Advertisement
ಅಹಂಭಾವವು ಮನುಷ್ಯನ ಲೌಕಿಕ ಮತ್ತು ಪಾರಮಾರ್ಥಿಕ ಸುಖದಲ್ಲಿನ ಒಂದು ದೊಡ್ಡ ಅಡಚಣೆಯಾಗಿದೆ. ಅಹಂ ಭಾವದ ಬೀಜವು ಮನುಷ್ಯ ಜನ್ಮದಲ್ಲಿಯೇ ಇರುವುದರಿಂದ ಇದಕ್ಕೆ ಹಿರಿಯ-ಕಿರಿಯ, ಬಡವ-ಬಲ್ಲಿದ, ಅಶಿಕ್ಷಿತ-ಸುಶಿಕ್ಷಿತ ಎಂಬ ಯಾವುದೇ ಭೇದ ಇಲ್ಲ. ಎಲ್ಲರಲ್ಲಿಯೂ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಅಹಂಕಾರ ಭಾವವು ಇದ್ದೇ ಇರುತ್ತದೆ.ಅಹಂಭಾವವು ಹೊಲದಲ್ಲಿ ಬೆಳೆಯುವ ಹುಲ್ಲಿನಂತೆ ಇರುತ್ತದೆ. ಎಲ್ಲಿಯವರೆಗೆ ನಾವು ಆ ಹುಲ್ಲನ್ನು ಬೇರುಸಹಿತವಾಗಿ ನಾಶ ಮಾಡುವುದಿಲ್ಲವೋ ಅಲ್ಲಿ ಯವರೆಗೆ ಆ ಹೊಲದಲ್ಲಿ ಉತ್ತಮ ಫಸಲು ಬರುವುದಿಲ್ಲ. ಆ ಹುಲ್ಲನ್ನು ಮನುಷ್ಯ ಪ್ರತೀ ದಿನವೂ ಸತತವಾಗಿ ನಾಶಮಾಡುತ್ತಲೇ ಇರಬೇಕಾಗುತ್ತದೆ. ಅದು ಸಾಧ್ಯವಾಗದಿದ್ದಲ್ಲಿ ಆ ಹುಲ್ಲು ಇಡೀ ಹೊಲವನ್ನು ಆವರಿಸಿ ನಿಷ#ಲ ವನ್ನಾಗಿಸುತ್ತದೆ. ಅದರಂತೆಯೇ ನಮ್ಮಲ್ಲಿರುವ ಅಹಂಭಾವವು ಸಂಪೂರ್ಣ ನಾಶವಾಗದ ಹೊರತು ನಾವು ಪರಿಪೂರ್ಣ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಿಲ್ಲ. ಸಾಧನೆಯ ಹಾದಿಯಲ್ಲಿ ಅಹಂಕಾರ ಎನ್ನುವುದು ಕಲ್ಲುಮುಳ್ಳುಗಳಿದ್ದಂತೆ. ಅಹಂಕಾರದ ಮುಳ್ಳನ್ನು ಹಾದಿಯಿಂದ ದೂರವಾಗಿಸಿ ಗುರಿಯತ್ತ ಹೆಜ್ಜೆ ಹಾಕಿದಲ್ಲಿ ಸಾಧನೆ ಸಾಧ್ಯ.ಒಂದೇ ಮಾತಿನಲ್ಲಿ ಹೇಳುವುದಾದರೆ ಸಾಧನೆಯ ಶಿಖರ ಏರಲು ನಮ್ಮಲ್ಲಿನ ಅಹಂಕಾರದ ದಮನವೇ ಮೊದಲ ಮೆಟ್ಟಿಲು.
Related Articles
Advertisement
ನಾನು, ನನ್ನದು, ನನಗೆ ಇಂತಹ ಅಭಿಮಾನವನ್ನು ಇಟ್ಟುಕೊಳ್ಳುವುದು ಎಂದರೆ ಅಹಂಕಾರ. ನನ್ನ ದೇಹ, ನನ್ನ ಮನಸ್ಸು, ನನ್ನ ಪ್ರಾಣ, ನನ್ನ ಬುದ್ಧಿ, ನನ್ನ ಸಂಪತ್ತು, ನನ್ನ ಪತ್ನಿ, ಮಕ್ಕಳು, ನನಗೆ ಸುಖ ಸಿಗಬೇಕು ಎಂಬ ವಿಚಾರಗಳು ಅಹಂನಿಂದಲೇ ನಿರ್ಮಾಣ ಆಗುತ್ತವೆ. ಈರುಳ್ಳಿಯ ಸಿಪ್ಪೆಯನ್ನು ಸುಲಿದರೆ ಕೇವಲ ಸಿಪ್ಪೆಯೇ ಸಿಗುತ್ತದೆಯೇ ಹೊರತು, ಯಾವ ಸಾರವೂ ಕೈಗೆ ಸಿಗುವುದಿಲ್ಲ, ಹಾಗೆಯೇ ವಿಚಾರ ಮಾಡಿದಾಗ ನಮ್ಮೊಳಗಿನಿಂದ ನಾನು ಎನ್ನುವ ವಸ್ತುವೇ (ಅಹಂ) ಸಿಗಲಾರದು. ಕೊನೆಗೆ ಏನು ಉಳಿಯುತ್ತದೆಯೋ ಅದೇ ವ್ಯಕ್ತಿಯ ಸಾಧನೆ. ಸಾಧನೆಯ ಗುರಿ ತಲುಪಿದಾಗ ಆ ವ್ಯಕ್ತಿಗೆ ಲಭಿಸುವ ಅನುಭವ, ಆತನ ಸಂಭ್ರಮಕ್ಕೆ ಎಣೆ ಇರಲಾರದು. ನಾವು ಯಾವ ಅಹಂಕಾರವನ್ನು ಮೆಟ್ಟಿನಿಂತು ಈ ಸಾಧನೆ ಮಾಡಿದ್ದೇವೆಯೋ ಅದುವೇ ನಮ್ಮಲ್ಲಿ ಮತ್ತೆ ಅಹಂಕಾರದ ಬೀಜ ಮೊಳಕೆಯೊಡೆಯುವಂತೆ ಮಾಡಿದಲ್ಲಿ ಆ ಸಾಧನೆಯೂ ನಿಷ್ಪ್ರಯೋಜಕವಾಗುತ್ತದೆ.
- ಸಂತೋಷ್ ರಾವ್ ಪೆರ್ಮುಡ