ಒಂದು ದಟ್ಟ ಕಾಡು. ಅಲ್ಲಿ ನಾನಿ ಎನ್ನುವ ಪುಟ್ಟ ಅಳಿಲಿನ ಕುಟುಂಬವೊಂದು ವಾಸ ಮಾಡುತ್ತಿತ್ತು. ನಾನಿ ಬೆಳಗ್ಗೆ ಬೇಗ ಎದ್ದು ಆಹಾರ ಹುಡುಕಲು ಹೋಗಿ ಸೂರ್ಯ ನೆತ್ತಿ ಮೇಲೆ ಬರುವುದರೊಳಗೆ ಮನೆ ಸೇರುತ್ತಿತ್ತು. ಬಳಿಕ ಊಟ ಮಾಡಿ ನಿದ್ದೆ ಹೋದರೆ ಸಂಜೆ ಮನೆಮಂದಿಯೊಡನೆ ಸೇರಿ ಹಾಡುತ್ತ, ಕುಣಿಯುತ್ತ ಕಾಲ ಕಳೆಯುತ್ತಿತ್ತು.
ಇದನ್ನು ನೋಡಿ ಚಿಂಟು ಇರುವೆಗೆ ಬೇಸರಪಡುತ್ತಿತ್ತು. ತಾನು ದಿನವಿಡೀ ನನ್ನ ಕುಟುಂಬಕ್ಕಾಗಿ ದುಡಿಯುತ್ತೇನೆ. ಆದರೂ ಸಾಕಾಗುವುದಿಲ್ಲ. ಆದರೆ ಈ ಅಳಿಲು ಎಷ್ಟೊಂದು ಸುಖೀಯಾಗಿದೆ ಎಂದೆನಿಸಿಕೊಳ್ಳುತ್ತಿತ್ತು. ಕೆಲವೊಮ್ಮೆ ಅಳಿಲಿನ ಮೇಲೆ ಅಸೂಯೆ ಉಂಟಾಗುತ್ತಿತ್ತು.
ಒಂದು ದಿನ ನಾನಿ ಹಣ್ಣುಹಂಪಲುಗಳನ್ನು ತರುತ್ತಿದ್ದಾಗ ಚಿಂಟು ಎದುರಿಗೆ ಬಂತು. ಅಯ್ಯೋ ನೀನು ಎಷ್ಟೊಂದು ಭಾರ ಹೊತ್ತಿದ್ದೆ. ಸ್ವಲ್ಪ ನನಗೆ ಕೊಡು. ನಾನು ನಿನಗೆ ಸಹಾಯ ಮಾಡುತ್ತೇನೆ ಎಂದಿತು. ಆಗ ನಾನಿ ಬೇಡವೆಂದರೂ ಒಪ್ಪಲಿಲ್ಲ. ಕೊನೆಗೆ ಸ್ವಲ್ಪ ಆಹಾರದ ಪೊಟ್ಟಣವನ್ನು ಇರುವೆ ಕೈಯಲ್ಲಿ ಕೊಟ್ಟಿತು. ಮನೆ ತಲುಪಿದಾಗ ಇರುವೆಗೆ ಕೃತಜ್ಞತೆ ಹೇಳಿ ಬೀಳ್ಕೊಟ್ಟಿತು. ಹೀಗೆ ನಾನಿಯ ಸ್ನೇಹ ಸಂಪಾದಿಸಿದ ಚಿಂಟು ಪ್ರತಿ ಬಾರಿಯೂ ಅಳಿಲಿನ ಆಹಾರದಿಂದ ಸ್ವಲ್ಪ ಸ್ವಲ್ಪ ಕದಿಯಲಾರಂಭಿಸಿತು. ಕೆಲವೊಮ್ಮೆ ಅಳಿಲಿನ ಮನೆಗೆ ಹೋಗಿ ಆಹಾರವನ್ನು ಕದ್ದು ತರುತ್ತಿತ್ತು. ತಾನು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಅಳಿಲಿನ ಆಹಾರದಿಂದಲೇ ಜೀವನ ನಡೆಸತೊಡಗಿತು.
ನಾನಿಯ ಗಮನಕ್ಕೆ ಇದು ಬಂದರೂ ಅದು ಸುಮ್ಮನೆ ಇರುತ್ತಿತ್ತು. ಒಂದು ದಿನ ನಾನಿಯ ಪತ್ನಿಗೆ ಈ ವಿಚಾರ ತಿಳಿಯಿತು. ಅವಳು ಚಿಂಟುವಿನ ಪತ್ನಿ, ಮಕ್ಕಳನ್ನು ಕರೆದು ಬೈಯ್ದಳು. ಅಲ್ಲದೇ ನಾನಿ ಬಂದೊಡನೆ ಕಾಡಿನ ರಾಜನ ಮುಂದೆ ದೂರು ನೀಡುವುದಾಗಿ ಹೇಳಿದಳು. ಇದರಿಂದ ಅವಮಾನಿತಗೊಂಡ ಚಿಂಟುವಿನ ಪತ್ನಿ ಮತ್ತು ಮಕ್ಕಳು ಮನೆಗೆ ಬಂದು ಚಿಂಟುವಿಗೆ ವಿಷಯ ತಿಳಿಸಿದರು. ಚಿಂಟು ನಾನು ಏನೂ ಕದ್ದೇ ಇಲ್ಲ. ಅವಳು ಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ. ನಾವು ರಾಜನಿಗೆ ದೂರು ಕೊಡುವ ಎಂದು ತೀರ್ಮಾನಿಸಿದ್ದು ಮಾತ್ರವಲ್ಲ ನಾನಿಯೊಂದಿಗೆ ಈ ವಿಚಾರವಾಗಿ ಜಗಳ ಮಾಡಬೇಕು ಎಂದುಕೊಂಡು ನಾನಿಯ ಮನೆಗೆ ಬಂದಿತು.
ಆಗ ಅಲ್ಲಿ ಚಿಂಟುವಿನ ಬಗ್ಗೆ ನಾನಿಗೆ ಪತ್ನಿ ದೂರು ನೀಡುತ್ತಿದ್ದಳು. ಆಗ ನಾನಿ, ಈ ವಿಷಯ ನನಗೆ ಗೊತ್ತಿದೆ. ಆದರೆ ಒಂದು ಮಾತು ಕೇಳು. ಚಿಂಟು ಮತ್ತು ನಾನು ಉತ್ತಮ ಸ್ನೇಹಿತರು. ಅವನು ಸಾಕಷ್ಟು ಬಾರಿ ಮನೆಗೆ ಆಹಾರವನ್ನು ತರುವಲ್ಲಿ ನನಗೆ ಸಹಾಯ ಮಾಡಿದ್ದ. ಅವನಿಗೆ ನಾನು ನನ್ನ ಕೈಯ್ನಾರೆ ಸ್ವಲ್ಪ ಆಹಾರ ಕೊಡುವವನಿದ್ದೆ. ಆದರೆ ಎಷ್ಟು ಕೊಡಬೇಕು, ಹೇಗೆ ಕೊಡಬೇಕು ಎಂದೇ ತಿಳಿಯಲಿಲ್ಲ. ಕಾರಣ ಸ್ನೇಹಿತನಿಗೆ ಕೊಟ್ಟರೆ ಅದು ವ್ಯವಹಾರವಾಗುತ್ತದೆ. ನಮ್ಮ ಸಂಬಂಧ ವ್ಯವಹಾರವಾದರೆ ಅಲ್ಲಿ ಸ್ನೇಹ ಉಳಿಯಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಸುಮ್ಮನಿದ್ದೆ. ಅವನೇ ಅವನಿಗೆ ಬೇಕಾದಷ್ಟು ಕೊಂಡು ಹೋಗಲಿ. ನಾವಿದನು ದೊಡ್ಡದು ಮಾಡುವುದು ಬೇಡ ಎಂದ. ಆಗ ನಾನಿಯ ಪತ್ನಿಗೂ ಹೌದೆನಿಸಿತು.
ಇದನ್ನೆಲ್ಲ ಕೇಳುತ್ತಿದ್ದ ಚಿಂಟುವಿಗೆ ತನ್ನ ತಪ್ಪಿನ ಅರಿವಾಯ್ತು. ಕೂಡಲೇ ಮನೆಯೊಳಗೆ ಬಂದು ನಾನಿ ಮತ್ತು ಆತನ ಪತ್ನಿಯ ಬಳಿ ಕ್ಷಮೆ ಕೇಳಿತು. ಅಲ್ಲದೇ ಮುಂದೆ ನಾನೆಂದು ಹೀಗೆ ಮಾಡುವುದಿಲ್ಲ ಎಂದಿತು. ಆಗ ನಾನಿ, ನೀನೇನೂ ತಪ್ಪು ಮಾಡಿಲ್ಲ. ನಾವು ಈಗಲೂ ಒಳ್ಳೆಯ ಸ್ನೇಹಿತರೇ ಎಂದಿತು. ಆಗ ಚಿಂಟು ನಾನಿಯನ್ನು ತಬ್ಬಿಕೊಂಡು ಆನಂದಭಾಷ್ಪ ಹರಿಸಿತು.
ಮರುದಿನದಿಂದ ಚಿಂಟು ಮತ್ತು ನಾನಿ ಒಟ್ಟಿಗೆ ಹೊರಗೆ ಹೋಗಿ ಆಹಾರ ತರುತ್ತಿದ್ದರು. ತಂದದ್ದನ್ನು ಪರಸ್ಪರ ಹಂಚಿಕೊಂಡು ತಿನ್ನಲು ಪ್ರಾರಂಭಿಸಿದರು.
ರಿಷಿಕಾ