ನನ್ನ ಕಾಲೇಜಿನ ದಿನಗಳಲ್ಲಿ ಮುಖ್ಯವಾದ ಭಾಗವಾಗಿದ್ದು ಬಸ್ಸುಗಳು. ಬೆಳ್ಳಂಬೆಳಗೆ ಎದ್ದು ಬೈಂದೂರಿನ ಬಸ್‌ಸ್ಟಾಪ್‌ನಲ್ಲಿ ಬಸ್ಸಿಗಾಗಿ ಕಾಯುವುದು, ಕಾಲಿಡಲೂ ಜಾಗವಿರದ ಬಸ್ಸಿನ ಆ ಪುಟ್‌ಬೋರ್ಡ್‌ನಲ್ಲಿ ನಿಂತು ಪಯಣಿಸಿವುದು ನನ್ನ ದಿನಚರಿಯ ಒಂದು ಭಾಗವೇ ಆಗಿತ್ತು. ಆದರೆ ಆ ಒಂದು ದಿನ ಮಾತ್ರ ನನ್ನ ಬಾಳಿನ ನೆನಪುಗಳ ಗಣಿಯಲ್ಲಿ ಶಾಶ್ವತವಾಗಿ ಉಳಿದು ಬಿಟ್ಟಿದೆ.
ಅವತ್ತು ಸೋಮವಾರ. ಎಂದಿನಂತೆ ಬಸ್ಸು ಕಿಕ್ಕಿರಿದು ತುಂಬಿತ್ತು. ಪುಟ್ ಬೋರ್ಡಿನ ಮೇಲೆ ಕಾಲಿಟ್ಟು ನಿಂತಿದ್ದ ನನಗೆ ರೇಷ್ಮೆಯ ನವಿರಾದ ಎಳೆಗಳು ಮುಖವ ಸೋಕಿದಂಥ ಅನುಭವ. ತಿರುಗಿ ನೋಡಿದರೆ, ನನಗೆ ಕಿಟಕಿಗೆ ತಲೆಯಾನಿಸಿ ಕುಳಿತಿದ್ದ ನಿನ್ನ ನೀಳ ಕೇಶರಾಶಿಯು ಕೋಮಲ ಎಳೆಗಳಂತೆ ಗಾಳಿಯಲಿ ನನ್ನ ಮುಖ ಸೋಕುತ್ತಿದ್ದವು. ನಿನ್ನ ಕೇಶರಾಶಿಯ ಘಮಲು ನನ್ನ ಮನವನ್ನೆಲ್ಲ ಆವರಿಸಿದಂತಿತ್ತು. ಆ ಕ್ಷಣ ನೀ ಗಮನಿಸಿಯೋ- ಗಮನಿಸದೆಯೋ, ಕೇಶರಾಶಿಯ ನನ್ನಿಂದ ದೂರ ಸರಿಸಿದೆ.
ಆಗ ಕಂಡ ನಿನ್ನ ಕಿವಿಯಲ್ಲಿದ್ದ ಓಲೆಯ ಹೆಸರೇನು? ಅದರ ಹೆಸರು ಹೇಳಿದ್ದರೆ ಮುಂದೊಂದು ದಿನ ನನ್ನ ಕೈ ಹಿಡಿವ ಹುಡುಗಿಗೆ ಹುಡುಕಿಯಾದರೂ ತರುತ್ತಿದ್ದೆ. ಹಾಗೆಯೇ ಅಂದು ಧರಿಸಿದ್ದ ಮೂಗುತಿಯ ಅಂದವ ಹೊಗಳಲು ಅದ್ಯಾವ ಭಾಷೆಯ ಪದಗಳ ಎರವಲು ಪಡೆಯಲಿ ಹೇಳು? ಎಲ್ಲಾ ಶಬ್ದಕೋಶಗಳ ಪ್ರತಿ ಪದಗಳಿಗೆ ನಾನಾ ಅರ್ಥಗಳ ಹುಡುಕಿ ಬರೆದರೂ ಅದೂ ನಿನ್ನ ಆ ಸೌಂದರ್ಯವ ಹೊಗಳಲು ಸಾಕಾಗಲಾರದೇನೋ. ಬೆಳ್ಳಿಯ ಬಟ್ಟಲಲ್ಲಿ ಬೆಲೆ ಕಟ್ಟಲಾಗದ ವಜ್ರಗಳ ಪೋಣಿಸಿ, ಮುಂಜಾನೆಯ ಸೂರ್ಯನ ಹೊಂಬಿಸಿಲ ಕಿರಣಗಳಲ್ಲಿ ಇಟ್ಟಾಗ ಹೊರಬರುವ ಹೊಳಪನ್ನು ಯಾವ ಕವಿಯೂ ವರ್ಣಿಸಿರಲಾರ. ಯಾವ ಊರಿನ ಅರಸನ ಮಗಳ್ಳೋ, ಮಾಯಾನಗರಿಯಿಂದ ಇಳಿದು ಬಂದ ಮಾಂತ್ರಿಕಳ್ಳೋ ನೀನು ಅಂತ ಅನಿಸುತ್ತಿದೆ.
ನೀನು, ಅದ್ಯಾವ ಘಳಿಗೆಯಲ್ಲಿ ಬಸ್ಸಿನಿಂದಿಳಿದು ಹೋದೆಯೋ ತಿಳಿಯಲೇ ಇಲ್ಲ. ನಿನಗಾಗಿ ಪ್ರತಿದಿನ ಹುಡುಕುತ್ತಿದ್ದವು ನನ್ನ ಕಂಗಳು. ಇದಾಗಿ, ವರ್ಷಗಳೇ ಕಳೆಯುತ್ತಾ ಬಂದಿದೆ. ನೀ ಮತ್ತೆ ಯಾವತ್ತೂ ಕಾಣಿಸಲೇ ಇಲ್ಲ. ಆ ಕುಂದೇಶ್ವರನ ಪಾದದಾಣೆ ಇನ್ನೊಮ್ಮೆ ನೀ ಕಾಣಿಸಿದರೆ ತಪ್ಪದೇ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತೇನೆ. ಇನ್ನೂ ನನ್ನ ಕಾಯಿಸಿ ಕಾಡದಿರು ಹುಡುಗಿ…
– ಗಣೇಶ್ ಆರ್. ಜಿ., ಶಿವಮೊಗ್ಗ