(ಲಾಕ್‌ಡೌನ್ ಆಗಿರುವ ಈ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್‌ನ ಮೊದಲು ಅನುಭವ ಹೇಗಿತ್ತು?- ಅನ್ನೋದನ್ನು ನೀವೂ ಬರೆಯಬಹುದು)
ನಾಳೆ ಬೆಳಗ್ಗೆ ಲೇಟಾಗಿ ಏಳ್ಳೋಣ. ವರ್ಕ್ ಫ್ರಂ ಹೋಂ ಅಲ್ವಾ? ಒಟ್ಟಾರೆ, ದಿನದ ಕೊನೆಯಲ್ಲಿ ಕೆಲ್ಸ ಮುಗಿಸಿದರೆ ಸಾಕು. ಹೀಗೆಲ್ಲ ಲೆಕ್ಕ ಹಾಕಿಕೊಂಡು ಮಲಗಿದರೆ, ಮಧ್ಯರಾತ್ರಿ ನಮ್ಮ ಮನೆ ಎದುರು ಇರುವ ಭೈರವ ಅನ್ನೋ ನಾಯಿ ಕೂಗಾಡಲು ಆರಂಭಿಸಿತು.
ಅದೇನು ಕಾರಣವೋ, ಏನು ಕಥೆಯೋ- ಅದು ರಾತ್ರಿಯಿಡೀ ಬೊಗಳುತ್ತಲೇ ಇತ್ತು. ಹೀಗಾದಾಗ, ನಿದ್ರೆಯ ಮಾತೆಲ್ಲಿ? ನಿದ್ದೆ ಬಾರದ ಕಾರಣಕ್ಕೆ, ವರ್ಕ್ ಥ್ರೂ ನೈಟ್ ಅಂತಾರಲ್ಲ, ಹಾಗಾಯ್ತು ನನ್ನ ಪಾಡು. ರಾತ್ರಿ ಒಂದಷ್ಟು ಫೈಲ್‌ಗಳನ್ನು ನೋಡುವುದಿತ್ತು. ಕರೆಕ್ಷನ್ ಹಾಕುವುದಿತ್ತು. ಎಲ್ಲ ಮುಗಿಸಿಟ್ಟೆ. ನಮ್ಮದು ಮಾರ್ಕೆಟಿಂಗ್ ಬೇಸ್ ಕಂಪನಿ. ಆರ್ಡರ್ ಕಾಪಿಗಳನ್ನು ಗಮನಿಸಿ, ರಿಲೀಸಿಂಗ್ ಆರ್ಡರ್ ಗಳನ್ನು ಚೆಕ್ ಮಾಡಬೇಕು. ಬಂದ ಮೊತ್ತವೆಷ್ಟು, ಹೋದ ಹಣವೆಷ್ಟು ಎಂದು ತಿಳಿಯಲು ಒಂದಷ್ಟು ಅಕೌಂಟ್ಸ್ ಕೆಲಸಗಳನ್ನೂ ನಾನು ಮಾಡಬೇಕಿತ್ತು. ನಾಯಿಯ ಬೊಗಳಾಟ ನಿದ್ದೆಗೆಡಿಸಿದ್ದರಿಂದ, ಸಂಪೂರ್ಣ ನಿದ್ದೆ ಹಾಳಾಗಿ, ಬೆಳಗ್ಗೆ ಎದ್ದೇಳುವ ಹೊತ್ತಿಗೆ 12 ಗಂಟೆ.
ಹೆಂಡತಿ ಮನೆಯಲ್ಲಿ ಇರಲಿಲ್ಲ. ಅಡುಗೆಮನೆಯಲ್ಲಿ ಅಕ್ಕಿ ಎಲ್ಲಿದೆ, ಬೇಳೆ ಯಾವ ಕಡೆ ಇದೆ ತಿಳಿಯುತ್ತಿಲ್ಲ. ಅದನ್ನು ಹುಡುಕುವ ಹೊತ್ತಿಗೆ, ಬಾಸ್ ಫೋನ್. ರಾತ್ರಿ ಏನೇನು ಕೆಲಸ ಮಾಡಿದ್ದೇನೆ ಅಂತ ಹೇಳ್ಳೋಣ ಅಂದರೆ, ಅದು ನಿದ್ದೆಗಣ್ಣಲ್ಲಿ ಮಾಡಿದ್ದು. ಮತ್ತೂಮ್ಮೆ ಕ್ರಾಸ್ ಚೆಕ್ ಮಾಡದೇ, ಏನೂ ಮಾಡುವಂತಿರಲಿಲ್ಲ. ಹೀಗಾಗಿ, ಫೋನ್ ರಿಸೀವ್ ಮಾಡಲು ಧೈರ್ಯ ಬರಲಿಲ್ಲ. ಆನಂತರವೂ ಬಾಸ್ ಮೂರು ಸಲ ಫೋನು ಮಾಡಿದರು. ನಾನು ಬೇಕಂತಲೇ ಎತ್ತಲಿಲ್ಲ. ನಂತರ
ಗಡಿಬಿಡಿಯಿಂದಲೇ ಫೈಲ್ ನೋಡಿ, ಲೆಕ್ಕದ ಹೊಂದಾಣಿಕೆಯನ್ನು ಗಮನಿಸಿದ್ದೆ. ನಂತರ ಧೈರ್ಯ ಮಾಡಿ, ಬಾಸ್‌ಗೆ ನಾನೇ ಕರೆ ಮಾಡಿದೆ. ಆ ಕಡೆಯಿಂದ-
“ಹೇಳ್ರಿ.. ವರ್ಕ್ ಫ್ರಂ ಹೋಮ್‌ನಲ್ಲಿ ಮೊಬೈಲ್ ಆಫಿಸಲ್ಲಿ ಬಿಟ್ರಾ..’ ಅಂದರು ಬಾಸ್ ವ್ಯಂಗ್ಯವಾಗಿ.
ಬಹುಶಃ ಸಾವಿರಾರು ಅನುಮಾನಗಳು ಅವರನ್ನು ಗಿರಗಿಟ್ಟಲೆ ಆಡಿಸಿರಬಹುದು ಅಂತ ತಿಳಿದು, ಸಾರ್, ರಾತ್ರಿ ಹೀಗೀಗೆಲ್ಲಾ ಆಯ್ತು ಅಂದೆ. ಅವರಿಗೆ ಇದೆಲ್ಲಾ ಕಟ್ಟುಕತೆ ಅನಿಸಿತೇನೋ, ಆದರೂ ನಂಬಿದಂತೆ ಮಾಡಿದರು. ನಾನು ಅವರು ನಂಬಿದ್ದಾರೆ ಎಂದು ಭಾವಿಸಿದೆ!