ರಾಮಾಯಣ ಧಾರವಾಹಿಯಲ್ಲಿ.
Advertisement
1928ರಲ್ಲಿ ಪಂಜಾಬ್ ನ ಮಾಜಾಹ್ ಪ್ರದೇಶದ ಧರ್ಮುಚಾಕ್ ಎಂಬ ಹಳ್ಳಿಯಲ್ಲಿ ರಾಂಧಾವ್ ಜನಿಸಿದ್ದರು. ಜಾಟ್ ಸಿಖ್ ಸಮುದಾಯಕ್ಕೆ ಸೇರಿದ್ದ ಇವರ ಮೂಲ ನಾಮಧೇಯ ದೀದಾರ್ ಸಿಂಗ್ ರಾಂಧಾವ್ ಎಂದಾಗಿತ್ತು.
ದಾರಾ ಸಿಂಗ್ ಮೈಕಟ್ಟು ಎಂತಹವರನ್ನು ದಂಗುಬಡಿಸುವಂತಹದ್ದು. ಬರೋಬ್ಬರಿ ಆರು ಅಡಿ 2 ಇಂಚು ಎತ್ತರ. 53 ಇಂಚಿನ ಎದೆ. 127ಕೆಜಿ ತೂಕ. ಆ ಕಾಲದಲ್ಲಿಯೇ ಫೈಲ್ವಾನ್ ಆಗಿದ್ದ ದಾರಾ ಸಿಂಗ್ ಆರಂಭದಲ್ಲಿ ಕುಸ್ತಿಪಟುವಾಗಿದ್ದರು. 1947ರಿಂದ 1983ರವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಪಟುವಾಗಿ ಗುರುತಿಸಿಕೊಂಡಿದ್ದರು. ಒಂದು ಕುತೂಹಲಕಾರಿ ವಿಷಯ ಏನೆಂದರೆ 1952ರಲ್ಲಿ ದಾರಾಸಿಂಗ್ ಸಾಂಗ್ಡಿಲ್ ಎಂಬ ಹಿಂದಿ ಚಿತ್ರದಲ್ಲಿ ಮೊತ್ತ ಮೊದಲಿಗೆ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾದ ನಿರ್ಮಾಪಕ, ನಿರ್ದೇಶಕ ಆರ್ ಸಿ ತಲ್ವಾರ್. ಸಾಂಗ್ಡಿಲ್ ಸಿನಿಮಾದ ಕಥೆ, ಚಿತ್ರಕಥೆ ರಮಾನಂದ್ ಸಾಗರ್ ಅವರದ್ದು. ದಿಲೀಪ್ ಕುಮಾರ್, ಮಧುಬಾಲಾ ಮುಖ್ಯಭೂಮಿಕೆಯಲ್ಲಿದ್ದರು. ಸಾಂಗ್ಡಿಲ್ ಸಿನಿಮಾಕ್ಕೆ ಚಿತ್ರಕಥೆ ಬರೆದ ರಮಾನಂದ್ ಸಾಗರ್ ನಂತರ 1987ರಲ್ಲಿ ನಿರ್ದೇಶಿಸಿದ್ದ ರಾಮಾಯಣ ಧಾರಾವಾಹಿಯಲ್ಲಿ “ದಾರಾ ಸಿಂಗ್” ಗೆ ಹನುಮಂತನ ಪಾತ್ರ ಮಾಡುವಂತೆ ಆಹ್ವಾನ ನೀಡುವ ಮೂಲಕ ಮತ್ತಷ್ಟು ಜನಪ್ರಿಯಗೊಳಿಸಿದ್ದರು.
Related Articles
Advertisement
1947ರಲ್ಲಿ ಸಿಂಗಾಪುರಕ್ಕೆ ತೆರಳಿದ್ದ ದಾರಾ ಸಿಂಗ್ ಕುಸ್ತಿ ಪಂದ್ಯದಲ್ಲಿ ಟಾರ್ಲೊಕ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಆಫ್ ಮಲೇಷ್ಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ನಂತರ 1954ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕುಸ್ತಿಪಟು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಕುಸ್ತಿಯಲ್ಲಿನ ತಮ್ಮ ನೈಪುಣ್ಯಯಿಂದ ದೇಶಾದ್ಯಂತ ಅಪಾರ ಗೌರವ, ಮನ್ನಣೆ ಗಳಿಸಿದ ಹೆಮ್ಮೆ ದಾರಾ ಸಿಂಗ್ ಅವರದ್ದಾಗಿತ್ತು. ಆ ಕಾಲದ ಘಟಾನುಘಟಿ ಕುಸ್ತಿಪಟುವಾಗಿದ್ದ ಕಿಂಗ್ ಕಾಂಗ್ (King kong)ಅವರನ್ನು ಪರಾಜಯಗೊಳಿಸಿ 1959ರಲ್ಲಿ ಕಾಮನ್ ವೆಲ್ತ್ ಚಾಂಪಿಯನ್ ಪಟ್ಟ ಪಡೆದಿದ್ದರು. ಜಾರ್ಜ್ ಗೋರ್ಡಿಯೆಂಕೋ ಮತ್ತು ಜಾನ್ ಡಿಸಿಲ್ವಾ ಅವರಿಗೂ ಸೋಲಿನ ರುಚಿ ಉಣಿಸಿದ್ದರು. 1969ರಲ್ಲಿ ಅಮೆರಿಕಾದ ಲೋವ್ ಥೆಝ್ ಅವರನ್ನು ಸೋಲಿಸಿ ದಾರಾ ಸಿಂಗ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಬಲಾಢ್ಯ ಕುಸ್ತಿಪಟುವಾಗಿದ್ದ ಸಿಂಗ್ ರುಸ್ತುಂ ಎ ಹಿಂದ್, ರುಸ್ತುಂ ಎ ಪಂಜಾಬ್ ಎಂಬ ಬಿರುದಿಗೆ ಪಾತ್ರರಾಗಿದ್ದರು. 1983ರಲ್ಲಿ ಕುಸ್ತಿ ಸ್ಪರ್ಧೆಗೆ ವಿದಾಯ ಘೋಷಿಸಿದ್ದರು. ಕುಸ್ತಿ ಪಂದ್ಯದಲ್ಲಿ ದಾರಾ ಸಿಂಗ್ ಪರಾಜಯಗೊಂಡಿದ್ದೇ ಇಲ್ಲ ಎಂಬುದು ಹೆಗ್ಗಳಿಕೆ.