ಶಿಮ್ಲಾ: ನಲವತ್ತು ವರ್ಷಗಳಿಂದಲೂ ಪಕ್ಷಕ್ಕೆ ನಿಷ್ಠರಾಗಿ ದುಡಿಯುತ್ತಾ, ಕಾಂಗ್ರೆಸ್ ನ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸುಖ್‌ವಿಂದರ್ ಸಿಂಗ್ ಸುಖು(58) ಈಗ ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
2003ರಿಂದಲೂ ಅವರು ನದೌನ್ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿರುವ ಅವರು, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಟೀಕಾಕಾರನೆಂದೇ ಗುರುತಿಸಿಕೊಂಡವರು.
ಸಿಎಂ ಹುದ್ದೆಯ ಪೈಪೋಟಿಯಲ್ಲಿದ್ದ ಪ್ರತಿಭಾ ಸಿಂಗ್ ಹಾಗೂ ಮುಕೇಶ್ ಅಗ್ನಿಹೋತ್ರಿ ಅವರು ದಿವಂಗತ “ರಾಜಾ’ ವೀರಭದ್ರ ಸಿಂಗ್ ಅವರ ನೆರಳಲ್ಲೇ ರಾಜಕೀಯಕ್ಕೆ ಪ್ರವೇಶ ಪಡೆದವರು. ಆದರೆ, ಸುಖ್‌ವಿಂದರ್ ಅವರು ಸ್ವಸಾಮರ್ಥ್ಯ ದಿಂದಲೇ ಬೆಳೆದವರು. ಒಂದು ಕಾಲದಲ್ಲಿ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸುಖು, ಎನ್‌ಎಸ್‌ಯುಐಯಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ನಾಯಕನಾಗಿ, ನಂತರ ಪಾಲಿಕೆ ಚುನಾವಣೆಯಲ್ಲಿ ಗೆದ್ದು, ರಾಜ್ಯ ರಾಜಕೀಯ ಪ್ರವೇಶಿಸಿದ ಅವರು, ಹಿಮಾಚಲದಲ್ಲಿ ಪಕ್ಷದ ಎಲ್ಲ ಹಂತಗಳಲ್ಲೂ ಅನುಭವ ಗಳಿಸುತ್ತಾ ಬಂದವರು.
ಇದನ್ನೂ ಓದಿ:ಸೋತ ಪೋರ್ಚುಗಲ್..; ಕಣ್ಣೀರಿಡುತ್ತಲೇ ಮೈದಾನ ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ
ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಅವರಿಗೆ “ಫೈರ್‌ಬ್ರ್ಯಾಂಡ್’ ಎಂಬ ಹೆಸರಿತ್ತು. ಪಕ್ಷದ ಕಾರ್ಯಕರ್ತರ ಮೇಲಿನ ಹಿಡಿತ, ಸ್ಥಳೀಯರೊಂದಿಗಿನ ಅವರ ಆತ್ಮೀಯ ನಂಟಿನಿಂದಾಗಿಯೇ ಹಮೀರ್ಪುರದ 5 ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಲಾಗಿದೆ. ಏಕೆಂದರೆ, ಇದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ಪ್ರಭಾವವಿರುವ ಬಿಜೆಪಿಯ ಭದ್ರಕೋಟೆ. ಹೀಗಿದ್ದರೂ, ತಮ್ಮ ಸಂಘಟನಾ ಸಾಮರ್ಥ್ಯದಿಂದಾಗಿ ಸುಖು ಅವರು ಎಲ್ಲ “ಅಲೆ’ಗಳನ್ನೂ ದಾಟಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಿಎಂ ಸ್ಥಾನಕ್ಕೆ ಸುಖ್‌ರನ್ನು ಆಯ್ಕೆ ಮಾಡುವ ಮೂಲಕ ಬೇರುಮಟ್ಟದ ಕಾರ್ಯಕರ್ತರಿಗೂ ಉನ್ನತ ಹುದ್ದೆ ನೀಡಲಾಗುತ್ತದೆ ಎಂಬ ಸಂದೇಶವನ್ನು ರಾಹುಲ್ ಗಾಂಧಿ ರವಾನಿಸಿದ್ದಾರೆ.