ ಇವರ ಹಪ್ಪಳದ ಜಾಹೀರಾತು ರಾರಾಜಿಸುತ್ತದೆ. ವ್ಯಾಪಾರ ಜೋರಾಗಿ ನಡೆಯಲು ಶುರುವಾಗುತ್ತದೆ. ಮೂರನೇ ವರ್ಷದಲ್ಲಿ ಹಪ್ಪಳ ತಯಾರಿಸಲು ಇನ್ನಷ್ಟು ಮಹಿಳೆಯರು ಮುಂದೆ ಬರುತ್ತಾರೆ. 300 ಜನರನ್ನು ಒಳಗೊಂಡು ಒಂದು ಮನೆಯಲ್ಲಿ ಕೆಲಸ ಮಾಡಲು ಇಕ್ಕಟ್ಟು ಆದಾಗ ಶುದ್ದ ಹಿಟ್ಟನ್ನು ಕೆಲಸಗಾರರ ಮನೆಗೆ ಕೊಟ್ಟು ಅಲ್ಲೇ ತಯಾರಿಸಿ ಪ್ಯಾಕ್ ಮಾಡುವ ಅವಕಾಶವನ್ನು ಮಾಡಿಕೊಡುತ್ತಾರೆ. ಇದೇ ವರ್ಷದಲ್ಲಿ ಇಷ್ಟು ವರ್ಷ ತಯಾರಿಸುತ್ತಿದ್ದ ಹಪ್ಪಳಕ್ಕೆ ‘ ಲಿಜ್ಜತ್’ ಎಂದು ಹೆಸರನ್ನು ಇಡುತ್ತಾರೆ. ಲಿಜ್ಜತ್ ಅಂದರೆ ಒಂದು ಗುಜರಾತಿ ಪದ ಇದರ ಅರ್ಥ ಸ್ವಾದಿಷ್ಟ.
ಮುಂದೆ ಲಿಜ್ಜತ್ ಹಪ್ಪಳ ಮಾತ್ರವಲ್ಲದೆ ನಾನಾ ಬಗೆಯ ಉತ್ಪನ್ನಗಳನ್ನು ಉತ್ಪಾದಿಸಲು ಆರಂಭಿಸುತ್ತದೆ. ಮಸಾಲೆ ಪದಾರ್ಥಗಳು,ಬೇಕರಿ ಐಟಂಗಳನ್ನು ಉತ್ಪಾದಿಸಲು ಶುರು ಮಾಡುತ್ತಾರೆ. 1979 ಹೊತ್ತಿನಲ್ಲಿ ‘ಲಿಜ್ಜತ್’ ರಾಜ್ಯದ ನಾನಾ ಮೇಳಗಳಲ್ಲಿ, ಸಮಾರಂಭಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಲು ಶುರು ಮಾಡುತ್ತಾರೆ. ಇದು ಇದರ ಜನಪ್ರಿಯತೆಯನ್ನು ಹಾಗೂ ವ್ಯವಹಾರವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. 1990 ರ ಸಮಯದಲ್ಲಿ ಲಿಜ್ಜತ್ ಸಂಸ್ಥೆ ತನ್ನ ಉತ್ಪನ್ನಗಳನ್ನು ಅಮೇರಿಕಾ, ಇಂಗ್ಲೆಂಡ್, ಸಿಂಗಾಪುರ,ಥೈಲ್ಯಾಂಡ್ ದೇಶಗಳಿಗೆ ರಫ್ತು ಮಾಡಲು ಆರಂಭಿಸುತ್ತದೆ. ಲಿಜ್ಜತ್ ನ ಜನಪ್ರಿಯತೆಯಿಂದ ಮಾರುಕಟ್ಟೆಯಲ್ಲಿ ಅದರ ಹೆಸರಿನಲ್ಲಿ ಅನೇಕ ಕಳಪೆ ಗುಣಮಟ್ಟದ ಉತ್ಪನ್ನಗಳು ಬರಲಾರಂಭಿಸುತ್ತದೆ. ಪೊಲೀಸ್ ಕಾರ್ಯಚರಣೆ ನಂತರ ಅವುಗಳನ್ನು ತಡೆಯಲಾಗುತ್ತದೆ.
ಇಂದು ಲಿಜ್ಜತ್ ಸಂಸ್ಥೆಯ 82 ಕ್ಕೂ ಹೆಚ್ಚಿನ ಅಧಿಕೃತ ಶಾಖೆಗಳಿವೆ. ಇಂದು ಇದರಲ್ಲಿ 45 ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. 80 ರೂಪಾಯಿಯ ಸಾಲದಿಂದ ಆರಂಭವಾದ ಲಿಜ್ಜತ್ ಹಪ್ಪಳ ಇಂದು ಬರೋಬ್ಬರಿ 1600 ಕೋಟಿಯ ವಾರ್ಷಿಕ ಆದಾಯವನ್ನು ಗಳಿಸುತ್ತಿದೆ..
– ಸುಹಾನ್ ಶೇಕ್