Advertisement

ವರ್ತಮಾನದಲ್ಲಿ ಇತಿಹಾಸದ ಕಥನ

06:16 PM Feb 22, 2020 | mahesh |

ಎರಡು ವಿಭಿನ್ನ ಸಂಸ್ಕೃತಿಗಳಲ್ಲಿ ಮೊಳಕೆಯೊಡೆಯುವ ಪ್ರೇಮಕಥೆಗಳು ವಿಸ್ತಾರಗೊಳ್ಳುತ್ತ ಒಂದಕ್ಕೊಂದು ಹೆಣೆದುಕೊಂಡು ಕಡೆಗೆ ಸಂಧಿಸಿದರೂ ದೂರವಾಗಿಯೇ ಅಂತ್ಯವಾಗುವ ಅದ್ಭುತ ಕಥಾನಕ ಇದು.

Advertisement

ಇತಿಹಾಸದ ಪುಟಗಳಲ್ಲಿ ಅಡಗಿದ ಪ್ರೇಮ, ಕಾಮ, ಲಾಲಸೆ, ಕ್ರೌರ್ಯದ ಪರಮಾವಧಿಗಳೊಂದಿಗೆ ಅಖಂಡ ಪ್ರೇಮ, ಅನುಕಂಪ, ಕರುಣೆಗಳೂ ಹೆಣೆದುಕೊಂಡು ಸಾಮಾನ್ಯರೂ ಅಸಾಮಾನ್ಯರಾಗುವ ಕಥೆ ಇಲ್ಲಿದೆ. ಯಹೂದಿಗಳ ಮಾರಣ ಹೋಮ, ಮತಾಂತರ, ಸತೀಪದ್ಧತಿ, ರಾಜನಿಗೆ ಗಂಡು ಮಗುವಾದಾಗ ಪ್ರಜೆಯೊಬ್ಬ ಲೆಂಕನಾಗುವ ಪದ್ಧತಿ, ಮಾಸ್ತಿಯಾಗುವ ಘಟನೆಗಳು ನನ್ನ ನಿದ್ದೆಗೆಡಿಸಿದವು. ಸಮುದ್ರಯಾನದ ಭೀಕರತೆ, ಗೆದ್ದವರು ಸೋತವರನ್ನು ಮಣಿಸುವ ಭೀಕರ ಪರಿ, ಗುಲಾಮರ ಜೀವಂತ ಸಾವಿನ ವಿವರಣೆ, ಗೆದ್ದ ಹೆಣ್ಣುಗಳನ್ನು ಅಮಾನುಷವಾಗಿ ನಡೆಸಿಕೊಳ್ಳುವ ರೀತಿಯ ವಿವರಣೆಗಳನ್ನು ಓದಿ ಮನಸ್ಸು ವಿಹ್ವಲಗೊಂಡಿತು. ಕಾದಂಬರಿಯೊಂದು ಕಾಡುವುದು ಎಂದರೆ ಹೀಗೆಯೇ, ಅಲ್ಲವೆ?

ಈ ಪುಸ್ತಕದಲ್ಲಿ ಎಲ್ಲವೂ ಇದೆ. ದೇಶ-ಕಾಲ, ಮನುಷ್ಯ ಸ್ವಭಾವ, ಯುದ್ಧ- ಲಾಲಸೆಗಳ ಸೂಕ್ಷ್ಮ ಒಳಹರಿವಿದೆ. ಇಷ್ಟಿದ್ದರೂ ಇದರ ನಾಯಕ ಒಬ್ಬ ಸಾಮಾನ್ಯನೇ. ಈ ಕಾದಂಬರಿಯ ಕಥಾವಸ್ತು ವಿಸ್ತರಿಸಿ ಐದು ಶತಮಾನಗಳ ಹಿಂದಿನ ರಾಜಕೀಯ, ಸಾಂಸ್ಕೃತಿಕ ರೀತಿನೀತಿಗಳ ಒಳಹರಿವನ್ನು ತೆರೆದಿಟ್ಟಿದೆ.

ಇದೊಂದು ಸಂಗ್ರಹಯೋಗ್ಯ ಪುಸ್ತಕ. ವಾಸ್ಕೋಡಗಾಮಾ ಸಾಗಿದ ದಾರಿ, ಭಾರತವನ್ನು ತಲುಪುವ ಆ ಸಂದರ್ಭದಲ್ಲಿ ರಾಜನ ಮನಃಸ್ಥಿತಿ ಹೇಗಿತ್ತು, ಜನರ ಮನಃಸ್ಥಿತಿ ಹೇಗಿತ್ತು ಎಂಬ ವಿವರಣೆಗಳು ನಮ್ಮ ಜಾಗತಿಕ ಇತಿಹಾಸದ ಬಗ್ಗೆ ಹೆಚ್ಚು ಕುತೂಹಲ ಮೂಡಿಸುತ್ತವೆ. ಜೊತೆಗೆ ಸಾಗುವ ಪ್ರೇಮಕಥೆಗೆ ಹೊಂದಿಕೊಂಡು ನೂರಾರು ಸಂಪ್ರದಾಯ, ಮನುಷ್ಯ ಸ್ವಭಾವ, ವಿಪರೀತವಾದ ಭಾವಲೋಕಗಳ ಪರಿಚಯವಾಗುತ್ತದೆ. ಹಾಗಾಗಿ, ಓದಿದ ನಂತರ ಮನುಷ್ಯ ವಿಧಿಯ ಕೈಗೊಂಬೆಯೇ, ಜೀವನದ ಏರಿಳಿತಗಳಲ್ಲಿ ಅವನ ಪಾತ್ರವೇನು? ನಡೆಸುವವನು ಒಬ್ಬ ಇದ್ದಾನೆ ಎಂದಾದರೆ ಈ ರೀತಿ ನರಳಾಟ, ಸಂಕಟ ನೋವುಗಳೇಕೆ ಎಂಬ ತಾತ್ವಿಕ ಪ್ರಶ್ನೆಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ.

ಮನುಷ್ಯನ ವಿಕಾಸ ಪಥದಲ್ಲಿ ನದಿಯದ್ದು ಮಹತ್ವದ ಪಾತ್ರ. ಈ ಜಗತ್ತಿನ ಎಲ್ಲ ಜನಪದಗಳೂ ನದಿ ದಡದಲ್ಲಿಯೇ ಹುಟ್ಟಿ ಬೆಳೆದವು. ತೇಜೋ- ತುಂಗಭದ್ರಾ ಕಾದಂಬರಿಯೂ ಎರಡು ನದಿಗಳ ಹರಿವಿನ ನಡುವೆ ಸಾಗುವ ಕಥೆ. ಈ ಎರಡು ಮಹಾನದಿಗಳ ನಡುವೆ ಬೃಹತ್‌ ಸಮುದ್ರವೇ ಇದೆ. ಈ ಮಾತು ಕಥೆಗೂ ಅನ್ವಯಿಸುತ್ತದೆ.

Advertisement

ಇತಿಹಾಸದೊಳಗೊಂದು ಇಣುಕು ಹಾಕುವಂತೆ ಮಾಡುವ, ಅಪಾರ ಸಂಶೋಧನೆ, ಚಿಂತನೆ, ಸೃಜನಶೀಲತೆಗಳಿಂದ ಸಮೃದ್ಧವಾದ ಕಥಾಹಂದರವಿದು. ಬಹುಶಃ ಜೀವಮಾನದಲ್ಲಿ ಅಪರೂಪಕ್ಕೊಮ್ಮೆ ಲಭಿಸುವ ಅನನ್ಯ, ಮಹತ್ವದ ಕಾಲಮಾನದ ಕೃತಿ ಇದು.

ಡಾ|| ಸಂಧ್ಯಾ ಎಸ್‌. ಪೈ

Advertisement

Udayavani is now on Telegram. Click here to join our channel and stay updated with the latest news.

Next