Advertisement

ಕಾಲಗರ್ಭ ಸೇರಿದರೆ ‘ದುರುಗ ಮುರುಗಿ’ಯರು ?

06:31 PM Apr 13, 2021 | ಗಣೇಶ್ ಹಿರೇಮಠ |

ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಗಳಲ್ಲಿ ‘ದುರುಗ ಮುರುಗಿ’ಯರ ಆಗಮನವಾಗುತ್ತಿತ್ತು. ಆ ಹೆಣ್ಣು ಮಗಳು ಬಡಿಯುತ್ತಿದ್ದ ವಾದ್ಯದಿಂದ ಹೊಮ್ಮುತ್ತಿದ್ದ ‘ದರ್ರಬುರ್ರ’ಎನ್ನುವ ಶಬ್ಧ ನಮ್ಮ ಕಿವಿಗೆ ಬೀಳುವುದಷ್ಟೆ ತಡ ನಾವು ಎಲ್ಲೆ ಇದ್ದರೂ ಅವರ ಎದುರು ಹಾಜರಾಗುತ್ತಿದ್ದೇವು.

Advertisement

ತಲೆಮೇಲೆ ಮುರಗಮ್ಮನ ಮೂರ್ತಿಯನ್ನು ಹೊತ್ತು ಡೋಲಿನಾಕಾರದ ವಾದ್ಯವನ್ನು ಭಾರಿಸುವ ಹೆಣ್ಣುಮಗಳು ‘ಮುರಗಮ್ಮ ಬಂದಾಳ್ರೆಯವ್ವಾ, ದಾನ ಮಾಡ್ರಿ’ ಎಂಬ ಧ್ವನಿಯೊಂದಿಗೆ ಮನೆ ಮನೆಗೆ ಸಾಗುತ್ತಿದ್ದಳು. ಜೊತೆಗೆ ಕೈಯಲ್ಲಿ ಬಾರಕೋಲು ಹಿಡಿದು ಅಬ್ಬರಿಸುವ ಪೋತರಾಜ ತನ್ನದೇ ಅವತಾರದಲ್ಲಿ ಚಾಟಿ ಬೀಸುತ್ತ ಎದುರಾದವರಲ್ಲಿ ಬೇಡುತ್ತ, ಕೆಲವೊಮ್ಮೆ ಆ ಬಾರಕೋಲಿನಿಂದ ತನ್ನ ಶರೀರವನ್ನು ದಂಡಿಸಿಕೊಂಡು ಭಿಕ್ಷೆ ಬೇಡುತ್ತಿದ್ದ.

ಹೀಗೆ ಹಳ್ಳಿ ಹಳ್ಳಿ ಅಲೆದು ಹೊಟ್ಟೆ ಹೊರೆದುಕೊಳ್ಳುವ ಅಲೆಮಾರಿ ಜನಾಂಗದವರೇ ದುರುಗ ಮುರುಗಿಯರು. ಕೆಲ ಕಡೆ ಇವರನ್ನು ಬುರ ಬುರ ಪೋಚಮ್ಮನವರೆಂದೂ, ಮುರಗಮ್ಮದವರೆಂದೂ ಸಹ ಕರೆಯುತ್ತಾರೆ. ವಿಶಿಷ್ಟ ಜನಪದ ಕಲೆ,ಮುರಗಮ್ಮನ ರೂಪದ ಈ ದೇವತೆ ಒಂದು ಕಡೆ ನೆಲೆ ನಿಲ್ಲುವವಳಲ್ಲ, ಊರೂರು ಸುತ್ತುವವಳು. ತಮ್ಮ ದೇವತೆಯನ್ನು ಪೆಟ್ಟಿಗೆಯಲ್ಲಿಟ್ಟು, ಅದನ್ನು ಹೊತ್ತ ಸ್ತ್ರೀ ‘ಉರುಮೆ’ ಅಥವಾ ‘ಅರೆ’ ವಾದ್ಯದ ಬಾರಿಸುತ್ತಿದ್ದಳು. ಆ ಬಡಿತಕ್ಕೆ ತಕ್ಕಂತೆ ಅವಳೊಂದಿಗಿನ ಪೋತರಾಜನ ವೇಷದ ಪುರುಷ ಕುಣಿಯುತ್ತ ಗತ್ತಿನಿಂದ ಹೆಜ್ಜೆ ಹಾಕುತ್ತ ಚಾವಟಿಯಿಂದ ತನ್ನ ಬರಿಮೈಗೆ ಹೊಡೆದುಕೊಳ್ಳುತ್ತಿದ್ದ. ಈ ದೃಶ್ಯ ನೋಡಲು ನಮಗೆ ಭಯವೆನ್ನಿಸುತ್ತಿದ್ದರು. ತದೇಕ ಚಿತ್ತದಿಂದ ಕಣ್ಣು ತುಂಬಿಕೊಳ್ಳುತ್ತಿದ್ದೇವು.

ಅರ್ಧಗಂಟೆಯ ವರೆಗೆ ಬೀದಿಯಲ್ಲಿ ವಾದ್ಯ ಬಾರಿಸಿ, ಚಾಟಿಯಿಂದ ಹೊಡೆದುಕೊಳ್ಳುತ್ತಿದ್ದ ದುರಗ ಮುರಗಿಯರಿಗೆ ನಮ್ಮೂರಿನ ಜನ ಭಕ್ತಿಯಿಂದ ಮೊರದಲ್ಲಿ ದವಸ ಧಾನ್ಯಗಳು, ಜೋಳ, ಕಾಳುಗಳನ್ನು ಅರ್ಪಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಮೊರಕ್ಕೆ ಭಂಡಾರ ಇಟ್ಟು ಮರಳಿ ಕೊಡುತ್ತಿದ್ದರು. ಆ ಭಂಡಾರವನ್ನು ನಂತರ ಮನೆ ಮಕ್ಕಳಿಗೆಲ್ಲಾ ಹಚ್ಚುವ ಪರಂಪರೆಯಿತ್ತು.

ಮುರಗಮ್ಮ ಆಗಾಗ ಊರಿಗೆ, ಮನೆಗೆ ಬಂದು ಹೋಗುವುದರಿಂದ ರೋಗ ರುಜಿನಗಳು ದೂರವಾಗುತ್ತವೆ ಎಂದು ಜನ ನಂಬುತ್ತಿದ್ದರು. ಆದರೆ, ಇಂದು ‘ದುರಗ ಮುರುಗಿ’ಯರ ಆಗಮನ ಇಲ್ಲವಾಗಿದೆ. ಆ ಹೆಣ್ಣು ಮಗಳ ವಾದ್ಯದಿಂದ ಕೇಳಿ ಬರುತ್ತಿದ್ದ ‘ದರ್ರಬುರ್ರ’ ಎಂಬ ಶಬ್ದ ಕೇಳಿ ವರ್ಷಗಳೇ ಗತಿಸಿವೆ. ಇಂದು ವೈಜ್ಞಾನಿಕತೆ ಎನ್ನುವುದು ಪ್ರತಿ ಹಳ್ಳಿಗಳಲ್ಲಿಯೂ ಆವರಿಸಿಕೊಂಡಿದೆ. ಕೆಲವೊಂದು ಆಚರಣೆಗಳು ಇತಿಹಾಸದ ಪುಟ ಸೇರುತ್ತಿವೆ ಎಂಬುದಕ್ಕೆ ದುರುಗು ಮುರಗಿಯರು ಮರೆಯಾಗಿರುವುದೇ ಸಾಕ್ಷಿ ಎಂದು ಹೇಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next