ಜೋಯಿಡಾ: ತಾಲೂಕಿನ ನಗರಿ ಗ್ರಾಮದ ನೈಸರ್ಗಿಕ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತಡೆಯಾಜ್ಞೆ ಇದ್ದರೂ ಮತ್ತೆ ಕಾಮಗಾರಿ ಮಾಡಲು ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದು, ಸ್ಥಳಿಯ ಕೆಲ ವ್ಯಕ್ತಿಗಳು ರಾತ್ರೋರಾತ್ರಿ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕೆಲಸ ನಿಲ್ಲಿಸುವ ಮೂಲಕ ಸಂಬಂಧಿಸಿದವರ ಮೇಲೆ ನ್ಯಾಯಾಂಗ ನಿಂದನೆ ದೂರು ದಾಖಲಿಸಿ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರು ಜೋಯಿಡಾ ಪೊಲೀಸ್ ಠಾಣೆಗೆ ಹಾಗೂ ದಂಡಾಧಿಕಾರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.
ನಗರಿ ಗ್ರಾಮಸ್ಥರು ನಮಗೆ ಈಗಾಗಲೇ ಇರುವ ಕೊಳವೆ ಬಾವಿ ನೀರು ಪೂರೈಕೆಗೆ ಬೇಡಿಕೆ ಇಟ್ಟಿದ್ದರೂ, ಕುಡಿಯುವ ನೀರು ಸರಬರಾಜು ಇಲಾಖೆಯ ಕೆಳಸ್ಥರದ ಅಧಿಕಾರಿ ಕೋರ್ಟ್ ತಡೆಯಾಜ್ಞೆ ಇರುವ ನೈಸರ್ಗಿಕ ನೀರಿಗೆ ಗ್ರಾಮಸ್ಥರ ವಿರೋಧದ ನಡುವೆ ಬೃಹತ್ ಪೈಪ್‌ಲೈನ್ ಅಳವಡಿಸಲು ಹೊರಟಿದ್ದಾರೆ. ಕೆಲವರಿಗೆ ಕುಮ್ಮಕ್ಕು ನೀಡಿ ಕಾನೂನು ಬಾಹೀರ ಕೆಲಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣ ದಾಖಲಾಗಿದ್ದರೂ ಈ ಅಧಿಕಾರಿ ಕ್ಯಾರೆ ಎನ್ನದೆ ಗ್ರಾಮದ ಕೆಲವರಿಗೆ ಮತ್ತೆ ಕುಮ್ಮಕ್ಕೂ ನೀಡಿ ಕಾನೂನು ವಿರುದ್ಧ ಕೆಲಸ ಮಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಗರಿ ಗ್ರಾಮದ ನೈಸರ್ಗಿಕ ನೀರಿಗೆ ಬೃಹತ್ ಪೈಪ್‌ಲೈನ್‌ಅಳವಡಿಸಿ ಸಮೀಪದ ಹೋಮ್ ಸ್ಟೇ ಮಾಲಿಕರೊಬ್ಬರಿಗೆ ನೀರು ಪೂರೈಸುವ ಸ್ವಾರ್ಥದ ಉದ್ದೇಶದಿಂದ ಕುಡಿಯುವ ನೀರು ಸರಬರಾಜು ಇಲಾಖೆಯ ಕೆಳಸ್ಥರದ ಅಧಿಕಾರಿಯೊಬ್ಬರು ಕಾನೂನು ಬಾಹಿರ ಪೈಪ್‌ಲೈನ್ ಅಳವಡಿಸುತ್ತಿದ್ದಾರೆ. ಇದಕ್ಕಾಗಿ ತಾಲೂಕಿನ ಇತರ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ, ಸ್ಥಳೀಯ ಕೆಲವರನ್ನು ಎತ್ತಿಕಟ್ಟಿ ಗ್ರಾಮಸ್ಥರ ವಿರುದ್ಧ ಜಗಳ ಹಚ್ಚುವ ಕೆಲಸ ಮಾಡುತ್ತಾ ಬಂದ ಆರೋಪ ಕೂಡಾ ಇದೆ. ಈ ರೀತಿ ಗ್ರಾಮದಲ್ಲಿ ವೈಷಮ್ಯ ಉಂಟುಮಾಡಿ ಸ್ವಾರ್ಥಕ್ಕಾಗಿ ಕೋರ್ಟ್ ತಡೆಯಾಜ್ಞೆ ಇರುವ ಗ್ರಾಮಸ್ಥರ ವಿರೋಧದ ಅವೈಜ್ಞಾನಿಕ ಕಾಮಗಾರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗ್ರಾಮಸ್ಥರ ವಿರುದ್ದ ಕೆಲಸ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಯಶವಂತ ವೇಳಿಪ, ಕೇಶವ ವೇಳಿಪ, ಪುರುಷೋತ್ತಮ, ಸುರೇಶ ಸೇರಿದಂತೆ ಹಲವಾರು ಗ್ರಾಮಸ್ಥರು ಜೋಯಿಡಾ ತಹಶೀಲ್ದಾರ್, ಜೋಯಿಡಾ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಆಗ್ರಹಿಸಿದ್ದಾರೆ.