Advertisement

ಹೊರ ರಾಜ್ಯಗಳಿಂದ ಬರುವ ವಿಗ್ರಹಕ್ಕಿಲ್ಲ ತಡೆ

04:17 PM Sep 07, 2018 | Team Udayavani |

ಬಳ್ಳಾರಿ: ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನೇ ಪ್ರತಿಷ್ಠಾಪಿಸುವ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಂಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಹೊರ ರಾಜ್ಯಗಳಿಂದ ತಂದು ನಗರದಲ್ಲಿ ಮಾರಾಟ ಮಾಡಲಾಗುವ ಪರಿಸರ ವಿರೋಧಿ ಪಿಒಪಿ ಗಣೇಶ್‌ ವಿಗ್ರಹ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ.

Advertisement

ಬಳ್ಳಾರಿ ಮಹಾನಗರ ಪಾಲಿಕೆ ಸೇರಿ ತಾಲೂಕು, ಗ್ರಾಮೀಣ ಪ್ರದೇಶಗಳಲ್ಲಿ ಗಣೇಶ ಹಬ್ಬ ಆಚರಿಸಲು ಮಿತ್ರ
ಮಂಡಳಿಗಳು ಸಜ್ಜಾಗುತ್ತಿವೆ. ಕಳೆದ ಒಂದು ತಿಂಗಳಿಂದಲೇ ಅನ್ಯರಾಜ್ಯಗಳ ವಿಗ್ರಹ ತಯಾರಕರು ನಗರದಲ್ಲಿ
ಬಿಡಾರ ಹೂಡಿದ್ದು, ಯುವಕರು, ಸಂಘ ಸಂಸ್ಥೆಗಳು ಮುಂಗಡ ಹಣ ನೀಡಿ ತಮಗಿಷ್ಟವಾದ ಗಣೇಶ ಮೂರ್ತಿ ತಯಾರಿಸಿಕೊಳ್ಳುತ್ತಿದ್ದಾರೆ. 

ಆದರೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಈಗಾಗಲೇ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಸೇರಿ ಆಯಾ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗಣೇಶ ವ್ಯಾಪಾರಿ, ಉದ್ಯಮಿಗಳ ಸಭೆ ಕರೆಯಲಾಗಿದ್ದು, ಯಾವುದೇ ಕಾರಣಕ್ಕೂ ಪಿಒಪಿ ಗಣೇಶ ಮೂರ್ತಿ ಸಿದ್ಧಪಡಿಸುವುದು ಮತ್ತು ಹೊರ ರಾಜ್ಯಗಳಿಂದ ತಂದು ಮಾರಾಟ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜತೆಗೆ ವ್ಯಾಪಾರಿ, ಉದ್ಯಮಿಗಳಿಂದ ಮುಚ್ಚಳಿಕೆಯನ್ನೂ ಬರೆಸಿಕೊಳ್ಳಲಾಗಿದ್ದು, ಒಂದು ವೇಳೆ ಉಲ್ಲಂಘಿಸಿದರೆ, ವಿಗ್ರಹಗಳನ್ನು ಜಪ್ತಿ ಮಾಡಿಕೊಳ್ಳುವ ಜತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅಲ್ಲದೇ, ಪಿಒಪಿ ಗಣೇಶ ವಿಗ್ರಹಗಳಿಂದ ವ್ಯಾಪಾರಿಗಳಿಗೆ ಆಗುವ ಅನುಕೂಲ ಮತ್ತು ಪರಿಸರಕ್ಕೆ ಆಗುವ ಅನಾನುಕೂಲಗಳ ಬಗ್ಗೆಯೂ ವ್ಯಾಪಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಪಿಒಪಿ ವಿಗ್ರಹ ಪ್ರತಿಷ್ಠಾಪಿಸುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ವಿಷಕಾರಿ, ರಸಾಯನಿಕ, ಲೋಹ ಲೇ ಪಿತ ಪಿಒಪಿ ವಿಗ್ರಹ ಪ್ರತಿಷ್ಠಾಪಿಸಿ,ಅವುಗಳನ್ನು ಬಾವಿ, ಕಾಲುವೆ, ಕೆರೆಗಳಲ್ಲಿ ವಿಸರ್ಜನೆ ಮಾಡುವುದರಿಂದ ಅಂತರ್ಜಲ, ಕುಡಿವ ನೀರು ಮಲಿನವಾಗಲಿದೆ. ಜಲಚರ ಪ್ರಾಣಿಗಳಿಗೆ ತೊಂದರೆಯಾಗಲಿದೆ.

ಮಾತ್ರವಲ್ಲ, ಮಣ್ಣಿನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಲಿದೆ. ಇದರಿಂದ ಸ್ಥಳೀಯ ಗಣೇಶ ಉದ್ದಿಮೆದಾರರ ವ್ಯಾಪಾರ ವೃದ್ಧಿಯಾಗಿ ಆರ್ಥಿಕಾಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೇ, ಉದ್ದಿಮೆದಾರರು ಸಹ ನಮ್ಮ ಸಂಘಟನೆಯಿಂದಲೇ ಪಿಒಪಿ ಗಣೇಶನನ್ನು ಮಾರಾಟ ಮಾಡದಂತೆ ನಿಯಂತ್ರಣಕ್ಕೆ
ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ| ಹನುಮಂತಪ್ಪ ತಿಳಿಸಿದ್ದಾರೆ.
 
ಪೊಲೀಸ್‌ ಇಲಾಖೆಗೆ ಬಂದಿಲ್ಲ ಪತ್ರ: ನಗರ ಸೇರಿ ಜಿಲ್ಲೆಯಲ್ಲಿ ಗಣೇಶ ಉದ್ದಿಮೆದಾರರು ಅಧಿಕಾರಿಗಳ ಮಾತಿಗೆ ಓಗೊಟ್ಟು ಪಿಒಪಿ ವಿಗ್ರಹ ತಯಾರಿಸದಿದ್ದರೂ, ಹಬ್ಬಕ್ಕೆ ಇನ್ನೊಂದು ವಾರ ಇರುವಾಗ ಹೊರ ರಾಜ್ಯಗಳಲ್ಲಿ ತಯಾರಾದ ಪಿಒಪಿ ಗಣೇಶ ವಿಗ್ರಹಗಳು ನಗರ, ಜಿಲ್ಲೆಗೆ ಲಗ್ಗೆಯಿಡಲಿದ್ದು, ಸುತ್ತಮುತ್ತಲಿನ ಗ್ರಾಮೀಣ ಭಾಗದ ಯುವಕರು,
ರಾತ್ರೋರಾತ್ರಿ ಬಂದು ವಿಗ್ರಹಗಳನ್ನು ಕೊಂಡೊಯ್ಯುವ ಸಾಧ್ಯತೆಯಿದೆ. 

Advertisement

ಹೀಗಾಗಿ ಪಿಒಪಿ ಗಣೇಶಗಳು ಹೊರ ರಾಜ್ಯಗಳಿಂದ ಜಿಲ್ಲೆಗೆ ತರುವ ಮುನ್ನವೇ ಪೊಲೀಸ್‌ ಇಲಾಖೆ ಹೊರ
ವಲಯದಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಮಾಡಿದರೆ ಪಿಒಪಿ ಗಣೇಶ ವಿಗ್ರಹ ನಿಯಂತ್ರಣ
ಸಾಧ್ಯವಾಗಲಿದೆ.  ಆದರೆ, ಮಾಲಿನ್ಯನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆಯಿಂದ ಈವರೆಗೂ ಪೊಲೀಸ್‌ ಇಲಾಖೆಗೆ ಪತ್ರ ಬರೆದಿಲ್ಲ. ಒಂದು ವೇಳೆ ಬರೆದರೆ ಚೆಕ್‌ಪೋಸ್ಟrಗಳಲ್ಲಿ ಸಿಬ್ಬಂದಿಗಳನ್ನು ಅಲರ್ಟ್‌ ಮಾಡಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ಜಗದೀಶ್‌ ತಿಳಿಸಿದ್ದಾರೆ.

ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಿ: ಓಣಿ, ಬಡಾವಣೆಗಳಲ್ಲಿ ಸಾಮೂಹಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸುವ
ಮಂಟಪಗಳಿಗೂ ಪರಿಸರ ಸ್ನೇಹಿ ವಸ್ತುಗಳನ್ನೆ ಬಳಸಿ, ಪ್ಲಾಸ್ಟಿಕ್‌ ವಸ್ತುಗಳನ್ನು ನಿಷೇಧಿಸಬೇಕು. ಬಾವಿ, ಕೆರೆ, ಕಾಲುವೆ, ನದಿಗಳಲ್ಲಿ ಗಣೇಶನನ್ನು ವಿಸರ್ಜನೆ ಮಾಡುವುದರಿಂದ ಅಂತರ್ಜಲ, ಕುಡಿವ ನೀರಿನ ಸೆಲೆ ಎಲ್ಲವೂ ಕಲುಷಿತಗೊಳ್ಳುತ್ತದೆ.

ಬದಲಿಗೆ ಬಕೇಟ್‌, ಸಂಚಾರಿ ವಿಸರ್ಜನಾ ವಾಹನದಲ್ಲಿ ಅಥವಾ ಸೂಚಿತ ಕೆರೆಗಳಲ್ಲಿ ವಿಸರ್ಜನೆ ಮುನ್ನ ವಿಗ್ರಹಕ್ಕೆ
ಬಳಸಿದ್ದ ಹೂವು, ವಸ್ತ್ರ, ಪ್ಲಾಸ್ಟಿಕ್‌ ಹಾರ ತೆಯಬೇಕು. ಗಣಪತಿ ಹಬ್ಬದಲ್ಲಿ ಪಟಾಕಿ ಸಿಡಿಸಬಾರದು. ಪಟಾಕಿಯ ಹೊಗೆ
ಮಾಲಿನ್ಯಕಾರಕವಾಗಿದ್ದು, ರಸ್ತೆಗಳು ತ್ಯಾಜ್ಯದಿಂದ ತುಂಬುತ್ತವೆ. ಪಟಾಕಿ ಶಬ್ದದಿಂದ ಶಬ್ದಮಾಲಿನ್ಯ ಉಂಟಾಗುತ್ತದೆ. ಇನ್ನು ಹಬ್ಬದಲ್ಲಿ ಬಳಸಿದ್ದ ಹೂವಿನ ಹಾರ, ತಟ್ಟೆ, ಲೋಟ, ಎಲೆ, ಎಸೆಯಬಾರದು. ಮನೆಯ ಹತ್ತಿರ ಬರುವ ಕಸದ ವಾಹನಗಳಿಗೆ ನೀಡಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯು ಮನವಿ ಮಾಡಿದೆ.

ಪಿಒಪಿ ಗಣೇಶ ವಿಗ್ರಹಗಳ ನಿಯಂತ್ರಣಕ್ಕೆ ಈಗಾಗಲೇ ಜಿಲ್ಲೆಯ ಆಯಾ ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಹೊರ ರಾಜ್ಯಗಳಿಂದ ಗಣೇಶ ವಿಗ್ರಹಗಳನ್ನು ತರುವುದಕ್ಕೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಿಂದ ಈ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಜತೆಗೆ ವ್ಯಾಪಾರಿ, ಉದ್ದಿಮೆದಾರರ ಮತ್ತೂಂದು ಸಭೆ ಕರೆದು ಕಟ್ಟುನಟ್ಟಿನ ಸೂಚನೆ ನೀಡಲಾಗುವುದು.
 ಶಿವಮೂರ್ತಿ, ಅಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ. 

ಗಣೇಶ ಹಬ್ಬದ ನಿಮಿತ್ತ ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿರುವ ವಿಗ್ರಹಗಳ ಉದ್ದಿಮೆದಾರರ ಸಭೆ ಕರೆಯಲಾಗಿದ್ದು, ಪಿಒಪಿ ವಿಗ್ರಹಗಳನ್ನು ತಯಾರಿಸದಂತೆ ಮತ್ತು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜತೆಗೆ ಅವರಿಂದ ಮುಚ್ಚಳಿಕೆಯನ್ನೂ ಬರೆಸಿಕೊಳ್ಳಲಾಗಿದೆ. ಸ್ಥಳೀಯ ಉದ್ಯಮಿಗಳು ಸಹ ಸೂಚಿಸುವ ಸ್ಥಳಗಳಲ್ಲಿ ಮಾತ್ರ ಮಣ್ಣಿನ ವಿಗ್ರಹಗಳನ್ನು ಮಾರಾಟ ಮಾಡಿಕೊಳ್ಳಬೇಕು. ಹೊರ ರಾಜ್ಯಗಳಿಂದ ವಿಗ್ರಹಗಳನ್ನು ತಡೆಯಲು ಪೊಲೀಸ್‌ ಇಲಾಖೆಗೆ ಪತ್ರ ಬರೆಯಬೇಕಾಗಿದೆ.  
ಹನುಮಂತಪ್ಪ, ಆರೋಗ್ಯಾಧಿಕಾರಿ, ಮಹಾನಗರ ಪಾಲಿಕೆ, ಬಳ್ಳಾರಿ.

ಹೊರ ರಾಜ್ಯಗಳಿಂದ ತಂದು ಮಾರಾಟ ಮಾಡುವ ಪಿಒಪಿ ವಿಗ್ರಹಗಳನ್ನು ನಿಯಂತ್ರಿಸುವ ಸಂಬಂಧ ಪಾಲಿಕೆ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಈವರೆಗೂ ಯಾವುದೇ ಪತ್ರ ಬಂದಿಲ್ಲ. ಒಂದು ವೇಳೆ ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. 
 ಜಗದೀಶ್‌, ಹೆಚ್ಚುವರಿ ಎಸ್‌ಪಿ, ಬಳ್ಳಾರಿ

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next