ಕೋಲಾರ: ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಜೊತೆಗೆ ನಾಡ ಕಚೇರಿಗಳಲ್ಲಿನಅವ್ಯವಸ್ಥೆ ಸರಿಪಡಿಸಿ ಸರ್ಕಾರಿ ಕೆರೆ-ಕುಂಟೆ, ಗುಂಡು ತೋಪು ಮತ್ತು ಸರ್ಕಾರಿ ಆಸ್ತಿ ಮಾರಾಟಕ್ಕಿಟ್ಟಿರುವ ಅಧಿಕಾರಿಗಳು ಮತ್ತು ಭೂಗಳ್ಳರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕ್ರಮ ಕೈಗೊಳ್ಳಿ: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲೂಕು ಕಚೇರಿ ಭ್ರಷ್ಟಚಾರದ ಕೂಪವಾಗಿದೆ. ಇಲಾಖೆ ಅಧಿ ಕಾರಿಗಳು ತಾಲೂಕಿನ 37 ಕೆರೆಗಳ 650 ಎಕರೆ ಜಮೀನು, 19 ಗುಂಡುತೋಪಿನ 176ಎಕರೆ ಜಮೀನು, ಸರ್ಕಾರಿ ಕುಂಟೆ, ತೋಪು 31 ಸರ್ವೇ ನಂಬರ್‌ಗಳ 430 ಎಕರೆ ಜಮೀನು, 5 ಸರ್ಕಾರಿ ಬೆಟ್ಟಗಳ 130 ಎಕರೆ ಆಸ್ತಿಯನ್ನು ಅರಣ್ಯ ಭೂಮಿಯ 300ಎಕರೆ ಆಸ್ತಿಯನ್ನು ಖಾತೆ ಪಹಣಿ ಮಾಡಿಕೊಟ್ಟು ಭೂಗಳ್ಳರಿಗೆ ಮಾರಿಕೊಂಡಿರುವ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಸರ್ಕಾರಿ ಆಸ್ತಿ ಮಾರಾಟ: ಸರ್ಕಾರಿ ಆಸ್ತಿಗಳಿಗೆ ಖಾತೆ ಪಹಣಿ ಮಾಡಿಕೊಂಡು 180 ಕೋಟಿ ರೂ. ಸರ್ಕಾರಿ ಆಸ್ತಿ ಮೇಲೆಯೇ ಸಾಲ ತೆಗೆದುಕೊಂಡಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ವಿಎ, ಆರ್‌ಐ, ಉಪ ತಹಶೀಲ್ದಾರ್‌ರವರೇ ಸರ್ಕಾರಿ ಆಸ್ತಿ ಗಳಿಗೆ ದಾಖಲೆ ಮಾಡಿದ್ದು, ಸಾರ್ವಜನಿಕ ಕೆಲಸಕ್ಕಿಂತ ಸರ್ಕಾರಿ ಆಸ್ತಿ ಮಾರಾಟ ಮಾಡುವಲ್ಲಿ ನಿರತ ರಾಗಿದ್ದಾರೆಂದು ದೂರಿದರು.
ಕಡಿವಾಣ ಹಾಕಿ: ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ, ಗ್ರಾಮೀಣ ಪ್ರದೇಶ ಗಳಲ್ಲಿ ಕಾಣೆಯಾಗಿರುವ ಆರ್‌ಐ, ವಿಎ ಗಳನ್ನು ಹುಡುಕಿಕೊಡಿ. ನಾಡಕಚೇರಿ ಗಳಲ್ಲಿ ಸರ್ವರ್ ಸಮಸ್ಯೆ ನಿವಾರಿಸಿ,ದಲ್ಲಾಳಿಗಳ ಅಬ್ಬರಕ್ಕೆ ಕಡಿವಾಣ ಹಾಕಬೇಕು ಎಂದು ದೂರಿದರು. ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ಕೊಂಡಪ್ಪ, ಈ ವಿಚಾರದ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದು ಅಕ್ರಮ ಸರ್ಕಾರಿ ಭೂಮಿ ದಾಖಲೆಗಳ ಬಗ್ಗೆ ಸಭೆ ಕರೆಯುವ ಭರವಸೆ ನೀಡಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್‌ಶ್ರೀನಿವಾಸ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವಕ್ಕಲೇರಿ ಹನುಮಯ್ಯ, ಮೀಸೆ ವೆಂಕಟೇಶಪ್ಪ, ಸುಪ್ರೀಂ ಚಲ, ಸುಧಾಕರ್, ನವೀನ್ ಪೊಮ್ಮರಹಳ್ಳಿ, ತೆರ್ನಹಳ್ಳಿ ಆಂಜಿನಪ್ಪ, ಮಂಜುನಾಥ್ ಮತ್ತಿತರರಿದ್ದರು.