ಗದಗ: ಚಿಲಿಪಿಲಿ ಶಬ್ದದೊಂದಿಗೆ ನಿಸರ್ಗದ ಸೊಬಗು ಹೆಚ್ಚಿಸುವ ಗುಬ್ಬಚ್ಚಿಗಳ ಸಂತಾನ ಅವಸಾನದತ್ತ ಸಾಗುತ್ತಿದೆ. ಐಯುಸಿಎನ್ ವರದಿ ಪ್ರಕಾರ ಕನಿಷ್ಟ ಕಾಳಜಿ ಪಟ್ಟಿಯಲ್ಲಿದ್ದರೂ ಗುಬ್ಬಿ ಸಂತತಿ ಕಳೆದ 25 ವರ್ಷಗಳಲ್ಲಿ ಶೇ.71ರಷ್ಟು ಕುಸಿದಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇತರೆ ವನ್ಯಜೀವಿಗಳಂತೆ ಭವಿಷ್ಯದಲ್ಲಿ ಗುಬ್ಬಚ್ಚಿಗಳೂ ಚಿತ್ರಪಟಕ್ಕೆ ಸೀಮಿತವಾಗುವ ಲಕ್ಷಣಗಳು ಗೋಚರಿಸುತ್ತಿವೆ.
1990ರ ಆಸುಪಾಸಿನವರೆಗೂ ನಗರ ಹಾಗೂ ಗ್ರಾಮೀಣ ಭಾಗದ ಹೊರವಲಯಗಳಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆ ತಲೆ ಎತ್ತಿ ನೋಡಿದರೆ ಬಾನಂಗಳದಲ್ಲಿ ಸಾವಿರಾರು ಗುಬ್ಬಿಗಳು ಹಿಂಡು ಹಿಂಡಾಗಿ ಹಾರುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಕ್ಷಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿವೆ. ಮರ ಗಿಡ, ಕೆರೆ ಕಟ್ಟೆ ಹಾಗೂ ಮನೆಗಳಲ್ಲೂ ಗೂಡು ಕಟ್ಟುತ್ತಿದ್ದವು. ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ತೋರಿಸುತ್ತಾ ಅಮ್ಮಂದಿರು ತಮ್ಮ ಚಿಣ್ಣರಿಗೆ ತುತ್ತು ತಿನ್ನಿಸುತ್ತಿದ್ದರು. ಈಗ ಗುಬ್ಬಚ್ಚಿಗಳು ಕಾಣುವುದೇ ಅಪರೂಪ.
ವಿಶ್ವದಲ್ಲಿ 26 ವಿವಿಧ ಜಾತಿಯ ಗುಬ್ಬಿಗಳನ್ನು ಗುರುತಿಸಲಾಗಿದ್ದು, ಆ ಪೈಕಿ ಭಾರತದಲ್ಲಿ ಪಾಸರ್ ಡೊಮೆಸ್ಟಿಕಸ್, ಪಾಸರ್ ಹಿಸ್ಪಾನಿಯೊಲೆನ್ಸಸ್, ಪಾಸರ್ ಪೈರೊನಾಟಸ್, ಪಾಸರ್ ರುಟಿಲನ್ಸ್, ಪಾಸರ್ ಮೊಂಟನಸ್ ಎಂಬ 5 ವಿಭಿನ್ನ ಜಾತಿಯ ಗುಬ್ಬಿಗಳು ಹೆಚ್ಚಾಗಿ ಕಂಡುಬರುತ್ತವೆ. ಪಾಸರೀಡೆ ಕುಟುಂಬಕ್ಕೆ ಸೇರಿದ ಗುಬ್ಬಿಗಳಿಗೆ ಚಿಕ್ಕ ಕೀಟಗಳು ಹಾಗೂ ಕಾಳುಗಳು ಮುಖ್ಯ ಆಹಾರವಾಗಿದ್ದು, ಗರಿಷ್ಠ 3 ವರ್ಷ ಬದುಕುತ್ತವೆ.
ಕಾರಣ ಏನು?: ದಶಕಗಳ ಹಿಂದೆ ಮನೆಯಂಗಳ, ಮೇಲ್ಛಾವಣಿ, ಕಟ್ಟಿಗೆಯ ಕಂಬಗಳಿಗೂ ಗೂಡು ಕಟ್ಟುತ್ತಿದ್ದವು. ಯಾರೂ ಅವುಗಳನ್ನು ಗದರುತ್ತಿರಲಿಲ್ಲ. ತೋಟ, ಮನೆಯಲ್ಲಿ ಬಿದ್ದಿರುವ ಕಾಳು, ಕಡಿ, ಕೀಟಗಳನ್ನು ತಿಂದು ಸ್ವತ್ಛಂದವಾಗಿ ಜೀವನ ಸಾಗಿಸುತ್ತಿದ್ದವು. ಆದರೆ, ಇಂದಿನ ಕಾಂಕ್ರೀಟ್ ಕಾಡು, ಆಧುನಿಕ ಶೈಲಿಯ ಮನೆಗಳಲ್ಲಿ ಗುಬ್ಬಿಗಳಿಗೆ ಜಾಗವೇ ಇಲ್ಲದಂತಾಗಿದೆ. ಜಮೀನುಗಳಲ್ಲಿ ಬೆಳೆಗಳಿಗೆ ಯಥೇತ್ಛವಾಗಿ ರಾಸಾಯನಿಕ, ಶಬ್ದ ಮಾಲಿನ್ಯ ಹಾಗೂ ಮೊಬೈಲ್ ಗೋಪುರಗಳಿಂದಲೂ ಗುಬ್ಬಿಗಳ ಸಂತಾನಕ್ಕೆ ಹಿನ್ನಡೆಯಾಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.
ಭಾರತೀಯರಿಂದಲೇ ಗುಬ್ಬಚ್ಚಿ ದಿನಾಚರಣೆ: ಗುಬ್ಬಚ್ಚಿ ಮತ್ತಿತರೆ ಪಕ್ಷಿಗಳ ಸಂರಕ್ಷಣೆ, ಪರಿಸರದಲ್ಲಿ ಸಮತೋಲನ ಕುರಿತು ಜನಜಾಗೃತಿಯಲ್ಲಿ ತೊಡಗಿರುವ ದೆಹಲಿ ಮೂಲದ ನೇಚರ್ ಫಾರ್ ಎವರ್ ಸೊಸೈಟಿ ಮತ್ತು ಎಕೊಸಿಸ್ ಆ್ಯಕ್ಷನ್ ಫೌಂಡೇಷನ್ ಫ್ರಾನ್ಸ್ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಗುಬ್ಬಚ್ಚಿ ಮತ್ತು ಇತರ ಸುಂದರ ಪಕ್ಷಿ ಸಂಕುಲವನ್ನು ಸಂರಕ್ಷಿಸಲು 2010 ರಿಂದ “ವಿಶ್ವ ಗುಬ್ಬಚ್ಚಿ ದಿನ’ ಪ್ರಾರಂಭವಾಗಿದೆ.
ಭಾರತ, ಫ್ರಾನ್ಸ್ ಸೇರಿದಂತೆ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದ್ದು, “ಐ ಲವ್ ಸ್ಪ್ಯಾರೋ’ ಎಂಬುದು ಈ ಬಾರಿಯ ಘೋಷವಾಕ್ಯ. ಗುಬ್ಬಚ್ಚಿ ಸಂರಕ್ಷಣೆ ಕಾರ್ಯಕ್ಕೆ ದೆಹಲಿ ಮತ್ತು ಬಿಹಾರ ರಾಜ್ಯ ಸರ್ಕಾರಗಳು ಕೈಜೋಡಿಸಿದ್ದು, 2012ರಲ್ಲಿ ಗುಬ್ಬಚ್ಚಿಯನ್ನು ರಾಜ್ಯ ಪಕ್ಷಿಯನ್ನಾಗಿ ಘೋಷಿಸಿವೆ. ಗುಬ್ಬಚ್ಚಿ ಮತ್ತು ಪ್ರಕೃತಿ ರಕ್ಷಣೆಗಾಗಿ 2008ರಲ್ಲಿ ದೆಹಲಿಯಲ್ಲಿ ನೇಚರ್ ಫಾರ್ ಎವರ್ ಹುಟ್ಟಿಕೊಂಡಿದೆ. ಕೇಂದ್ರ ಸರ್ಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ಹೊರಡಿಸುವ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ವರದಿ ಮಾದರಿಯಲ್ಲಿ ನೇಚರ್ ಫಾರ್ ಎವರ್ ಸೇರಿದಂತೆ 8ಕ್ಕೂ ಹೆಚ್ಚು 15 ಸಾವಿರ ಬರ್ಡ್ಸ್ ವಾಚರ್ ವರದಿ ಆಧರಿಸಿ 2020ರಲ್ಲಿ ಮೊದಲ ಬಾರಿಗೆ ಸ್ಟೇಟ್ ಆಫ್ ಬರ್ಡ್ಸ್ ವರದಿ ಪ್ರಕಟಿಸಿದೆ. ಪಕ್ಷಿಗಳ ವಸ್ತುಸ್ಥಿತಿಯನ್ನು ಆಧರಿಸಿದ ಸಂಶೋಧನಾ ವರದಿ ಇದಾಗಿದ್ದು, ಪಕ್ಷಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಈ ವರದಿ ಅನುಕೂಲಕರವಾಗಿದೆ ಎನ್ನುತ್ತಾರೆ ಬೆಳಗಾವಿಯ ಸಂಶೋಧನಾ ವಲಯದ ವಲಯ ಅರಣ್ಯಾಧಿಕಾರಿ ಮಹಾಂತೇಶ ಪೆಟ್ಲೂರ್.
ವೀರೇಂದ್ರ ನಾಗಲದಿನ್ನಿ