Advertisement
ಆ ಸೈಟುಗಳ ಹಿಂದೊಂದು ಮನೆಯಿದೆ. ಆ ಮನೆಯ ಕಿಟಕಿಗಳು ಸದಾ ಮುಚ್ಚಿದ ಸ್ಥಿತಿಯಲ್ಲೇ ಇರುತ್ತವೆ. ಆ ಮನೆಯಲ್ಲಿ ಯಾರೂ ಇಲ್ಲವಾ? ಇದ್ದಾರೆ. ದಾರಿ ಹಾಯುವಾಗೊಮ್ಮೆ ಕಣ್ಣಾಡಿಸುತ್ತೇನೆ. ಮನೆ ಮುಂದೆ ಯಾವಾಗಲೋ ಬಂದು ನಿಲ್ಲುವ ಎರಡು ಬೈಕುಗಳು. ಅಪರೂಪಕ್ಕೆ ಮನೆ ಮುಂದೆ ತುಳಸಿ ಗಿಡಕ್ಕೆ ಫ್ರೆಶ್ ಆದ ಹೂವುಗಳ ಮುಡಿಸಿರುತ್ತಾರೆ. ಅಂದರೆ ಆ ಮನೆಯಲ್ಲಿ ಹೆಂಗಸರಿದ್ದಾರೆ. ಮನೆಯಿಂದ ಆಗಾಗ ಹೊರಬೀಳುವ ಗಿಡ್ಡಕ್ಕಿರುವ ಗಡ್ಡ ಬಿಟ್ಟ ಹುಡುಗ ಮತ್ತು ಐವತ್ತು ದಾಟಿದ ವಯಸ್ಕ ಕಾಣಿಸುತ್ತಾರೆ.
Related Articles
Advertisement
ಆದರೆ, ಈಗ ಒಂದು ದಿಗಿಲೆಂದರೆ ಆ ಕಿಟಕಿಯಿಂದ ಎರಡು ಕೈಗಳು ಚಾಚಿ ಹೊರಬರುತ್ತವೆ. ಗೃಹಿಣಿಯರು ಮನೆ ಹೊರಗೆ ಬಂದಾಗ ಅವರತ್ತ ಆ ಕೈಗಳು ಸನ್ನೆ ಮಾಡಿ ಬಾ ಎಂದು ಕರೆಯುತ್ತವೆ. ಆಗಲೂ ಗೃಹಿಣಿಯರು ನೋಡಿಯೂ ನೋಡದಂತೆ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಕಿಟಕಿಯಿಂದ ಹೊರಚಾಚಿದ ಕೈಗಳು “ಬಾ…’ ಎನ್ನುವ ಹಾಗೂ ಆಂಗಿಕ ಸನ್ನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯ್ತು.
ಆಗ ಆ ಕಿಟಕಿಗಳತ್ತ ಆ ಪಕ್ಕದ ಮನೆಗಳ ಗಂಡಸರ ಗಮನವೂ ಬಿತ್ತು. ಜೊತೆಗೆ ಲುಂಗಿ ಮೇಲಕ್ಕಟ್ಟಿ,”ಇವ್ನೌನ್, ಯಾವನ್ಲೇ ಅವ್ನು, ಇವತ್ತಿದೆ ಆ ಮಗನಿಗೆ…’ ಎಂದು ಸಿಟ್ಟಿನಿಂದಲೇ ಆ ಮನೆಯತ್ತ ಹೊರಟು ನಿಂತವು. ಮೊದಲು ಆ ಗೃಹಿಣಿಯ ಪತಿ, ನಂತರ ನಾನು ಮನೆಗೆ ನುಗ್ಗಿದ್ದಾಯ್ತು. ಮನೆ ಒಳಗೆ ಹೊಸ್ತಿಲು ದಾಟುತ್ತಿದ್ದಂತೆ ಒಂಥರಾ ವಾಸನೆ. ಎಷ್ಟೋ ದಿನಗಳಿಂದ ಶುಚಿಯಾಗಿಟ್ಟುಕೊಳ್ಳದ ವಾತಾವರಣ. ಒಳಹೋಗಿ ಆ ವಯಸ್ಸಾದ ಮುದುಕನನ್ನು ಗದರಿಸುತ್ತಾ, “ಏನ್ರಿ ಇದು ಅಸಹ್ಯ..’ ಅನ್ನುವುದರಲ್ಲೇ ದಪ್ಪಗಾಜಿನ ಚಾಳೀಸು ಏರಿಸುತ್ತಾ ಆ ಹುಡುಗನೂ ಬಂದು “ಸರ್, ಅದು, ಆ ಥರಾ ಏನಿಲ್ಲ, ಒಂದು ನಿಮಿಷ ನಾವ್ ಹೇಳ್ಳೋದನ್ನ ಕೇಳಿ…’ ಎಂದು ಗೋಗರೆದರೂ ನಾವು ಕೇಳುವ ಸ್ಥಿತಿಯಲ್ಲೇ ಇಲ್ಲ. ಮೊದಲು ಆ ಕಿಟಕಿಯಿರುವ ರೂಮಿನಲ್ಲಿ ಯಾರಿದ್ದಾರೆ, ಅವರನ್ನು ವಿಚಾರಿಸಿಕೊಳ್ಳಬೇಕಿತ್ತು.
“ಯಾರದು ಕಿಟಕಿಯಿಂದ ಹೆಂಗಸರಿಗೆ ಸನ್ನೆ ಮಾಡೋದು? ಕರೀರಿ ಅವ್ನ, ಇಲ್ಲಾಂದ್ರೆ ನಾವೇ ರೂಮಿಂದ ಎಳೆದು ತರುತ್ತೇವೆ’ ಎಂದು ರೂಮು ಹೊಕ್ಕರೆ- ಅಬ್ಟಾ… ಮತ್ತೂಂಥರಾ ವಾಸನೆ! ಆ ಮನೆಯಲ್ಲಿ ವರ್ಷಗಳಿಂದ ಹಾಸಿಗೆಗಳನ್ನು ತೊಳೆದಿಲ್ಲ. ಆ ಮಂಚದ ಮೇಲೆ ಎದ್ದು ಕೂತು ಓಡಾಡಿ, ವರ್ಷಗಳೇ ಕಳೆದಿರಬಹುದಾದ ಐವತ್ತರ ಆಸುಪಾಸಿನ ಒಂದು ಹೆಣ್ಣು ಮಗಳ ದೇಹ ಆ ಮಂಚದ ಮೇಲಿತ್ತು. ಸನ್ನೆ ಮಾಡಿದ ಕೈಗಳ ಹುಡುಕಿ ಬಂದ ನಮಗೆ ಇದೆಂಥಾ ಸ್ಥಿತಿ ಅನ್ನಿಸಿಬಿಡ್ತು
ಆಗಲೇ ಇನ್ನೊಂದು ಬಾಗಿಲಿಂದ, “ನಾನಲ್ಲ, ನಾನಲ್ಲ…’ ಅನ್ನುತ್ತಾ 20-25 ರ ವಯಸ್ಸಿನ ಹುಡುಗನೊಬ್ಬ ಗಾಬರಿಯಿಂದ ಹೊರಗೆ ಓಡಿದ. ಏನಾಗ್ತಿದೆ ಇಲ್ಲಿ. ಆ ಕಿಟಕಿಯ ರೂಮಿನಲ್ಲಿ ಎದ್ದು ಓಡಾಡಲಾಗದ ಹೆಣ್ಣುಮಗಳಿದ್ದಾಳೆ. ಈ ಕಡೆ “ನಾನಲ್ಲ’ ಅನ್ನುತ್ತಾ ಓಡಿದ ಹುಡುಗನ್ಯಾರು? ನಾನವನನ್ನು ಹಿಂಬಾಲಿಸಿ ಓಡಿದರೆ, ಒಂದಷ್ಟು ದೂರ ಓಡಿ ಒಂದು ಮನೆಯ ಗೇಟು ತೆರೆದು, ಮನೆ ಬಾಗಿಲನ್ನೂ ತೆರೆದು ಅ ಮನೆಯ ಒಡತಿ ಬೆನ್ನಿಗೆ ಅವಿತು, “ಆಂಟಿ.. ಆಂಟಿ…, ಇವ್ರು ನನ್ನ ಹೊಡಿತಾರೆ. ಬ್ಯಾಡಂತೇಳ ಆಂಟಿ’ ಅನ್ನುತ್ತಾ ಎರಡೂ ಕೈಗಳನ್ನು ತೆಲೆ ಮೇಲೆ ಹೊತ್ತು ಗಡಗಡ ನಡುಗುತ್ತಿದ್ದ.
ಕೈ ಎತ್ತಿ ಹೊಡೆಯಲು ಹೊರಟವನು ಸ್ಥಬ್ಧನಾಗಿ ನಿಂತುಬಿಟ್ಟೆ. ಆ ಹುಡುಗ ಸಹಜವಾಗಿಲ್ಲ. ಅವನು ಮಾನಸಿಕ ಅಸ್ವಸ್ಥ. ಮಾತಾಡಿದ್ದನ್ನೇ ಮಾತಾಡುತ್ತಾನೆ. ಗಾಬರಿ ಬಿದ್ದಿದ್ದಾನೆ. “ಛೇ, ಎಂಥ ತಪ್ಪು ಮಾಡಿಬಿಡುತ್ತಿದ್ದೆ..’ ವಾಪಸ್ ಬಂದಾಗ ಆ ಕಿಟಕಿ ಮನೆಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತ ಆ ಹಿರಿಯ ಮತ್ತು ಗಡ್ಡಧಾರಿ ಹುಡುಗ ಕಂಡರು. ಅನಾರೋಗ್ಯದ ತಾಯಿ ಮತ್ತು ಅಸ್ವಸ್ಥ ಮಗನ ಬಗ್ಗೆ ನೋಡಿಯೂ ಇನ್ನೇನು ಜಗಳ ಮಾಡುವುದು? ಏನು ಹೇಳಬೇಕೋ ತಿಳಿಯದೆ ಐದು ನಿಮಿಷದ ನಂತರ ಅವರಲ್ಲಿ ಕ್ಷಮೆ ಕೇಳಿ ಬಂದುಬಿಟ್ಟೆ.
ಅದಾಗಿ ಎರಡು ಮೂರು ತಿಂಗಳಲ್ಲೇ ಮಾನಸಿಕ ಅಸ್ವಸ್ಥ ಹುಡುಗ ತೀರಿಹೋದನೆಂದೂ, ವೃದ್ಧ ತಂದೆ ಮತ್ತು ಅವರ ಮಗ ಕ್ರಿಯಾಕರ್ಮಾದಿಗಳನ್ನು ಮುಗಿಸಿದರೆಂದು ತಿಳಿದು ಕಸಿವಿಸಿಯಾಯ್ತು. ಈಗ ನಾವು ಆ ಕಿಟಕಿಯತ್ತ ನೋಡುತ್ತಿಲ್ಲ.
-ಅಮರದೀಪ್ ಪಿ. ಎಸ್.