ನವದೆಹಲಿ: ನಾವು ಪಟ್ಟ ಪರಿಶ್ರಮ, ಬದುಕಿನ ಯಾವುದೋ ಒಂದು ಸಂದರ್ಭದಲ್ಲಿ ನಮ್ಮ ಕೈ ಹಿಡಿಯುತ್ತದೆ ಎನ್ನುವುದಕ್ಕೆ ಕಿರಿಯ ಕ್ರಿಕೆಟರ್ ಮೊಹಮ್ಮದ್ ಅಮಾನ್ ಸಾಕ್ಷಿ. ಅಮ್ಮ-ಅಪ್ಪ ಅಸುನೀಗಿ ಅನಾಥನಾಗಿದ್ದ ಬಾಲಕ, 16ನೇ ವಯಸ್ಸಿನಲ್ಲೇ ಅನಿವಾರ್ಯವಾಗಿ ಕುಟುಂಬದ ಜವಾಬ್ದಾರಿ ಹೊರಬೇಕಾದ ಪರಿಸ್ಥಿತಿ ಬಂದೊದಗಿತ್ತು. ಹೀಗೆ ಬಹಳ ಕಷ್ಟದ ದಿನಗಳನ್ನ ಕಳೆದು ಬೆಳೆದ ಹುಡುಗನೀಗ 19ರ ವಯೋಮಿತಿಯ ಭಾರತ ಕ್ರಿಕೆಟ್ ತಂಡಕ್ಕೆ ನಾಯಕರಾಗಿ ಹೆಸರಿಸಲ್ಪಟ್ಟಿದ್ದಾರೆ.
ಪ್ರಸ್ತುತ 18 ವರ್ಷದವರಾದ ಉತ್ತರ ಪ್ರದೇಶದ ಮೊಹಮ್ಮದ್ ಅಮಾನ್ ತಮ್ಮ ತಾಯಿ ಸೈಬಾರನ್ನು 2020ರಲ್ಲಿ ಕಳೆದುಕೊಂಡರು. ತಾಯಿ ಕೋವಿಡ್ ಪಿಡುಗಿನ ವೇಳೆ ಅಸುನೀಗಿದರು. ಟ್ರಕ್ ಚಾಲಕರಾಗಿ ದುಡಿಯುತ್ತಿದ್ದ ತಂದೆ ಮೆಹ್ತಾಬ್ ಕೂಡ ಕೆಲಸ ಕಳೆದುಕೊಂಡು ಅನಾರೋಗ್ಯದಿಂದ ಹಾಸಿಗೆ ಹಿಡಿದರು. ಪತ್ನಿ ತೀರಿದ 2 ವರ್ಷದಲ್ಲಿ ಅಂದರೆ 2022ರಲ್ಲಿ ಮೆಹ್ತಾಬ್ ಕೂಡ ಸಾವನ್ನಪ್ಪಿದರು.
ಆಗ 16 ವರ್ಷದವರಾಗಿದ್ದ ಅಮಾನ್ ತನ್ನ ಮೂವರು ಕಿರಿಯ ಸಹೋದರರ ಸಹಿತ ಕುಟುಂಬದ ಜವಾಬ್ದಾರಿ ಹೊರಬೇಕಾಗಿ ಬಂದಿತ್ತು. ಅಲ್ಲದೆ, ಆ ವೇಳೆ ಅಮಾನ್ ಮುಂದೆ ಒಂದೋ ಕ್ರಿಕೆಟ್‌ನಲ್ಲಿ ಮುಂದುವರಿಯುವುದು ಅಥವಾ ತನ್ನ ಕ್ರಿಕೆಟ್ ಕನಸನ್ನು ಬದಿಗಿಟ್ಟು ಬೇರೆಯೇ ಏನಾದರೂ ಕೆಲಸ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂಥ ಅನೇಕ ಕಷ್ಟದ ಪರಿಸ್ಥಿತಿಗಳನ್ನು ದಾಟಿರುವ ಅಮಾನ್ ಈಗ ಭಾರತ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ವಿಶೇಷ.
ಮುಂದಿನ ತಿಂಗಳು ತಮಿಳುನಾಡಿನ ಪುದುಚೇರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಯು-19 ವಿರುದ್ಧದ ಏಕದಿನ ಕ್ರಿಕೆಟ್‌ಗಾಗಿ ಶನಿವಾರ ಭಾರತ ಯು-19 ತಂಡ ಪ್ರಕಟವಾಗಿದ್ದು, ಇದರಲ್ಲಿ ಅಮಾನ್ ನಾಯಕರಾಗಿ ಹೆಸರಿಸಲ್ಪಟ್ಟಿದ್ದರು. ಇದೇ ತಂಡದಲ್ಲಿ ದಂತಕತೆ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಕೂಡ ಕಾಣಿಸಿಕೊಂಡಿದ್ದರು.