ಜೀವನ ಎಷ್ಟೇ ಸಂಪತ್ತಿನ ಶಿಖರದಲ್ಲೇ ಇರಲಿ ಅಲ್ಲಿ ನೆಮ್ಮದಿಯೊಂದು ಇರದೆ ಇದ್ರೆ ಶಿಖರದ ತುದಿಯಲ್ಲೂ ನಿರಾಶೆಯ ಛಾಯೆಗಳು ಕಾಣಲಾರಂಭಿಸುತ್ತವೆ. ಏನಾದ್ರು ಮಾಡ್ಬೇಕು ಏನಾದ್ರು ಸಾಧಿಸ್ಬೇಕೆನ್ನುವ ಉದ್ದೇಶ ಅಥವಾ ಇಚ್ಛೆ ಮನಸ್ಸಿನಲ್ಲಿದ್ದು ಸುಮ್ಮನೆ ಕೂತರೆ ಒಳಗಿನ ಕಿಚ್ಚು ಆರಿ ಹೋಗುತ್ತದೆ.
ಬಾಲ್ಯದಲ್ಲಿ ಒಟ್ಟಿಗೆ ಬೆಳೆದು,ತರಗತಿಯಲ್ಲಿ ಒಟ್ಟಿಗೆ ಕಲಿತು,ಭವಿಷ್ಯದ ಕನಸು ಕಾಣುತ್ತಾ ಬೆಳೆದ ಗೆಳೆಯರಿಬ್ಬರು ಕಟ್ಟಿ ಬೆಳೆಸಿದ ಕಂಪೆನಿಯೊಂದರ ಕಥೆಯಿದು.
ಉತ್ತರ ಪ್ರದೇಶದ ಬರೇಲಿ ಮೂಲದ ಅಭಿನವ್ ಟಂಡನ್ ಹಾಗೂ ಪರ್ಮಿತ್ ಶರ್ಮಾ 2012 ರಲ್ಲಿ ತಮ್ಮ ಇಂಜಿನಿಯರಿಂಗ್ ಕಲಿಕೆ ಮುಗಿಸಿ ಅದೇ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಕಂಪೆನಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದ ಬಾಲ್ಯದ ಗೆಳೆಯರಿಬ್ಬರು ಬಿಡುವಿದ್ದಾಗ ಕೆಲಸದ ಒತ್ತಡಕ್ಕೆ ತಕ್ಕ ಮಟ್ಟಿನ ಬಿಡುವು ಕೊಟ್ಟು ಚಹಾ ಕುಡಿಯಲು ಬರುವುದು ಇಬ್ಬರ ದಿನಚರಿಯ ಒಂದು ಭಾಗವಾಗಿರುತ್ತದೆ. ಆಫೀಸ್ ಹೊರಗಡೆ ಇರುವ ಚಹಾದ ಸ್ಟಾಲ್ ವೊಂದರಲ್ಲಿ ದಿನನಿತ್ಯ ಕುಡಿಯುವ ಚಹಾ ಕೆಲವೊಮ್ಮೆ ಎಂದೋ ಮಾಡಿಟ್ಟು ಬಿಸಿ ಮಾಡಿ ಕೊಡುವುದು,ಕೆಲವೊಮ್ಮೆ ಸ್ವಚ್ಛತೆಯ ನಿರ್ವಹಣೆಯ ಕೊರತೆಯಿಂದ ಇರುವ ಟೀ ಕಪ್ ಗಳನ್ನು ನೋಡುತ್ತಾ ಇದ್ದಾಗ ಇಬ್ಬರಿಗೂ ತಮ್ಮ ಮನೆಯ ಚಹಾ ಇರಬೇಕಿತ್ತು ಅನ್ನೋ ಭಾವನೆ ಮೂಡುತ್ತದೆ.
ಇಂಜಿನಿಯರಿಂಗ್ ಕೆಲಸದಲ್ಲಿ ಇದ್ದರು ತಾವು ಏನಾದ್ರು ಮಾಡಬೇಕೆನ್ನುವ ದೂರದ ಯೋಚನೆಗಳು ಆಗಾಗ ಅವರಿಬ್ಬರು ವ್ಯಾಪಾರಕ್ಕೆ ಸಂಬಂಧಿಸಿದ ಮ್ಯಾಗ್ ಜಿನ್ ಗಳನ್ನು ಓದುವಾಗ ಎದುರು ಬಂದು ಕಾಡುತ್ತಿತ್ತು. ಕೊರತೆಗಳು ಎಷ್ಟೇ ಇದ್ದರು ರಸ್ತೆ ಬದಿಯ ಚಹಾ ಗೆಳೆಯರಿಬ್ಬರಿಗೆ ಅನಿವಾರ್ಯವಾಗಿತ್ತು. ತಾವು ಯಾಕೆ ಮನೆಯಲ್ಲಿ ತಯಾರಾಗುವ ಶುದ್ಧ ಹಾಗೂ ಗುಣಮಟ್ಟದ ಚಹಾವನ್ನು ತಯಾರಿಸಬಾರದೆನ್ನುವ ಇರಾದೆಯೊಂದು ಥಟ್ಟನೆ ಮೂಡಿ ಅದರಲ್ಲೇ ಮುನ್ನಡೆಯುವ ಹೆಜ್ಜೆಯನ್ನು ಇಡಲು ತಯಾರಿ ನಡೆಸುತ್ತಾರೆ. ತಿಂಗಳಿಗೆ ಸಾವಿರಾರು ಗಳಿಸುವ ಇವರಿಬ್ಬರ ಈ ಯೋಜನೆಗೆ ಕೆಲಸದ ರಾಜೀನಾಮೆ ಅನಿವಾರ್ಯವಾಗಿತ್ತು. ಇಂಜಿನಿಯರಿಂಗ್ ಕೆಲಸ ಬಿಟ್ಟು ಚಹಾದ ಮಳಿಗೆ ಹಾಕುವುದು ಹೇಳಿಕೊಂಡಷ್ಟು ಸುಲಭವಾಗಿರಲಿಲ್ಲ.
ಯೋಜನೆ ಸಣ್ಣ ಮಟ್ಟದಲ್ಲಿ ಇದ್ದರು, ಒಂದೊಂದು ಯೋಚನೆಯನ್ನು ಜೋಡಿಸಿ,ಸರಿಯಾದ ಕ್ರಮದಲ್ಲಿ ರೂಪಿಸಿ ಚಹಾದ ರುಚಿ ಜನ ಸಾಮಾನ್ಯರ ನಾಲಿಗೆಗೆ ಹಚ್ಚಲು ಶುರುವಾಗಿತ್ತು. ಅಭಿನವ್ ಹಾಗೂ ಪರ್ಮಿತ್ ತಮ್ಮ ದುಡಿಮೆಯಲ್ಲಿ ಅಷ್ಟು ಇಷ್ಟಾಗಿ ಉಳಿಸಿಟ್ಟಿದ್ದ ಗಳಿಕೆಯನ್ನು ಚಹಾ ಸ್ಟಾಲ್ ಮಾಡಲು ಖರ್ಚು ಮಾಡುತ್ತಾರೆ. ಇಬ್ಬರು ಶ್ರಮದಿಂದ ಮೊದಲ ಟೀ ಸ್ಟಾಲ್ ನೋಯ್ಡಾದ ಮೆಟ್ರೋ ಸ್ಟೇಷನ್ ಸೆಕ್ಟರ್ 16 ರಲ್ಲಿ ಶುರು ಮಾಡುತ್ತಾರೆ. ಹಾಗೆ ಶುರುವಾದ ಕಂಪೆನಿಯೇ ‘ ಚಾಯ್ ಕಾಲಿಂಗ್’
ಚಾಯ್ ಕಾಲಿಂಗ್ ಪ್ರಾರಂಭ ಮಾಡಿದ್ದು ಉಳಿಸಿಟ್ಟಿದ್ದ ಒಂದು ಲಕ್ಷ ರೂಪಾಯಿಂದ. ಚಹಾದ ರುಚಿ ನಾಲಿಗೆಯ ತುದಿಗೆ ಸ್ಪರ್ಶಿಸುತ್ತಾ ಜನಮಾನಸದಲ್ಲಿ ಚಾಯ್ ಕಾಲಿಂಗ್ ಜನಪ್ರಿಯತೆ ಬೆಳೆಯುತ್ತಾ ಹೋಯಿತು. ನೋಯ್ಡಾದಿಂದ,ಬರೇಲಿ, ಬರೇಲಿಯಿಂದ ಲಕ್ನೋ ಇಲ್ಲೆಲ್ಲಾ ಚಾಯ್ ಕಾಲಿಂಗ್ ಮಳಿಗೆಗಳು ಪ್ರಾರಂಭವಾಗಿ ಬೆಳೆಯಲು ಶುರುವಾಯಿತು. ಪ್ರಾರಂಭಿಕ. ವರ್ಷದಲ್ಲೇ ಚಾಯ್ ಕಾಲಿಂಗ್ ಯಶಸ್ಸುಗಳಿಸುತ್ತದೆ. ಒಂದು ಲಕ್ಷದಿಂದ ಆರಂಭವಾದ ಚಹಾದ ವ್ಯಾಪಾರ ಒಂದೇ ವರ್ಷದಲ್ಲಿ 70 ಲಕ್ಷದ ವಹಿವಾಟು ನಡೆಸುತ್ತದೆ. ಎರಡನೇ ವರ್ಷದಲ್ಲಿ 150 ಕೋಟಿ ವಹಿವಾಟು ಗಳಿಸುವಷ್ಟು ಬೆಳೆದು ನಿಲ್ಲುತ್ತದೆ.
ಚಾಯ್ ಕಾಲಿಂಗ್ ಇಂದು ದೇಶದೆಲ್ಲೆಡೆ ತನ್ನ ಹತ್ತು ಹಲವಾರು ಮಳಿಗೆಯನ್ನು ಹೊಂದಿದೆ.ಎಷ್ಟೋ ಜನರಿಗೆ ಕೆಲಸ ಕೊಟ್ಟು ಅಭಾರಿಯಾಗಿದೆ. 15 ಕ್ಕೂ ಹೆಚ್ಚು ವಿಧ ವಿಧವಾದ ಚಹಾವನ್ನು ಮಾಡಿ ಗ್ರಾಹಕರಿಗೆ ನೀಡುತ್ತದೆ. 5- 25 ರೂಪಾಯಿ ಒಳಗಿರುವ ಇವರ ಚಹಾ ಲವಂಗ ಟೀ ,ಬ್ಲ್ಯಾಕ್ ಟೀ,ಗ್ರೀನ್ ಟೀ,ಲೆಮನ್ ಟೀ,ಐಸ್ ಟೀ ಹೀಗೆ ನಾನಾ ಪ್ರಕಾರದ ಚಹಾಗಳು ಸಿಗುತ್ತದೆ. ಚಹಾವನ್ನು ನಾವು ಇದ್ದಲ್ಲಿಯೇ ತಲುಪಿಸುವುದಕ್ಕಾಗಿ ಚಾಯ್ ಬ್ರಿಗೇಡ್ ನ ತಂಡವನ್ನು ಮಾಡಿದ್ದಾರೆ. ಚಹಾದ ಆರ್ಡರ್ ಬಂದ 15 ನಿಮಿಷದೊಳಗಡೆ ಡೆಲಿವರಿ ಮಾಡುವುದು ಇವರ ಕೆಲಸ.
ಅಭಿನವ್ ಹಾಗೂ ಪರ್ಮಿತ್ ಆಸ್ಪತ್ರೆಯಲ್ಲಿ ಸುಲಭವಾಗಿ ರೋಗಿಗಳಿಗೆ ಆಹಾರವನ್ನು ತಲುಪಿಸುವ ಯೋಜನೆಯನ್ನು ಸಹ ಹಾಕಿಕೊಂಡಿದ್ದಾರೆ.
– ಸುಹಾನ್ ಶೇಕ್