Advertisement

ಕಲ್ಲು ಗಣಿಗಾರಿಕೆ ತಕ್ಷಣ ನಿಲ್ಲಿಸಿ

12:15 PM Sep 08, 2019 | Team Udayavani |

ಪಾಂಡವಪುರ: ಕನ್ನಂಬಾಡಿ ಅಣೆಕಟ್ಟೆಯ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದ್ದು ಬೇಬಿ ಬೆಟ್ಟ ಹಾಗೂ ಸುತ್ತಮುತ್ತಲಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಯನ್ನು ತಕ್ಷಣ ನಿಲ್ಲಿಸಿ ಕ್ರಷರ್‌ಗಳನ್ನು ತೆರವುಗೊಳಿಸುವ ಮೂಲಕ ರೈತರನ್ನು ರಕ್ಷಣೆ ಮಾಡಬೇಕೆಂದು ಅಧಿಕಾರಿಗಳಿಗೆ ಸಂಸದೆ ಸುಮಲತಾ ಅಂಬರೀಶ್‌ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೇಬಿ ಬೆಟ್ಟದ ಸುತ್ತಮುತ್ತಲಲ್ಲಿ ರಾತ್ರಿವೇಳೆ ಕಲ್ಲು ಕೋರೆ ಬ್ಲಾಸ್ಟಿಂಗ್‌ ನಡೆಯುತ್ತಿರುವ ಬಗ್ಗೆ ತಮಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಹಾಗಾಗಿ ಇಲ್ಲಿನ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಯಾವ ಕ್ರಮವಹಿಸಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಪ್ರಮೋದ್‌ ಎಲ್.ಪಾಟೀಲ್, ಗಣಿಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಜತೆಗೆ ಸೆಕ್ಷನ್‌ 144 ಜಾರಿಗೊಳಿಸಿ ರಾತ್ರಿವೇಳೆ ಬ್ಲಾಸ್ಟಿಂಗ್‌ ನಡೆಸದಂತೆ ನಿರ್ಬಂಧ ಹೇರಲಾಗಿದೆ ಎಂದರು.

ಸಂಸದೆ ಅಸಮಾಧಾನ: ಅಸಮಾಧಾನಗೊಂಡ ಸಂಸದೆ ಸುಮಲತಾ ಅವರು ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸದರೆ ಸಾಲದು ಅದು ಕಾರ್ಯಗತಗೊಳ್ಳಬೇಕು. ರಾತ್ರಿವೇಳೆ ಬ್ಲಾಸ್ಟಿಂಗ್‌ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಆದರೆ ನಿಮಗೆ ಮಾಹಿತಿ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಪೊಲೀಸ್‌ ಅಧಿಕಾರಿಗಳು ಈ ಬಗ್ಗೆ ಏನು ಮಾಡುತ್ತಿದ್ದೀರಿ? ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಾಕೀತು ಮಾಡಿದರು. ಬೇಬಿ ಬೆಟ್ಟದ ಸುತ್ತಮುತ್ತ ನಡೆಯುತ್ತಿರುವ ಕಲ್ಲುಕ್ವಾರಿ ಹಾಗೂ ಸ್ಟೋನ್‌ ಕ್ರಷರ್‌ಗಳನ್ನು ಅನಿರ್ಧಿಷ್ಟಾವಧಿ ಯವರೆಗೆ ನಿಲ್ಲಿಸಲಾಗಿದೆ ಎಂದರು.

ಎಲ್ಲ ಕಡೆಯಲ್ಲಿಯೂ ಕ್ರಮ: ತಾಪಂ ಸದಸ್ಯ ಸಿ.ಎಸ್‌.ಗೋಪಾಲಗೌಡ ಮಾತನಾಡಿ, ಶ್ರೀರಂಗಪಟ್ಟಣದ ಅನೇಕ ಭಾಗಗಳಲ್ಲಿ ಗಣಿಗಾರಿಕೆ ತಡೆಗೆ ಏಕೆ ಕ್ರಮವಹಿಸಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸಿ ಶೈಲಜಾ, ಕೆಆರ್‌ಎಸ್‌ ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶ, ಶ್ರೀರಂಗಪಟ್ಟಣ ಹಾಗೂ ಕೆ.ಆರ್‌.ಪೇಟೆ ಭಾಗಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಮೇಲೂ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಪಂ ಸದಸ್ಯ ಅಶೋಕ ಮಾತನಾಡಿ, ಸ್ಟೋನ್‌ ಕ್ರಷರ್‌ ನಡೆಸಲು ಹಣ ಹೂಡಿಕೆ ಮಾಡಿದ್ದೇವೆ. ಈ ಸ್ಥಳದಿಂದ ಬೇರೆಡೆಗೆ ನಮ್ಮ ಕ್ರಷರ್‌ಗಳನ್ನು ಸ್ಥಳಾಂತರ ಮಾಡಿಕೊಡಿ ಎಂದು ಸಂಸದೆ ಸುಮಲತ ಅವರನ್ನು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಸ್ಟೋನ್‌ ಕ್ರಷರ್‌ ಸ್ಥಳಾಂತರ ಮಾಡುವ ವಿಚಾರ ನನಗೆ ಸಂಬಂಧಿಸಿಲ್ಲ. ಒಟ್ಟಾರೆ ಗಣಿಗಾರಿಕೆ ಸಂಪೂರ್ಣ ನಿಲ್ಲಬೇಕು ಭಾಗದ ರೈತರು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸಬೇಕು ಎಂದರು.

Advertisement

ತಾಪಂ ಅಧ್ಯಕ್ಷೆ ಸುಮಲತಾ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಜಿಪಂ ಸದಸ್ಯರಾದ ಸಿ.ಅಶೋಕ, ತಿಮ್ಮೇಗೌಡ, ಅನುಸೂಯ, ಶಾಂತಲಾ, ಎಸಿ ವಿ.ಆರ್‌.ಶೈಲಜಾ, ತಹಶೀಲ್ದಾರ್‌ ಪ್ರಮೋದ್‌ ಎಲ್.ಪಾಟೀಲ್, ಇಒ ಆರ್‌.ಪಿ.ಮಹೇಶ್‌, ಸಿಪಿಐ ರವೀಂದ್ರ ಇತರರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next