Advertisement

ಗೋಳಿತ್ತೂಟ್ಟು : ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಮೀನಮೇಷ

08:00 AM Aug 03, 2017 | |

ನೆಲ್ಯಾಡಿ : ಗೋಳಿತ್ತೂಟ್ಟು ಹೆದ್ದಾರಿಯಿಂದ ಕೊಕ್ಕಡವನ್ನು ಸಂಪರ್ಕಿ ಸುವ ಉಪ್ಪಾರುಪಳಿಕೆ ರಸ್ತೆಯಲ್ಲಿ ರಸ್ತೆ ಅಂಚಿನಲ್ಲಿ ಗುಗ್ಗುಳ ಧೂಪದ ಮರಗಳು ಅಪಾಯಕಾರಿ ಸ್ಥಿತಿಯಲ್ಲಿವೆ.

Advertisement

ವಾಹನ ಸವಾರರು ಈ ಮಾರ್ಗದಲ್ಲಿ ಪ್ರತಿ ಬಾರಿಯೂ ಸಾಗುವಾಗ ಕೊಂಚ ಎಚ್ಚರವಹಿಸಲೇಬೇಕು. ಯಾಕೆಂದರೆ ಯಾವುದೇ ಕ್ಷಣದಲ್ಲಿ ಅವುಗಳು ಬೀಳು ವಂತಿವೆ.  ಗೋಳಿತ್ತೂಟ್ಟು-ಉಪ್ಪಾರುಪಳಿಕೆ ರಸ್ತೆಯು ಹೆದ್ದಾರಿಯಿಂದ ಕೊಕ್ಕಡ ಹಾಗೂ ಧರ್ಮಸ್ಥಳವನ್ನು ಸಂಪರ್ಕಿಸುವ ಅತೀ ಹತ್ತಿರದ ರಸ್ತೆ. ಅರಣ್ಯಪ್ರದೇಶದ ಮಧ್ಯೆ ರಸ್ತೆಯು ಹಾದು ಹೋಗಿದ್ದು, ಈ ಪ್ರದೇಶದಲ್ಲಿ ನೂರಾರು ಗುಗ್ಗುಳ ಧೂಪದ ಮರಗಳಿವೆ. 

ಅರಣ್ಯ ಇಲಾಖೆಗೆ ಲಕ್ಷಾಂತರ ರೂ. ಆದಾಯವನ್ನು ಈ ಮರಗಳು ತಂದು ಕೊಟ್ಟಿವೆ. ಆದರೆ, ಧೂಪವನ್ನು ಸಂಗ ಹಿಸಲು ಕೆತ್ತಲ್ಪಟ್ಟ ಕಾರಣದಿಂದ ಇವುಗಳೀಗ ರಸ್ತೆಯ ಎರಡೂ ಬದಿ ಯಲ್ಲೂ ಧರೆಗೆ ಉರುಳಲು ಕ್ಷಣ ಗಣನೆ ಮಾಡುತ್ತಿವೆ.  ಈ ಹಿಂದೆಯೂ ಹಲವು ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಯಾದ ಉದಾಹರಣೆ ಇದೆ. ಅವುಗಳು ಬೀಳುವ ಹೊತ್ತಿನಲ್ಲಿ ಅದೃಷ್ಟವಶಾತ್‌ ವಾಹನ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆಗಳೂ ಇವೆ. 

ರಸ್ತೆಯ ಎರಡೂ ಬದಿಯಲ್ಲಿ ಇವು ಗಳಿದ್ದು, ಧೂಪಕ್ಕಾಗಿ ಮರದ ಕಾಂಡವನ್ನು ಕೆತ್ತಲಾಗಿದೆ. ಇದರಿಂದ ಇವುಗಳ ಕಾಂಡ ಟೊಳ್ಳಾಗಿದ್ದು, ಕೆಳಗೆ ಬೀಳುವಂತಿವೆ. ಈಗಾಗಲೇ ನೆಲಕ್ಕುರುಳಿದ ಮರಗಳು ಇನ್ನೂ ರಸ್ತೆಯ ಅಂಚಿನಲ್ಲೇ ಬಿದ್ದಿವೆ. ಅರಣ್ಯ ಇಲಾಖೆ ಇನ್ನೂ ತೆರವುಗೊಳಿಸಿಲ್ಲ. ಇದರಿಂದಲೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. 

ಯಾತ್ರಿಗಳು ಹೆಚ್ಚಳ
ಉಪ್ಪಿನಂಗಡಿಯಿಂದ ಕೊಕ್ಕಡವನ್ನು ಸಂಪರ್ಕಿಸುವ ಅತೀ ಹತ್ತಿರದ ಸಂಪರ್ಕ ರಸ್ತೆ ಇದು. ಹಾಗಾಗಿ ಸುಬ್ರಹ್ಮಣ್ಯ ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವ ಯಾತ್ರಾರ್ಥಿಗಳ ವಾಹನಗಳು ಹೆಚ್ಚಾಗಿ ಇದೇ ರಸ್ತೆ ಬಳಸುತ್ತವೆ. 

Advertisement

ವಾಹನ ದಟ್ಟನೆ ಹೆಚ್ಚು. ಒಂದುವೇಳೆ ಯಾವು ದಾದರೂ ವಾಹನಗಳ ಮೇಲೆ ಬಿದ್ದರೆ ಜೀವಹಾನಿ ತಪ್ಪಿದ್ದಲ್ಲ. ಆದ ಕಾರಣ ಮುಂಜಾಗ್ರತಾ ಕ್ರಮವಾಗಿ ಇವುಗಳನ್ನು ತೆರವುಗೊಳಿಸಬೇಕೆಂಬುದು ಸ್ಥಳೀಯರ ಆಗ್ರಹ.

ಅರಣ್ಯ ಇಲಾಖೆಯ ನಿರ್ಲಕ್ಷ್ಯ
ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಮಾಡಿ ದರೂ ಪ್ರಯೋಜನವಾಗಿಲ್ಲ. ಕೆಲವು ವಾರಗಳ ಹಿಂದೆ ಕೇವಲ 4 ಮರಗಳನ್ನು ಕಡಿದು ಹಾಕಿದ ಇಲಾಖೆ, ಉಳಿದವುಗಳನ್ನು ಹಾಗೇ ಬಿಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಕೂಡಲೇ ಉಳಿದ ಮರಗಳನ್ನೂ ತೆರವುಗೊಳಿಸಬೇಕು. ಅರಣ್ಯ ಇಲಾಖೆಯು ಗ್ರಾಮ ಪಂಚಾಯತ್‌ ಕಡೆಗೆ, ಗ್ರಾ.ಪಂ. ಅರಣ್ಯ ಇಲಾಖೆ ಕಡೆಗೆ ಬೆರಳು ತೋರಿಸುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಮರ ತೆರವುಗೊಳಿಸಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ, ಅರಣ್ಯ ಸಚಿವರಿಗೆ ಮನವಿ ನೀಡಿದ್ದರೂ ಮರಗಳ ತೆರವು ನಡೆದಿಲ್ಲ. ಈ ಭಾಗದಲ್ಲಿ  ವಾಹನ ಸಂಚಾರ ಹೆಚ್ಚಿದ್ದು, ಕೂಡಲೇ ಅರಣ್ಯ ಇಲಾಖೆ ರಸ್ತೆ ಬದಿಯಿಯ ಮರಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು. 
– ಯೋಗೀಶ್‌ ಗೌಡ ಆಲಂಬಿಲ, 
ಅಧ್ಯಕ್ಷರು, ಉಪ್ಪಾರುಪಳಿಕೆ ತ್ಯಾಜ್ಯ ನಿರ್ಮೂಲನ ಹೋರಾಟ ಸಮಿತಿ

ನಾಲ್ಕು ಮರಗಳನ್ನು ತೆರವುಗೊಳಿಸಲಾಗಿದೆ
ಧೂಪ ಮರಗಳನ್ನು ತೆರವುಗೊಳಿಸಲು ಸಾರ್ವಜನಿಕರಿಂದ ಮನ ಬಂದಿದ್ದು ಈಗಾಗಲೇ  ತುಂಬಾ ಅಪಾಯಕಾರಿಯಾದ ನಾಲ್ಕು ಮರಗಳನ್ನು ತೆರವು ಗೊಳಿಸಲಾಗಿದೆ. ಈ ರಸ್ತೆಯು ರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಮರಗಳನ್ನು ಕಡಿಯಲು ಗ್ರಾ.ಪಂ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅನುಮತಿ ಸಿಕ್ಕ ಕೂಡಲೇ ಮರಗಳನ್ನು ತೆರವುಗೊಳಿಸಲಾಗುವುದು.

– ಸಂಧ್ಯಾ, ವಲಯಾರಣ್ಯಾಧಿಕಾರಿ, ಅರಣ್ಯ ಇಲಾಖೆ, ಉಪ್ಪಿನಂಗಡಿ.

– ಗುರುಮೂರ್ತಿ ಎಸ್‌. ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next