Advertisement

ಪಶ್ಚಿಮಘಟ್ಟ ಒಡಲಿನ ನೋವು ಅರಿತಿದ್ದ ಬಹುಗುಣರು

11:24 PM May 22, 2021 | Team Udayavani |

ವರದಿ : ರಾಘವೇಂದ್ರ ಬೆಟ್ಟಕೊಪ್ಪ

Advertisement

 ಶಿರಸಿ: ಇಡೀ ದೇಶದಲ್ಲೇ ಒಂದು ಜನಾಂದೋಲನ ನಡೆದು ಸರಕಾರದ ಮಹತ್ವಾಕಾಂಕ್ಷಿ ಬೇಡ್ತಿ ಅಣೆಕಟ್ಟು ಯೋಜನೆಯನ್ನು ಬದಿಗೆ ಸರಿಸಿದ್ದು ಇತಿಹಾಸ.

ಅಂದಿನ ಗಂಡು ಶಾಸಕಿ ಎಂದೇ ಕರೆಸಿaಕೊಂಡ ಅನಸೂಯಾ ಶರ್ಮಾ, ಸ್ವರ್ಣವಲ್ಲೀಯ ಬ್ರಹ್ಮಿಭೂತ ಸರ್ವಜ್ಞೆಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಾಗೂ ನಂತರದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ನೇತೃತ್ವದ ಬೇಡ್ತಿ ಅಣೆಕಟ್ಟು ವಿರುದ್ಧದ ಹೋರಾಟ ನಡೆದಿದ್ದು ಪರಿಸರದ ಚಳವಳಿಗೆ ಹೊಸ ಆಯಾಮ ಕೊಟ್ಟಿತ್ತು. ಈ ಆಂದೋಲನಕ್ಕೆ ಮೂಲ ಪ್ರೇರಣೆ ಆದವರು ಸುಂದರಲಾಲ್‌ ಬಹುಗುಣರು.

ಎಲ್ಲಿನ ಉತ್ತರ ಭಾರತ, ಎಲ್ಲಿಯ ಉತ್ತರ ಕನ್ನಡ. ಹಿಮಾಲದಲ್ಲಿ ಪರಿಸರ ಉಳಿಸಲು ಕಂಕಣ ತೊಟ್ಟಿದ್ದ ಸುಂದಲಾಲ್‌ ಬಹುಗುಣರು ಮಲೆನಾಡಿನ ಶಿರಸಿಗೆ ಪ್ರಥಮ ಬಾರಿಗೆ ಬಂದಿದ್ದು 1979ರಲ್ಲಿ. ಇಲ್ಲಿನ ನದಿಯೊಂದಕ್ಕೆ ಅಣೆಕಟ್ಟು ಕಟ್ಟುವುದರಿಂದ ಸಾವಿರಾರು ಎಕರೆ ಅರಣ್ಯ ಮುಳಗುತ್ತದೆ, ತಪ್ಪಿಸಬೇಕು ಎಂದು ಬಂದಿದ್ದರು.

ಶಿರಸಿ ಬಸ್‌ ನಿಲ್ದಾಣ ಪಕ್ಕದಲ್ಲಿದ್ದ ಸೆಂಟ್ರಲ್‌ ಲಾಡ್ಜ್ನಲ್ಲಿ ಉಳಿದು ಅಂದಿನ ಶಾಸಕಿ ಅನಸೂಯಾ ಶರ್ಮಾ ಅವರನ್ನು ಭೇಟಿ ಮಾಡಿ ನದಿ ಉಳಿಸುವಂತೆ, ಅರಣ್ಯ ಉಳಿಸುವಂತೆ ಮನವಿ ಮಾಡಿದ್ದರು. ಸರಕಾರ ಕೇಳದು ಎಂದರೆ ಹೋರಾಟ ಮಾಡುವಂತೆ ಒತ್ತಾಯ ಮಾಡಿದ್ದರು. ಅದೇ ಮುಂದೆ ಬೇಡ್ತಿ ಚಳವಳಿಗೆ ಕಾರಣವಾಯಿತು. ಬಹುಗುಣರು ಉತ್ತರ ಕನ್ನಡಕ್ಕೆ, ಶಿವಮೊಗ್ಗಕ್ಕೆ, ದಕ್ಷಿಣಕನ್ನಡಕ್ಕೆ ಪರಿಸರದ ಚಳವಳಿಗೆ, ಹೋರಾಟಕ್ಕೆ 25ಕ್ಕೂ ಅ ಧಿಕ ಸಲ ದೂರದ ಹಿಮಾಲಯದ ತಟದಿಂದ ಬರುತ್ತಿದ್ದರು.

Advertisement

ಚಿಪ್ಕೋ ಚಳವಳಿಯ ಮಾದರಿಯಲ್ಲೇ ಅಪ್ಪಿಕೋ ಚಳವಳಿಯನ್ನು ದಕ್ಷಿಣ ಭಾರತಕ್ಕೂ ಹಬ್ಬಿಸಿದವರು. 1983ರಲ್ಲಿ ಉತ್ತರ ಕನ್ನಡದ ಶಿರಸಿ ಬಾಳೆಗದ್ದೆಯಲ್ಲಿ ಮರವಪ್ಪಿ ಮರವುಳಿಸಿ ಅಭಿಯಾನಕ್ಕೆ ಪ್ರೇರಣೆ ಕೊಟ್ಟವರು. ಅಪ್ಪಿಕೋ ಚಳವಳಿಯ ಜಾಗೃತಿಗಾಗಿ ಅರಣ್ಯ ಉಳಿಸಲು ಅದೇ ವರ್ಷ¨ ಡಿಸೆಂಬರ್‌ನಲ್ಲಿ ಸಾಲಕಣಿಯಿಂದ ಕುದ್ರಗೋಡ, ಕಳಾಸೆ ಮೇಲೆ ಮತ್ತಿಘಟ್ಟಕ್ಕೆ ಪಾದಯಾತ್ರೆ ಮಾಡಲು ಬಂದರು. ಯಾರಧ್ದೋ ಮನೆಯಲ್ಲಿ ತಂಗಿದರು. ಪರಿಸರ ಉಳಿಸಲು ನಡೆದರು. ಜಾಗೃತಿ ಮೂಡಿಸಲು ಕರಪತ್ರ ಹಂಚಿದರು. ಸ್ವತಃ ಅರಣ್ಯ ಇಲಾಖೆಯು ಜಾತುವಾರು ಮರ ಕಡಿದು ಏಕಜಾತಿ ನಡುತೋಪು ಸೃಷ್ಟಿಸುವ ಅಧ್ವಾನದ ವಿರುದ್ಧವೂ ಧ್ವನಿ ಎತ್ತಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನೂ ಭೇಟಿ ಮಾಡಿ ನೀತಿಯಲ್ಲೇ ಬದಲಾವಣೆ ಮಾಡಿಸಿದರು.

2008ರಲ್ಲಿ ಅಪ್ಪಿಕೋ ಚಳವಳಿಯ ರಜತ ಮಹೋತ್ಸವಕ್ಕೆ ಸಾಲಕಣಿಗೆ ಬಂದಿದ್ದರು. ಅಲ್ಲಿಂದಲೇ ಅಪ್ಪಿಕೋ ಚಳವಳಿ ನಡೆದ ಬಾಳೇಗದ್ದೆಯ ಬಿಳಗಲ್‌ ಅರಣ್ಯಕ್ಕೂ ಭೇಟಿ ನೀಡಿದ್ದರು. ಪಶ್ಚಿಮಘಟ್ಟದ ಉಳಿವಿಗಾಗಿ ನಡೆದ ವಿಚಾರ ಸಂಕಿರಣದಲ್ಲೂ ಪಾಲ್ಗೊಂಡರು. ಪಶ್ಚಿಮಘಟ್ಟ ಉಳಿಸಿ ಅಭಿಯಾನದಲ್ಲೂ ಭಾಗಿಯಾದರು. 2005ರಲ್ಲಿ ಅಪ್ಪಿಕೋ ಖ್ಯಾತಿಯ ಪಾಂಡುರಂಗ ಹೆಗಡೆ ಹಾಗೂ ಅವರ ಬಳಗ ನಡೆಸಿದ ಶರಾವತಿ ಉಳಿಸಿ, ಕಾಳೀ ಬಚಾವೋ ಆಂದೋಲನದಲ್ಲೂ ಭಾಗಿಯಾದರು. ಶರಾವತಿ ಉಳಿಸಿ ಆಂದೋಲನದಲ್ಲಿ ಶರಾವತಿಯ ತವರು ಅಂಬುತೀರ್ಥಕ್ಕೂ, ಸಂಗಮದ ಹೊನ್ನಾವರಕ್ಕೂ ಬಂದಿದ್ದರು. ನದಿಯ ಹರಿವು ಉಳಿಸಿ, ಅರಣ್ಯ ಉಳಿಸಿ ಅವರ ಮಂತ್ರವಾಗಿತ್ತು.

ಬಹುಗುಣರು ಉತ್ತರ ಕನ್ನಡದ ಜೋಯಿಡಾ, ದಾಂಡೇಲಿ ಅರಣ್ಯ ಭಾಗದಲ್ಲೂ ಓಡಾಡಿದ ಹೆಜ್ಜೆ ಗುರುತು ಇದೆ. ಶಿರಸಿಯ ಪಾಂಡುರಂಗ ಹೆಗಡೆ ಬಹುಗುಣರನ್ನು ಪರಿಸರ ಚಳವಳಿ ಗುರುವಾಗಿ ಕಂಡಿದ್ದರು. ಹೊನ್ನಾವರ ಸ್ನೇಹಕುಂಜದ ಕುಸುಮಕ್ಕ, ಸ್ವರ್ಣವಲ್ಲೀ ಮಹಾಸ್ವಾಮೀಜಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸೇರಿದಂತೆ ಅನೇಕರ ಒಡನಾಟ ಇತ್ತು. ಸುಂದರಲಾಲ್‌ ಉತ್ತರ ಭಾರತದವಾಗಿದ್ದರೂ ಉತ್ತರ ಕನ್ನಡದಂತಹ ಮಲೆನಾಡಿನ, ಪಶ್ಚಿಮಘಟ್ಟದ ಜ್ವಲಂತ ಪರಿಸರದ ಸಮಸ್ಯೆಗೆ ಗಾಂಧೀ ಜಿ ಅವರು ಅನುಸರಿಸಿದ ಅಹಿಂಸಾತ್ಮಕ ಆಂದೋಲನದ ಮೂಲಕ ಉತ್ತರ ಕಂಡುಕೊಳ್ಳಲು ಹೇಳಿದವರು. ಅವರು ಇಲ್ಲ ಎಂದರೆ ಉತ್ತರ ಕನ್ನಡದ, ಪಶ್ಚಿಮ ಘಟ್ಟದ, ಮಲೆನಾಡಿಗೆ ಒಬ್ಬ ಪರಿಸರ ಕಾರ್ಯಕರ್ತರು, ಪ್ರೇರಣೆ ಕೊಡುವವರು ಕಾಣೆಯಾದಂತೆ.

Advertisement

Udayavani is now on Telegram. Click here to join our channel and stay updated with the latest news.

Next