Advertisement

ಅಂದು ಲಂಕಾ ದಹನಕ್ಕೆ ಸಜ್ಜಾಗಿದ್ದ ಪಾಕ್ ಉಗ್ರರು: ಇದು ಕ್ರಿಕೆಟ್ ಇತಿಹಾಸದ ಕರಾಳ ದಿನ

10:20 AM Sep 17, 2019 | keerthan |

ಅಂದು ಮಾರ್ಚ್ 3, 2009. ಪಾಕಿಸ್ತಾನದ ಲಾಹೋರ್‌ .  ಸಮಯ ಸುಮಾರು ಬೆಳಿಗ್ಗೆ 8 ಗಂಟೆ ಆಸುಪಾಸು. ಶ್ರೀಲಂಕಾದ ಆಟಗಾರರು ಆತಿಥೇಯ ಪಾಕ್ ವಿರುದ್ಧ ಟೆಸ್ಟ್ ಪಂದ್ಯವಾಡಲು ಲಾಹೋರ್‌ ನ ಹೋಟೆಲ್ ಒಂದರಲ್ಲಿ ತಂಗಿದ್ದರು. ಅದಾಗಲೇ ಒಂದು ಪಂದ್ಯ ಆಡಿದ್ದ ಉಭಯ ತಂಡಗಳು ಅಂದು ದ್ವಿತೀಯ ಟೆಸ್ಟ್‌ ನ ಮೂರನೇ ದಿನಕ್ಕೆ ಸಜ್ಜಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭರ್ಜರಿ 606 ರನ್ ಗಳಿಸಿತ್ತು . ಅದೇ ಜೋಶ್ ನಲ್ಲಿ ಬೌಲಿಂಗ್ ಮಾಡಲು ತಮ್ಮನ್ನು ಮೈದಾನಕ್ಕೆ ಕರೆದೊಯ್ಯುವ ಬಸ್ ನಲ್ಲಿ ಕುಳಿತಿದ್ದರು. ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಹೊರಟಿತ್ತು. ಸಂಗೀತ ಕೇಳಲೆಂದು ಕಿವಿಗೆ ಹೆಡ್ ಫೋನ್ ಹಾಕಿ ಕುಳಿತಿದ್ದ ಲಂಕನ್ನರಿಗೆ ಮುಂದೆ ಕೇಳಲಾಗದ್ದನ್ನು ಕೇಳುತ್ತೇವೆ ಎಂಬ ಅಂದಾಜೂ ಇರಲಿಲ್ಲ. ಅದೇ ಸಮಯದಲ್ಲಿ ಹೊರಡಬೇಕಿದ್ದ ಪಾಕಿಸ್ತಾನಿ ಆಟಗಾರರ ಬಸ್ ಇನ್ನೂ ಹೊರಟಿರಲಿಲ್ಲ.! ಆದರೆ ಅಲ್ಲೊಂದು ಸಂಚು ಆಗಲೇ ಸಿದ್ದವಾಗಿತ್ತು.  !

Advertisement

ಆಗ ಸಮಯ 8.39 ಆಗಿತ್ತು . ಲಾಹೋರ್‌ ನ ಗದ್ದಾಫಿ ಸ್ಟೇಡಿಯಂಗೆ ಆಗಲೇ ಜನರು ಬರುತ್ತಿದ್ದರು. ಲಂಕನ್ನರಿದ್ದ ಬಸ್ ಲಾಹೋರ್ ನ ಲಿಬರ್ಟಿ ಸ್ಕ್ವೇರ್‌ ತಲುಪಿತ್ತು. ಅಂದರೆ ಇನ್ನೇನು 500 ಮೀಟರ್ ಹೋದರೆ ಸಾಕಿತ್ತು ಗದ್ದಾಫಿ ಸ್ಟೇಡಿಯಂ ತಲುಪಲು.  ಚಾಲಕ ಮೆಹರ್ ಮೊಹಮ್ಮದ್‌ ಖಲೀಲ್ ಜಾಗರೂಕತೆಯಿಂದಲೇ ಬಸ್ ಓಡಿಸುತ್ತಿದ್ದ. ಆಗಲೇ ಒಂದು ದೊಡ್ಡ ಸದ್ದು ಕೇಳಿತ್ತು. ಇಡೀ ಬಸ್ ಒಮ್ಮೆ ಅದುರಿತ್ತು. ಸೀಟಿಗೊರಗಿ ಯಾವುದೇ ಲೋಕದಲ್ಲಿದ್ದ ಲಂಕನ್ ಆಟಗಾರರು ಹೌಹಾರಿದ್ದರು. ಡ್ರೈವರ್ ಮೆಹರ್ ಖಲೀಲ್ ಗೆ ಏನಾಗುತ್ತಿದೆ ಎಂದೇ ತೋಚಲಿಲ್ಲ. ರಸ್ತೆಯಲ್ಲಿದ್ದ ಜನರೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದರು. ಎಲ್ಲರ ಮುಖದಲ್ಲಿ ಅವ್ಯಕ್ತ ಭಯವೊಂದು ಗೋಚರಿಸಿತ್ತು. ಅಷ್ಟೆಲ್ಲಾ ನಡೆದಿದ್ದು ಕೇವಲ ಒಂದು ಕ್ಷಣದಲ್ಲಿ.

ಹೌದು. 12 ಜನ ಬಂದೂಕುಧಾರಿಗಳು ಬಸ್ ನತ್ತ ದಾಳಿ ಮಾಡುತ್ತಿದ್ದರು. ಅವರು ಲಶ್ಕರ್ ಎ ಝಂಗ್ವಿ ಸಂಘಟನೆಗೆ ಸೇರಿದ ಉಗ್ರರು. ಕೈಯಲ್ಲಿ ಎಕೆ-47 ಮುಂತಾದ ಆಧುನಿಕ ಶಸ್ತ್ರಾಸ್ತ್ರಗಳಿದ್ದವು. ಮೊದಲ ಗುಂಡು ಬಸ್ ನ ಚಕ್ರಕ್ಕೆ ಹೊಡೆದಿದ್ದರು. ಚಕ್ರಕ್ಕೆ ಹೊಡೆದರೆ ಡ್ರೈವರ್ ಬಸ್ ನಿಲ್ಲಿಸುತ್ತಾನೆ, ಆಗ ಸುಲಭವಾಗಿ ಲಂಕನ್ ಆಟಗಾರರ ಮೇಲೆ ದಾಳಿ ಮಾಡಬಹುದು ಎಂಬುದು ಉಗ್ರರ ಲೆಕ್ಕಾಚಾರ . ಹಾಗಾಗಿ ಬಸ್ ಸುತ್ತುವರಿದು ದಾಳಿ ಮಾಡಲಾರಂಭಿಸಿದರು . ಬಸ್ ಇನ್ನೇನು ನಿಲ್ಲುತ್ತೆ ಅಂದಾಗ ತಮ್ಮಲ್ಲಿದ್ದ ಗ್ರೆನೇಡ್ , ರಾಕೆಟ್ ಗಳನ್ನು ಉಗ್ರರು ಹೊರತೆಗೆದಿದ್ದರು. ಅಂದರೆ ದೊಡ್ಡದೊಂದು ರಕ್ತದೋಕುಳಿ ಇನ್ನೇನು ಹರಿಯುದರಲ್ಲಿತ್ತು. ಆದರೆ ಇದೆಲ್ಲವನ್ನು ನೋಡುತ್ತಿದ್ದ  ಡ್ರೈವರ್ ಮೆಹರ್ ಖಲೀಲ್ ತಲೆಯಲ್ಲಿ ಬೇರೆಯದೆ ಯೋಚನೆ ಸಿದ್ಧಗೊಳ್ಳುತ್ತಿತ್ತು .

ಬಸ್ ನಿಲ್ಲಿಸಿದರೆ ಅಪಾಯ ಎಂದರಿತ ಮೆಹರ್ ಖಲೀಲ್ ಮತ್ತೆ ವೇಗದಲ್ಲಿ ಬಸ್ ಮುನ್ನುಗ್ಗಿಸಿದ. ಬಸ್ ಗೆ ಗುರಿಯಾಗಿಟ್ಟಿದ್ದ ರಾಕೆಟ್ ಸಿಡಿದಾಗಿತ್ತು. ಅದೊಂದು ಸಾಕಿತ್ತು ಬಸ್ ನಲ್ಲಿದ್ದ ಮಹೇಲ ಜಯವರ್ಧನೆ, ಕುಮಾರ ಸಂಗಕ್ಕರ, ಚಾಮಂಡ ವಾಸ್ ಸೇರಿ ಲಂಕನ್ ಆಟಗಾರರು ಕರಟಿ ಹೋಗಲು! ಇಡೀ ಕ್ರೀಡಾ ಜಗತ್ತನ್ನು ಕತ್ತಲೆ ಆವರಿಸಲು! ಆದರೆ ಗುರಿ ತಪ್ಪಿತು.! ಮೆಹರ್ ಬಸ್ ಚಲಾಯಿಸಿದ್ದರಿಂದ ರಾಕೆಟ್ ಗುರಿ ತಪ್ಪಿ ಹತ್ತಿರವಿದ್ದ ವಿದ್ಯುತ್ ಕಂಬಕ್ಕೆ ಬಡಿದು ಸಿಡಿದಿತ್ತು!

Advertisement

ಅಷ್ಟಕ್ಕೇ ಬಿಟ್ಚು ಬಿಡದ ಉಗ್ರರು ಬಸ್ ನ ಕೆಳಗಡೆ ಗ್ರೆನೇಡ್ ಬಾಂಬ್ ಎಸೆದರು. ಲಂಕನ್ ಆಟಗಾರರ ಅದೃಷ್ಟ ಮತ್ತು ಮೆಹರ್ ಖಲೀಲ್ ನ ಧೈರ್ಯ ಇಲ್ಲಿ ಕೂಡ ಗಟ್ಟಿಯಿತ್ತು. ಬಸ್ ನ ಅಡಿಗೆ ಬಿದ್ದ ಗ್ರೆನೇಡ್ ಆಗಲೇ ಸಿಡಿಯಲಿಲ್ಲ. ಅದೇ ಸಮಯಕ್ಕೆ  ಬಸ್ ಮುಂದಕ್ಕೆ ಹೋಯಿತು, ಆಗ ಗ್ರೆನೇಡ್ ಸಿಡಿಯಿತು. ಉಗ್ರರು ಮತ್ತೆ ಗುಂಡಿನ ದಾಳಿ ಆರಂಭಿಸಿದರು. ಆದರೆ ಬಸ್ ನ ಸೀಟ್ ಗಳ ಅಡಿಯಲ್ಲಿ ಅಡಗಿ ಕುಳಿತ ಲಂಕನ್ ಆಟಗಾರರು ಗಾಯವಾದರೂ ಪ್ರಾಣಾಪಾಯದಿಂದ ಪಾರಾದರು.

ಆಟಗಾರರ ಬಸ್ ನ ಹಿಂದೆ ಮ್ಯಾಚ್‌ ರೆಫ್ರಿ ಮತ್ತು ಅಂಪೈರ್ ಗಳಿದ್ದ ಮಿನಿ ವ್ಯಾನ್ ಇತ್ತು. ಸೈಮನ್ ಟಫೆಲ್, ಸ್ಟೀವ್ ಡೆವಿಸ್, ನದೀಂ ಘೌರಿ, ಎಹ್ ಸಾನ್ ರಾಜ ಆ ಪಂದ್ಯದ ಅಂಪೈರ್ ಗಳಾಗಿದ್ದರು. ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್, ಮ್ಯಾನೇಜರ್ ಪೀಟರ್‌ ಮ್ಯಾನ್ಯುಯಲ್ ಕೂಡಾ ವ್ಯಾನ್ ನಲ್ಲಿದ್ದರು. ಒಂದೇ ಸಮನೆ ಈ ವ್ಯಾನ್ ನತ್ತ ಗುಂಡು ಹಾರಿಸಿದ ಉಗ್ರರು ಅದರ ಚಾಲಕನನ್ನು ಕೊಂದರು. ಅಂಪಾಯರ್ ಎಹ್ ಸಾನ್ ರಾಜ ಅವರ ಎದೆಗೂ ಗುಂಡು ತಾಗಿತ್ತು. ಕೂಡಲೇ ವ್ಯಾನ್ ಸುತ್ತುವರಿದ ಪೊಲೀಸರು ಒಳಗಿದ್ದವರಿಗೆ ಗುಂಡು ತಾಗದಂತೆ ನೋಡಿಕೊಂಡರು. ರೆಫ್ರಿ ಕ್ರಿಸ್ ಬ್ರಾಡ್ ಕೂಡಲೇ ಎಹ್ ಸಾನ್ ರಾಜರ ಗುಂಡು ತಾಗಿದ್ದ ಜಾಗ ಒತ್ತಿ ಹಿಡಿದು ರಕ್ತಸ್ರಾವ ಆಗದಂತೆ ನೋಡಿಕೊಂಡರು.

ಇಷ್ಟೆಲ್ಲಾ ನಡೆದಿದ್ದು ಕೇವಲ 7 ನಿಮಿಷಗಳ ಅಂತರದಲ್ಲಿ.  6 ಪಾಕಿಸ್ತಾನಿ ಪೊಲೀಸರು ಇಬ್ಬರು ನಾಗರಿಕರು ಈ ಘಟನೆಯಲ್ಲಿ ಸಾವನ್ನಪ್ಪಿದರು . ಆರು ಲಂಕನ್ ಆಟಗಾರರು, ಇಬ್ಬರು ಸಿಬ್ಬಂದಿ, ಒಬ್ಬ ಅಂಪೈರ್ ಗಾಯಗೊಂಡಿದ್ದರು. ಆದರೆ ಒಬ್ಬನೇ ಒಬ್ಬ ಉಗ್ರನನ್ನು ಕೊಲ್ಲಲು ಅಥವಾ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ !

ಲಂಕನ್ ಆಟಗಾರರನ್ನು ಕೂಡಲೇ ಸ್ಟೇಡಿಯಂಗೆ ಕರೆದೊಯ್ಯುಲಾಯಿತು. ಪಿಚ್ ಮಧ್ಯೆಯೇ ಹೆಲಿಕಾಪ್ಟರ್‌ ಇಳಿಸಿ ಅಲ್ಲಿಂದ ಹತ್ತಿರದ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು. ಅಲ್ಲಿಂದ ಶೀಘ್ರ ಕೊಲಂಬೊಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಈ ಘಟನೆ ವಿಶ್ವದೆಲ್ಲೆಡೆ ಭಾರಿ ಸಂಚಲನ ಉಂಟು ಮಾಡಿತ್ತು. ನ್ಯೂಜಿಲೆಂಡ್‌ ತಂಡ ಅದೇ ವರ್ಷ ಮಾಡಲಿದ್ದ ತನ್ನ ಪಾಕ್ ಪ್ರವಾಸವನ್ನು ರದ್ದು ಮಾಡಿತು. ಪಾಕಿಸ್ತಾನಕ್ಕೆ ಯಾವುದೇ ದೇಶಗಳು ಪ್ರವಾಸ ಬೆಳೆಸಲು ಹಿಂದೆಟು ಹಾಕಿದವು. ಹೀಗಾಗಿ ಪಾಕ್ ನಲ್ಲಿ ನಡೆಯಬೇಕಿದ್ದ 2011 ವಿಶ್ವ ಕಪ್ ನ ಹಲವು ಪಂದ್ಯಗಳು ಭಾರತ ಮತ್ತು ಶ್ರೀಲಂಕಾದ ಪಾಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಯಿತು . 2016ರಲ್ಲಿ ಈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಮೂವರನ್ನು ಎನ್ ಕೌಂಟರ್ ನಲ್ಲಿ ಕೊಲ್ಲಲಾಯಿತು . ತನ್ನ ಧೈರ್ಯದಿಂದ ಲಂಕನ್ ಆಟಗಾರರ ಪ್ರಾಣ ರಕ್ಷಿಸಿದ ಡ್ರೈವರ್ ಮೆಹರ್ ಮೊಹಮ್ಮದ್‌ ಖಲೀಲ್ ಗೆ “ತಮ್ಘಾ ಇ ಶೌಜತ್ ” ಗೌರವ ನೀಡಲಾಯಿತು.

ಈ ಘಟನೆಯ ನಂತರ ಮೊದಲ ಬಾರಿಗೆ ಅಂದರೆ 2017ರಲ್ಲಿ ಅದೇ ಲಾಹೋರ್‌ ನ ಗದ್ದಾಫಿ ಮೈದಾನಕ್ಕೆ ಲಂಕಾ ತಂಡ ಟಿ ಟ್ವೆಂಟಿ ಪಂದ್ಯವಾಡಲು ಪ್ರಯಾಣ ಮಾಡಿತ್ತು . ಈಗ ಮತ್ತೆ ಶ್ರೀಲಂಕಾ ಪಾಕಿಸ್ತಾನ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಆದರೆ ಪ್ರಮುಖ ಹತ್ತು ಆಟಗಾರರು ಭದ್ರತಾ ದೃಷ್ಟಿಯಿಂದ ಪ್ರವಾಸ ನಿಷೇಧಿಸಿದ್ದಾರೆ.  ಹತ್ತು ವರ್ಷಗಳ ಹಿಂದೆ ನಡೆದ ಈ ಒಂದು ಘಟನೆ ಪಾಕ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಶಾಶ್ವತ ಕಪ್ಪು ಚುಕ್ಕೆಯಾಗಿಯೇ ಉಳಿದಿದೆ !

ಕೀರ್ತನ್‌ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next