Advertisement
ತೀಕ್ಷ್ಣವಾದ ಬಿಸಿಗಾಳಿಯ ಹೊಡೆತಗಳಿಂದ ಅವನ ಮುಖ ಅರ್ಧ ಸುಟ್ಟಂತೆ ಕಪ್ಪಾಗಿತ್ತು. ಹರಿತವಾದ ಗಾಜಿನ ಚೂರಿಯಿಂದ ಇರಿದಂತೆ ಅವನ ಕಣ್ಣುಗಳು ನೋಯುತ್ತಿದ್ದವು. ಬಾಯಿಯಲ್ಲಿನ ಜೊಲ್ಲು ಒಣಗಿ ದಪ್ಪಗೆ ಬುರುಗಾಗಿತ್ತು. ನೂಕುನುಗ್ಗಲಿನಲ್ಲಿ ನೊಕ್ಕೆ ಕಟ್ಟಿದ ಎಮ್ಮೆಯಂತೆ ಅವನು ಏದುಸಿರು ಬಿಡತೊಡಗಿದ. ರಸ್ತೆಯ ತಾಪ ಏರುತ್ತಲಿತ್ತು. ಗಾಳಿ ಅದಾಗಲೇ ಕಾದು ಬಿಸಿಯಾಗಿತ್ತು ಮತ್ತು ಅದಕ್ಕಿಂತಲೂ ಹೆಚ್ಚಾಗಿ ಅವನ ಶರೀರ ಸುಡುತ್ತಲಿತ್ತು. ಕಾಲುಗಳನ್ನೆಳೆಯುತ್ತಾ ಅವನು ಒಂದು ಮರದ ಕೆಳಗೆ ಹೋಗಿ ನಿಂತ. ಜೇಬಿನಿಂದ ಒಂದು ಕಾಗದವನ್ನು ಹೊರತೆಗೆದು ಅದರ ಮೇಲಿದ್ದ ವಿಳಾಸವನ್ನು ನೋಡಿದ- “ಜೆ. ಬ್ಲಾಕ್, ಜೋರ್ ಬಾಗ್ ರೋಡ್, ಅಲೀಗಂಜ್, ನವದೆಹಲಿ-3′.
ಅವನು ಒಂದೇ ಸವನೆ ನೋಡುತ್ತ ನಿಂತ. ಅವನ ಗಂಟಲು ಇನ್ನಷ್ಟು ಒಣಗಿ ಹೋಗಿತ್ತು. ಸೈಕಲಿನವ ಟ್ಯೂಬನ್ನು ತಿರು ತಿರುಗಿಸುತ್ತ ನೀರಿನಲ್ಲಿ ಮುಳುಗಿಸುತ್ತಿದ್ದರೆ ಇಲ್ಲಿ ಇವನ ಗಂಟಲು ಒಣ ಒಣಗುತ್ತ ಹೋಗುತ್ತಿತ್ತು. ಗಾಳಿ ಜೋರಾಗಿ “ಸರ್ರ ಸರ್ರ’ ಎಂದು ಬೀಸತೊಡಗಿತು. ರಸ್ತೆಯ ಇಕ್ಕೆಲಗಳಲ್ಲಿ ಧೂಳು ಹಾರಿ ಕಣ್ಣುಗಳನ್ನು ಹೊಕ್ಕಿತು. ಧೂಳು ಕೂಡ ಬಿಸಿಯಾಗಿತ್ತು. ಅದಕ್ಕೂ ಕಣ್ಣಿನ ಶೀತಲ ಕೊಠಡಿಯಲ್ಲಿ ವಿಶ್ರಾಂತಿ ಬೇಕಿತ್ತು. ಅವನು ತಲೆಬಗ್ಗಿಸಿ ಬಲತೋಳಿನಿಂದ ಕಣ್ಣುಗಳನ್ನು ಮುಚ್ಚಿ ಕೊಂಡ. ಸೈಕಲಿನವ ಟ್ಯೂಬಿನೊಟ್ಟಿಗೆ ತನ್ನ ಮುಖವನ್ನೂ ಬಾಲ್ದಿಯಲ್ಲಿ ತೂರಿದ. ಮರದ ಕೆಳಗೆ ನಿಂತ ಗ್ರಾಹಕ ಕತ್ತು ಬಗ್ಗಿಸಿ ಮುಖವನ್ನು ತನ್ನ ಹ್ಯಾಟಿನ ಮರೆಗೆ ಸರಿಸಿದ.
Related Articles
ಅವನು ಬಂಗಲೆಯ ಸುತ್ತು ಗೋಡೆಯೊಳಗೆ ಇಣುಕಿ ನೋಡಿದ. ದ್ವಾರದ ಎಡಗಡೆ ಮರದ ದಟ್ಟ ನೆರಳಿನಲ್ಲಿ ಗುಡ್ಡಗಾಡಿನವನೊಬ್ಬ ಮಲಗಿದ್ದ. ಎದುರಿಗೆ ಸಿಮೆಂಟಿನ ಏಣಿ. ನಾಲ್ಕು ಕಡೆಗಳಿಂದಲೂ ಬಾಗಿಲು ಹಾಕಲಾಗಿತ್ತು. ಕಿಟಿಕಿಗಳ ಗಾಜಿನಿಂದ ಇಣುಕುತ್ತಿದ್ದ ಕಡು ಹಸುರು ಬಣ್ಣದ ಪರದೆಗಳು. ನಾಲ್ಕೂ ಕಡೆ ಶಾಂತಿ-ಗಾಢವಾದ ನಿಶ್ಶಬ್ದ. ಬಲಗಡೆ ಮರದ ಕೆಳಗೆ ನೀರಿನ ನಲ್ಲಿ ಇತ್ತು.
Advertisement
ಅವನು ಬಾಗಿಲು ತೆಗೆದ. ಗುಡ್ಡಗಾಡಿನವ ಮಗ್ಗುಲು ಬದಲಾಯಿಸಿದ. ಅವನು ಬೆಚ್ಚಿ ಬಿದ್ದ. ಅವನು ತಿರುಗಿ ಸೈಕಲಿನವನನ್ನು ಕೇಳಿದ- “”ಒಳಗೆ ಹೋಗಲೆ?”“”ಹೋಗು, ಹೋಗು” ಸೈಕಲಿನವ ಹಿಂದಿನಂತೆಯೇ ಟ್ಯೂಬಿನ ಮೇಲಿನ ತನ್ನ ದೃಷ್ಟಿಯನ್ನು ಕದಲಿಸದೆ ಹೇಳಿದ.
ಅವನು ಮೆಲ್ಲನೆ ಬಾಗಿಲು ತೆರೆದ. ಅವನಿಗೆ ಗುಡ್ಡಗಾಡಿನವನನ್ನು ಎಬ್ಬಿಸುವುದು ಬೇಡವಾಗಿತ್ತು. ಅವನು ಗುಡ್ಡಗಾಡಿನವನನ್ನು ನೋಡುತ್ತ ನಲ್ಲಿಯ ತನಕ ಹೋದ.
ನೀರಿನ ಧಾರೆ ಕೈಯ ಮೇಲೆ ಬೀಳುತ್ತಲೇ ಒಲೆಯ ಮೇಲಿನಿಂದ ಕುದಿಯುವ ನೀರು ಬಿದ್ದಂತೆ ಅವನು ನೋವಿನಿಂದ ತಳಮಳಿಸಿದ. ಅವನ ಗಂಟಲು ಇನ್ನಷ್ಟು ಒಣಗಿತು. ಅವನು ನೀರಿನ ಧಾರೆಯನ್ನು ಹರಿಯಗೊಟ್ಟ.
“”ಏನು ಮಾಡುತ್ತಿದ್ದೀಯೆ?” ಹಿಂದಿನಿಂದ ಪ್ರಶ್ನೆ ತೂರಿಬಂತು.
ತಿರುಗಿ ನೋಡಿದರೆ ಗುಡ್ಡಿಗಾಡಿ ನವ ಅವನನ್ನು ದಿಟ್ಟಿಸುತ್ತಿದ್ದ.
“”ನೀರು ಕುಡಿಯುತ್ತಿ ದ್ದೇನೆ…” ಅವನು ಸಮಾಧಾನಿಸುವಂತೆ ಹೇಳಿದ. “”ಹಾಗಾದರೆ ಏತಕ್ಕೆ ಕುಡಿಯುತ್ತಿಲ್ಲ?” ಚಾಟಿ ಬೀಸಿದಂತೆ ಬಂತು ಪ್ರಶ್ನೆ.
“”ತುಂಬ ಬಿಸಿಯಾಗಿದೆ…” ಎನ್ನುತ್ತ ಗುಡ್ಡಗಾಡಿನವ ಮತ್ತೇನನ್ನಾದರೂ ಹೇಳುವ ಮೊದಲೇ ಅವನು ತನ್ನ ಕೈಯನ್ನು ನೀರ ಧಾರೆಯ ಕೆಳಗೆ ಹಿಡಿದ. ನೀರು ಈಗ ಅಷ್ಟು ಬಿಸಿಯಾಗಿರಲಿಲ್ಲ. ಅವನು ಒಂದೆರಡು ಬೊಗಸೆ ನೀರು ಕುಡಿದು ನಲ್ಲಿಯನ್ನು ಬಂದುಮಾಡಿದ.
ಆದರೂ ಅವನ ಗಂಟಲು ಇನ್ನೂ ಒಣಗಿಯೇ ಇತ್ತು. ವಿರೋಚನಕಾರಿಯಾದ ಔಷಧವನ್ನು ತೆಗೆದುಕೊಂಡಿದ್ದಂತೆ ಅವನ ಹೊಟ್ಟೆ ಗುಡುಗುಡಿಸುತ್ತಿತ್ತು.
ಹೊರಗೆ ತಾಪಮಾನ ಹಾಗೆಯೇ ಇತ್ತು. ನಾಲ್ಕೂ ಕಡೆಗಳಿಂದ ಮುಖಕ್ಕೆ ಬಾರಿಸಿದಂತೆ ಕಾವೇರಿದ ಗಾಳಿ ಬಿರುಸಾಗಿ ಬೀಸುತ್ತಿತ್ತು. ಒಂದಿಬ್ಬರು ಸೈಕಲ್ ಸವಾರರು ಬಟ್ಟೆಯಿಂದ ಮುಖಮುಚ್ಚಿಕೊಂಡು ಹೋಗುತ್ತಿದ್ದರೆ, ಯಾವುದಾದರೂ ಉದ್ದನೆಯ ಕಾರು “ಸರ್ರ’ ಎಂದು ಶಬ್ದ ಮಾಡುತ್ತ ಹೋಗುತ್ತಿತ್ತು.
ಮುಂದೆ ನಡೆದು ಅವನು ನೋಡಿದ: ಬಲ-ಎಡ ಎರಡೂ ಕಡೆ ಹೋಗುವ ಉದ್ದನೆಯ ರಸ್ತೆಯ ಮೇಲೆ ಬರೆಯಲಾಗಿತ್ತು- ಜೋರ್ ಬಾಗ್ ರೋಡ್! ಅವನು ಳಾಸ ತೆಗೆದು ನೋಡಿದ- “ಜೆ ಬ್ಲಾಕ್, ಜೋರ್ ಬಾಗ್ ರೋಡ್, ಅಲೀಗಂಜ್, ನವದೆಹಲಿ-3′. ಅವನು ಸಂದಿಗ್ಧದಲ್ಲಿ ಬಿದ್ದ. ಬಲ-ಎಡ ಎರಡೂ ಕಡೆಗೆ ಹೋಗುವ ರಸ್ತೆಗಳು ಜೋರ್ ಬಾಗ್ ರೋಡ್! ತಾನು ಯಾವ ರಸ್ತೆಯಲ್ಲಿ ಹೋಗುವುದು? ಯಾರನ್ನಾದರೂ ಕೇಳ್ಳೋಣವೆಂದು ಅವನು ಅತ್ತಿತ್ತ ನೋಡಿದ. ಬೀಸುವ ಗಾಳಿಯ ರಭಸಕ್ಕೆ ಮರಗಳ ಎಲೆಗಳು “ಜರ್ರ ಜರ್ರ’ ಎನ್ನುತ್ತ ಒಂದಕ್ಕೊಂದು ಢಿಕ್ಕಿ ಹೊಡೆಯುತ್ತಿದ್ದವು. ಅತ್ತಿತ್ತ ಹೋಗುವವರು ಯಾರೂ ಅವನಿಗೆ ಕಾಣಿಸಲಿಲ್ಲ. ಅವನ ದೃಷ್ಟಿ ಸೈಕಲಿನವನ ಮೇಲೆ ಬಿತ್ತು. ಅವನು ಒಂದು ಹಳೆಯ, ಕೊಳಕಾದ ಸೈಕಲಿನ ಗಾಲಿಗೆ ಗಾಳಿ ತುಂಬಿಸುತ್ತಿದ್ದ. ಹತ್ತಿರದಲ್ಲಿಯೇ ಕೊಳಕಾದ ಮನುಷ್ಯನೊಬ್ಬ ನಿಂತಿದ್ದ. ಅವನ ಬಟ್ಟೆ, ಅವನ ಮುಖ ಮಲಿನವಾಗಿದ್ದವು ಮತ್ತು ಅವನ ಒಂದು ಕಾಲು ಕುಂಟಾಗಿತ್ತು. ಬಲ ಕಂಕುಳ ಕೆಳಗೆ ಅವನು ಊರುಗೋಲನ್ನು ಅದುಮಿ ನಿಂತಿದ್ದ.
ಅವನು ಸೈಕಲಿನವನ ಹತ್ತಿರ ಬಂದು ಕೇಳಿದ- “”ಅಲೀಗಂಜ್ ಯಾವ ಕಡೆಗಿದೆ?”
ಸೈಕಲಿನವ ಹ್ಯಾಂಡಲ್‌ನಿಂದ ತನ್ನ ಕೈಯನ್ನು ಎತ್ತದೆಯೇ ಒಂದಿಷ್ಟು ಮುಖ ಮೇಲೆ ಮಾಡಿ ಬಲದಿಕ್ಕಿಗೆ ಹೋಗುವ ರಸ್ತೆಯತ್ತ ಸನ್ನೆಮಾಡುತ್ತ “”ನೇರ ಹೋಗು” ಎಂದ.
ಅವನು ಆ ದಿಕ್ಕಿಗೆ ಹೊರಟ. ಬಿಸಿ ಗಾಳಿ ಅವನ ಮುಖಕ್ಕೆ ಅಪ್ಪಳಿಸುತ್ತಿತ್ತು. ಅವನು ತನ್ನೆರಡೂ ಕೈಗಳಿಂದ ಕಿವಿಗಳನ್ನು ಮುಚ್ಚಿಕೊಂಡ.
ಅವನು ಒಂದು ಮರದ ಕೆಳಗೆ ಬಂದು ನಿಂತ. ಮತ್ತೆ ಮತ್ತೆ ಉಗುಳು ನುಂಗುತ್ತ ಅವನು ತನ್ನ ಗಂಟಲನ್ನು ಆದ್ರìವಾಗಿಸುತ್ತಿದ್ದ. ಅವನಿಗೆ ಏದುಸಿರು ಬರುತ್ತಿತ್ತು. ಜ್ವರ ಬರುತ್ತಿರುವಂತೆ ಅನಿಸುತ್ತಿತ್ತು. ಯಾವುದಾದರೂ ವಾಹನ ಸಿಕ್ಕೀತೇ ಎಂದು ಅವನು ಅತ್ತಿತ್ತ ನೋಡಿದ. ಅಷ್ಟರಲ್ಲಿ “ಸರ್ರ’ ಎಂದು ಒಂದು ಕಾರು ಹಾದುಹೋಯಿತು. ಅವನಿಗೆ ಫಕ್ಕನೆ ಹೊಳೆಯಿತು- ಲಿಫ್ಟ್ ! ದೆಹಲಿಯಲ್ಲಿ ಕಾರಿನಲ್ಲಿ ಹೋಗುವವರು ಲಿಫ್ಟ್ ಕೊಡುತ್ತಾರೆ ಎಂದು ತಾನು ಕೇಳಿದ್ದು ಅವನಿಗೆ ನೆನಪಿಗೆ ಬಂತು.
ಅವನಿಗೆ ಇನ್ನೊಂದು ಕಾರು ಬರುತ್ತಿರುವುದು ಕಾಣಿಸಿತು. ಹಿಂದಿನ ಸೀಟಿನಲ್ಲಿ ಯಾರೋ ಒಬ್ಬ ಅರ್ಧ ಮಲಗಿಕೊಂಡಂತಿತ್ತು. ಅವನು ಗಹನವಾದ ಅನಿಶ್ಚಿತತೆಯಲ್ಲಿ ಮುಳುಗಿದ. ಕಾರು ಹತ್ತಿರ ಬರುತ್ತಿದ್ದಂತೆ ತನ್ನ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಅವನು ಬೊಬ್ಬೆ ಹೊಡೆದ- “”ಲಿಫ್ಟ್ , ಪ್ಲೀಸ್…”
ರಭಸವಾಗಿ ಬೀಸುತ್ತಿದ್ದ ಗಾಳಿಯ ಹೊಡೆತಗಳು ಅವನ ಸ್ವರವನ್ನು ಹಾರಿಸಿ ಕೊಂಡೊಯ್ದವು. “ಸರ್ರರ್‌ರ್…’ ಎನ್ನುತ್ತ ಕಾರು ಹೊರಟುಹೋಯಿತು.
ಅವನ ಗಂಟಲು ಮತ್ತಷ್ಟು ಆರಿತು. ಈಗ ಉಗುಳು ನುಂಗಲೂ ಅವನಿಗೆ ಕಷ್ಟವಾಗುತ್ತಿತ್ತು. ಒಂದು ತರದ ಅನ್ಯಮನಸ್ಕತೆ ಅವನನ್ನೀಗ ಆವರಿಸಿತು. ಎಲ್ಲಿಯೋ ಕಳೆದುಹೋದವನಂತೆ ಅವನು ಅತ್ತಿತ್ತ ದಿಟ್ಟಿಸಿ ನೋಡತೊಡಗಿದ.
“”ಎಲ್ಲಿಗೆ ಹೋಗಬೇಕಾಗಿತ್ತು?”
ಅದೇ ಕೊಳಕು ಮನುಷ್ಯ ತನ್ನ ಗಲೀಜಾದ ಸೈಕಲಿನ ಮೇಲೆ ಕುಳಿತಿದ್ದು ಒಂದು ಕಾಲನ್ನು ಫುಟ್‌ಪಾತಿನ ಮೇಲೆ ಊರಿ, ಕೈಯಲ್ಲಿದ್ದ ಊರುಗೋಲನ್ನು ನೆಲದ ಮೇಲೂರುತ್ತ ಅವನನ್ನು ಕೇಳಿದ.
“”ಅಲ್ಲೀಗಂಜ್… ಇಲ್ಲಿಂದ ಎಷ್ಟು ದೂರವಿದೆ?”
“”ಹೆಚ್ಚು ದೂರವಿಲ್ಲ. ಆದರೆ ಸಾಕಷ್ಟು ದೂರವಿದೆ” ಕೊಳಕು ಮನುಷ್ಯ ದಾರ್ಶನಿಕನಂತೆ ಉತ್ತರಿಸಿದ. “”ಅಂದರೆ?”
“”ಅಂದರೆ ನಿಜವಾಗಿ ಇಲ್ಲಿಂದ ತುಂಬ ದೂರವೇನಿಲ್ಲ. ಆದರೆ ಈ ಸುಡುಬಿಸಿಲಿನಲ್ಲಿ ಮತ್ತು ಬಿಸಿಗಾಳಿಯ ಝಳಕ್ಕೆ ಬಹಳ ದೂರ ಎಂದೆನಿಸುತ್ತದೆ”.
ಅವನು ಎದುರು ನೋಡಿದ. ನೇರವಾದ, ಉದ್ದವಾದ, ಸ್ವತ್ಛವಾದ ರಸ್ತೆ ಅಲೀಗಂಜ್‌ನತ್ತ ಹೋಗಿತ್ತು. ಬಿಸಿಗಾಳಿಯ ಪ್ರತಿಯೊಂದು ಬಿರುಬೀಸು ರಸ್ತೆಯ ಮೇಲಿನ ಧೂಳನ್ನು ಚಕ್ರಾಕಾರದಲ್ಲಿ ಸುತ್ತಿ ಅನಂತರ ಅದನ್ನು ಎತ್ತಿ ಕೊಂಡೊಯ್ಯುತ್ತಿತ್ತು. ರಸ್ತೆ ಇನ್ನಷ್ಟು ಸ್ವತ್ಛವಾಗುತ್ತಿತ್ತು ಮತ್ತು ಇನ್ನಷ್ಟು ಹೊಳೆಯುತ್ತಿತ್ತು.
“”ಬನ್ನಿ” ಆ ಮನುಷ್ಯ ಕರೆದ.
“”ಏನು?” ಅವನಿಗೆ ಏನೂ ಅರ್ಥವಾಗಲಿಲ್ಲ.
“”ಅಲೀಗಂಜ್‌ಗೆ ಹೋಗಬೇಕಾಗಿದೆಯಲ್ಲವೆ?”
“”ಹೌದು”
“”ಹಾಗಾದರೆ ಬನ್ನಿ”
ಅವನಿಗೆ ಮತ್ತೂ ಏನೊಂದೂ ಅರ್ಥವಾಗಲಿಲ್ಲ. ಅವನು ಪೆದ್ದನಂತೆ ಒಂದೇ ಸವನೆ ಆ ಕೊಳಕು ಮನುಷ್ಯನ ಮುಖವನ್ನೇ ದಿಟ್ಟಿಸಿದ.
“”ಬನ್ನಿ , ಕುಳಿತುಕೊಳ್ಳಿ” ಅವನು ಸೈಕಲಿನ ಹಿಂದೆ ಸಿಕ್ಕಿಸಿದ್ದ ಕೊಳಕಾದ ಕ್ಯಾರಿಯರ್‌ನತ್ತ ಸನ್ನೆ ಮಾಡಿದ.
“”ಇಲ್ಲ , ಇಲ್ಲ… ನೀವು ಹೋಗಿ, ನಾನು ನಡೆದುಕೊಂಡು ಹೋಗುತ್ತೇನೆ” ಅವನ ಪ್ರಸ್ತಾವ ಕೇಳಿ ಅವನಿಗೆ ಗಾಬರಿಯಾಯಿತು, ಸಂತೋಷವಾಯಿತು.
“”ಅರೆ, ಬನ್ನಿರಲ್ಲ ! ಈ ಬಿರುಬಿಸಿಲಿನಲ್ಲಿ ನಡೆದುಕೊಂಡು ಹೋದಂತೆಯೇ!” ಆ ಕೊಳಕು ಮನುಷ್ಯ ತನ್ನ ಮುಂಡಾಸಿನ ತುದಿಯಿಂದ ಕ್ಯಾರಿಯರ್ ಮೇಲಿದ್ದ ಧೂಳನ್ನು ಝಾಡಿಸುತ್ತ ಹೇಳಿದ- “”ಬನ್ನಿ , ಕುಳಿತುಕೊಳ್ಳಿ. ಈ ಸಮಯದಲ್ಲಿ ನಿಮಗೆ ಯಾವುದೇ ವಾಹನ ಸಿಗಲಾರದು”. ಎರಡು ಕ್ಷಣ ಅವನು ಸ್ತಂಭೀಭೂತನಾಗಿ ನಿಂತ. ಅನಂತರ ಮುಂದಕ್ಕೆ ಹೆಜ್ಜೆ ಹಾಕಿದ. ಕೊಳಕು ಮನುಷ್ಯ ಮುಗುಳ್ನಗುತ್ತ ಅವನತ್ತ ನೋಡಿದ ಮತ್ತು ಸೈಕಲಿನ ಮೇಲೆ ಸರಿಯಾಗಿ ಕುಳಿತುಕೊಂಡು ತನ್ನ ಊರುಗೋಲನ್ನು ಹ್ಯಾಂಡಲಿನ ಮೇಲೆ ಇಡತೊಡಗಿದ. “”ಹೀಗೆ ಮಾಡಿ,” ಅವನು ಹೇಳಿದ, “”ನೀವು ಹಿಂದೆ ಕುಳಿತುಕೊಳ್ಳಿ. ನಾನು ಸೈಕಲ್ ಬಿಡುತ್ತೇನೆ”.
“”ಇಲ್ಲ , ಇಲ್ಲ , ನೀವು ಕುಳಿತುಕೊಳ್ಳಿ…”
“”ಆದರೆ… ನೀವು ನನ್ನನ್ನು ಕೂರಿಸಿಕೊಂಡು ಹೇಗೆ ಸೈಕಲ್ ಚಲಾಯಿಸುವಿರಿ?” ಅವನ ದೃಷ್ಟಿ ತನ್ನಿಂತಾನೇ ಅವನ ತುಂಡಾದ ಕಾಲಿನತ್ತ ಹೊರಳಿತು. ಆ ಮನುಷ್ಯ ಕೂಡ ಅದರತ್ತ ನೋಡಿದ ಮತ್ತು ಮುಗುಳ್ನಗುತ್ತ ಹೇಳಿದ- “”ನೀವು ಚಿಂತಿಸಬೇಡಿ. ನಾನು ಒಂಟಿಕಾಲಿನಿಂದಲೇ ಚಲಾಯಿಸುವೆ”.
“”ಇಲ್ಲ , ಇಲ್ಲ , ನೀವು ಹಿಂದೆ ಕುಳಿತುಕೊಳ್ಳಿ… ಕುಳಿತುಕೊಳ್ಳಿರಲ್ಲ… ನಾನು ಸೈಕಲ್ ಬಿಡುತ್ತೇನೆ” ಅವನು ಸೈಕಲಿನ ಹ್ಯಾಂಡಲನ್ನು ಹಿಡಿದುಕೊಂಡ. ಆ ಮನುಷ್ಯ ತನ್ನ ಊರುಗೋಲನ್ನು ಸಂಭಾಳಿಸುತ್ತ ಕೆಳಗಿಳಿದ ಮತ್ತು ಕ್ಯಾರಿಯರ್‌ನ ಮೇಲೆ ಕುಳಿತುಕೊಂಡ. ಅವನು ಸೈಕಲ್ ಚಲಾಯಿಸತೊಡಗಿದ.
ಬಿಸಿಲ ಝಳಕ್ಕೆ ರಸ್ತೆಯ ಡಾಂಬರು ಕರಗಿತ್ತು. ಸೈಕಲಿನ ಚಕ್ರಗಳು ಅದರ ಮೇಲೆ “”ಚರ್ರರ್…” ಸದ್ದು ಮಾಡುತ್ತ ಚಲಿಸುತ್ತಿದ್ದವು. ಅವನು ಮಾತಿಗೆ ತೊಡಗಿದ-
“”ನಿಮ್ಮ ಈ ಕಾಲು… ಹೇಗೆ…?”
“”ದಂಗೆಯಲ್ಲಿ ತುಂಡಾಯಿತು…”
“”ಓಹ್!”
“”ನೀವು ಏನು ಮಾಡುತ್ತಿದ್ದೀರಿ?”
“”ಲೋಧಿ ರೋಡ್‌ನಲ್ಲಿ ಸೋಡಾನೀರಿನ ನನ್ನ ಅಂಗಡಿಯಿದೆ”. ಅವನು ಸೈಕಲ್ ತುಳಿಯುತ್ತ ಸಾಗುತ್ತಿದ್ದ. ಸ್ವಲ್ಪ ಹೊತ್ತಿನಲ್ಲಿ ಅವನು ಏದುಸಿರು ಬಿಡಹತ್ತಿದ. ಅವನಿಗೆ ಹೊಟ್ಟೆ ತೊಳಸಿದಂತಾಯಿತು. ವಾಂತಿಯಾಗುತ್ತದೇನೋ ಎಂದು ಅನಿಸತೊಡಗಿತು. ಬಿಸಿಗಾಳಿ ರಭಸದಿಂದ ಫರ್ರ ಫರ್ರ ಎಂದು ಅವನ ಮುಖಕ್ಕೆ ಅಪ್ಪಳಿಸುತ್ತಿತ್ತು. ಹ್ಯಾಂಡಲ್ ಮೇಲಿನ ಅವನ ಕೈಗಳು ನಡುಗತೊಡಗಿದವು. ಕಾಲುಗಳು ಭಾರವಾದಂತಾಗಿ ಸೋತು ಹೋದವು. ಅವನು ಒಂದು ಮರದ ನೆರಳಿನಲ್ಲಿ ಫುಟ್‌ಪಾತಿಗೆ ಆನಿಸಿ ಸೈಕಲನ್ನು ನಿಲ್ಲಿಸಿದ.
“”ನೀವು ಹೋಗಿ, ನಾನು ನಡೆದುಕೊಂಡು ಬರುತ್ತೇನೆ”.
“”ಯಾಕೆ?” ಆ ಮನುಷ್ಯ ಆಶ್ಚರ್ಯಚಕಿತನಾಗಿ ಕೇಳಿದ.
ಅವನು ಏದುಸಿರು ಬಿಡುತ್ತಲಿದ್ದ.
ತನ್ನ ಒಣಗಿದ್ದ ತುಟಿಗಳನ್ನು ನಾಲಗೆಯಿಂದ ಸವರುತ್ತ ಅವನು ಹೇಳಿದ- “”ಇನ್ನು ನನ್ನಿಂದ ಸೈಕಲ್ ತುಳಿಯಲಾಗದು”.
ಆ ಮನುಷ್ಯ ತನ್ನ ಊರುಗೋಲು ತೆಗೆದುಕೊಂಡು ಅವನ ಬಳಿ ಬಂದು ಅವನ ಹಣೆ ಮತ್ತು ತೋಳನ್ನು ಮುಟ್ಟಿನೋಡುತ್ತ ಹೇಳಿದ- “”ನಿಮಗೆ ಜ್ವರ ಬಂದಂತಿದೆ. ಬನ್ನಿ, ನೀವು ಹಿಂದೆ ಕುಳಿತುಕೊಳ್ಳಿ . ನಾನು ಸೈಕಲ್ ಬಿಡುತ್ತೇನೆ”. ಅವನು ಹ್ಯಾಂಡಲ್ ಹಿಡಿದುಕೊಂಡ.
“”ನೀವು ಹೇಗೆ ಬಿಡುತ್ತೀರಿ?”
“”ನೀವು ಕುಳಿತುಕೊಳ್ಳಿರಲ್ಲ… ನೋಡಿ, ನಾನು ಹೇಗೆ ಬಿಡುತ್ತೇನೆಂದು…” ಅವನು ಹಿಂದೆ ಕುಳಿತ. ಆ ಮನುಷ್ಯ ಸೈಕಲ್ ಬಿಡತೊಡಗಿದ. ಒಂದು ಕಾಲಿನಿಂದ ಅವನು ಸೈಕಲನ್ನು ಹೇಗೆ ಚಲಾಯಿಸುತ್ತಿದ್ದ ಎನ್ನುವುದನ್ನು ಅವನು ನೋಡಲಿಲ್ಲ. ಅವನ ಮೈ ಸುಡುತ್ತಿತ್ತು ಮತ್ತು ಕಣ್ಣುಗಳು ತನ್ನಿಂತಾನೇ ಮುಚ್ಚಿಕೊಳ್ಳುತ್ತಿದ್ದವು.
“”ಯಾವ ಬ್ಲಾಕ್‌ನಲ್ಲಿ?”
“”ಜೆ ಬ್ಲಾಕ್‌ನಲ್ಲಿ”
“”ಅಲ್ಲಿ ನಿಮ್ಮವರು ಯಾರಿದ್ದಾರೆ?”
“”ನನ್ನ ಸಂಬಂಧಿಕರಿದ್ದಾರೆ”
ಮತ್ತೆ ಮೌನ ಆವರಿಸಿತು. ಹಿಂದೆ ಕುಳಿತಿದ್ದ ಅವನಿಗೆ ಸೈಕಲಿನ ಚಕ್ರಗಳ “ಚರ್ರ ಚರ್ರ’ ಎಲೆಗಳ “ಫರ್ರ ಫರ್ರ’ ಮತ್ತು ಗಾಳಿಯ “ಜರ್ರ ಜರ್ರ’ ಕೇಳಿಸುತ್ತಿತ್ತು. ಒಮ್ಮೊಮ್ಮೆ ಸರ್ರ ಎಂದು ಯಾವುದಾದರೂ ಕಾರು ಹಾದುಹೋದಾಗ ಅವನ ಕಣ್ಣುಗಳು ತೆರೆದುಕೊಳ್ಳುತ್ತಿದ್ದವು ಮತ್ತು ಸ್ವಲ್ಪ ಹೊತ್ತಿನ ತನಕ ಅವನು ರಸ್ತೆಯ ಮೇಲೆ ಮೂಡಿದ ಟಯರಿನ ಗುರುತನ್ನು ನೋಡುತ್ತಿದ್ದ.
“”ಜೆ ಬ್ಲಾಕ್ ಎಲ್ಲಿದೇರಿ?” ಆ ಕೊಳಕು ಮನುಷ್ಯ ಒಬ್ಬ ದಾರಿಹೋಕನನ್ನು ಕೇಳಿದ. “”ಅಲ್ಲಿ ಎದುರಿಗಿದೆ, ನೋಡಿ”
“”ತಗೊಳ್ಳಿ , ನಿಮ್ಮ ಜೆ ಬ್ಲಾಕ್ ಬಂತು” ಕೊಳಕು ಮನುಷ್ಯ ಸೈಕಲನ್ನು ನಿಲ್ಲಿಸಿದ. ಅವನು ಕೆಳಗಿಳಿದ. ಅವನಿಗೆ ಅಮಲೇರುತ್ತಿರುವಂತೆ ಭಾಸವಾಗುತ್ತಿತ್ತು.
“”ನೀರು ಕುಡಿಯಿರಿ”
“”ಇಲ್ಲ , ಇಲ್ಲ , ಇನ್ನು ಮನೆಗೆ ಹೋಗಿ ಕುಡಿಯುತ್ತೇನೆ”
“”ಒಳ್ಳೆಯದು…” ಕೊಳಕು ಮನುಷ್ಯ ತನ್ನ ಊರುಗೋಲನ್ನು ಸರಿಯಾಗಿ ಹಿಡಿದುಕೊಂಡ.
“”ತಮ್ಮಿಂದ ದೊಡ್ಡ ಉಪಕಾರವಾಯಿತು…”
ಆ ಕೊಳಕು ಮನುಷ್ಯ ನಕ್ಕ. ಮುಖದ ಮೇಲಿನ ನೆರಿಗೆಗಳೊಂದಿಗೆ ಧೂಳಿನಿಂದ ತುಂಬಿದ ಅವನ ಕುರುಚಲು ಗಡ್ಡದ ಕೂದಲುಗಳೂ ಅತ್ತಿತ್ತ ಸುರುಟಿಕೊಂಡವು.
.
ಶರಬತ್ತಿನ ಲೋಟವನ್ನು ಅವನ ಎದುರು ಇಡುತ್ತ ಅವನ ಸಂಬಂಧಿ ಮಹಾಶಯ ಕೇಳಿದ- “”ನೀವು ಈ ಧೂಳಿನಲ್ಲಿ ಹೇಗೆ ಬಂದಿರಿ?”
“”ರೇಸ್‌ಕೋರ್ಸಿನ ವರೆಗೆ ಬಸ್ಸಿನಲ್ಲಿ ಬಂದೆ ಮತ್ತು ಮುಂದೆ…”
“”ಮುಂದೆ….?”
“”ಮುಂದೆ ಲಿಫ್ಟ್ ಸಿಕ್ಕಿತು”
ಸಂಬಂಧಿ ನಕ್ಕ ಮತ್ತು ಪ್ರಸನ್ನನಾಗಿ ಹೇಳಿದ- “”ದೆಹಲಿಯ ಕಾರಿರುವವರಲ್ಲಿ ಇದೇ ಒಂದು ಒಳ್ಳೆಯ ಗುಣ. ಅವರು ತಕ್ಷಣವೇ ಲಿಫ್ಟ್ ಕೊಡುತ್ತಾರೆ”.
ಅವನು ಶರಬತ್ತಿನಿಂದ ಗಂಟಲನ್ನು ಒದ್ದೆಗೊಳಿಸುತ್ತ ಹೇಳಿದ – “”ಹಂ…” ಹಿಂದಿ ಮೂಲ: ಮಹೀಪ್ ಸಿಂಗ್
ಕನ್ನಡಕ್ಕೆ : ನಂದಿನಿ ಡಿ. ಕಾಮತ್