Advertisement

ಅರ್ಧದಲ್ಲೇ ಓದು ಬಿಟ್ಟ ಅಜಯ್ ‘ಕ್ಯಾರಿ ಮಿನಾಟಿ’ಯಾಗಿ ಪ್ರಸಿದ್ಧ ಯೂಟ್ಯೂಬರ್ ಆದದ್ದು ಹೇಗೆ ..?

07:44 PM May 20, 2020 | Suhan S |

ಇತ್ತೀಚೆಗೆ ಯೂಟ್ಯೂಬ್ ನಲ್ಲಿ  ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಯೂಟ್ಯೂಬ್ ನಲ್ಲಿ ಆ ವಿಡಿಯೋದ ಕುರಿತು ಅದನ್ನು ಸೃಷ್ಟಿಸಿದ ವ್ಯಕ್ತಿಯ ಕುರಿತು ಒಂದಿಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಯುವ ಸಮೂಹದಲ್ಲಿ ಸದ್ಯ ‘ಕ್ಯಾರಿ ಮಿನಾಟಿ’ ಖ್ಯಾತಿಯ ಅಜಯ್ ನಾಗರ್ ಟ್ರೆಂಡಿಂಗ್ ಟಾಪಿಕ್. ಕಳೆದ ಕೆಲ ದಿನಗಳಿಂದ ಯೂಟ್ಯೂಬ್ ನಲ್ಲಿ ನಡೆಯುತ್ತಿರುವ ಹಸಿ ಬಿಸಿ ಚರ್ಚೆಯ ಹಿಂದೆ ಇರುವ ಕ್ಯಾರಿ ಮಿನಾಟಿ ಅಂದರೆ ಅಜಯ್ ನಾಗರ್ ಯೂಟ್ಯೂಬ್ ಪಯಣ ಬಲು ರೋಚಕ.

Advertisement

1999 ಜೂನ್ 21, ಹರ್ಯಾಣದ ಫರಿದಾಬಾದ್‌ ನಲ್ಲಿ ಹುಟ್ಟಿ ಬೆಳೆದ ಅಜಯ್ ನಾಗರ್ ಅಪ್ಪ ಅಮ್ಮನ ಪ್ರೀತಿಯ ಕಿರಿಯ ಮಗ. ಅಣ್ಣನ ಬಳಿಕ ಹೆಚ್ಚು ಪ್ರೀತಿಯಿಂದ ಮುದ್ದಿಸಲ್ಪಟ್ಟ ಅಜಯ್ ನಾಗರ್ ಅವರದು ಶಾಲಾ ದಿನಗಳ ಓದಿಗೆ ಒಗ್ಗದ ಮನಸ್ಸು. ಹೇಗೋ ಉದಾಸೀನದ ಬಂಡಿಯನ್ನು ದೂಡುತ್ತಲೇ ದಿಲ್ಲಿ ಪಬ್ಲಿಕ್ ಸ್ಕೂಲ್ ‌ ನಲ್ಲಿ ಶಾಲಾ ದಿನಗಳನ್ನು ಪೂರ್ತಿಗೊಳಿಸುತ್ತಾರೆ.

ಇದೇ ಸಮಯದಲ್ಲಿ ತನ್ನ 11 ನೇ ವಯಸ್ಸಿನಲ್ಲಿ ಅಜಯ್ ಯೂಟ್ಯೂಬ್ ಚಾನೆಲ್ ವೊಂದನ್ನು ಶುರು ಮಾಡುತ್ತಾರೆ. ಕಲಿಯಬೇಕಾದ ವಯಸ್ಸಿನಲ್ಲಿ ‌ಕನಸು ಕಾಣುವ ದೂರದ ಯೋಚನೆಯೊಂದು ಬರುತ್ತದೆ. ‘ಸ್ಟೀಲ್ ದಿ ಫಿಯರ್ಸ್’  ( Steal the Fearzz)  ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಕೆಲವೊಮ್ಮೆ ಫುಟ್ಬಾಲ್ ಆಟದ ಟ್ರಿಕ್ಸ್ ಹಾಗೂ ಹೆಚ್ಚಾಗಿ ವಿಡಿಯೋ ಗೇಮ್ ರೆಕಾರ್ಡಿಂಗ್ ಗಳನ್ನು ಆಪ್ಲೋಡ್ ಮಾಡುತ್ತಿದ್ದರು. ಕಲಿಯುವ ಸಾಹಸವೊಂದನ್ನು ಬಿಟ್ಟು ಇಂಥ ಸಾಧನೆಗೇನು ಅಜಯ್ ಕಮ್ಮಿಯಿರಲಿಲ್ಲ. ಏನೇ ಮಾಡಿದರೂ ಅಜಯ್ ನಾಗರ್ ಮಾಡಿದ ಯೂಟ್ಯೂಬ್ ಚಾನೆಲ್ ಹೆಚ್ಚು ಜನರಿಗೆ ತಲುಪಲು ಸಾಧ್ಯವಾಗಿಲ್ಲ. ಆದರೆ ಅಜಯ್ ತಾನು ಅಂದುಕೊಂಡದ್ದನ್ನು ಸಾಧಿಸುವ ದಾರಿ  ಹೇಗೆ ಇದ್ದರೂ ಅದರಲ್ಲಿ ಹೆಜ್ಜೆಗಳನ್ನು ಇಟ್ಟು ಸಾಗುವ ದಿಟ್ಟ ನಿರ್ಧಾರ ಮಾಡಿದ್ದರು.

ಮೊದಲ ಚಾನೆಲ್ ನಲ್ಲಿ ಹಿಂದುಳಿದ ಸವಾಲುಗಳನ್ನು ಮುಂದೆ ಹಾಕಿಕೊಂಡು ಅಜಯ್ ನಾಗರ್ ತನ್ನ 15 ನೇ ವಯಸ್ಸಿನಲ್ಲಿ ಹೊಸ ಚಾನೆಲ್ ವೊಂದನ್ನು ಮಾಡುತ್ತಾರೆ. ಅದನ್ನು Addicted A 1 ಎನ್ನುವ ಹೆಸರು ಇಡುತ್ತಾರೆ. ಈ ಚಾನೆಲ್ ನಲ್ಲಿ ಅಜಯ್ ಒಂದಿಷ್ಟು ಹೊಸ ಬಗೆಯ ಕೌಶಲ್ಯವನ್ನು ತೋರಿಸುತ್ತಾರೆ. ಗೇಮಿಂಗ್ ಗಳ ವಿಡಿಯೋದ ಜೊತೆ ಅಜಯ್ ಈ ಬಾರಿ ಹೃತಿಕ್ ರೋಷನ್, ಬಾಬಿ ಡಿಯೋಲ್ ರಂತಹ ಸ್ಟಾರ್ ನಟರ ಮಿಮಿಕ್ರಿಗಳನ್ನು ಮಾಡಲು ಶುರು ಮಾಡುತ್ತಾರೆ. ಎರಡು ವರ್ಷದಲ್ಲಿ ಅಜಯ್ ಸಾಕಷ್ಟು ಶ್ರಮ ವಹಿಸಿ 150 ವಿಡಿಯೋಗಳನ್ನು ಮಾಡುತ್ತಾರೆ. ಅಜಯ್ ನಾಗರ್ ಮಾಡುವ ಹಾಸ್ಯ ಮಿಶ್ರಿತ ವಿಡಿಯೋಗಳಿಗಾಗಿ ಜನ ನಿಧಾನವಾಗಿ ಅವರ ಎಲ್ಲಾ ವಿಡಿಯೋಗಳನ್ನು ಇಷ್ಟಪಡುತ್ತಾರೆ. ಇದೇ ಕಾರಣದಿಂದಾಗಿ ಅಜಯ್ ತನ್ನ ಯೂಟ್ಯೂಬ್ ಚಾನೆಲ್ ಗೆ ‘ಕ್ಯಾರಿ ಡಿಯೋಲ್’ ಎನ್ನುವ ನಾಮಕರಣ ಮಾಡುತ್ತಾರೆ.

ಇದರೊಂದಿಗೆ ಅಜಯ್ ಸಣ್ಣ ನಟರ ನಟನೆಯನ್ನು ತಮಾಷೆಯಾಗಿ ಹೇಳುವ ( Roasting) ವಿಧಾನವನ್ನು ಭಾರತದಲ್ಲಿ ಮೊದಲ ಬಾರಿ ಪ್ರಯೋಗ ಮಾಡುತ್ತಾರೆ. ಅದುವರೆಗೆ ಭಾರತದಲ್ಲಿ ಈ ಬಗೆಯ ವಿಡಿಯೋಗಳನ್ನು ಕಾಣದ ವೀಕ್ಷಕರು ಅಜಯ್ ನಾಗರ್ ರನ್ನು ಇಷ್ಟಪಡುತ್ತಾರೆ. ಅಜಯ್ ರನ್ನು ಇನ್ನಷ್ಟು ಖ್ಯಾತಿಯಾಗಿಸುವುದು ಇಂದು ಭಾರತದಲ್ಲಿ ಮುಂಚೂಣಿಯಲ್ಲಿರುವ ಯೂಟ್ಯೂಬರ್ ಭುವನ್ ಬ್ಯಾಮ್ ರ ನಟನೆಯನ್ನು ತಮಾಷೆಯಾಗಿ ರೋಸ್ಟ್ ಮಾಡಿದ ಮೇಲೆ. ಈ ವಿಡಿಯೋ ಕೆಲವೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ. ಇದೇ ಸಮಯದಲ್ಲಿ ಅಜಯ್ ತನ್ನ ಚಾನೆಲ್ ನ ಹೆಸರನ್ನು ಅಂತಿಮವಾಗಿ ‘ಕ್ಯಾರಿ‌ ಮಿನಾಟಿ’ ಎಂದು ಬದಲಾಯಿಸುತ್ತಾರೆ. ಈ ಚಾನೆಲ್ ನೋಡು ನೋಡುತ್ತಿದ್ದಂತೆಯೇ ಲಕ್ಷಾಂತರ ಜನರ ಮೆಚ್ಚುಗೆಯನ್ನು ‌ಪಡೆದುಕೊಳ್ಳುತ್ತದೆ.

Advertisement

ಈ ಎಲ್ಲಾ ಬೆಳವಣಿಗೆಯಿಂದ ಅಜಯ್ ತನ್ನ ಶಿಕ್ಷಣವನ್ನು ಮರೆತೇ ಬಿಡುತ್ತಾರೆ. ದ್ವಿತೀಯ ಪಿಯುಸಿಯೊಳಗೆ ತನ್ನ ಶಿಕ್ಷಣವನ್ನು ಬಿಟ್ಟು ಬರುತ್ತಾರೆ. ಓಪನ್ ಸ್ಕೂಲ್ ನಲ್ಲಿ ಶಿಕ್ಷಣ ‌ಮುಂದುವರೆಸುತ್ತಾರೆ. ಅಜಯ್ ಭಾರತದ ಯುವ ಸಮುದಾಯದ ಮನೆ ಮನದಲ್ಲಿ ಕ್ಯಾರಿ‌ ಮಿನಾಟಿಯಾಗಿ ಜಾಗ ಪಡೆದುಕೊಳ್ಳುತ್ತಾರೆ. ಅಪ್ಪ ಅಮ್ಮನ ಸಹಕಾರ ಅಜಯ್ ನಾಗರ್  ಮುಂದುವರೆಯಲು ದೊಡ್ಡ ಅವಕಾಶವಾಯಿತು. ಇಷ್ಟೆಲ್ಲಾ ಆಗುವಾಗ ಖುಷಿಯ ದಿನಗಳ ನಡುವೆ ಬರುವ ಕರಾಳಗಳು ಅಜಯ್ ನಾಗರ್  ಬದುಕಿನಲ್ಲೂ ಬಂತು. ಜನರ ಮೇಲೆ ತಮಾಷೆಯಾಗಿ ಗೇಲಿ ಮಾಡುವ ವಿಡಿಯೋಗಳ ಮೇಲೆ ಹಲವು ಸ್ಟ್ರೈಕ್ ಗಳು ಬರುತ್ತವೆ. ಈ ದಿನಗಳಲ್ಲಿ ಅಜಯ್ ಕುಗ್ಗಿ ಹೋಗುತ್ತಾರೆ. ಆದರೆ ಸೋಲಲ್ಲ. ಕೆಲವೇ ದಿನಗಳಲ್ಲಿ ‘ಕ್ಯಾರಿ ಮಿನಾಟಿ’ ಮತ್ತೆ ಜನರ ಮುಂದೆ ಬಂದು ಮನೋರಂಜನೆ ನೀಡುತ್ತಾರೆ.

‘ಕ್ಯಾರಿ ಮಿನಾಟಿ’ ಖ್ಯಾತಿಯ ಅಜಯ್ ನಾಗರ್ ಇಂದು ಯೂಟ್ಯೂಬ್ ನಲ್ಲಿ ಮಾಡುವ ಒಂದೊಂದು ವಿಡಿಯೋ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆಯುತ್ತವೆ. ಇತ್ತೀಚಿಗೆ ಬಿಡುಗಡೆಯಾದ ‘ You tube Vs Tik Tok’ ಎನ್ನುವ ವಿಡಿಯೋ ಒಂದೇ ದಿನದಲ್ಲಿ 34 ಮಿಲಿಯನ್ ಜನರು ವೀಕ್ಷಿಸಿದ್ದಾರೆ, ವೈಯಕ್ತಿಕವಾಗಿ ಭಾರತದಲ್ಲಿ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು  ವೀಕ್ಷಣೆ ಹಾಗೂ ವೇಗವಾಗಿ ಮಿಲಿಯನ್ ಲೈಕ್ ಪಡೆದುಕೊಂಡ ವಿಡಿಯೋ ಎಂಬ ದಾಖಲೆಗೆ ಪಾತ್ರವಾಗಿತ್ತು.  ಕ್ಯಾರಿ ಮಿನಾಟಿಯ ಈ ವಿಡಿಯೋ ಭಾರತದ ಯೂಟ್ಯೂಬ್ ಇತಿಹಾಸದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ವಿಡಿಯೋ ಆಗಿದೆ. 10 ಮಿಲಿಯನ್ ಗೂ ಹೆಚ್ಚು ಲೈಕ್ಸ್ ಪಡೆದುಕೊಂಡ ವಿಡಿಯೋ ಆಗಿದೆ‌ ಹಾಗೆಯೇ ಈ ವಿಡಿಯೋ ಜನಪ್ರಿಯತೆಯಿಂದ ಕ್ಯಾರಿ ಮಿನಾಟಿ ಯೂಟ್ಯೂಬ್ ಚಾನೆಲ್ ಒಂದೇ ದಿನದಲ್ಲಿ 1.3 ಮಿಲಿಯನ್ ಸಬ್ಸ್ ಸ್ಕ್ರೈಬ್ ಪಡೆದುಕೊಂಡದ್ದು ಕೂಡ ದಾಖಲೆಯೇ. ಅಜಯ್ ರ ಕ್ಯಾರಿ ಮಿನಾಟಿ ಚಾನೆಲ್ ಸುಮಾರು 18 ಮಿಲಿಯನ್ ಸಬ್ಸ್ ಸ್ಕ್ರೈರ್ಬಸ್ ರನ್ನು ಹೊಂದಿದೆ.

ಸದ್ಯ ಕ್ಯಾರಿ ‌ಮಿನಾಟಿಯ ದಾಖಲೆಯ ವಿಡಿಯೋ ಯೂಟ್ಯೂಬ್ ಒಂದಿಷ್ಟು ಕಾರಣಗಳಿಂದ ತೆರವು ಮಾಡಿದೆ‌. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೀಡು ಮಾಡಿದ್ದು.  ಮತ್ತೆ ಯೂಟ್ಯೂಬ್ ನಲ್ಲಿ ಆ ವಿಡಿಯೋ ಬಂದರೆ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸುವುದು ನಿಜ.

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next