Advertisement

ರಾಜಸ್ಥಾನ ರಾಯಲ್ಸ್ ಕ್ಯಾಂಪ್ ಸೇರಿದ ಬಡ ಕ್ಷೌರಿಕನ ಪುತ್ರ..! ಈತನ ಕಥೆಯೇ ರೋಚಕ

03:46 PM Feb 16, 2022 | ಕೀರ್ತನ್ ಶೆಟ್ಟಿ ಬೋಳ |

ವರ್ಣರಂಜಿತ ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ದೇಶಿ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಐಪಿಎಲ್ ನಲ್ಲಿ ಮಿಂಚಿ ನಂತರ ಭಾರತೀಯ ತಂಡ ಸೇರಿದ ಹಲವು ಆಟಗಾರರಿದ್ದಾರೆ. ಇದೇ ವೇಳೆ ಎಲೆಮರೆಯ ಕಾಯಿಯಂತಿದ್ದ ಹಲವು ಗ್ರಾಮೀಣ ಪ್ರತಿಭೆಗಳು ಕೂಡಾ ಐಪಿಎಲ್ ಮೂಲಕ ಮುಖ್ಯಭೂಮಿಕೆಗೆ ಬಂದಿದ್ದಾರೆ. ಅಂತಹದ್ದೇ ಒಂದು ಹೆಸರು ಕುಲದೀಪ್ ಸೆನ್.

Advertisement

ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಗೆ ಮೊದಲು ಕುಲದೀಪ್ ಸೆನ್ ಹೆಸರು ಕೇಳಿದವರು ತುಂಬಾ ಕಡಿಮೆ. ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸೇರಿದ ಕುಲದೀಪ್ ಸೆನ್ ಮೂಲತಃ ಮಧ್ಯಪ್ರದೇಶದವರು.

ನೀಳ ಕಾಯದ 25 ವರ್ಷ ಪ್ರಾಯದ ಕುಲದೀಪ್ ಯಾದವ್ ಓರ್ವ ವೇಗದ ಬೌಲರ್. ರೇವಾ ಜಿಲ್ಲೆಯ ಹರಿಹರಪುರ ಗ್ರಾಮದ ಮಧ್ಯಮ ಗತಿಯ ವೇಗಿ, ಏಪ್ರಿಲ್‌ನಲ್ಲಿ ಪ್ರಾರಂಭವಾಗುವ ಮುಂಬರುವ ಐಪಿಎಲ್ ಋತುವಿನಲ್ಲಿ ವೇಗಿಗಳಾದ ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ ಮತ್ತು ನವದೀಪ್ ಸೈನಿ ಅವರನ್ನು ಸೇರಿಕೊಳ್ಳಲಿದ್ದಾರೆ. ಅಂದಹಾಗೆ ರಾಜಸ್ಥಾನ ರಾಯಲ್ಸ್ ಪ್ರಾಂಚೈಸಿಯು ಸೆನ್ ಅವರನ್ನು 20 ಲಕ್ಷ ರೂ ಗೆ ಖರೀದಿ ಮಾಡಿದೆ.

ಕ್ಷೌರಿಕನ ಪುತ್ರ: ಮಧ್ಯಪ್ರದೇಶದ ವಿಂಧ್ಯಾ ಪ್ರಾಂತ್ಯದ ಕುಲದೀಪ್ ಸೆನ್ ತಂದೆ ರಾಮ್ ಪಾಲ್ ಸೆನ್ ಅವರು ಓರ್ವ ಕ್ಷೌರಿಕ. ಸಿರ್ಮೌರ್ ಚೌರಾಹಾ ಬಳಿಯಿರುವ ಸಣ್ಣ ಸಲೂನ್‌ ನಲ್ಲಿ ದುಡಿಯುತ್ತಿರುವ ರಾಮ್ ಪಾಲ್ ಸೆನ್ ಅವರೇ ಕುಟುಂಬದ ಆಧಾರಸ್ಥಂಬ.

Advertisement

“ಮಗ ಕ್ರಿಕೆಟ್ ಹುಚ್ಚು ನನಗೆ ಕೋಪ ತರಿಸುತ್ತಿತ್ತು. ಈ ಕಾರಣದಿಂದ ಆತ ನನ್ನಿಂದ ಹಲವು ಬಾರಿ ಪೆಟ್ಟು ತಿಂದಿದ್ದ. ಬಾಲ್ಯದಲ್ಲಿ ಓದುವ ಸಮಯವನ್ನು ಕ್ರಿಕೆಟ್ ಆಡಿ ಹಾಳು ಮಾಡಿಕೊಳ್ಳುತ್ತಿದ್ದಾನೆ ಎಂದು ಅನಿಸುತ್ತಿತ್ತು. ಆದರೆ ಈಗ ನನ್ನ ಪುತ್ರ ಅದರಲ್ಲೇ ಸಾಧನೆ ಮಾಡಿದ್ದಾನೆ” ಎಂದು ತೇವವಾದ ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ರಾಮ್ ಸೆನ್ ಮಗನ ಬಗ್ಗೆ ಹೆಮ್ಮೆ ಪಡುತ್ತಾರೆ.

“ಇದು ನಮಗೆ ಕನಸು ನನಸಾದ ಕ್ಷಣ. ಈ ಸಾಧನೆಗೆ ಕುಲದೀಪ್ ಉತ್ಸಾಹ ಮತ್ತು ಶೃದ್ಧೆ ಕಾರಣ. ಆದರೆ ಸಣ್ಣ ಊರಿನ ಸಣ್ಣ ಸೆಲೂನಿನ ಕ್ಷೌರಿಕನ ಪುತ್ರ ಈ ಸಾಧನೆ ಮಾಡುತ್ತಾನೆ, ಮಾತ್ರವಲ್ಲದೆ ತನ್ನ ಕುಟುಂಬವನ್ನು ಕ್ರಿಕೆಟ್ ನಿಂದ ಸಾಕುತ್ತಾನೆಂದು ಎಂದೂ ಕನಸಲ್ಲೂ ಯೋಚಿಸರಲಿಲ್ಲ” ಎನ್ನುತ್ತಾರೆ ರಾಮ್ ಪಾಲ್.

ಇದನ್ನೂ ಓದಿ:ಮದುವೆ ಕಾರಣದಿಂದ ಐಪಿಎಲ್ ನ ಮೊದಲ ಕೆಲವು ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್ ವೆಲ್ ಅಲಭ್ಯ

ರಾಮ್ ಪಾಲ್ ಮತ್ತು ಗೀತಾ ಸೆನ್ ಅವರು ಐವರು ಮಕ್ಕಳಲ್ಲಿ ಕುಲದೀಪ್ ಸೆನ್ ತೃತೀಯ ಪುತ್ರ. ದಶಕಗಳ ಹಿಂದೆಯೇ ವಿಂಧ್ಯಾ ಕ್ರಿಕೆಟ್ ಅಕಾಡೆಮೆ ಸೇರಿದ್ದ ಕುಲದೀಪ್ ನನ್ನು ಫೀಸ್ ಕಟ್ಟದ ಕಾರಣಕ್ಕೆ ಒಮ್ಮೆ ಕ್ಲಬ್ ನಿಂದ ಹೊರಹಾಕಲಾಗಿತ್ತು!

“ನಮ್ಮ ಕ್ಲಬ್ ನ ಹಲವು ಆಟಗಾರರಂತೆ ಕುಲದೀಪ್ ಕೂಡಾ ಬಡತನದ ಹಿನ್ನೆಲೆಯಿಂದ ಬಂದವರು. ಆದರೆ ಕ್ರಿಕೆಟ್ ನಲ್ಲೊ ದೊಡ್ಡದೇನು ಸಾಧಿಸುವ ತವಕ, ಆಟದ ಬಗೆಗಿನ ಸಮರ್ಪಣಾ ಭಾವ, ಯಶಸ್ಸಿನ ಹಸಿವು ಕಂಡು ನಾವು ಆತನ ಶುಲ್ಕವನ್ನು ಮನ್ನಾ ಮಾಡಿದೆವು ಅಲ್ಲದೆ ಆತನ ಕಿಟ್ ಗಳಿಗೂ ಕ್ಲಬ್ ವತಿಯಿಂದ ಸಹಾಯ ಮಾಡಲಾಗಿತ್ತು” ಎನ್ನುತ್ತಾರೆ ಕೋಚ್ ಎರಿಲ್ ಅಂಥೋನಿ.

“ ಕುಲದೀಪ್ ಸತತವಾಗಿ 135-140 ಕಿ.ಮೀ ವೇಗದಲ್ಲಿ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ. ತನ್ನ ಮಾರಕ ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಎಸೆತಗಳಿಂದ ಎಂತಹಾ ಆಟಗಾರನನ್ನೂ ಈತ ಚಕಿತಗೊಳಿಸಬಲ್ಲ. 2022ರ ಐಪಿಎಲ್ ನಲ್ಲಿ ಕುಲದೀಪ್ ಪ್ರದರ್ಶನವನ್ನು ಸಂಪೂರ್ಣ ವಿಸಿಎ ಕ್ಲಬ್ ಎದುರು ನೋಡುತ್ತಿದೆ. ಕುಲದೀಪ್ ನಿಂದ ಪ್ರಭಾವಿತರಾಗಿ ಇನ್ನಷ್ಟು ಗ್ರಾಮೀಣ ಪ್ರತಿಭೆಗಳಿಗೆ ವಿಶ್ವ ಕ್ರಿಕೆಟ್ ನಲ್ಲಿ ಮಿಂಚಬಹುದು” ಎನ್ನುತ್ತಾರೆ ಕೋಚ್ ಅಂಥೋನಿ.

ಸದ್ಯ ಐಪಿಎಲ್ ಕೂಟಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಕುಲದೀಪ್, “ ಬಡ ಹಿನ್ನೆಲೆಯಿಂದ ಬಂದವನಾಗಿ, ನನ್ನ ತಂದೆಯ ಕೋಪ ಮತ್ತು ತಾಯಿಯ ಪ್ರೀತಿ, ಜೊತೆಗೆ ಎರಿಲ್ ಸರ್ ಅವರ ಅಪ್ರತಿಮ ತರಬೇತಿ ಮತ್ತು ಮಾಜಿ ಭಾರತ ವೇಗಿ ಈಶ್ವರ್ ಪಾಂಡೆ ಅವರ ಮಾರ್ಗದರ್ಶನ ನನಗೆ ದೊಡ್ಡ ಕನಸು ಕಾಣಲು ಪ್ರೇರೇಪಿಸಿತು” ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next