ಬೆಳಗಾವಿ: ಲೋಕಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳ ಬಹಿರಂಗ ಪ್ರಚಾರ ತೆರೆ ಕಂಡಿದೆ. ಇನ್ನೇನಿದ್ದರೂ ಮನೆ ಮನೆಗೆ ತೆರಳಿ ಮತದಾರರನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಕಸರತ್ತು ನಡೆಸಿದ್ದರೆ ಇನ್ನೊಂದೆಡೆ ತಮ್ಮ ಬೆಂಬಲಿಗರ ಮೂಲಕ ಕತ್ತಲ ರಾತ್ರಿಯ ಕರಾಳ ದಿನಗಳಲ್ಲಿ ಹಣ-ಹೆಂಡ ಹಂಚುವ ಕೃತ್ಯಗಳು ಜೋರಾಗಿ ನಡೆಸಿದ್ದಾರೆ.
ಕಾನೂನು ಬಿಗಿ ಇದ್ದರೂ ಲೆಕ್ಕಾಚಾರ: ಚುನಾವಣಾ ಆಯೋಗ ಎಷ್ಟೇ ಕಾನೂನು ಬಿಗಿ ಮಾಡಿದರೂ ಅಭ್ಯರ್ಥಿಗಳು ಇದಕ್ಕೆ ಕ್ಯಾರೇ ಎನ್ನುವುದಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಚುನಾವಣಾ ಲೆಕ್ಕಾಚಾರ ನಡೆದಿದ್ದರೆ, ಮತ್ತೂಂದೆಡೆ ಯಾವ ಬೂತ್‌ನಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡಬೇಕು ಎಂಬುದು ಬೆಂಬಲಿಗರ ಲೆಕ್ಕಾಚಾರ ಆರಂಭವಾಗಿದೆ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳ ಬೂತ್‌ವಾರು ಲೆಕ್ಕಾಚಾರದಲ್ಲಿ ಮುಳುಗಿರುವ ಕಾರ್ಯಕರ್ತರು ಹಣ-ಹೆಂಡದ ಎಣಿಕೆಯೂ ಸದ್ದಿಲ್ಲದೇ ನಡೆದಿದೆ.
ಬಿಸಿಲಿನ ತಾಪದಲ್ಲೂ ಪ್ರಚಾರ: ಮನೆ ಮನೆಗೆ ತೆರಳಿ ಕಾರ್ಯಕರ್ತರು ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಆಯಾ ಪಕ್ಷಗಳ ಕರ ಪತ್ರಗಳನ್ನು ಹಂಚುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ನೇರ ಪೈಪೋಟಿ ಇರುವುದರಿಂದ ಹಳ್ಳಿಗಳಲ್ಲಿ ಈ ಎರಡೇ ಪಕ್ಷಗಳ ಕಾರ್ಯಕರ್ತರು ಕಾಣ ಸಿಗುತ್ತಿದ್ದಾರೆ. ಬಿಸಿಲಿನ ತಾಪ ಇದ್ದರೂ ಮನೆ ಮನೆಗೆ ತಿರುಗಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಅಭ್ಯರ್ಥಿಗಳ ಖರ್ಚಿಗೆ ಆಯೋಗ ಎಷ್ಟೇ ಮಿತಿ ಹಾಕಿದ್ದರೂ ಅದಕ್ಕೆ ಲಗಾಮು ಇರುವುದಿಲ್ಲ. ಲಗಾಮು ಹರಿದುಕೊಂಡು ಮಿತಿ ಮೀರಿ ಖರ್ಚು ವೆಚ್ಚವಾಗುತ್ತದೆ. ಆದರೆ ಅದು ಅಧಿಕಾರಿಗಳ ಬೆನ್ನ ಹಿಂದೆಯೇ ನಡೆದಿರುತ್ತದೆ. ಯಾವ ಯಾವ ಊರುಗಳಲ್ಲಿ ಎಷ್ಟು ಹಣ ಹಂಚಬೇಕು. ಯಾರಿಗೆ ಎಷ್ಟು ತಲುಪಿಸಬೇಕೆಂಬ ಲೆಕ್ಕವೇ ದೊಡ್ಡದಾಗಿರುತ್ತದೆ. ಕದ್ದು ಮುಚ್ಚಿ ನಡೆಯುವ ಈ ವ್ಯವಹಾರ ಯಾರ ಕಣ್ಣಿಗೂ ಬೀಳುವುದಿಲ್ಲ.
Advertisement
ಲೋಕಸಭೆ ಚುನಾವಣೆಯ ಮತದಾನಕ್ಕೆ ಇನ್ನು 24 ಗಂಟೆಗಳು ಬಾಕಿ ಇರುವಾಗಲೇ ಅಭ್ಯರ್ಥಿಗಳು ಮತದಾರರ ಬಳಿ ಅಂಗಲಾಚುತ್ತಿದ್ದಾರೆ. ಏ. 23ರಂದು ನಡೆಯಲಿರುವ ಮತದಾನ ವೇಳೆ ತಮ್ಮ ಪರ ಮತಕ್ಕಾಗಿ ಕಸರತ್ತು ತೀವ್ರಗೊಂಡಿದ್ದು, ಹೇಗಾದರೂ ಮಾಡಿ ಗೆಲ್ಲಬೇಕೆಂಬ ತವಕದಲ್ಲಿದ್ದಾರೆ. ಮತದಾರರಿಗೆ ಆಮಿಷ ಒಡ್ಡುವ ಪ್ರಕ್ರಿಯೆ ರಾತ್ರಿಯಿಂದಲೇ ಶುರುವಾಗಿವೆ.
Related Articles
Advertisement
ಬಾಡೂಟ ಪಾರ್ಟಿಗೆ ಬ್ರೇಕ್ ಇಲ್ಲ: ಈಗಾಗಲೇ ಬಹುತೇಕ ಹೋಟೆಲ್, ಬಾರ್‌ಗಳಲ್ಲಿ ಪಾರ್ಟಿಗಳು ಅವ್ಯಾಹತವಾಗಿ ನಡೆದಿವೆ. ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆಯೂ ನಡೆದಿದೆ. ಹಳ್ಳಿಗಳಲ್ಲಿ ಆಡು-ಮೇಕೆ, ಕೋಳಿ ಕೊಯ್ದು ಬಾಡೂಟ ಪಾರ್ಟಿಗಳಿಗೆ ಮಿತಿ ಇಲ್ಲ. ಚುನಾವಣಾ ಕಸರತ್ತಿಗಾಗಿ ಕಳೆದ 8-10 ದಿನಗಳಿಂದ ಅಭ್ಯರ್ಥಿಗಳು ಕಾರ್ಯಕರ್ತರ ಮನ ತಣಿಸುತ್ತಿದ್ದಾರೆ. ಮಾಂಸದಂಗಡಿಗಳಲ್ಲೂ 2-3 ದಿನಗಳಿಂದ ವ್ಯಾಪಾರ ಜೋರಾಗಿಯೇ ಇದೆ.
ಬೆಳಗಾವಿ ಗಡಿ ಭಾಗದ ತಾಲೂಕಿನ ಜನ ಗೋವಾ ರಾಜ್ಯದ ಪಣಜಿ, ಮಡಗಾಂವ, ಸಿಂಧದುರ್ಗ ಜಿಲ್ಲೆಯ ಕುಡಾಳ, ಸಾವಂತವಾಡಿ, ವೆಂಗುರ್ಲಾ ಸೇರಿದಂತೆ ವಿವಿಧ ಕಡೆಗೆ ಕೆಲಸಕ್ಕೆ ಕಾರ್ಮಿಕರು ಗುಳೆ ಹೋಗಿರುತ್ತಾರೆ. ಅವರನ್ನು ಕರೆಯಿಸಿಕೊಳ್ಳುವ ಪ್ರಕ್ರಿಯೆಯೂ ಜೋರಾಗಿದೆ. ಈಗಾಗಲೇ ಅವರನ್ನು ಸಂಪರ್ಕಿಸಿ ಒಂದು ದಿನ ಮುಂಚೆಯೇ ಬಂದು ಮತ ಚಲಾಯಿಸುವಂತೆ ಕೋರಲಾಗುತ್ತಿದೆ. ಜತೆಗೆ ಪ್ರಯಾಣ ಖರ್ಚು ಸೇರಿದಂತೆ ಇಂತಿಷ್ಟು ಹಣ ನೀಡಲಾಗುತ್ತಿದೆ.
ಕಾಂಗ್ರೆಸ್ ಪ್ರಚಾರ ಸ್ಥಿತಿಗತಿ
ಕಾಂಗ್ರೆಸ್‌ನ ವಿ.ಎಸ್. ಸಾಧುನವರ ಪರ ಪ್ರಚಾರಕ್ಕೆ ಇಳಿದಿರುವ ಸಚಿವ ರಮೇಶ ಜಾರಕಿಹೊಳಿ ತಮ್ಮ ಸ್ವಕ್ಷೇತ್ರ ಬಿಟ್ಟು ಗೋಕಾಕದಲ್ಲಿ ಬ್ಯುಸಿ ಆಗಿದ್ದಾರೆ. ಸಹೋದರ ಲಖನ್ ಜಾರಕಿಹೊಳಿ ಜೊತೆಗೆ ಸೇರಿ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಿದ್ದಾರೆ. ಜತೆಗೆ ಇನ್ನಿತರ ಶಾಸಕರಾದ ಲಕ್ಷ್ಮೀ ಹೆಬ್ಟಾಳಕರ, ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ಫಿರೋಜ ಸೇಠ, ಅಶೋಕ ಪಟ್ಟಣ ಸೇರಿದಂತೆ ಅನೇಕ ಮುಖಂಡರು ಬಹಿರಂಗ ಪ್ರಚಾರ ಮುಗಿಸಿ ಈಗ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಬಿಜೆಪಿ ಪ್ರಚಾರದ ಸ್ಥಿತಿಗತಿ
ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಕಳೆದ 15 ದಿಗಳಿಂದ ಸುತ್ತಾಡಿ ರವಿವಾರ ಸಂಜೆ ಸ್ವಲ್ಪ ನಿರಾಳರಾಗಿ ಕಂಡು ಬಂದರು. ನಿತ್ಯ ಬೆಳಗ್ಗೆ 6 ಗಂಟೆಯಿಂದ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಿದ್ದ ಅಂಗಡಿ ರಾತ್ರಿ 11 ಗಂಟೆಗೆ ಮನೆಗೆ ವಾಪಸಾಗುತ್ತಿದ್ದರು. ಜತೆಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಅನಿಲ ಬೆನಕೆ, ಅಭಯ ಪಾಟೀಲ ಸೇರಿದಂತೆ ಅನೇಕ ಮುಖಂಡರು ಅಂಗಡಿ ಬೆನ್ನಿಗೆ ನಿಂತು ತಮ್ಮ ಸ್ವಕ್ಷೇತ್ರಗಳಲ್ಲಿ ಮತದಾರರ ಮನವೊಲಿಸುತ್ತಿದ್ದಾರೆ.