Advertisement

ಕಾವೇರಿ ನೀರು ಹರಿಸುವುದು ತಕ್ಷಣ ನಿಲ್ಲಿಸಿ

03:15 PM Jul 25, 2017 | Team Udayavani |

ದಾವಣಗೆರೆ: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಕೂಡಲೇ
ನಿಲ್ಲಿಸಲು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟಿಸಿದ್ದಾರೆ.

Advertisement

ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮಳೆಗಾಲದಲ್ಲೇ ಕರ್ನಾಟಕದಲ್ಲಿ ಕುಡಿಯುವ ನೀರಿಗೆ ಪರಿತಪಿಸುವ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಸಮಂಜಸವಲ್ಲ. ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ಕರ್ನಾಟಕದಲ್ಲೇ ಹುಟ್ಟುವ ಕಾವೇರಿ ನೀರು ನಮ್ಮ ನಾಡಿನ ರೈತರು, ಜನರಿಗೇ ಲಭ್ಯವಾಗದಂತಾಗಿದೆ. ರಾಜ್ಯದಲ್ಲಿ 4 ಲಕ್ಷ
ಹೆಕ್ಟೇರ್‌ ಪ್ರದೇಶಕ್ಕೆ ನೀರೇ ಕೊಡಲಾಗುತ್ತಿಲ್ಲ. ಎರಡು ವರ್ಷದಿಂದ ಬರದಿಂದಾಗಿ ರೈತರು ತತ್ತರಿಸಿದ್ದಾರೆ. ಹೇಗೋ ಜಲಾಶಯಕ್ಕೆ ಬಂದಿರುವ ಒಂದಷ್ಟು ನೀರು ನೋಡಿ ನೆಮ್ಮದಿಯಿಂದ ಇರುವಾಗ ರಾಜ್ಯ ಸರ್ಕಾರ ತಮಿಳುನಾಡಿನ 7 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನಾ  ಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೋ ಕಾಲದಲ್ಲಿ ಮಾಡಿಕೊಂಡ ಒಪ್ಪಂದದಿಂದ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಕಾವೇರಿ ವಿಷಯದಲ್ಲಿ ಎಲ್ಲಾ ಸರ್ಕಾರಗಳು ರೈತರಿಗೆ, ಜನರಿಗೆ ಅನ್ಯಾಯ ಮಾಡುತ್ತಿವೆ. ಕೇಂದ್ರ ಸರ್ಕಾರ ಸಹ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ತಕ್ಷಣ ನೀರು ಹರಿಸುವುದನ್ನ ನಿಲ್ಲಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ರಾಜ್ಯ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಜಿಲ್ಲಾ ಅಧ್ಯಕ್ಷ ನಾಗರಾಜ್‌ ಜಮ್ನಳ್ಳಿ, ಅಮ್ಜದ್‌ ಅಲಿ, ಸಿಕಂದರ್‌, ರಾಮಣ್ಣ ತೆಲಗಿ, ನಾಗರಾಜಗೌಡ, ಸಂತೋಷ್‌ ದೊಡ್ಮನಿ, ಖಲೀಲ್‌, ಮಹಬೂಬ್‌, ಗಿರೀಶ್‌, ನಜೀರ್‌ ಇತರರು ಇದ್ದರು.

Advertisement

ಬಾರ್‌ ಪ್ರಾರಂಭಕ್ಕೆ ವಿರೋಧ…
ಮಹಾನಗರಪಾಲಿಕೆ 32ನೇ ವಾರ್ಡ್‌ ಎಂಸಿಸಿ ಬಿ ಬ್ಲಾಕ್‌ನ 7ನೇ ಮುಖ್ಯ ರಸ್ತೆ 3ನೇ ಕ್ರಾಸ್‌ನಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಪ್ರಾರಂಭ ವಿರೋಧಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಖಾಸಗಿ ಆಸ್ಪತ್ರೆ, ಸಾರ್ವಜನಿಕ ಉದ್ಯಾನವನ, ಈಜುಕೊಳ, ಮುಖ್ಯವಾಗಿ ಜನವಸತಿ ಪ್ರದೇಶಕ್ಕೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸದಾ ಸಂಚರಿಸುವ ಪ್ರಮುಖ ಸಂಪರ್ಕ ರಸ್ತೆಯಲ್ಲೇ ಬಾರ್‌ ಅಂಡ್‌ ರೆಸ್ಟೋರೆಂಟ್‌ ಪ್ರಾರಂಭ ಸರಿಯಲ್ಲ. ಯಾವುದೇ ಕಾರಣಕ್ಕೂ ಬಾರ್‌ ಅಂಡ್‌ ರೆಸ್ಟೋರಂಟ್‌ಗೆ ಪರವಾನಗಿ ನೀಡಬಾರದೆಂದು ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next