ವರದಿ: ಬಸವರಾಜ ಹೊಂಗಲ್
ಧಾರವಾಡ: ಜಾಮೀನು ಸಿಕ್ಕರೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಕಾಲಿಡದ ದಿಗ್ಬಂಧನ, ಜಿಲ್ಲೆಯ ಹೊರಗಿದ್ದೆ ಕಾರ್ಪೊರೇಶನ್ ಚುನಾವಣೆಯಲ್ಲಿ ಕೈ ಪಡೆ ಗೆಲ್ಲಿಸುವ ಹುಮ್ಮಸ್ಸಿನಲ್ಲಿರುವ ವಿನಯ್. ಬಲಿಷ್ಠ ನಾಯಕನೇ ಇಲ್ಲದೆ ಕಂಗಾಲಾಗಿದ್ದ ಕೈ ಪಡೆಗೆ ಮರಳಿ ಬಂದ ಚೈತನ್ಯ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟು ಹಿನ್ನೆಡೆ ಮಾಡಲು ಸಜ್ಜಾಗಿರುವ ಬಿಜೆಪಿಯ ಹೊಸ ಲೆಕ್ಕಾಚಾರಗಳು. ಒಟ್ಟಾರೆ ವಿನಯ್ ಮಹಾನಗರ ಪಾಲಿಕೆ ಚುನಾವಣೆ ಸಮಯದಲ್ಲಿಯೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದು, ಮತ್ತೆ ಜಿಲ್ಲೆಯಲ್ಲಿ ಕೈ-ಕಮಲ ಪಡೆಯ ಮಧ್ಯೆ ಬಿರುಸಿನ ರಾಜಕೀಯ ಸೆಣಸಾಟಕ್ಕೆ ವೇದಿಕೆ ಸಜ್ಜಾದಂತೆ ತೋರುತ್ತಿದೆ.
ಯೋಗೀಶಗೌಡ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿ ಇದೀಗ ಜಾಮೀನು ಪಡೆದಿರುವ ವಿನಯ್ ಕುಲಕರ್ಣಿ ರಾಜಕೀಯ ನಡೆ ಮತ್ತು ಮುಂದಿನ ಹೆಜ್ಜೆ ಕುರಿತು ಇದೀಗ ಎಲ್ಲರಿಗೂ ತೀವ್ರ ಕುತೂಹಲವಿದೆ. ಕಾಂಗ್ರೆಸ್ ಅವರನ್ನು ಹೇಗೆ ನಡೆಸಿಕೊಳ್ಳಬಹುದು? ಡಿಕೆಶಿಯಂತೆ ವಿನಯ್ ಗೂ ಸ್ಥಾನಮಾನ ನೀಡುವುದೇ? ವಿನಯ್ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವರೇ? ಎಂಬಿತ್ಯಾದಿ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಜಾಮೀನು ಸಿಕ್ಕ ಬೆನ್ನಲ್ಲೇ ವಿನಯ್ ಕುಟುಂಬಸ್ಥರು ವಿನಯ್ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳುವ ಮುನ್ಸೂಚನೆ ನೀಡಿದ್ದು, ಜಿಲ್ಲಾ ಕಾಂಗ್ರೆಸ್‌ಗೆ ಅದರಲ್ಲೂ ಯುವಕರಿಗೆ ಮತ್ತಷ್ಟು ಉತ್ಸಾಹ ಬಂದಂತಾಗಿದೆ.
ವಿನಯ್ ಧಾರವಾಡ ಜಿಲ್ಲೆಗೆ ಕಾಲಿಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿಲ್ಲವಾದರೂ, ಜಿಲ್ಲೆಯ ಹೊರಗಡೆಯಿಂದಲೇ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಅಖಾಡಕ್ಕೂ ತೆರೆಯಲ್ಲಿಯೇ ವಿನಯ್ ಎಂಟ್ರಿ ಕೊಟ್ಟೇ ಕೊಡುತ್ತಾರೆ ಎನ್ನುವ ಮಾತುಗಳು ಕಾಂಗ್ರೆಸ್ ಪಾಳೆಯದಲ್ಲಿ ಕೇಳಿಬರುತ್ತಿವೆ.
ಅದೇ ಕಥೆ ಮತ್ತೆ ಕೇಳಬಹುದೇ?: ಯೋಗೀಶಗೌಡ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವುದಕ್ಕೆ ಕಾರಣವಾಗಿದ್ದ ಬಿಜೆಪಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಕೊತ ಕೊತ ಕುದಿಯುವಷ್ಟರ ಮೆಟ್ಟಿಗೆ ಆ ಪಕ್ಷವನ್ನು ತೆರೆಗೆ ಸರಿಸಿಯಾಗಿದೆ. ಪ್ರತಿ ವಾರ್ಡ್‌ವಾರು ಸಂಘಟನಾತ್ಮಕವಾಗಿ ಕೆಲಸ ಮಾಡಿರುವ ಬಿಜೆಪಿ ಅಜೆಂಡಾ-60 ಟಾರ್ಗೆಟ್ ನೊಂದಿಗೆ ಮುನ್ನಡೆಯುತ್ತಿದೆ. ಸದ್ಯಕ್ಕೆ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿ ಮತ ಸೆಳೆಯುವ ಧಾವಂತದಲ್ಲಿದ್ದರೆ, ಕೊರೊನಾ ಎಡವಟ್ಟು, ಬೆಲೆ ಏರಿಕೆ ಮತ್ತು ಸರ್ಕಾರದ ಎಡವಟ್ಟುಗಳನ್ನೇ ಬಂಡವಾಳ ಮಾಡಿಕೊಂಡು ಕೈ ಪಡೆ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದೆ.
ಕಳೆದ ವಿಧಾನಸಭೆ ಮತ್ತು ಲೋಕಸಭೆ ಎರಡು ಚುನಾವಣೆಯಲ್ಲಿ ಮಾಜಿ ಸಚಿವ ವಿನಯ್ ಸೋಲಿಸಲು ಬಿಜೆಪಿ ಯೋಗೀಶಗೌಡ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಅವರನ್ನು ಸೋಲಿಸಿತ್ತು. ಇದೀಗ ಮತ್ತೆ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಇದೇ ಪ್ರಕರಣವನ್ನು ಬಿಜೆಪಿ ಬಳಸಿಕೊಳ್ಳುವುದೇ? ಬಳಸಿಕೊಂಡರೆ ಮತ್ತದೇ ಹಳೆ ಕಥೆಯನ್ನು ಮತದಾರರು ಕೇಳಬಹುದೇ? ಎನ್ನುವ ಹತ್ತಾರು ಪ್ರಶ್ನೆಗಳು ಮೂಡುತ್ತಿವೆ. ಆದರೆ ಸಹಜವಾಗಿಯೇ ಲಿಂಗಾಯತ ಸಮುದಾಯದ ಭವಿಷ್ಯದ ನಾಯಕನನ್ನು ಜಿಲ್ಲೆಯ ಕೆಲ ರಾಜಕೀಯ ಮುಖಂಡರು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿದ್ದಾರೆ ಎನ್ನುವ ಮಾತುಗಳು ಗುಪ್ತಗಾಮಿನಿಯಾಗಿ ಓಡಾಡುತ್ತಿವೆ. ಜೈಲಿನಲ್ಲಿಟ್ಟು ವಿನಯ್‌ರನ್ನು ರಾಜಕೀಯವಾಗಿ ಹತ್ತಿಕ್ಕಲಾಯಿತು ಎನ್ನುವ ಅನುಕಂಪ ಕೂಡ ಅವರ ಸಮುದಾಯದ ಜನರಲ್ಲಿ ಬಂದಿರುವುದಂತೂ ಸತ್ಯ.