Advertisement

ಕತೆ: ಕಾಶಪ್ಪ ಕಾಕ

07:28 PM Dec 14, 2019 | mahesh |

ಜೂನ್‌ ತಿಂಗಳು ಬಂದರೂ ಮಳೆ ಪ್ರಾರಂಭವಾಗಿರಲಿಲ್ಲ , ಕೊನೆ ಪಕ್ಷ ತಂಪಾದರೂ ಹುಟ್ಟಿಕೊಳ್ಳಲಿಲ್ಲ ಎಂಬ ಬೇಸರದಲ್ಲಿಯೇ ಸಂಜೆ ಅಡುಗೆಯನ್ನು ಕುದಿಸುತ್ತಾ ಜೊತೆಗೆ ನಾನೂ ಕುದಿಯುತ್ತಾ ಮೈಯಲ್ಲಿ ಬೆವರಿಳಿಸಿಕೊಂಡು ಆಯಾಸಪಡುತ್ತಾ ಮೈಯನ್ನು ಗಾಳಿಗೊಡ್ಡಲು ಟೆರೆಸ್‌ ಮೇಲೆ ಬಂದು ಪತ್ರಿಕೆ ಮೇಲೆ ಕಣ್ಣಾಡಿಸುತ್ತಿದ್ದೆ. ಆಗ ಅತ್ತಿಗೆಯ ಕರೆ ಬಂತು. “ಹಲೋ ಏನ್‌ ಮಾಡಾಕತ್ತೀವಾ? ಗೀತಾ ಒಬ್ಬಕಿ ತೀರಕೊಂಡಾಳವಾ’ ಎಂದಾಗ, “ಗಾಬರಿಯಿಂದ ಯಾವ ಗೀತಾನ ಯವ್ವಾ?’ ಎಂದೆ.

Advertisement

“ಅದ ನಿಮ್ಮ ಕಾಶಪ್ಪ ಕಾಕಾನ್ನ ಮಗಳು’ ಎಂದೊಡನೆ ಬರಸಿಡಿಲು ಬಡಿದಂತಾಯಿತು. ಒಂದೆರಡು ಕ್ಷಣ ಬಾಯಿಂದ ಮಾತೇ ಹೊರಡಲಿಲ್ಲ. ಆಕೆಯೇ ಮುಂದುವರೆದು “ಆಕಿಗೆ ಹಾರ್ಟ್‌ ಅಟ್ಯಾಕ್‌ ಆತು. ಬೆಳಗಾವಿ ಕೆ.ಎಲ್‌.ಇ.ಗೆ ಎಡಮಿಟ್‌ ಮಾಡೀರು. ಕಳ್ಳಾನ್ನಾರೆಲ್ಲಾ ಕೂಡಿ ಆಪರೇಶನಕ ರೊಕ್ಕಾ ಕೊಟ್ಟು ಭಾಳ ಕಟ್ಟಪಟ್ಟ ಬಿಟ್ರಾ. ಆದ್ರ ಆಕಿ ಉಳೀಲಿಲ್ಲಾ’ ಎನ್ನುವ ಮಾತನ್ನು ನಿಜವೆಂದು ನಂಬಲಾಗಲಿಲ್ಲ.

ಕಾಶಪ್ಪ ಕಾಕಾ ನನ್ನ ದೂರದ ಸಂಬಂಧಿ. ಗೀತಾ ಅವರ ಮೂರನೇ ಮಗಳು. ಅವರದ್ದು ಬಹಳ ದೊಡ್ಡ ಕೂಡುಕುಟುಂಬ. ಅವರ ಮನೆಯಲ್ಲಿ ಹೆಚ್ಚುಕಡಿಮೆ 50-60 ಜನರಿದ್ದರು. ಮನೆಯೂ ಬಹಳ ದೊಡ್ಡದು. ಕಾಕಾನ ದೊಡ್ಡ ಮಗಳು ರಾಧಾ ನನ್ನ ಓರಗೆಯವಳು. ಪಿಯುಸಿವರೆಗೂ ನನ್ನೊಂದಿಗೆ ಓದಿದಳು. ಆದರೆ ಆಕೆ ಪಿಯುಸಿ ಫೇಲ್‌ ಆದಾಗ, ಅವಳನ್ನು ದೂರದ ಗುಳೇದಗುಡ್ಡಕ್ಕೆ ಮದುವೆ ಮಾಡಿ ಕೊಟ್ಟಿದ್ದರು. ಇನ್ನು ಗೀತಾ ಪಿಯುಸಿ ಓದುತ್ತಿರುವಾಗಲೇ ಆ ದೊಡ್ಡದಾದ ಮನೆಗೆ ಹೊಸ ಹೊಸ ಸೊಸೆಯಂದಿರು ಬಂದು ಹೊಸ ವಾತಾವರಣ ಸೃಷ್ಟಿಯಾಗಿ ಒಂದು ದೊಡ್ಡ ಮನೆ ಹತ್ತಾರು ಮನೆಗಳಾಗಿ ಮಾರ್ಪಟ್ಟವು. ಕಾಶಪ್ಪ ಕಾಕಾನ ಪಾಲಿಗೆ ಎರಡು ಎಕರೆ ಹೊಲ ಹಾಗೂ ಒಂದು ಮನೆ ಬಂದಿತು.

ಇಬ್ಬರು ಹೆಣ್ಣು ಮಕ್ಕಳ ಮೇಲೆ ಹನ್ನೆರಡು ಹರಕೆ ಹೊತ್ತು ಹಡೆದ ಮಗ ಆನಂದ ಆಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿದ್ದ. ಆತನಿಗೆ ಆ ಶಾಲೆ ಈ ಶಾಲೆ ಎಂದೆಲ್ಲ ಸಾಕಷ್ಟು ಖರ್ಚು ಮಾಡಿದರು. ಎಸ್‌ ಎಸ್‌ಎಲ್‌ಸಿಯಲ್ಲಿ ಸಾಕಷ್ಟು ಅಂಕಗಳನ್ನು ಪಡೆದಿದ್ದರೂ ಪ್ರತಿಷ್ಠಿತ ಕಾಲೇಜು ಸೇರಲು ಒಂದಿಷ್ಟು ಹಣ, ಹಾಗೇ ಗೀತಾಳ ಮದುವೆಗೆ ಒಂದಷ್ಟು ಹಣ ಖರ್ಚು ಮಾಡಿ ಕೈ ಬರಿದಾಗುವುದಲ್ಲದೇ ಸಾಲವೂ ಆಗಿತ್ತು.

ಆನಂದ ಪಿಯುಸಿಯನ್ನು ಡಿಸ್ಟಿಂಕ್‌ನಲ್ಲಿಯೇ ಪಾಸಾದ. ಆದರೂ ಕೂಡ ಅವನಿಗೆ ಎಮ….ಬಿ.ಬಿ.ಎಸ್‌. ಸೀಟು ಸಿಕ್ಕಲಿಲ್ಲ. ಹಾಗಾಗಿ ಮಹತ್ವಾಕಾಂಕ್ಷಿಯಾದ ಆತ ಪೇಮೆಂಟ್‌ ಸೀಟು ಕೊಡಿಸಿರೆಂದು ಹಠಮಾಡಿದ. ಪಾಪ ಕಾಶಪ್ಪ ಕಾಕಾ ಅಷ್ಟೊಂದು ಹಣವನ್ನು ಎಲ್ಲಿಂದ ತರಬೇಕು? ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಆನಂದ ಉಪವಾಸ ಮಾಡತೊಡಗಿದ. ತಾಯಿ ಜಾನವ್ವ ಇದ್ದೋಬ್ಬ ಮಗನಿಗೆ ಏನಾದರೂ ಆದರೆ ಏನು ಮಾಡುವುದೆಂದು ಹೆದರಿ ತಮ್ಮ ಪಾಲಿಗೆ ಬಂದ ಜಮೀನು ಮಾರಲು ದುಂಬಾಲುಬಿದ್ದಳು. ಕೊನೆಗೆ ಒಂದೆಕರೆ ಮಾರಾಟಮಾಡಿ, ಮನೆಯನ್ನು ಅಡವಿಟ್ಟು ಜೊತೆಗೆ ಜಾನವ್ವನ ಬಂಗಾರ ಮಾರಾಟ ಮಾಡಿ ಅವನ ಓದಿಗೆ ಫೀಸು ಹೊಂದಿಸಿದರು.

Advertisement

ಅಂತೂ ಆನಂದ ಸರಕಾರಿ ಆಸ್ಪತ್ರೆಯ ಡಾಕ್ಟರ್‌ ಆದ. ಮದುವೆ ಆಗಿ ಒಂದು ಮಗು ಆಗುವವರೆಗೆ ತಂದೆತಾಯಿಗೆ ಆರ್ಥಿಕವಾಗಿ ಸಹಾಯವಾದ. ಮುಂದೆ ಬರ ಬರುತ್ತ ತನ್ನ ಹೆಂಡತಿ ಮಗು ಎನ್ನುತ್ತಾ ತಂದೆತಾಯಿಗಳಿಂದ ದೂರ ಸರಿದ. ಕಾಶಪ್ಪ ಕಾಕಾ ಹೇಗೋ ದುಡಿದು ಬದುಕ ಬಂಡಿ ದೂಡತೊಡಗಿದಾಗಲೇ ಗೀತಾಳ ಗಂಡ ಆಕೆಗೆ ಮಕ್ಕಳಾಗಿಲ್ಲವೆಂಬ ಕಾರಣವೊಡ್ಡಿ ಮತ್ತೂಂದು ಮದುವೆ ಮಾಡಿಕೊಳ್ಳುವ ತರಾತುರಿಯಲ್ಲಿ ಆಕೆಯನ್ನು ತವರಿಗೆ ನೂಕಿದ್ದ. ಅಂದಿನಿಂದ ಆಕೆ ತವರಲ್ಲೇ ಇದ್ದಳು.
.
.
ಬೆಳಿಗ್ಗೆ ಬೇಗನೇ ಬಸ್ಸು ಹಿಡಿದು ರಾಮದುರ್ಗಕ್ಕೆ ಸಾಗಿ ಕಾಶಪ್ಪ ಕಾಕಾನ ಮನೆ ತಲುಪಿದಾಗ ಜನ ಜಾತ್ರೆಯಂತೆ ನೆರೆದಿದ್ದರು. ಹೆಣದ ಪಕ್ಕ ಕುಳಿತು ಆಕ್ರಂದಿಸುತ್ತಿದ್ದ ಜಾನವ್ವ ಚಿಗವ್ವ ಕಾಶಪ್ಪ ಕಾಕಾರನ್ನು ಕಂಡು ಜೀವ ಬಾಯಿಗೆ ಬಂದಂತಾಯಿತು. ಕೈಯಲ್ಲಿದ್ದ ಹೂಮಾಲೆಯ ಪೊಟ್ಟಣವನ್ನು ಬಿಚ್ಚಿ ಗೀತಾಳಿಗೆ ಹಾಕುವಷ್ಟರಲ್ಲಿ ಚಿಗವ್ವ , “ನೋಡ ಯವ್ವಾ ನಿಮ್ಮ ತಂಗಿ ಹ್ಯಾಂಗ ಮಕ್ಕೊಂಡಾಳಾ ಎಂದು ಎದೆಬಡಿದುಕೊಳ್ಳುವಾಗ ಜೀವ ಹಿಂಡಿದಂತಾಯಿತು. ವಯಸ್ಸಾದ ಕಾಶಪ್ಪ ಕಾಕಾ ಕೀರಲು ಸ್ವರದಿಂದ ಅಳುತ್ತಿರಬೇಕಾದರೆ ತಳಮಳ ಸಂಕಟಗಳು ಹುಟ್ಟಿಕೊಂಡು ಕಂಬನಿ ಉಕ್ಕಿ ಹರಿದಿತ್ತು. ಅಲ್ಲಿಯೇ ಇಕ್ಕಟ್ಟಾಗಿ ಕುಳಿತ ಜನರೊಟ್ಟಿಗೆ ಕುಳಿತೆ. ಸಂಬಂಧಿಕರು ಊರಿಂದ ಬಂದಾಗಲೊಮ್ಮೆ ಚಿಗವ್ವ ಹಾಗೂ ರಾಧಾಳ ರೋಧನ ಉಕ್ಕೇರುತ್ತಿತ್ತು. ಇಂತಹ ಸಮಯದಲ್ಲಿಯೂ ಆನಂದ ಬಾರದಿದ್ದುದು ವ್ಯಥೆ ನೀಡಿತ್ತು.

ಮನೆಯ ಒಂದು ಬದಿಯಲ್ಲಿ ಕುಳಿತು ಭಜನೆ ಮಾಡುತ್ತಿದ್ದ ಭಜನಾ ಮಂಡಳಿಯ ಸ್ಥಿರವಲ್ಲವೋ ಕಾಯಾ ಸ್ಥಿರವಲ್ಲವೋ ಮುಂತಾದ ಪದಗಳು, ಹೆಣದ ಮುಂದೆ ಕುಳಿತವರ ಆಕ್ರಂದನ ಒಟ್ಟಾಗಿ ಮೇಳೈಸಿದ್ದವು.

ಇಡೀ ರಾತ್ರಿ ಹೆಣವಿಟ್ಟಿದ್ದರಿಂದ ಬೆಳಿಗ್ಗೆ ಬೇಗ ಸುಮಾರು ಒಂಬತ್ತು ಗಂಟೆಗೆ ಹೆಣವೆತ್ತಿದ್ದರು. ಹೆಣದ ಮೆರವಣಿಗೆ ಜೊತೆಗೆ ಸ್ಮಶಾನ ತಲುಪಿದಾಗ ಆ ಸ್ಮಶಾನ ನನ್ನನ್ನು ದಂಗುಪಡಿಸಿತ್ತು. ಅಲ್ಲಿಯ ವಾತಾವರಣ ನನ್ನ ದುಃಖವನ್ನು ಅಳಿಸಿತ್ತು. ಅಳುವುದನ್ನು ಮರೆತು ದಿಕ್ಕುತಪ್ಪಿದವಳಂತೆ ಎವೆಯಿಕ್ಕದೇ ಅಲ್ಲಿಯ ಸುಂದರವಾದ ಹೂದೋಟ ಅದರ ಮಧ್ಯ ದೇವಾಲಯ ಪಕ್ಕದಲ್ಲಿಯೇ ಕಾಲುವೆ. ನನ್ನ ದೃಷ್ಟಿಯಿಂದ ನನ್ನ ಮನವನ್ನು ಅಳೆದ ಗೆಳತಿ ಗಾಯತ್ರಿ, “ಯಾಕ? ನೀ ಇದು ಹಿಂಗ ಆದಿಂದ ನೋಡೇ ಇಲ್ಲನ?’ ಎಂದಾಗ, “ಏ ಇಲ್ಲವಾ’ ಎಂದು ತಲೆ ಅಲ್ಲಾಡಿಸಿದೆ.

ಅಂತ್ಯಕ್ರಿಯೆ ಮುಗಿದ ಮೇಲೆ ಜನರೆಲ್ಲ ಕಾಲುವೆ ಹತ್ತಿರ ಕೈಕಾಲು ತೊಳೆದುಕೊಂಡು ಸಾಗತೊಡಗಿದರು. ನಾನು ಗಾಯತ್ರಿಯೊಂದಿಗೆ ಕೈಕಾಲು ತೊಳೆದುಕೊಂಡು ಭೂತನಾಥ ದೇವಾಲಯದ ಒಳಗಡೆ ಹೋಗಿ ಕುಳಿತಾಗ ಅಂತಹ ಧಗೆ ಧಗೆಯ ಬೇಸಿಗೆಯಲ್ಲಿ ತಂಪು ತಂಪಾಗಿ ಯಾವುದೋ ಜಗತ್ತಿಗೆ ಕಾಲಿರಿಸಿದಂತಾಗಿತ್ತು. ಐದು ನಿಮಿಷ ಕಣ್ಣು ಮುಚ್ಚಿ ಕುಳಿತಾಗ ಭಕ್ತಿಭಾವ ಸ್ಪುರಿಸಿ ದುಃಖ ವನ್ನು ಮರೆಮಾಚಿತ್ತು. ನಾನು ಗಾಯಿತ್ರಿಗೆ, “ಏ ಎಷ್ಟ ಚೊಲೋ ಮಾಡ್ಯಾರವಾ’ ಎಂದುಸುರಿದಾಗ, ಆಕೆ “ಇದನ್ನೆಲ್ಲಾ ಕಾಶಪ್ಪ ಕಾಕನ ಮಾಡಿದ್ದು, ಇನ್ನ ಇದರ ಹಿಂದ ಅವನ ತ್ವಾಟ ಐತಿ ಅದನ್ನ ನೋಡಬೇಕ ನೀ’ ಎಂದಳು.

ಎರಡು ದಿನಗಳ ನಂತರ ಅತ್ತಿಗೆಯೊಂದಿಗೆ ಹೊಳೆ ಕಡೆಗೆ ಸಾಗುತ್ತಿದ್ದಾಗ, ದಾರಿಯಲ್ಲಿ ಸ್ಮಶಾನ ಕಂಡು ಮತ್ತೆ ಗೀತಾಳ ನೆನಪಾಗಿ ಮನಸ್ಸು ಕಸಕ್‌’ ಎಂದಿತು.

ನದಿಯಲ್ಲಿ ಹೆಚ್ಚು ನೀರಿಲ್ಲದಿದ್ದರೂ ಸ್ವತ್ಛವಾದ ತಿಳಿನೀರು ಜುಳು ಜುಳು ನಿನಾದಗೈಯುತ್ತಾ ಹರಿಯುತ್ತಿತ್ತು. ನದಿಯ ದಂಡೆಯ ಸ್ವತ್ಛ ಸುಂದರ ಉಸುಕು ಬಾಲ್ಯವನ್ನು ನೆನಪಿಸಿತ್ತು. ಮತ್ತೆ ನದಿಯ ದಿಬ್ಬ ಹತ್ತಿ ಬರುತ್ತಲೇ ಗಾಯತ್ರಿ ಹೇಳಿದ ಕಾಕಾನ ತೋಟ ನೆನಪಾಗಿ ಅತ್ತಿಗೆಯನ್ನು ಕೇಳಿದೆ. ಆಕೆ ಅಲ್ಲಿಗೆ ಕರೆದೊಯ್ದಳು. ಅಂತಹ ಬಿರು ಬಿಸಿಲಿನಲ್ಲಿಯೂ ನಳನಳಿಸುವ ಬೆಳೆ ನೋಡಿ ದಂಗಾದೆ. ಬೇಲಿಯ ಒಳಬದಿಯ ಸುತ್ತ ಕುಂಬಳ, ಸವತೆ, ಹಾಗಲ ಬಳ್ಳಿಗಳು. ಒಂದೆರಡು ಕಡೆಗೆ ಪೇರಲಗಿಡ, ಸ್ಮಶಾನಕ್ಕೆ ಹತ್ತಿದಂತೆ ತೆಂಗು ಮಾಮರಗಳು. ಆ ಮರಗಳಲ್ಲಿ ಗಿಣಿರಾಮಗಳು ಜೋತು ಬಿದ್ದಂತೆ ಮಾವಿನ ಕಾಯಿಗಳು ಮಧ್ಯಭಾಗದಲ್ಲಿ ಮೆಣಸಿನ ಗಿಡಗಳು ಒಂದು ಭಾಗದಲ್ಲಿ ಮುಸುಕಿನ ಜೋಳ ಆ ತೋಟ ನೋಡಿ ಹೊಟ್ಟೆ ತುಂಬಿದಂತಾಗಿತ್ತು.

ಕಾಶಪ್ಪ ಕಾಕಾ ಎಲ್ಲಾ ಜವಾಬ್ದಾರಿಗಳು ಕಳೆದ ಮೇಲೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಸ್ಮಶಾನ ಸುಧಾರಣ ಕಮಿಟಿಯಲ್ಲಿ ಸದಸ್ಯನಾಗಿದ್ದನಂತೆ. ಪಕ್ಕಾ ರೈತನಾದ ಈತ ಸ್ಮಶಾನದ ತುಂಬೆಲ್ಲ ಗಿಡಗಂಟೆ ಬೆಳೆದು ಶ್ರಮ ದಾನ ಮಾಡಿದ್ದ. ಅದರ ಫ‌ಲವೇ ನೊಂದು ಬಂದ ಜೀವಗಳಿಗೆ ನೆರಳು ನೀಡುವಂತಾಗಿತ್ತು. ಆತನ ಶ್ರಮ ಕೆಲಸವನ್ನು ನೋಡಿದ ಕಮಿಟಿ ಸ್ಮಶಾನದ ಪಕ್ಕದ ತುಂಡು ಭೂಮಿಯನ್ನು ಆತನಿಗೆ ನೀಡಿತ್ತು. ನದಿಯ ಪಕ್ಕದ ಜಮೀನು ಅತ್ಯುತ್ತಮ ಅಪ್ಪಟ ರೈತನ ಕೈಯಲ್ಲಿ ಬಂಗಾರದ ಬೆಳೆ ಬೆಳೆಯತೊಡಗಿತ್ತು. ಬೆಳೆದ ಅರ್ಧ ಭಾಗವನ್ನು ಬಡ ಮಕ್ಕಳ ಹಾಸ್ಟೆಲ್‌ಗ‌ಳಿಗೆ ದಾನ ಮಾಡುತ್ತಿದ್ದ. ಹೀಗೆ ಕಾಶಪ್ಪ ಕಾಕಾ ಸಮಾಜ ಸೇವೆಗೆ ಸೇರಿದ ನಂತರ ಸ್ಮಶಾನ ಹಾಗೂ ಪಕ್ಕದ ಭೂಮಿ ಒಟ್ಟಿನಲ್ಲಿ ಆತ ಕೈಯಾಡಿಸಿದ ಜಾಗದಲ್ಲೆಲ್ಲ ಹಚ್ಚಹಸಿರು ಕಂಗೊಳಿಸುತ್ತಿತ್ತು. ಅಷ್ಟೇ ಅಲ್ಲ ಆತನಿಂದಲೇ ನದಿಯ ದಂಡೆ ಹಾಗೂ ಸುತ್ತಲಿನ ಜಾಗ ಹಸನುಗೊಂಡಿತ್ತಂತೆ! ಆತನ ಕತೆ ಕೇಳಿ ನಾನು ದಂಗಾಗಿಹೋದೆ.
.
.
ಮೂರು ವರ್ಷಗಳು ಕಳೆದ ಮೇಲೆ ಕಾಶಪ್ಪಕಾಕಾನ ಹೆಂಡತಿ ತೀರಿಕೊಂಡು ಆನಂದ ದೌಡಾಯಿಸಿದ್ದ. ಕಾಕಾ ಮತ್ತೆ ಸಮಾಧಾನ ಚಿತ್ತದಿಂದಲೇ ಎಲ್ಲವನ್ನೂ ಪೂರೈಸಿದ್ದ. ಆನಂದನಿಗೆ ಕಾಕಾನ ಜಮೀನಿನ ಮೇಲೆ ಕಣ್ಣುಬಿದ್ದು ಅದನ್ನು ಮಾರಿ ತನ್ನ ಜೊತೆ ಬರುವಂತೆ ದುಂಬಾಲುಬಿದ್ದ. ಅದು ತನ್ನ ಸ್ವಂತದ್ದಲ್ಲ. ಒಂದು ವೇಳೆ ಕಮಿಟಿ ಮಾರಲು ಅವಕಾಶ ನೀಡಿದರೂ ಮಾರುವುದಿಲ್ಲ. ಅಂತಿಮಕಾಲಕ್ಕೆ ಆ ಜಮೀನನ್ನು ದಾನಮಾಡುವೆನೇ ಹೊರತು ಆತನಿಗೆ ಕೊಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದಾಗ, ಆನಂದ ನಿರುಪಾಯನಾಗಿ ಮರಳಿದ್ದ.

ಒಂದು ತಿಂಗಳು ಕಳೆದ ನಂತರ ಮತ್ತೆ ನಾನು ರಾಮದುರ್ಗಕ್ಕೆ ಹೋಗಬೇಕಾಗಿ ಬಂದು ಕಾಶಪ್ಪಕಾಕಾನ ನೆನಪಾಗಿ ಆತನ ತೋಟಕ್ಕೆ ನಡೆದೆ. ಕಾಕಾ ಅಂತಹ ಬಿಸಿಲಲ್ಲಿಯೂ ಬೆವರೊರೆಸಿಕೊಳ್ಳುತ್ತ ಕೆಲಸದಲ್ಲಿ ನಿರತನಾಗಿದ್ದ. ಆತ ಎಲ್ಲರನ್ನೂ ಕಳೆದುಕೊಂಡು ಅನಾಥನಾಗಿ ನಿಂತದ್ದನ್ನು ಕಂಡು ದುಃಖ ಉಕ್ಕಿ ಬಂತು. “ಕಾಕಾ ನೀ ಎಲ್ಲಾರನ್ನು ಕಳಕೊಂಡಿ. ಇದ್ದೋಬ್ಬ ಮಗಾ ಆನಂದಾ ನಿನ್ನ ಹಿಂಗ ಬಿಡಬಾರದಿತ್ತ’ ಎಂದು ಬಿಕ್ಕಿದಾಗ, “ಅಯ್ಯ ಹುಚ್ಚಿ ಎಲ್ಲಾರೂ ಎಲ್ಲಿ ಹೋಗ್ಯಾರಾ? ನನ್ನಜೋಡಿ ಇದ್ದಾರ ಎಲ್ಲಾ ನನ್ನಜೋಡಿನ ಇಲ್ಲೆ ಅದಾರ ಅಲ್ಲನ?’ ಎಂದು ಸ್ಮಶಾನದತ್ತ ಕೈತೋರಿ ನನ್ನನ್ನು ಸಮಾಧಾನಪಡಿಸಿದ. ನನ್ನ ಕುಶಲತೆಯನ್ನು ವಿಚಾರಿಸುತ್ತ “ಒಂದೀಟ ತಡಿ ಮನೀಗೆ ಹೋಗುಣು’ ಎನ್ನುತ್ತಲೇ ಮತ್ತೆ ಕೆಲಸದಲ್ಲಿ ತೊಡಗಿದ. ಆತ ಎಂತಹ ಯೋಗಿಗೂ ಕಡಿಮೆ ಎನ್ನಿಸಲಿಲ್ಲ.

ಪಾರ್ವತಿ ಪಿಟಗಿ

Advertisement

Udayavani is now on Telegram. Click here to join our channel and stay updated with the latest news.

Next