Advertisement
ಅವತ್ತು ಮಧ್ಯಾಹ್ನ ಉಂಡು, ಗಳಿಗೆ ಹೊತ್ತು ಮಲಗಿ ಎದ್ದ ಮೇಲೆ ಯಾವತ್ತಿನಂತೆ ಕಾಫಿ ಕುಡಿದು, ಲೋಟವನ್ನು ಎದುರಿನ ಟೀಪಾಯಿಯ ಮೇಲಿಡುವಾಗ ಅಜ್ಜನ ಕಣ್ಣು ಎಡಗೈ ಬೆರಳಲ್ಲಿದ್ದ ಉಂಗುರದ ಕಡೆ ಹೋಗಿದ್ದು ಕೇವಲ ಆಕಸ್ಮಿಕ. ಎದೆ ಧಸಕ್ಕೆಂದಿತ್ತು ಅಜ್ಜನಿಗೆ. ಹಲ್ಲಿಲ್ಲದ ವಸಡಿನ ಕುಣಿಯಂತೆ ಹರಳಿಲ್ಲದ ಉಂಗುರ ಕಣ್ಣಿಗೆ ರಾಚಿತ್ತು. ಅಯ್ಯೋ ಶಿವನೇ.. ಎಂದು ಅಜ್ಜ ಅದಿನ್ನೆಂಥ ಏರುದನಿಯಲ್ಲಿ ಚೀತ್ಕರಿಸಿದ ಅಂದರೆ ತಮ್ಮ ತಮ್ಮ ಕೋಣೆಗಳಲ್ಲಿದ್ದ ಸೊಸೆಯರು ಓಡೋಡಿಕೊಂಡು ಬಂದರು. ಆಗಷ್ಟೇ ಸ್ಕೂಲಿನಿಂದ ಬಂದಿದ್ದ ಸಣ್ಣ, ದೊಡ್ಡ ಮೊಮ್ಮಕ್ಕಳೂ ಕಂಗಾಲಾಗಿ ಕೂತಿದ್ದ ಅಜ್ಜ ಕೈಲಿದ್ದ ಉಂಗುರ ತೋರಿಸುತ್ತ ನಡೆದ ದುರ್ಘಟನೆಯನ್ನು ಸುತ್ತುವರಿದವರಿಗೆ ಮನದಟ್ಟು ಮಾಡಿಸಿದ. ಯಾವಾಗ ಬಿದ್ದು ಹೋಯೊ¤à… ತಲೆ ಕೆಡಿಸಿಕೊಂಡರು ಸೊಸೆಯರು. ಗೊತ್ತಿಲ್ಲ… ಎನ್ನುವಂತೆ ಬಲಗೈಯಲ್ಲಿ ತಾರಮ್ಮಯ್ಯ ಮಾಡಿದ ಮುದುಕ. ಸೆರಗು ಸೊಂಟಕ್ಕೆ ಬಿಗಿದು ಕಳೆದುಹೋಗಿದ್ದರ ತಲಾಷಿಗೆ ಸೊಸೆಯಂದಿರು ಅಣಿಯಾದರು. ಮೊಮ್ಮಕ್ಕಳೂ ಸುಮ್ಮನೆ ನಿಲ್ಲಲಿಲ್ಲ. ಎಷ್ಟಾದರೂ ಮಕ್ಕಳ ದೃಷ್ಟಿ ಸೂಕ್ಷ್ಮ. ಅಜ್ಜ ಮಲಗಿ ಎದ್ದಿದ್ದ ಹಾಸಿಗೆ ಬಟ್ಟೆಗಳನ್ನೆಲ್ಲ ಕೊಡವಿ, ಅಂತಲ್ಲಿ ಬಿದ್ದಿರಲು ಸಾಧ್ಯವೇ ಇಲ್ಲ ಎನ್ನುವಂಥ ಮೂಲೆಮುಡುಕುಗಳಲ್ಲೆಲ್ಲ ಪೊರಕೆಯಾಡಿಸಿ, ಸಂದಿಮೂಲೆಯಲ್ಲಿ ಸೇರಿಕೊಂಡಿದ್ದ ತಲೆಗೂದಲ ಜೊಂಪೆಗಳು, ಧೂಳು ಕುಡಿದ ಕಸದ ಜೊಂಡುಗಳು ಈಚೆಗೆ ಬಂದುವೇ ವಿನಾ ಹರಳಿನ ಸುಳಿವಿಲ್ಲ. ಅಮ್ಮನ ಎಂಬ್ರಾಯಿಡರಿ ಸೀರೆಯಿಂದ ಉದುರಿ ಬಿದ್ದಿದ್ದ ಹರಳೊಂದನ್ನು ಗಮನಿಸಿ, ಸಿಕು¤.., ಸಿಕು¤…, ಎಂದು ಕಿರುಚಾಡಿ ಎಲ್ಲರ ಎದೆಬಡಿತ ಏರಿಸಿದ ಹುಡುಗಿಯೊಂದು ಅಮ್ಮನಿಂದ ಗುದ್ದು ತಿಂದು ಸಪ್ಪಗಾಯ್ತು. ಮನೆಮೂರು ಸುತ್ತಲೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದ ಮನೆಮಂದಿ ಕೊನೆಗೆ ತೀರ್ಮಾನಕ್ಕೆ ಬಂದರು, ಎಲ್ಲೋ ಸ್ನಾನ ಮಾಡುವಾಗ ಕಳಚಿ ಬಿದ್ದಿದೆ. ನೀರಿನ ಜೊತೆ ಕೊಚ್ಚಿ ಹೋಗಿದೆ. ಅಥವಾ ಕಕ್ಕಸಿಗೆ ಹೋದಾಗ…
.
.
ನಂಬಿದ ದೇವರು ಕೈ ಬಿಡಲಿಲ್ಲ. ಅಜ್ಜ ಮಧ್ಯಾಹ್ನ ಹೊದ್ದು ಮಲಗಿದ ಜುಂಗು ಬಿಟ್ಟುಕೊಂಡ ಶಾಲಿಗೆ ಸಿಕ್ಕಿಕೊಂಡಿದ್ದ ಹರಳನ್ನು ಹಿರಿಮಗ ಪತ್ತೆ ಮಾಡಿದ. ಅಜ್ಜನ ಕಣ್ಣುಗಳು ವಜ್ರದ ಹರಳಿನಂತೆಯೇ ಫಳಫಳಿಸಿದುವು. ಆ ಕ್ಷಣದಲ್ಲಿ ಹರಳನ್ನು ಸ್ವಸ್ಥಾನದಲ್ಲಿ ಸ್ಥಿರಗೊಳಿಸಿ ಅಪ್ಪನ ಸಡಗರವನ್ನು ಹೆಚ್ಚಿಸಬೇಕೆಂದು ದೊಡ್ಡವನಿಗೆ ಪ್ರೇರೇಪಣೆ ಯಾಯ್ತು. ಅಂಟು ಹಾಕಿ ಬಿಗಿಯಾಗಿ ಕೂರಿಸಿ ಸುತ್ತಲಿನ ಚಿನ್ನದ ರಕ್ಷಣಾಕವಚವನ್ನು ಭದ್ರ ಮಾಡಿಕೊಡಲು ಎಷ್ಟು ಹೊತ್ತು ಬೇಕು? ಎಡವಿ ಬಿದ್ದರೆ ಸಿಗುವಷ್ಟು ಹತ್ತಿರದ ಮೈನ್ ರೋಡಿನಲ್ಲಿ ಬಂಗಾರದ ಅಂಗಡಿಗಳು ಸಾಕಷ್ಟಿವೆ. ಹೊರಟು ನಿಂತವನನ್ನು ತಡವಿ ಅಜ್ಜ ಹೇಳಿದ್ದೇ ಹೇಳಿದ, ಜಾಗ್ರತೆ ಕಣೋ.., ಜೋಪಾನ ಕಣೋ…
.
.
ಮಗ ಹರಳು ಕೂರಿಸಿ ತಂದುಕೊಟ್ಟ ಉಂಗುರವನ್ನು ಕಣ್ತುಂಬಿಕೊಂಡು ಅಜ್ಜ ಅದನ್ನು ಟ್ರೆಜ‚ರಿಯ ಒಳಕಪಾಟಿನಲ್ಲಿ ಜೋಪಾನವಾಗಿಟ್ಟಿದ್ದ ಹೆಂಡತಿಯ ಒಡವೆ ಪೆಟ್ಟಿಗೆಯೊಳಗೆ ಹಾಕಿಟ್ಟು ಬೀಗ ತಿರುಗಿಸಿದ. ಹೆಚ್ಚಾಕಡಿಮೆ ನಲವತ್ತು ವರ್ಷಗಳಿಂದ ಬೆರಳಿನಲ್ಲಿದ್ದ ಉಂಗುರ. ಉಂಗುರ ಕೂರುತ್ತಿದ್ದ ಜಾಗದಲ್ಲಿ ಅದೇ ಆಕಾರದಲ್ಲಿ ಬಿಳಿಚಿಕೊಂಡಿದೆ ಚರ್ಮ. ಬೋಳು ಬೋಳು ಅನಿಸುತ್ತಿದೆ. ಕಳೆದದ್ದು$ಸಿಕ್ಕಿದ್ದೇ ದೊಡ್ಡ ಪುಣ್ಯ. ಮತ್ತೂಂದು ಸಲ ಇಂಥ ಸಂದರ್ಭ ಸೃಷ್ಟಿಯಾಗಬಾರದು ಎಂದು ವಿವೇಕ ಎಚ್ಚರಿಸಿದ್ದನ್ನು ಶಿರಸಾವಹಿಸಿ ಪಾಲಿಸಿದ್ದ ಅಜ್ಜ.
.
.
ಯಾವತ್ತಿನ ಅಭ್ಯಾಸದಂತೆ ಅಜ್ಜನ ಗಂಡುಮಕ್ಕಳಿಬ್ಬರೂ ರಾತ್ರಿಯ ಊಟದ ನಂತರ ಸಣ್ಣದೊಂದು ವಾಕಿಂಗಿಗೆ ಮನೆ ಬಿಟ್ಟರು. ಮನೆಯ ಗೇಟು ದಾಟುತ್ತಿದ್ದಂತೆ ದೊಡ್ಡವನು ದೊಡ್ಡ ಗುಟ್ಟಿನ ಮೊಟ್ಟೆ ಒಡೆದ,
“”ಅದು ವಜ್ರದ ಹರಳೇ ಅಲ್ವಂತೆ ಕಣೋ. ಸಾದಾ ಹರಳು. ಅಮೆರಿಕನ್ ಡೈಮಂಡ್”
ಚಿಕ್ಕವನು ಶಾಕ್ ಹೊಡೆಸಿಕೊಂಡವನಂತೆ ಗಕ್ಕನೆ ನಿಂತ.
“”ಸತ್ಯಕ್ಕೂ?”
“”ಸತ್ಯಕ್ಕೂ. ಎರಡು, ಮೂರು ಕಡೆ ತೋರಿಸ್ಕೊಂಡು ಬಂದೆ”
“”ಛೇ…”
ಆ ಒಡವೆಗೆ ಅಪ್ಪ ವಾರಸುದಾರನಾದ ಕತೆ ಮಕ್ಕಳಿಗೆ ಬಾಯಿಪಾಠ. ನೂರೆಂಟು ಸಲ ಆ ವಿಷಯ ಹೇಳಿದ್ದಾನೆ ಅಪ್ಪ. ಆರ್ಥಿಕವಾಗಿ ಬಲವಾಗಿದ್ದ ಅವನ ಸ್ನೇಹಿತನೊಬ್ಬನ ಕುಟುಂಬ ವ್ಯವಹಾರದ ಪೈಪೋಟಿಯಿಂದ ಹೀನಾಯ ಸ್ಥಿತಿ ತಲುಪಿ, ಕುಟುಂಬಕ್ಕೆ ಕುಟುಂಬವೇ ತಳ ಕಿತ್ತುಕೊಂಡು ಊರು ಬಿಡುವ ಮುನ್ನ ಅಪ್ಪ ತನ್ನ ಸ್ನೇಹಿತನಿಂದ ಆ ಉಂಗುರ ಕೊಡುಕೊಂಡಿದ್ದಂತೆ, ಆ ಕಾಲದ ಆರುನೂರು ರೂಪಾಯಿಗಳಿಗೆ. ಸಾಲಸೋಲ ಮಾಡಿ ಆ ಉಂಗುರ ಸ್ವಂತದ್ದಾಗಿಸಿಕೊಂಡಿದ್ದು ಸಾರ್ಥಕವಾಯಿತೆಂದು ಅಪ್ಪ ಬೀಗುತ್ತಿದ್ದ. ಸಮಾ ಬಿದ್ದಿದೆ ಟೋಪಿ. ಕೊಂಡುಕೊಳ್ಳುವ ಮುನ್ನ ಯಾರಾದರೂ ನುರಿತ ಚಿನಿವಾರರಿಗೆ ತೋರಿಸಬೇಕೆಂಬ ಮುಂದಾಲೋಚನೆ ಇರಲಿಲ್ಲ. ಸ್ನೇಹಿತ ಅಂದಮೇಲೆ ನಂಬಿಕೆ. ಅದರಲ್ಲೂ ಚೆನ್ನಾಗಿ ಬದುಕಿದ ಕುಟುಂಬದ ಸ್ನೇಹಿತ.
“”ಅಪ್ಪನ ನಂಬಿಕೆ ಹಾಗೇ ಇರ್ಲಿ. ಮೋಸಹೋದೆ ಅಂತ ಈ ವಯಸ್ಸಲ್ಲಿ ಅವನು ಕೊರಗೋದು ಬೇಡ. ಅವನಿಗೆ ಮಾತ್ರ ಅಲ್ಲ, ಯಾರಿಗೂ ಇದನ್ನ ಹೇಳ್ಳೋದು ಬೇಡ” ಮಕ್ಕಳು ಮಾತಾಡಿಕೊಂಡರು.
.
.
ಬೆಳಗಿನಜಾವದ ಅರೆನಿದ್ದೆ, ಅರೆಎಚ್ಚರದಲ್ಲಿ ಸಣ್ಣಮಗನ ತಲೆಯಲ್ಲಿ ಮಿಂಚು ಹೊಳೆದಂತೆ ಯೋಚನೆಯೊಂದು ಮಿಂಚಿ ಹೋಯ್ತು. ನಿದ್ದೆ ಪರಾರಿಯಾಯ್ತು. ಅಣ್ಣ ಸತ್ಯ ಹೇಳಿದನಾ? ಅಥವಾ ನಕಲಿ ಹರಳನ್ನು ಉಂಗುರಕ್ಕೆ ಕೂರಿಸಿ… ಕತೆ ಕಟ್ಟಿ…
ಮಗ್ಗುಲು ಬದಲಿಸಿ ಬದಲಿಸಿ ಮಲಗಿದರೂ ತಲೆಯೊಳಗೆ ಹೊಕ್ಕ ಹುಳು ಕೊರೆಯುತ್ತಲೇ ಇತ್ತು. ಮತ್ತು ಕೊರೆಯುತ್ತಲೇ ಇರುತ್ತದೆ. ವಸುಮತಿ ಉಡುಪ