Advertisement
ಸರಿ ಸುಮಾರು 20 ದಿನಗಳಿಂದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ನನ್ನೂರು ಕಾರ್ಕಳದಲ್ಲಿ ಭೋರ್ಗರೆದು ಸುರಿಯುತ್ತಿರುವ ಮಳೆ, ಮತ್ತೆ ಮತ್ತೆ ನನ್ನ ಬಾಲ್ಯದ ದಿನಗಳ ಕಾರಿರುಳನ್ನು ನೆನಪಿಸುತ್ತದೆ.
Related Articles
Advertisement
ದ್ವೇಷ ಅಳಿಯಿತು,ಪ್ರೀತಿ ಅರಳಿತು…
ನಮ್ಮ ಮನೆಯಿಂದ ತುಸು ಎತ್ತರದಲ್ಲಿದ್ದ ಸೀನುವಿನ ಮನೆಗೆ ನಾವೆಲ್ಲಾ ಆದಷ್ಟು ಬೇಗ ತೆರಳಬೇಕಿತ್ತು. ಅದಾಗಲೇ ಸುತ್ತಲಿನ ಏಳೆಂಟು ಕುಟುಂಬಗಳ ಜನರು ಮುಳುಗಡೆಯಾದ ತಮ್ಮ ಮನೆಗಳಿಂದ ಹೇಗೋ ಜೀವ ಉಳಿಸಿಕೊಂಡು ಬಂದು ಅವರ ಮನೆಯಲ್ಲಿ ಆಸರೆ ಪಡೆದಿದ್ದರು. ಕೈಗೆ ದೊರೆತ ಆಹಾರ ಸಾಮಗ್ರಿಗಳು ಮತ್ತು ಬಟ್ಟೆಗಳೊಂದಿಗೆ ನಾವು ಸೀನುವಿನ ಮನೆ ಸೇರಿದರೂ, ನಮ್ಮ ಕೆಳಗಿನ ಮನೆಯಲ್ಲಿದ್ದ ದೊಡ್ಡಮ್ಮನ ಮನೆಯವರು ಮನೆ ಬಿಟ್ಟು ತೆರಳುವ ನಿರ್ಧಾರ ಮಾಡಿರಲಿಲ್ಲ. ನೆರೆ ನೀರು ಅವರ ಅಂಗಳ ದಾಟಿ ಚಾವಡಿಯಲ್ಲಿ ಸುಮಾರು ಎರಡು ಅಂಗುಲದಷ್ಟು ತುಂಬಿಕೊಂಡಿತ್ತು. ಬಹಳಷ್ಟು ನೆರೆಮನೆಯವರೊಂದಿಗೆ ವೈಮನಸ್ಸು ಹೊಂದಿದ್ದ ದೊಡ್ಡಮ್ಮನ ಮನೆಯವರನ್ನು ಯಾರೂ ಕರೆಯುವ ಗೋಜಿಗೂ ಹೋಗಿರಲಿಲ್ಲ. ಆದರೆ ಕತ್ತಲಾವರಿಸುತ್ತಿದ್ದಂತೆ, ಎಲ್ಲರ ವೈಮನಸ್ಸು ಎಲ್ಲಿ ಮಾಯ ವಾಯಿತೋ? ಮೊದಲಿಗೆ ನನ್ನ ಕೊನೆಯ ಅಣ್ಣ ಅಲ್ಲೇ ಇದ್ದ ದೋಣಿಯನ್ನು ಮನೆಯ ಒಳಗೆ ಹೇಗೋ ನುಗ್ಗಿಸಿ, ಮನೆಯವರೆಲ್ಲರನ್ನೂ ಸುರಕ್ಷಿತವಾಗಿ ಮೇಲಿನ ಮನೆಗೆ ತಲುಪಿಸಿದರು. ಅವರು ದಡಕ್ಕೆ ಬಂದು ತಲುಪಿದ ಎರಡೇ ನಿಮಿಷಕ್ಕೆ ಬಲಭಾಗದ ಮನೆಯ ಗೋಡೆ ಕುಸಿದು ಬಿತ್ತು.
ಮರೆಯಲಾಗದ ನೆನಪುಗಳು…
ಅಷ್ಟರಲ್ಲಿ ತನಗೆ ಬಲು ಪ್ರಿಯವಾದ ರೇಡಿಯೋವನ್ನು ಮನೆಯೊಳಗೇ ಬಿಟ್ಟು ಬಂದದ್ದಾಗಿ ದೊಡ್ಡಮ್ಮನ ಗಲಾಟೆ ಆರಂಭವಾಯಿತು. ಆಗ, ಎಲ್ಲರೂ ಬೇಡವೆಂದರೂ ಕೇಳದೇ, ನನ್ನ ಕೊನೆಯ ಅಣ್ಣ ಬೀಳುತ್ತಿದ್ದ ಮನೆ ನುಗ್ಗಿ ಹೋಗಿ ಆ ರೇಡಿಯೋವನ್ನು ಕಾಪಾಡಿ ತಂದರು. ದೊಡ್ಡಮ್ಮನ ಹಟ್ಟಿಯಲ್ಲಿದ್ದ ದನಕರುಗಳನ್ನು ದೋಣಿ ಹತ್ತಿಸಲು ಪ್ರಯಾಸಪಟ್ಟು, ಕೊನೆಗೆ ನೆರೆ ನೀರಿನಲ್ಲಿ ಈಜಿಕೊಂಡೇ ಅವುಗಳನ್ನು ಪಕ್ಕದ ಗುಡ್ಡಕ್ಕೆ ಸಾಗಿಸಿದರು. ಹೀಗೆ ಸಾಗಿಸುವ ಭರದಲ್ಲಿ ತುಂಬು ಗಬ್ಬ ಹೊತ್ತಿದ್ದ ಹಸುವೊಂದು ಒದ್ದಾಡಿ ಪ್ರಾಣ ತ್ಯಜಿಸಿದ್ದು ಮರೆಯಬೇಕೆಂದರೂ ಮರೆಯಲಾರದ ನೆನಪಾಗಿ ಕಾಡುತ್ತದೆ. ಹುಯ್ಯುತ್ತಿರುವ ಮಳೆ ಕಂಡಾಗ, ಆ ದಿನಗಳಲ್ಲಿ ಸೀನುವಿನ ಅಮ್ಮ, ತಮ್ಮ ಮನೆಯಲ್ಲಿ ಆಸರೆ ಪಡೆದಿದ್ದ ನಮ್ಮಂತಹ ಸರಿಸುಮಾರು 50 ಜನರಿಗೆ 4 ದಿನಗಳ ಕಾಲ ಅನ್ನಪೂರ್ಣೆಯಾದದ್ದು, ನೋವು, ಭೀತಿ ಮರೆಯಲು, ಹಿರಿಯರೆಲ್ಲರೂ ತಮ್ಮ ಜೀವನದ ರಸ ಪ್ರಸಂಗಗಳನ್ನು ನಿದ್ರೆ ಆವರಿಸುವವರೆಗೂ ಮೆಲುಕು ಹಾಕುತ್ತಿದ್ದದ್ದು, ಕೊರೆಯುವ ಚಳಿಯಲ್ಲಿ ಜಾಗವಿದ್ದ ಕಡೆ ಬಿದ್ದುಕೊಂಡಿದ್ದ ನಮಗೆ, ತಡರಾತ್ರಿಯಲ್ಲಿ ದೂರದಲ್ಲಿ ನೆರೆಯ ದಾಳಿಗೆ ಕುಸಿದು ಬೀಳುತ್ತಿದ್ದ ಮನೆಗಳ ಭಯಾನಕ ಸದ್ದು ಗಾಢ ಮೌನವನ್ನು ಸೀಳಿಕೊಂಡು ಬರುತ್ತಿದ್ದದ್ದು, ನನ್ನ ಕಿವಿಗಳಲ್ಲಿ ಈಗಲೂ ಅನುರಣಿಸುತ್ತದೆ.
ಕಾಂಕ್ರೀಟ್ ಮನೆಯಲ್ಲಿ ಬದುಕಲು ಅವಕಾಶ ಕಲ್ಪಿಸಿದ ದೇವರಿಗೆ ಮನಸ್ಸು ಧನ್ಯವಾದ ಅರ್ಪಿಸುತ್ತಿದ್ದರೆ, ಅಲ್ಲೆಲ್ಲೋ ನನ್ನ ಬಾಲ್ಯದ ಮನೆಯಂತಹುದೇ ಮನೆಯಲ್ಲಿ ಉಸಿರು ಬಿಗಿಹಿಡಿದು ನೆರೆಯ ಸಂಕಷ್ಟಗಳನ್ನು ಎದುರಿಸುತ್ತಿರುವ ಜೀವಗಳ ಬಗ್ಗೆ ಮಮ್ಮಲ ಮರುಗುತ್ತಿದೆ.
-ಜ್ಯೋತಿ ಪದ್ಮನಾಭ, ಕಾರ್ಕಳ