Advertisement

ಕೋವಿಡ್ 19: ಹಿಮ್ಮೆಟ್ಟಿಸಿದ ಶತಾಯುಷಿ ಮಹಿಳೆ

02:56 AM Aug 02, 2020 | Hari Prasad |

ಚಿತ್ರದುರ್ಗ: ನಗರದ 110 ವರ್ಷ ಪ್ರಾಯದ ಅಜ್ಜಿ ಹಾಗೂ ಆಕೆಯ 13 ತಿಂಗಳ ಮರಿ ಮೊಮ್ಮಗಳು ಕೋವಿಡ್ 19 ಸೋಂಕು ಗೆಲ್ಲುವ ಮೂಲಕ ರೋಗಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ್ದಾರೆ.

Advertisement

ಕೋವಿಡ್ 19 ಹಿರಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚು ಅಪಾಯ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ 60 ವರ್ಷ ದಾಟಿದ ಅನೇಕರು ಇದಕ್ಕೆ ಬಲಿಯಾಗಿದ್ದಾರೆ.

“ಜೀವನದಲ್ಲಿ ಯಾವುದಕ್ಕೂ ಹೆದರಿದವಳಲ್ಲ. ಹಾಗಾಗಿ ಕೋವಿಡ್ 19 ಸೋಂಕಿಗೂ ಭಯಪಟ್ಟಿಲ್ಲ’ ಎನ್ನುವ ಸಿದ್ಧಮ್ಮ ಚಿತ್ರದುರ್ಗದ ಕೋವಿಡ್‌ ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿದ್ದಾರೆ.

ಪ್ರಕರಣದ ವಿವರ
ನಗರದ ಜಿಲ್ಲಾಸ್ಪತ್ರೆ ಎದುರಿನಲ್ಲಿರುವ ಪೊಲೀಸ್‌ ಕ್ವಾಟ್ರಸ್‌ನ ಮೊಮ್ಮಗನ ಮನೆಯಲ್ಲಿದ್ದ ಅಜ್ಜಿ ಸಿದ್ಧಮ್ಮ, 13 ತಿಂಗಳ ಮರಿ ಮೊಮ್ಮಗಳು, ಇಬ್ಬರು ಸೊಸೆಯಂದಿರು ಸೇರಿ ನಾಲ್ವರಿಗೆ ಜು. 27ರಂದು ಕೋವಿಡ್ 19 ದೃಢಪಟ್ಟಿತ್ತು. ಜು. 28ರಂದು ಅವರನ್ನು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಐದು ದಿನಗಳ ಚಿಕಿತ್ಸೆಯ ಬಳಿಕ ಅಜ್ಜಿ ಹಾಗೂ ಮಗು ಡಿಸ್ಚಾರ್ಜ್‌ ಆಗಿದ್ದಾರೆ.

ಆಸ್ಪತ್ರೆಯಿಂದ ನಗುಮೊಗದೊಂದಿಗೆ ಹೊರ ಬಂದ ಅಜ್ಜಿಯು ಮೊಮ್ಮಕ್ಕಳ ಆರೋಗ್ಯ ವಿಚಾರಿಸಿದರು. ಈ ವೇಳೆ ಎದುರಾದ ಮಾಧ್ಯಮದವರು ಮಾತನಾಡಿಸಿದಾಗ, “ನಾನು ಆರೋಗ್ಯವಾಗಿದ್ದೇನೆ. ನನಗೆ ಏನೂ ಆಗಿರಲಿಲ್ಲ. ಆಸ್ಪತ್ರೆ ಚೆನ್ನಾಗಿದೇರಿ. ಊಟಕ್ಕೆ ಗಂಜಿ ಕೊಟ್ರಾ. ನನಗೆ ಗಟ್ಟಿ ಪದಾರ್ಥ ಸೇರಲ್ಲ’ ಎಂದು ನೆನಪಿಗೆ ಬಂದಷ್ಟನ್ನು ಹೇಳಿಕೊಂಡರು.

Advertisement

ಆರೋಗ್ಯವಂತೆ
ಅಜ್ಜಿಗೆ ಬಿಪಿ, ಶುಗರ್‌ ಯಾವುದೂ ಇಲ್ಲ. ಚೆನ್ನಾಗಿದ್ದಾರೆ. ಮುದ್ದೆ ಇಷ್ಟಪಡುತ್ತಾರೆ. 110 ವರ್ಷದಲ್ಲೂ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಾರೆ, ಓಡಾಡುತ್ತಾರೆ. ಕೋವಿಡ್ 19 ಅವರನ್ನು ಧೃತಿಗೆಡಿಸಿಲ್ಲ ಎನ್ನುತ್ತಾರೆ ಮನೆಯವರು.

ನಮ್ಮ ಆಸ್ಪತ್ರೆಯಲ್ಲಿ ಈ ಹಿಂದೆ ಹಿರಿಯೂರಿನ 97 ವರ್ಷದ ವೃದ್ಧೆ, ಹೊಸದುರ್ಗದ 96 ವರ್ಷದ ವೃದ್ಧೆಗೆ ಚಿಕಿತ್ಸೆ ನೀಡಲಾಗಿತ್ತು. ಅವರಿಬ್ಬರೂ ಗುಣಮುಖರಾಗಿದ್ದರು. ಈಗ 110 ವರ್ಷದ ಅಜ್ಜಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 110 ವರ್ಷದ ವೃದ್ಧೆ ಚೇತರಿಸಿಕೊಂಡಿದ್ದು ಇದೇ ಮೊದಲ ಪ್ರಕರಣ ಇರಬಹುದು. ಇಂಥವರನ್ನು ನೋಡಿದಾಗ ಚಿಕಿತ್ಸೆ ನೀಡಲು ಉತ್ಸಾಹ ಹೆಚ್ಚಾಗುತ್ತದೆ.
– ಡಾ| ಎಚ್‌.ಜೆ. ಬಸವರಾಜಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ

Advertisement

Udayavani is now on Telegram. Click here to join our channel and stay updated with the latest news.

Next