Advertisement

ಚರಂಡಿಯಲ್ಲಿ ಕೊಳಚೆ ನೀರು ಶೇಖರಣೆ 

12:01 PM Sep 28, 2018 | |

ಬೆಳ್ಳಾರೆ: ಬೆಳ್ಳಾರೆ ಮೇಲಿನ ಪೇಟೆಯ ಅಸ್ತವ್ಯಸ್ತ ಚರಂಡಿಯಲ್ಲಿ ನೀರು ಶೇಖರಣೆಗೊಂಡಿದ್ದು, ಇದರಿಂದ ಜನರಿಗೆ ರೋಗ ಹರಡುವ ಭೀತಿ ಎದುರಾಗಿದೆ.

Advertisement

ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಚರಂಡಿ ಸಮಸ್ಯೆಯಿಂದ ಮಳೆ ನೀರು ಹಾಗೂ ಕೊಳಚೆ ನೀರು ಅಲ್ಲಲ್ಲಿ ಶೇಖರಗೊಂಡು ಸೊಳ್ಳೆಗಳು ಬೆಳೆಯುತ್ತಿವೆ. ಎರಡು ತಿಂಗಳ ಹಿಂದೆ ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡು ಅನೇಕರು ಬಳಲಿದ್ದರು. ಇದೀಗ ಮಳೆ ಕ್ಷೀಣಿಸಿ ಒಂದು ತಿಂಗಳೇ ಕಳೆಯುತ್ತಿದ್ದು, ಬೆಳ್ಳಾರೆ ಪೇಟೆಯ ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹಗೊಂಡು ಸೊಳ್ಳೆಗಳು ಬೆಳೆಯುವುದಕ್ಕೆ ಸಹಕಾರಿಯಾಗುತ್ತಿದೆ. ಸ್ಥಳೀಯ ಕೆಲವು ಜನರಲ್ಲಿ ವೈರಲ್‌ ಜ್ವರದ ಲಕ್ಷಣಗಳು ಗೋಚರಿಸಿವೆ. ಸಂಬಂಧಿಸಿದ ಇಲಾಖೆಗಳು ಬೆಳ್ಳಾರೆ ಪೇಟೆಯಲ್ಲಿ ಕೊಳಚೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕಾಗಿದೆ. ನಿಂತ ನೀರಿಗೆ ಸೊಳ್ಳೆಗಳನ್ನು ನಾಶಪಡಿಸುವ ರಾಸಾಯನಿಕ ವಸ್ತುಗಳನ್ನು ಸಿಂಪಡಣೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಸ್ತವ್ಯಸ್ತ ಚರಂಡಿ
ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಅವೈಜ್ಞಾನಿಕ ಚರಂಡಿ ಇದೆ. ಇದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿಗೆ ಇನ್ನು ವ್ಯವಸ್ಥಿತವಾದ ಚರಂಡಿ ನಿರ್ಮಾಣ ಮಾಡಿಲ್ಲ.ಇದರಲ್ಲಿ ಸರಾಗವಾಗಿ ನೀರು ಹರಿದು ಹೋಗುತ್ತಿಲ್ಲ. ಕೆಲವೆಡೆ ಸ್ಥಳಿಯರೇ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುತ್ತಿದ್ದಾರೆ. ಇದು ಚರಂಡಿಯಲ್ಲೇ ನಿಂತು ನೀರಿನ ಹರಿವಿಗೆ ಅಡ್ಡಿಯಾಗುತ್ತಿದೆ. ಇದರಿಂದ ಸೊಳ್ಳೆಗಳು ಬೆಳೆಯುತ್ತಿವೆ.

ಬೆಳ್ಳಾರೆ ಕೆಳಗಿನ ಪೇಟೆಗೆ ಕಳೆದ ವರ್ಷ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂ.ಗೂ ಅಧಿಕ ಅನುದಾನದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅನುದಾನದ ಕೊರತೆಯಿಂದಸ್ಲ್ಯಾಬ್ ಹಾಕುವ ಕೆಲಸ ನಡೆದಿಲ್ಲ. ಈ ಚರಂಡಿಯಲ್ಲೂ ಕೊಳಚೆ ನೀರು ಹರಿದು ಹೋಗುತ್ತಿಲ್ಲ.

ಬೇಡಿಕೆ ಸಲ್ಲಿಸಲಾಗಿದೆ
ಬೆಳ್ಳಾರೆ ಕೆಳಗಿನ ಪೇಟೆಯ ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಎಸ್ಟಿಮೇಟ್‌ ಪ್ರಕಾರ ಯಾವ ಕೆಲಸ ನಡೆಯಬೇಕಿತ್ತೋ ಅದನ್ನು ನಾವು ಮಾಡಿದ್ದೇವೆ. ಅದರ ನಿರ್ವಹಣೆಯನ್ನೂ ಮಾಡುತ್ತಿದ್ದೇವೆ. ಮೇಲಿನ ಪೇಟೆಗೆ ಚರಂಡಿ ನಿರ್ಮಾಣ ಮಾಡಲು ನಮ್ಮ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಮೇಲಿನ ಪೇಟೆಯಲ್ಲಿ ಚರಂಡಿ ದುರಸ್ತಿ ಕಾಮಗಾರಿ ನಡೆಸಿದ್ದೇವೆ.
– ಸಂದೇಶ್‌
ಲೋಕೋಪಯೋಗಿ ಇಲಾಖೆ ಎಂಜಿನಿಯರ್‌

Advertisement

ಸೂಚನೆ ನೀಡಬಹುದಷ್ಟೆ
ಚರಂಡಿಯಲ್ಲಿ ಕೊಳಚೆ ನೀರು ತುಂಬಿದ್ದಾಗ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವ ಉಸ್ತುವಾರಿಯನ್ನು ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಆಡಳಿತ ನೋಡಿಕೊಳ್ಳಬೇಕು. ನಾವು ಅವರಿಗೆ ಸೂಚನೆ ಮಾತ್ರ ಕೊಡಬಹುದು.  
– ಡಾ| ಸುಬ್ರಹ್ಮಣ್ಯ
ಸುಳ್ಯ ತಾ| ವೈದ್ಯಾಧಿಕಾರಿ

ರೋಗ ಭೀತಿ ಹೆಚ್ಚಿದೆ
ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಸಮರ್ಪಕವಾದ ಚರಂಡಿ ಇಲ್ಲದೆ ಸ್ಥಳೀಯ ಜನರು ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಮಳೆಗಾಲ ಮೇಲಿನ ಪೇಟೆ ಮುಳುಗುತ್ತದೆ. ಮಳೆ ಕಡಿಮೆಯಾದ ಬಳಿಕ ಚರಂಡಿಯಲ್ಲಿ ನೀರು ಹರಿದು ಹೋಗದೆ ಸೊಳ್ಳೆಗಳು ಬೆಳೆಯುತ್ತಿವೆ. ಈಗ ಮಳೆ ಕಡಿಮೆಯಾಗಿದ್ದು, ಕೆಲವು ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಸಂಬಂಧಪಟ್ಟವರು ಚರಂಡಿ ದುರಸ್ತಿ ಕಾರ್ಯ ತತ್‌ಕ್ಷಣ ಮಾಡಬೇಕು. ಇಲ್ಲದಿದ್ದರೆ ರೋಗ ಹರಡುವ ಭೀತಿ ಹೆಚ್ಚಿದೆ.
– ಬಶೀರ್‌ ಕೆ.ಎ.
ಬೆಳ್ಳಾರೆ 

ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಬೆಳ್ಳಾರೆ ಪೇಟೆಯ ಚರಂಡಿ ಗ್ರಾ.ಪಂ. ವ್ಯಾಪ್ತಿಗೆ ಬರುವುದಿಲ್ಲ. ಅದು ಲೋಕೋಪಯೋಗಿ ಇಲಾಖೆಗೆ ಸೇರಿದೆ. ಅದರ ನಿರ್ವಹಣೆ ಅವರೇ ಮಾಡಬೇಕು. ಕೆಲವೆಡೆ ವ್ಯಾಪಾರಸ್ಥರೇ ಚರಂಡಿಗೆ ತ್ಯಾಜ್ಯ ಹಾಕಿ ಚರಂಡಿ ಬ್ಲಾಕ್‌ ಮಾಡುತ್ತಿದ್ದಾರೆ. ಹೀಗೆ ಮಾಡುವುದು ಸರಿಯಲ್ಲ. ಜನರೂ ಪೇಟೆಯ ಶುಚಿತ್ವದ ಕಡೆ ಗಮನ ಹರಿಸಬೇಕು.
 - ಶಕುಂತಳಾ ನಾಗರಾಜ್‌
ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next