ಒಂದೂರಿನಲ್ಲಿ ಅಗರ್ಭ ಶ್ರೀಮಂತನಿದ್ದನು. ಆತನ ಹೆಸರು ದಯಾನಿಧಿ. ಹೆಸರಿಗೆ ತಕ್ಕ ಹಾಗೆ ಆತನು ತುಂಬಾ ದಯಾಳುವಾಗಿದ್ದನು. ಬಡವರಿಗೆ, ಅಸಹಾಯಕರಿಗೆ ಹಾಗೂ ನೊಂದವರಿಗೆ ತೆರೆದ ಮನಸ್ಸಿನಿಂದ ಸಹಾಯ ಮಾಡುತ್ತಿದ್ದನು. ಆತನ ಮನೆಯಲ್ಲಿ ನೂರಾರು ಜನ ಸೇವಕರಿದ್ದರು. ಅವರನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಆದರೆ ಕೆಲಸದಲ್ಲಿ ಏನಾದ್ರೂ ಒಂಚೂರು ಅವ್ಯವಸ್ಥೆ ಕಂಡು ಬಂದ್ರೂ ಆತನಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು.
ದಯಾನಿಧಿ ಮನೆಯಲ್ಲಿ ರಂಗಜ್ಜನೆಂಬ ಸೇವಕನಿದ್ದನು. ಆತ ದಿನಕ್ಕೆ ಎರಡು ಹೊತ್ತು ಮನೆಯನ್ನೆಲ್ಲ ಪೊರಕೆಯಿಂದ ಗುಡಿಸಿ ಕನ್ನಡಿಯಂತೆ ಫಳಫಳಾಂತ ಹೊಳೆಯುವಂತೆ ಮಾಡುತ್ತಿದ್ದನು. ಅವನನ್ನು ಕಂಡರೆ ದಯಾನಿಧಿಗೆ ವಿಶೇಷ ಪ್ರೀತಿ ಇತ್ತು. ಇದನ್ನು ಕಂಡು ಪೊರಕೆಗೆ ಸಹಿಸಲಾಗುತ್ತಿರಲಿಲ್ಲ. ಮನೆಯನ್ನು ತಾನೇ ಗುಡಿಸಿದರೂ ಹೊಗಳಿಕೆಯೆಲ್ಲಾ ರಂಗಜ್ಜನಿಗೆ ಸಿಗುತ್ತಿದೆಯೆಂದು ಹಲ್ಲು ಕಡಿಯುತ್ತಿತ್ತು.
ಒಂದು ದಿನ ರಂಗಜ್ಜ ಬರುವುದಕ್ಕೆ ಮುನ್ನ ತಾನೇ ಮನೆಯಿಡೀ ಓಡಾಡಿ ಕಸವನ್ನು ಗುಡಿಸಿ ಹಾಕಿತು. ಅದನ್ನು ಕಂಡು ಯಜಮಾನನಿಗೆ ಎಲ್ಲಿಲ್ಲದ ಸಂತೋಷವಾಯಿತು. ಅವನು ಪರಕೆಯನ್ನು ಮನಸಾರೆ ಹೊಗಳಿದ. ಅಷ್ಟೇ ಅಲ್ಲ ರಂಗಜ್ಜನಿಗೆ ಬೇರೊಂದು ಕೆಲಸ ನೀಡಿದ. ತನ್ನಾಸೆ ಫಲಿಸಿತೆಂದು ಪೊರಕೆ ಮನಸ್ಸಿನಲ್ಲಿಯೇ ನಕ್ಕಿತು. ತಿಂಗಳುಗಳು ಉರುಳಿದವು. ಈಗ ಮೊದಲಿನಂತೆ ಯಜಮಾನ ಪೊರಕೆಯನ್ನು ಹೊಗಳುತ್ತಿರಲಿಲ್ಲ. ಇದರಿಂದಾಗಿ ಪೊರಕೆಗೆ ಮತ್ತೆ ಯಜಮಾನನ ಮೇಲೆ ಸಿಟ್ಟು ಬಂದಿತು. ಆತನಿಗೆ ಬುದ್ಧಿ ಕಲಿಸಬೇಕೆಂದು ಅದು ಸಮಯ ಕಾಯುತ್ತಿತ್ತು.
ಹೀಗಿರುವಾಗ ದಯಾನಿಧಿಯ ಮಗನ ಮೊದಲನೇ ಹುಟ್ಟುಹಬ್ಬ ಬಂದಿತು. ಮನೆಗೆ ನೆಂಟರು, ಅತಿಥಿಗಳು ಬಂದಿದ್ದರು. ಸಡಗರ ತುಂಬಿ ತುಳುಕಿತು. ಇದೇ ಸರಿಯಾದ ಸಮಯ ಎಂದು ಪೊರಕೆಯು ಹುಟ್ಟುಹಬ್ಬದ ದಿನ ಬೆಳಿಗ್ಗೆ ಕಸ ಗುಡಿಸಲೇ ಇಲ್ಲ. ಏನಾದರಾಗಲಿ ಎಂದು ಜ್ವರದ ನಾಟಕವಾಡಿ ಬೆಚ್ಚಗೆ ಮೂಲೆಯಲ್ಲಿ ಮಲಗಿಬಿಟ್ಟಿತು. ಇತ್ತ ಊರಿನ ಗಣ್ಯ ವ್ಯಕ್ತಿಗಳೆಲ್ಲಾ ಬರುತ್ತಿದ್ದಾರೆ ಆದರೆ ಮನೆಯ ಸುತ್ತಲೂ ಕಸ ಕಡ್ಡಿ ರಾಶಿ ಬಿದ್ದಿದೆ. ಹಾಗೆ ಇರೋದು ನೋಡಿ ದಯಾನಿಧಿಗೆ ಬೇಸರವಾಯಿತು. ಅನಾರೋಗ್ಯ ಪೀಡಿತನೆಂದು ನಾಟಕವಾಡಿದ ಪೊರಕೆಯ ಮೇಲೆ ಕನಿಕರವೂ ಮೂಡಿತು. ಹಾಗಾಗಿ ಮನೆಯ ಕಸ ಗುಡಿಸಲು ವ್ಯಾಕ್ಯೂಮ್ ಕ್ಲೀನರ್‌ಅನ್ನು ತರಿಸಿಕೊಂಡನು. ಕ್ಷಣಮಾತ್ರದಲ್ಲಿ ಅದು ಮನೆಯನ್ನು ಸ್ವಚ್ಚಗೊಳಿಸಿಬಿಟ್ಟಿತು. ಆವತ್ತಿನಿಂದ ಪೊರಕೆಯನ್ನು ಕೇಳುವವರೇ ಇಲ್ಲವಾದರು. ಅದರ ಕುತಂತ್ರ ಅದನ್ನೇ ಬಲಿ ತೆಗೆದುಕೊಂಡಿತ್ತು.
ಚಂದ್ರಕಾಂತ ಮ. ತಾಳಿಕೋಟಿ, ಬಾಗಲಕೋಟೆ