ಲಕ್ನೋ : ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ನೂತನ ಬಿಜೆಪಿ ಸರಕಾರದ ಪ್ರಪ್ರಥಮ ವಿಧಾನಸಭಾ ಅಧಿವೇಶನ ಇಂದು ಆರಂಭಗೊಂಡಿದ್ದು ವಿಪಕ್ಷದವರಿಂದ ವಿಪರೀತ ಗದ್ದಲ ಹಾಗೂ ಪೇಪರ್‌ಬಾಲ್ ಎಸೆತಕ್ಕೆ ಕಲಾಪವು ಸಾಕ್ಷಿಯಾಯಿತು.
ಸರಕಾರವು ಸಿದ್ಧಪಡಿಸಿದ್ದ ರಾಜ್ಯದ ನೂತನ ಸರಕಾರದ ಸಾಧನೆಯನ್ನು ಒಳಗೊಂಡ ಪಠ್ಯವನ್ನು ರಾಜ್ಯಪಾಲ ರಾಮ ನಾಯಕ್ ಉಭಯ ಸದನಗಳ ಜಂಟಿ ಅಧಿವೇಶನದಲ್ಲಿ ಓದಿ ಹೇಳುವ ಸಂದರ್ಭದಲ್ಲಿ ಎಸ್‌ಪಿ ಹಾಗೂ ಬಿಎಸ್‌ಪಿ ಪಕ್ಷಗಳು “ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗಡೆತ್ತಿದೆ’ ಎಂದು ಆರೋಪಿಸಿ ಗದ್ದಲಕ್ಕೆ ಮುಂದಾದವು.
ರಾಜ್ಯ ಸರಕಾರವು ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಕಲಾಪದ ನೇರ ಪ್ರಸಾರಕ್ಕೆ ದೂರದರ್ಶನದ ಮೂಲಕ ವ್ಯವಸ್ಥೆ ಮಾಡಿದೆ.
ವಿಪಕ್ಷೀಯರ ದುರ್ವರ್ತನೆಯನ್ನು ನೋಡಿ ಕ್ರುದ್ಧರಾದ ರಾಜ್ಯಪಾಲರು “ಇಡಿಯ ಉತ್ತರ ಪ್ರದೇಶದ ಜನರು ನಿಮ್ಮ ಈ ವರ್ತನೆಯನ್ನು ಟಿವಿಯಲ್ಲಿ ನೋಡುತ್ತಿದ್ದಾರೆ ಎಂಬುದನ್ನು ಮರೆಯಬೇಡಿ’ ಎಂದು ಗುಡುಗಿದರೂ ವಿಪಕ್ಷೀಯರ ದುಂಡಾವರ್ತಿ ನಿಲ್ಲಲಿಲ್ಲ. ವಿಪಕ್ಷೀಯರು ಪೋಡಿಯಂನತ ಪೇಪರ್ ಚೆಂಡುಗಳನ್ನು ಎಸೆಯುತ್ತಲೇ ಇದ್ದರು.
ರಾಜ್ಯಪಾಲರು ಭಾಷಣ ಮಾಡುವಾಗ ಅವರ ಆಚೆ-ಈಚೆ ಸ್ಪೀಕರ್ ಹೃದಯ ನಾರಾಯಣ ದೀಕ್ಷಿತ್ ಹಾಗೂ ವಿಧಾನ ಪರಿಷತ್ ಅಧ್ಯಕ್ಷ ರಮೇಶ್ ಯಾದವ್ ನಿಂತಿದ್ದು ವಿಪಕ್ಷೀಯರ ದುರ್ವರ್ತನೆಗೆ ಮೂಕ ಸಾಕ್ಷಿಯಾದರು.