Advertisement

ಮೌಕಾ ಮೌಕ.. ಕ್ರಿಕೆಟ್ ವಿಶ್ವಕಪ್ ಜನಪ್ರಿಯ ಜಾಹಿರಾತು ಹುಟ್ಟಿದ ಬಗೆ ಗೊತ್ತಾ ?

11:37 AM Jun 08, 2019 | keerthan |

ಮೌಕಾ ಮೌಕ… ಮೌಕಾ ಮೌಕ… ಈ ಹಾಡು ನಿಮಗೆ ನೆನಪಿರಬಹುದು. ಭಾರತ ಮತ್ತು ಪಾಕಿಸ್ಥಾನದ ಕ್ರಿಕೆಟ್ ಅಭಿಮಾನಿಗಳ ವಿಶ್ವಕಪ್ ಪಂದ್ಯದ ಕಿಚ್ಚು ಹೆಚ್ಚಾಗುವಂತೆ ಮಾಡಿದ ಹಾಡಿದು. ಹೌದು. 2015ರ ಏಕದಿನ ಕ್ರಿಕೆಟ್ ವಿಶ್ವಕಪ್ ವೇಳೆ ಬಂದ ಜಾಹೀರಾತಿನ ಹಾಡಿದು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ನಡೆದಿದ್ದ ವಿಶ್ವಕಪ್ ಸಮಯದಲ್ಲಿ ಈ ಜಾಹೀರಾತು ಸಿಕ್ಕಾಪಟ್ಟೆ ಹಿಟ್ ಆಗಿತ್ತು.

Advertisement

2015ರ ವಿಶ್ವಕಪ್ ನಲ್ಲಿ ಭಾರತಕ್ಕೆ ಮೊದಲ ಪಂದ್ಯ ಪಾಕಿಸ್ಥಾನದ ವಿರುದ್ಧ . ಬದ್ಧ ವೈರಿಗಳ ನಡುವಿನ ಈ ಕಾದಾಟದಲ್ಲಿ ಎರಡೂ ತಂಡಗಳಿಗೆ ಗೆಲ್ಲುವುದೆಂದರೆ ವಿಶ್ವಕಪ್ ಜಯಿಸಿದಷ್ಟೇ ಮುಖ್ಯ. ಅಭಿಮಾನಿಗಳು ಕೂಡಾ ಈ ಒಂದು ಪಂದ್ಯಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಇದನ್ನೇ ವಿಷಯವನ್ನಾಗಿ ಉಪಯೋಗಿಸಿಕೊಂಡ ಸ್ಟಾರ್ ಸ್ಪೋರ್ಟ್ಸ್  ಕ್ರೀಡಾ ಚಾನೆಲ್ ವಿಶ್ವಕಪ್ ಕ್ರಿಕೆಟ್ ನ ಅತೀ ಜನಪ್ರಿಯ ಜಾಹೀರಾತು ತಯಾರಿಸಿತು. ಅದು ಹೇಗೆ ಮುಂದೆ ಓದಿ.

ಭಾರತ- ಪಾಕ್ ವಿಶ್ವಕಪ್ ಇತಿಹಾಸ
ಭಾರತ ಮತ್ತು ಪಾಕ್ 2015ಗಿಂತ ಮೊದಲು ಐದು ಬಾರಿ ವಿಶ್ವಕಪ್ ನಲ್ಲಿ ಮುಖಾಮುಖಿಯಾಗಿದೆ. ಈ ಐದೂ ಸಲವು ಭಾರತವೇ ನೆರೆ ರಾಷ್ಟ್ರದ ವಿರುದ್ಧ ಗೆದ್ದು ಬೀಗಿದೆ. ಪಾಕಿಸ್ಥಾನ ಪ್ರತೀ ಸಲವು ಭಾರತದ ವಿರುದ್ಧ ಒಂದು ವಿಶ್ವಕಪ್ ಪಂದ್ಯ ಜಯಿಸ ಬೇಕೆಂದುಕೊಂಡರು ಅದು ಸಾಧ್ಯವಾಗುತ್ತಿಲ್ಲ. ಪಾಕ್ ಅಭಿಮಾನಿಗಳು ಕೂಡಾ ಭಾರತದ ವಿರುದ್ಧ ಒಮ್ಮೆಯಾದರೂ ವಿಜಯೋತ್ಸವ ಮಾಡಬೇಕೆಂದು ಒಂದು ಅವಕಾಶ (ಮೌಕ) ಕ್ಕಾಗಿ ಕಾಯುತ್ತಿರುತ್ತಾರೆ. ಇದೇ ಈ ಜಾಹೀರಾತಿನ ಹಿಂದಿರುವ ಮುಖ್ಯ ಅಂಶ.


ಜಾಹೀರಾತಲ್ಲಿ ಏನಿತ್ತು

ಸಾಮಾನ್ಯವಾಗಿ ಕ್ರೀಡಾ ಜಾಹೀರಾತು ಆಟಗಾರರ ಮೇಲೆ ಚಿತ್ರಿತವಾಗಿರುತ್ತದೆ. ಆದರೆ ಈ ಜಾಹೀರಾತು ಮಾತ್ರ ಓರ್ವ ಅಭಿಮಾನಿಯ ಮೇಲೆ ಚಿತ್ರಿತವಾಗಿತ್ತು. ಅದು ಕೂಡಾ ಪಾಕಿಸ್ಥಾನದ ಅಭಿಮಾನಿಯ ಮೇಲೆ ! ಹೌದು. ಪಾಕ್ ಅಭಿಮಾನಿಯೊಬ್ಬ 1992ರ ವಿಶ್ವಕಪ್ ಪಂದ್ಯದ ವೇಳೆ ಇನ್ನೇನು ಪಾಕಿಸ್ಥಾನ ಭಾರತದ ಎದುರು ಜಯಗಳಿಸುತ್ತದೆ ಎಂದುಕೊಂಡು ಖುಷಿಯಲ್ಲಿ ಡಬ್ಬ ತುಂಬಾ ಪಠಾಕಿಗಳನ್ನು ತಂದಿಡುತ್ತಾನೆ. ಆದರೆ ಆ ಪಂದ್ಯದಲ್ಲಿ ಪಾಕ್ ಸೋಲುತ್ತದೆ. ಮುಂದಿನ ಬಾರಿಯಾದರೂ ಪಾಕ್ ಜಯ ಗಳಿಸುತ್ತದೆ. ಆಗ ಪಠಾಕಿ ಹೊಡೆಯಲು ಅವಕಾಶ ಸಿಗುತ್ತದೆ ಎಂದು ಆ ಪಠಾಕಿ ಡಬ್ಬವನ್ನು ಹಾಗೇ ಎತ್ತಿಡುತ್ತಾನೆ. ಹೀಗೆ 1996, 99, 2003 ಮತ್ತು 2011ರಲ್ಲಿ ಕೂಡಾ ಪಾಕ್ ಅಭಿಮಾನಿ ಪಠಾಕಿ ಡಬ್ಬ ತಂದಿಡುವುದು, ಪಾಕ್ ಸೋಲುವುದು, ಆತ ಮತ್ತೆ ನಿರಾಶನಾಗಿ ಡಬ್ಬವನ್ನು ಎತ್ತಿಡುವುದು ಹೀಗೆ ಮುಂದುವರಿಯುತ್ತದೆ. ವಿಶ್ವಕಪ್ ನಲ್ಲಿ ಭಾರತದ ಎದುರು ಪಾಕ್ ಗೆಲ್ಲುವುದು ಮತ್ತು ಆತ ಪಠಾಕಿ ಹೊಡೆಯುವುದು ಎರಡು ಕೂಡ ಯಾವತ್ತೂ ನಡೆಯದ ಸಂಗಾತಿಯಾಗಿ ಬಿಡುತ್ತದೆ . 2015ರಲ್ಲಿ ಮತ್ತೆ ಅದೇ ಪಾಕ್ ಅಭಿಮಾನಿ ಪಠಾಕಿ ಹಿಡಿದು ತನಗೆ  ಈ ವರ್ಷವಾದರೂ ‘ಮೌಕ’ ಸಿಗುತ್ತದೆ ಎಂದು ಕಾಯುವ ಈ ಜಾಹೀರಾತು ಸಿಕ್ಕಾಪಟ್ಟೆ ಪ್ರಸಿದ್ದವಾಗಿತ್ತು.

ಅಂದ ಹಾಗೆ ಈ ಜಾಹೀರಾತಿನಲ್ಲಿ ಪಾಕ್ ಅಭಿಮಾನಿಯ ಪಾತ್ರ ಮಾಡಿದ್ದು ಪಾಕಿಸ್ಥಾನದ ನಟ ಎಂದು ತುಂಬಾ ಜನ ಭಾವಿಸಿದ್ದರು. ಆದರೆ ಮೌಕಾ ಮೌಕ ಪಾಕ್ ಅಭಿಮಾನಿ ಪಾತ್ರಧಾರಿ ಭಾರತೀಯ ನಟ ವಿಶಾಲ್ ಮಲ್ಹೋತ್ರ. ಅವರು ಮುಂದೆ ‘ಮೌಕ ವಿಶಾಲ್’ ಎಂದೇ ಜನಪ್ರಿಯರಾಗಿ ಬಿಟ್ಟರು !

Advertisement


ಮಾಸ್ಟರ್ ಪೀಸ್ ಹಿಂದಿನ ಮಾಸ್ಟರ್ ಮೈಂಡ್ 

ಸ್ಟಾರ್ ಸ್ಪೋರ್ಟ್ಸ್ ನ ಸುರೇಶ್ ತ್ರಿವೇದಿ ಈ ಮಾಸ್ಟರ್ ಪೀಸ್ ಜಾಹೀರಾತಿನ ಹಿಂದಿನ ಮಾಂತ್ರಿಕ. ಭಾರತ ಪಾಕ್ ಅಭಿಮಾನಿಗಳ ಕ್ರಿಕೆಟ್ ‘ಹುಚ್ಚು’ ಈ ಜಾಹೀರಾತು ಹುಟ್ಟಲು ಕಾರಣ ಎನ್ನುತ್ತಾರೆ ಸುರೇಶ್. ಈ ಜಾಹೀರಾತು ಇಷ್ಟೊಂದು ಪ್ರಮಾಣದಲ್ಲಿ ಯಶಸ್ಸು ಪಡೆಯುತ್ತದೆ ಎಂದು ಸ್ವತಃ ಸ್ಟಾರ್ ಸ್ಪೋರ್ಟ್ಸ್ ಗೂ ಅಂದಾಜು ಇರಲಿಲ್ಲವಂತೆ. ಇದರ ಯಶಸ್ಸಿನ ಬೆನ್ನು ಹಿಡಿದ ಸ್ಟಾರ್ ಸಂಸ್ಥೆ ಇದೇ ರೀತಿಯ ಜಾಹೀರಾತನ್ನು ಪೂರ್ತಿ ವಿಶ್ವಕಪ್ ಗೆ ವಿಸ್ತರಿಸಿತು. ಮುಂದೇ 2016ರ ಟಿ 20 ವಿಶ್ವಕಪ್ ನಲ್ಲೂ ‘ಮೌಕಾ ಮೌಕ’ ಮತ್ತೆ ಪ್ರತಿಧ್ವನಿಸಿತ್ತು. ಅಷ್ಟರ ಮಟ್ಟಿಗೆ ಆ ಒಂದು ಜಾಹೀರಾತು ಕ್ರೀಡಾಭಿಮಾನಿಗಳಲ್ಲಿ ಕ್ರೇಜ್ ಹುಟ್ಟು ಹಾಕಿತ್ತು.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next