Advertisement
ಧಾರವಾಡ: ಗೋವುಗಳು ಮೇಯಲು ಇದ್ದ ಗೋಮಾಳ ನುಂಗಣ್ಣರ ಪಾಲಾಗಿವೆ. ಹೊಲದ ಬದುಗಳೆಲ್ಲವೂ ಸಾಗುವಳಿಯಾಗಿ ದೇಶಿ ಹುಲ್ಲು ಸಿಕ್ಕದಾಗಿದೆ, ಕೆರೆಕುಂಟೆಯ ಮೂಲೆಗಳು ಅತಿಕ್ರಮಣಕ್ಕೆ ಒಳಗಾಗಿವೆ. ಸದ್ಯಕ್ಕೆ ಸರ್ಕಾರಿ ರಸ್ತೆಗಳೇ ಪಶುಪಾಲನೆಗೆ ನೆಲೆ. ಗೋಮಾಳ ಮಾಯಾ ಜಾನುವಾರು ಗಯಾ, ಗಾಂವಠಾಣಾ ಗುಳುಂ.
Related Articles
Advertisement
2013ರಲ್ಲಿ ಜಿಲ್ಲೆಯಲ್ಲಿ ಅತಿಕ್ರಮಣಕ್ಕೆ ಒಳಗಾಗಿದ್ದ 116 ಎಕರೆಯಷ್ಟು ಭೂಮಿಯನ್ನು ಜಿಲ್ಲಾಡಳಿತ ಮರಳಿ ಪಡೆದುಕೊಂಡಿತು. ಆದರೆ ಇದೀಗ ಮತ್ತದೇ ಜಮೀನು ಅತಿಕ್ರಮಣಕ್ಕೆ ಒಳಗಾಗಿದೆ. ಭೂಮಾಪನ ಕಚೇರಿಯಲ್ಲಿಯಲ್ಲಿನ ಹಳೆಯ ನಕಾಶಗಳೇ ಮಾಯವಾಗಿದ್ದರೆ, ಕೆಲವು ತಿದ್ದುಪಡಿಯಾಗಿವೆ. ಗೋಮಾಳದ ಗಡಿಗುರುತಿನ ಕಲ್ಲುಗಳೇ ಕಿತ್ತು ಮನೆಗಳ ಅಡಿಪಾಯ ಸೇರಿಕೊಂಡಿವೆ.
ಬಾರಿ ದನಗಳೇ ಇಲ್ಲ: ಪ್ರತಿ ಕೃಷಿ ಕುಟುಂಬದಲ್ಲಿ ಒಂದಿಷ್ಟು ಕಾಗಾರ (ಆಕಳು, ಎಮ್ಮೆ, ಕರು)ದನಗಳು ಇರುತ್ತಿದ್ದವು. ಕೃಷಿ ಚಟುವಟಿಕೆಗೆ ಎತ್ತು, ಹೋರಿಗಳನ್ನು ಹೊರತುಪಡಿಸಿ ಹೈನುಗಾರಿಕೆಗೆ ಬಳಕೆಯಾಗುತ್ತಿದ್ದ ಮತ್ತು ಉತ್ತಮ ಗೊಬ್ಬರ ಸಂಗ್ರಹಣೆಗೆ ಬೆನ್ನೆಲುಬಾಗಿದ್ದ ದೇಶಿ ಆಕಳು, ದೇಶಿ ಎಮ್ಮೆ ತಳಿಗಳನ್ನು ಕೃಷಿ ಕುಟುಂಬಗಳೇ ಪೋಷಣೆ ಮಾಡಿಕೊಂಡು ಬಂದಿದ್ದವು. ಇಂತಿಪ್ಪ ದನಗಳನ್ನು ಬಾರಿ ಅಥವಾ ಕಾಗಾರ ದನಗಳು ಎಂದು ಕರೆಯಲಾಗುತ್ತಿತ್ತು. ಒಂದು ಗ್ರಾಮದಲ್ಲಿ ಕನಿಷ್ಟ ಇಂತಹ 200 ದನಗಳು ಇರುತ್ತಿದ್ದವು. ಇವುಗಳನ್ನು ಒಬ್ಬ ವ್ಯಕ್ತಿ ಗುಡ್ಡ, ಗೋಮಾಳ, ಅಡವಿಗೆ ಮೇಯಲು ಹೊಡೆದುಕೊಂಡು ಹೋಗುತ್ತಿದ್ದ. ಆತನಿಗೆ ತಿಂಗಳಿಗೆ ಪ್ರತಿ ಹಸುವಿಗೆ ಇಂತಿಷ್ಟು ದರ ನಿಗದಿ ಮಾಡಲಾಗಿರುತ್ತಿತ್ತು. ಆದರೆ ಇದೀಗ ಯಾರ ಮನೆಯಲ್ಲೂ ದನಗಳು ಈ ಪ್ರಮಾಣದಲ್ಲಿ ಉಳಿದಿಲ್ಲ. ಇರುವ ದನಗಳನ್ನು ಮೇಯಿಸಲು ಗೋಮಾಳದ ಕೊರತೆ ಎದುರಾಗಿದ್ದರಿಂದ ಎಲ್ಲರೂ ಗೋಸಂಪತ್ತಿನಿಂದ ದೂರಾಗುತ್ತಿದ್ದಾರೆ.
ಅರೆಮಲೆನಾಡು ಪ್ರದೇಶವೆಂದೇ ಬಿಂಬಿತವಾಗಿರುವ ಧಾರವಾಡ, ಕಲಘಟಗಿ, ಅಳ್ನಾವರ ತಾಲೂಕಿನ ಪ್ರತಿ ಹಳ್ಳಿಗಳಲ್ಲಿಯೂ ಸಾವಿರ ಸಾವಿರ ಸಂಖ್ಯೆಯಲ್ಲಿ ಪಶು ಸಂಪತ್ತು ಇತ್ತು. ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಆಯಾ ಗ್ರಾಮಾಠಾಣಾ ವ್ಯಾಪ್ತಿಯಲ್ಲಿನ ಗೋಮಾಳ, ಗಾಂವಠಾಣಾ ಭೂಮಿ. ಆದರೆ ಇದೀಗ ಈ ಭೂಮಿ ಅತಿಕ್ರಮಣಕ್ಕೆ ಒಳಗಾಗಿದ್ದು, ಜನರಿಗೆ ಹೈನುಗಾರಿಕೆ ಕೇವಲ ಹಟ್ಟಿಯಲ್ಲಿಯೇ ದನಕಟ್ಟಿ ಮಾಡುವುದಕ್ಕೆ ಸೀಮಿತವಾಗುವಂತೆ ಮಾಡಿದೆ.