Advertisement

ಬಸವನಹುಳಗಳ ಸಮಸ್ಯೆಗೆ ಕೊಕ್ಕರೆ ಪರಿಹಾರ!

02:40 PM Feb 28, 2017 | Harsha Rao |

ಆಲಂಕಾರು: ಕಳೆದ ಒಂಬತ್ತು ವರ್ಷಗಳಿಂದ ಆಲಂಕಾರು ಗ್ರಾಮದ ರೈತರ ಜೀವ ಹಿಂಡುತ್ತಿದ್ದ ಆಫ್ರಿಕನ್‌ ಬಸವನಹುಳಗಳ ನಿರ್ಮೂಲನಕ್ಕೆ ಪ್ರಕೃತಿಯೇ ವರದಾನ ನೀಡಿದೆ. ಬೃಹತ್‌ ಗಾತ್ರದ ಕೊಕ್ಕರೆಗಳೇ ಅವುಗಳಿಗೆ ಮಾರಕವಾಗಿದ್ದು ಗ್ರಾಮದ ಜನತೆಯಲ್ಲಿ ಸಂತಸವನ್ನು ಮೂಡಿಸಿದೆ. ಆಫ್ರಿಕನ್‌ ಬಸವನಹುಳಗಳ ಪಾಲಿಗೆ ಆಫ್ರಿಕನ್‌ ಮೂಲದ ಬೃಹತ್‌ ಗಾತ್ರದ ಕೊಕ್ಕರೆಗಳೇ ಶತ್ರುಗಳಾಗಿ ಪರಿಣಮಿಸಿವೆ. ಹಿಂಡು ಹಿಂಡಾಗಿ ಬರುವ ಈ ಕೊಕ್ಕರೆಗಳು ಬಸವನ ಹುಳುಗಳನ್ನು ಕುಕ್ಕಿ ತಿಂದು ಹೊಟ್ಟೆ ಹೊರೆದುಕೊಳ್ಳುತ್ತಿವೆ.

Advertisement

9 ವರ್ಷದ ಹಿಂದೆ ಮುಳ್ಳಂಕೊಚ್ಚಿಯ ತೋಟಗಳಲ್ಲಿ  ಒಂದೊಂದು ಕಾಣಿಸಿಕೊಂಡ ಆಫ್ರಿಕನ್‌ ಬಸವನಹುಳಗಳು ಬಳಿಕ ತೋಟವನ್ನು ಪೂರ್ತಿಯಾಗಿ ಆವರಿಸಿಕೊಂಡಿದ್ದವು. ಗ್ರಾಮದ ಸುಮಾರು 200ಕ್ಕೂ ಅಧಿಕ ರೈತ ಕುಟುಂಬಗಳ ಕೃಷಿ ಭೂಮಿಯನ್ನು ಇವು ಆಕ್ರಮಿಸಿಕೊಂಡಿದ್ದವು. ತರಕಾರಿ ಗಿಡ ಸೇರಿದಂತೆ ಅಡಿಕೆ, ತೆಂಗಿನ ಗರಿಗಳನ್ನು, ಅಡಿಕೆ ಹಿಂಗಾರವನ್ನು ತಿಂದು ಹಾಕುತ್ತಿದ್ದವು. ರೈತರು ಕೃಷಿಯನ್ನೇ ಕೈಬಿಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬರುವ ಹಂತದಲ್ಲಿದ್ದಾಗ ಪ್ರಕೃತಿ ಅವರ ಪಾಲಿಗೆ ಒಲಿದಿದೆ. ಆಲಂಕಾರು ಗ್ರಾಮದ ಮುಳ್ಳಂಕೊಚ್ಚಿ, ಬಡ್ಡಮೆ, ಪಜ್ಜಡ್ಕ, ಬುಡೇರಿಯಾ, ತೋಟಂತಿಲ ಪ್ರದೇಶಗಳಲ್ಲಿ ಬೆಳಗ್ಗಿನಿಂದಲೇ ಕೊಕ್ಕರೆಗಳು ಬಸವನಹುಳದ ಬೇಟೆ ಪ್ರಾರಂಭಿಸುತ್ತಿವೆ. ಗಟ್ಟಿ ಚಿಪ್ಪಿನ ಹುಳಗಳನ್ನು ತಮ್ಮ ಕೊಕ್ಕಿನಲ್ಲಿಯೇ ಜಜ್ಜಿ ಕೊಂದು ತಿನ್ನುತ್ತಿರುವುದರಿಂದ ರೈತರಲ್ಲಿ ಜೀವನೋತ್ಸಾಹ ಮೂಡಿದೆ.

ವಲಸೆ ಬಂದವು ಶಾಶ್ವತವಾದವು
ಆಫ್ರಿಕನ್‌ ಮೂಲದವು ಎಂದು ಹೇಳಲಾಗುವ ಈ ಬೃಹತ್‌ ಗಾತ್ರದ ಕೊಕ್ಕರೆಗಳು ಆಲಂಕಾರು ಪ್ರದೇಶಗಳಿಗೆ ಪ್ರತೀ ವರ್ಷ ಅಕ್ಟೋಬರ್‌ನಲ್ಲಿ ಆಗಮಿಸಿ ಡಿಸೆಂಬರ್‌ನಲ್ಲಿ ಹಿಂದಿರುಗುತ್ತಿದ್ದವು. ಆದರೆ ಈ ಬಾರಿ ಮಾತ್ರ ಫೆಬ್ರವರಿಯಾದರೂ ಇಲ್ಲೇ ಉಳಿದುಕೊಂಡಿದ್ದು, ಬಸವನಹುಳಗಳ ವಿನಾಶಕ್ಕೆ ಪಣತೊಟ್ಟಂತಿದೆ. 200ಕ್ಕೂ ಅಧಿಕ ಕೊಕ್ಕರೆಗಳು ಈ ಭಾಗದಲ್ಲಿ ಬೀಡುಬಿಟ್ಟಿವೆ.

ಔಷಧಕ್ಕಾಗಿ ಹುಡುಕಾಟ
ಭೋಪಾಲದ ಪ್ರಜ್ವಲ್‌ ಎಂಟರ್‌ಪ್ರçಸಸ್‌ ಸಂಸ್ಥೆಯು ಹುಳದ ನಾಶಕ್ಕೆ ಸ್ನೆ„ಲ್‌ ಕಿಲ್‌ ಕೆಮಿಕಲ್‌ ಕಂಪೋನಿಷನ್‌ ಎಂಬ ಔಷಧ ತಯಾರಿಸಿದ್ದು, ಹುಳದ ಬಾಧೆಯಿರುವ ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಭಾಗದ ಕೆಲವೆಡೆ ಪೂರೈಕೆಯಾಗುತ್ತಿದೆ. ಶಿವಮೊಗ್ಗದ ಸಂಸ್ಥೆಯ ಮೂಲಕ ಆಲಂಕಾರು ಪ್ರಾಥಮಿಕ ಸಹಕಾರಿ ಸಂಘವು ಔಷಧ ತರಿಸಿ ರೈತರಿಗೆ ಸರಬರಾಜು ಮಾಡುತ್ತಿದೆ. ಇದೀಗ ಕೊಕ್ಕರೆಗಳ ಮೂಲಕ ಪ್ರಕೃತಿಯೇ ಹೊಸ ಔಷಧವನ್ನು ರೈತಾಪಿ ಜನತೆಗೆ ವರವಾಗಿ ನೀಡಿದೆ.

– ಸದಾನಂದ ಆಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next