Advertisement

ಕಾಮಿಡಿ ಗುಬ್ಬಿಯ ನೋವು-ನಲಿವು

12:12 PM Aug 18, 2019 | Suhan S |
ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
•ನಿರ್ಮಾಣ: ಟಿ.ಆರ್‌.ಚಂದ್ರಶೇಖರ್‌

•ನಿರ್ದೇಶನ: ಸುಜಯ್‌ ಶಾಸ್ತ್ರಿ

Advertisement

•ತಾರಾಗಣ: ರಾಜ್‌ ಬಿ ಶೆಟ್ಟಿ, ಕವಿತಾ, ಗಿರಿ, ಶೋಭರಾಜ್‌, ಪ್ರಮೋದ್‌ ಶೆಟ್ಟಿ ಮತ್ತಿತರರು.

ಆತನಿಗೆ ಒಳ್ಳೆಯ ಉದ್ಯೋಗವಿರುತ್ತದೆ, ಕೈ ತುಂಬಾ ಸಂಬಳವೂ ಬರುತ್ತದೆ. ಒಳ್ಳೆಯ ಫ್ಯಾಮಿಲಿ ಹಿನ್ನೆಲೆ ಕೂಡಾ ಇದೆ. ಆದರೆ, ಆತನ ತಂದೆ-ತಾಯಿಗೆ ಒಂದೇ ಒಂದು ಕೊರಗು. ಅದು ಮಗನಿಗೆ ಮದುವೆಯಾಗಿಲ್ಲ ಎಂಬುದು. ಆತನನ್ನು ನೋಡಿದ ಬಹುತೇಕ ಹುಡುಗಿಯರು ಒಂದಲ್ಲ, ಒಂದು ಕಾರಣದಿಂದ ರಿಜೆಕ್ಟ್ ಮಾಡಿದರೆ, ಇನ್ನು ಕೆಲವು ಹುಡುಗಿಯರನ್ನು ಈತನೇ ನೋ ಎಂದಿರುತ್ತಾನೆ. ಈ ಗ್ಯಾಪಲ್ಲೇ ಈತನಿಗೆ ಲವ್‌ಮ್ಯಾರೇಜ್‌ ಆಗಬೇಕೆಂಬ ಆಸೆಯೂ ಬರುತ್ತದೆ. ಆತನ ಆಸೇ ಈಡೇರುತ್ತಾ, ಮಗನಿಗೆ ಮದುವೆಯಾದ ತೃಪ್ತಿ ಪಾಲಕರಿಗೆ ಸಿಗುತ್ತಾ… ಈ ಕುತೂಹಲ ನಿಮಗಿದ್ದರೆ ನೀವು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ನೋಡಬಹುದು.

ಮದುವೆ ವಿಚಾರವನ್ನಿಟ್ಟುಕೊಂಡು ನಿರ್ದೇಶಕರು ಇಡೀ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಹೇಳಿಕೇಳಿ ‘ಗುಬ್ಬಿ’ ಒಂದು ಕಾಮಿಡಿ ಸಿನಿಮಾ. ಮದುವೆ ವಯಸ್ಸಿಗೆ ಬಂದ ಹುಡುಗನೊಬ್ಬನಿಗೆ ಕಂಕಣ ಕೂಡಿಬಾರದೇ ಇದ್ದಾಗ ಆತ ಅನುಭವಿಸುವ ನೋವು, ಅವಮಾನಗಳ ಜೊತೆ ಅದಕ್ಕೊಂದಿಷ್ಟು ಕಾಮಿಡಿ ಸೇರಿಸಿ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ನಾಯಕ ರಾಜ್‌ ಬಿ ಶೆಟ್ಟಿ. ರಾಜ್‌ ಶೆಟ್ಟಿಯವರ ‘ಒಂದು ಮೊಟ್ಟೆಯ ಕಥೆ’ ಚಿತ್ರವನ್ನು ನೀವು ನೋಡಿದ್ದರೆ ಅಲ್ಲಿನ ಕಥೆಯ ಮೂಲ ಅಂಶ ಕೂಡಾ ಇದೇ ಆಗಿತ್ತು. ಎಲ್ಲಾ ಹುಡುಗಿಯರಿಂದ ರಿಜೆಕ್ಟ್ ಆದ ಹುಡುಗನೊಬ್ಬನ ನೋವಿಗೆ ಕಾಮಿಡಿ ಬೆರೆಸಿ ಈ ಸಿನಿಮಾವನ್ನು ಮಾಡಲಾಗಿತ್ತು. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ನೋಡಿದಾಗ ನಿಮಗೆ ಅದರ ಮತ್ತೂಂದು ವರ್ಶನ್‌ನಂತೆ ಕಾಣುತ್ತದೆ. ಆ ಚಿತ್ರವನ್ನು ನೈಜತೆಗೆ ಹೆಚ್ಚು ಒತ್ತುಕೊಟ್ಟು ಮಾಡಲಾಗಿತ್ತು. ಆದರೆ, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ಔಟ್ ಅಂಡ್‌ ಔಟ್ ಕಾಮಿಡಿ ಚಿತ್ರವಾಗಿ ಮೂಡಿಬಂದಿದೆ. ನಿರ್ದೇಶಕರು ಯಾವುದೇ ಲಾಜಿಕ್‌ಗೆ ಒಳಗಾಗದೇ ಪ್ರೇಕ್ಷಕರನ್ನು ನಗಿಸಬೇಕೆಂಬ ಉದ್ದೇಶದಿಂದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಕಥೆಗಿಂತ ಹೆಚ್ಚಾಗಿ ಸನ್ನಿವೇಶಗಳ ಮೂಲಕ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿ ಹೀರೋ ತರಹ ಬಿಲ್ಡಪ್‌ನೊಂದಿಗೆ ಮುಂದೆ ಹೋದಾಗ ಆತ ಏನೇನು ತೊಂದರೆಗೆ ಸಿಲುಕುತ್ತಾನೆ ಎಂಬುದನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಲಾಗಿದೆ. ಮೊದಲೇ ಹೇಳಿದಂತೆ ಯಾವುದೇ ಲಾಜಿಕ್‌ ಹುಡುಕದೇ ನೀವು ಈ ಸಿನಿಮಾವನ್ನು ಎಂಜಾಯ್‌ ಮಾಡಬಹುದು. ಚಿತ್ರದ ಸಂಭಾಷಣೆಗಳ ಮೂಲಕ ನಗುತರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಚಿತ್ರದ ಕೆಲವು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ ಸಿನಿಮಾದ ವೇಗ ಮತ್ತಷ್ಟು ಹೆಚ್ಚುತ್ತಿತ್ತು. ಅದರ ಹೊರತಾಗಿ ‘ಗುಬ್ಬಿ’ಯನ್ನು ಎಂಜಾಯ್‌ ಮಾಡಬಹುದು.

ಇಡೀ ಚಿತ್ರ ರಾಜ್‌ ಶೆಟ್ಟಿ ಸುತ್ತವೇ ಸಾಗುತ್ತದೆ. ಅವರ ಮದುವೆ ಕನಸು, ಆ ಹಂತದಲ್ಲಿ ಅನುಭವಿಸುವ ನೋವು, ಅವಮಾನ, ಇಷ್ಟಪಟ್ಟ ಹುಡುಗಿಗಾಗಿ ತೆಗೆದುಕೊಳ್ಳುವ ರಿಸ್ಕ್ ಸುತ್ತ ಅವರ ಪಾತ್ರ ಸಾಗುತ್ತದೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಅವರು ಪ್ರಯತ್ನಿಸಿದ್ದಾರೆ. ಹುಡುಗಿ ಸಿಗದ ನೋವು ಅನುಭವಿಸುವ ಹುಡುಗನ ಪಾತ್ರಕ್ಕೆ ರಾಜ್‌ ಬಿ ಶೆಟ್ಟಿ ಬ್ರಾಂಡ್‌ ಆಗುತ್ತಿದ್ದಾರಾ ಎಂಬ ಅನುಮಾನ ಕೂಡಾ ಸಿನಿಪ್ರೇಕ್ಷಕರಿಗೆ ಕಾಡದೆ ಇರದು. ನಿರ್ದೇಶಕ ಸುಜಯ್‌ ಶಾಸ್ತ್ರಿ ಕೂಡಾ ಪಾತ್ರವೊಂದರ ಮೂಲಕ ಚಿತ್ರದಲ್ಲಿ ನಗಿಸಲು ಪ್ರಯತ್ನಿಸಿದ್ದಾರೆ. ಉಳಿದಂತೆ ಕವಿತಾ ಗೌಡ, ಗಿರಿ, ಶೋಭರಾಜ್‌, ಪ್ರಮೋದ್‌ ಶೆಟ್ಟಿ ಸೇರಿದಂತೆ ಇತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಒಂದು ಹಾಡು ಇಷ್ಟವಾಗುತ್ತದೆ.

Advertisement

 

● ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next