ಬೆಳಗಾವಿ: ತಾಲೂಕಿನ ಹಲಗಾದಿಂದ ಮಚ್ಛೆವರೆಗೆ ರಸ್ತೆ ನಿರ್ಮಾಣಕ್ಕಾಗಿ ಫಲವತ್ತಾದ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗುರುವಾರ ಕಾಮಗಾರಿ ತಡೆದು ಪ್ರತಿಭಟನೆ ನಡೆಸಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ.
ಬುಧವಾರದಿಂದಲೇ ಜಮೀನು ಸಮತಟ್ಟು ಮಾಡಲು ಪ್ರಾಧಿಕಾರ ಸಿಬ್ಬಂದಿ ಆಗಮಿಸಿದ್ದರು. ಬುಧವಾರ ರೈತರು ಜಮಾಯಿಸಿ ಎಲ್ಲರನ್ನೂ ವಾಪಸು ಕಳುಹಿಸಿದ್ದರು. ಮತ್ತೆ ಗುರುವಾರ ಬೆಳಗ್ಗೆ ಬಂದು ಕಾಮಗಾರಿ ಆರಂಭಿಸುತ್ತಿದ್ದಾಗ ರೈತರು ಬಂದು ಪ್ರಾಧಿಕಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬೆಳಗಾವಿಯಿಂದ ಗೋವಾ ಗಡಿವರೆಗೆ ಒಟ್ಟು 84 ಕಿ.ಮೀ. ರಸ್ತೆ ನಿರ್ಮಾಣಕ್ಕೆ 2011ರಲ್ಲಿ ಪ್ರಾಧಿಕಾರ ನಿರ್ಣಯ ತೆಗೆದುಕೊಂಡಿದೆ. ಅದರಲ್ಲಿ ಒಟ್ಟು ಹಲಗಾ, ಬೆಳಗಾವಿ, ಹಳೇ ಬೆಳಗಾವಿ, ವಡಗಾಂವ, ಶಹಾಪುರ, ಅನಗೋಳ, ಮಜಗಾಂವ, ಮಚ್ಛೆ ಗ್ರಾಮಗಳ ಫಲವತ್ತಾದ ಭೂಮಿ ಬರುತ್ತವೆ. ಈ ಹಿಂದೆ 135 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳುವುದಾಗಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿತ್ತು. ಈಗ ಮತ್ತೆ 25 ಎಕರೆ ಜಮೀನು ಹೆಚ್ಚುವರಿ ಮಾಡಿ 160 ಎಕರೆ ಜಮೀನನ್ನು ರಸ್ತೆಗೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಪ್ರಾಧಿಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಧಿಕಾರದ ನೀಲ ನಕ್ಷೆಯಲ್ಲಿ ಗುರುತಿಸಿದ ಈ ಎಲ್ಲ ಹಳ್ಳಿಗಳ ವ್ಯಾಪ್ತಿಯ ಒಟ್ಟು 12.5 ಕಿ.ಮೀ. ರಸ್ತೆ ಮಾರ್ಗ ಗುರುತಿಸಲಾಗಿದೆ. 8ಕ್ಕೂ ಹೆಚ್ಚು ಜೆಸಿಬಿ ಮೂಲಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಲಗಾದಿಂದ ಈವರೆಗೆ 3.5 ಕಿ.ಮೀ. ಜಾಗವನ್ನು ತೆರವು ಮಾಡಿ ಸಮತಟ್ಟು ಮಾಡಿಕೊಂಡಿದ್ದಾರೆ. ಅಷ್ಟರೊಳಗೆ ಸ್ಥಳಕ್ಕೆ ಧಾವಿಸಿದ ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಕಾಮಗಾರಿ ಆದೇಶ ಪ್ರತಿ ತೋರಿಸಿ ಕೆಲಸ ಆರಂಭಿಸಬೇಕು ಎಂದು ಪಟ್ಟು ಹಿಡಿದರು. ಆದರೆ ಪ್ರಾಧಿಕಾರ ಅಧಿಕಾರಿಗಳು ಪ್ರತಿ ತೋರಿಸದೇ ಕಾಮಗಾರಿ ಆರಂಭಿಸಲು ಮುಂದಾದರು. ಅಧಿಕಾರಿಗಳ ಬಳಿ ಕೆಲಸದ ಆದೇಶ ಪ್ರತಿ ಇಲ್ಲದ್ದನ್ನು ಮನಗಂಡ ರೈತರು ಕೆಲಸ ತಡೆ ಹಿಡಿದರು.
ಇಲ್ಲಿಯ ರೈತರು ಅತೀ ಬಡವರಾಗಿದ್ದು, ಒಂದು ಎಕರೆಕ್ಕಿಂತಲೂ ಕಡಿಮೆ ಜಮೀನು ಹೊಂದಿದ್ದಾರೆ. ಇದನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಈಗ ಇದ್ದ 20-25 ಗುಂಟೆ ಜಮೀನು ಕಸಿದುಕೊಳ್ಳಲು ಮುಂದಾಗಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ಬೀದಿಗೆ ಬರುವುದು ಖಚಿತ. ಹೀಗಾಗಿ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡಬಾರದು. ಫಲವತ್ತಾದ ಭೂಮಿಯನ್ನು ನಾವು ಕೊಡುವುದಿಲ್ಲ ಎಂದು ರೈತರ ಸುಭಾಷ ಚೌಗುಲೆ, ಮಹಾವೀರ ಹಣಮನ್ನವರ, ಕೃಷ್ಣಾ ಕಂಗ್ರಾಳಕರ, ಅಜಿತ ಕರಾಡ ಪಟ್ಟು ಹಿಡಿದರು.