ರಬಕವಿ-ಬನಹಟ್ಟಿ: ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ರೈತ ನಾಗಪ್ಪ ಗಣಿ ಎಂಬುವರ ಜಮೀನಿನ ಹರಾಜು ಪ್ರಕ್ರಿಯೆ ನಿಲ್ಲಿಸಬೇಕು. ಸಾಲ ತುಂಬುವ ನಿಟ್ಟಿನಲ್ಲಿ ಒನ್‌ಟೈಮ್ ಸೆಟಲ್ ಮೆಂಟ್‌ಗೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ಅವಕಾಶ ನೀಡಬೇಕು. ಇಲ್ಲದಿದ್ದರೆ ಬ್ಯಾಂಕ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದವರು ಅನಿರ್ದಿಷ್ಟಾವಧಿ ಮುಷ್ಕರ ಕೈ ಗೊಳ್ಳಲಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಮತ್ತು ರೈತ ಸಂಘಟನೆಯ ಮುಖಂಡ ಮುತ್ತಪ್ಪ ಕೋಮಾರ ಹೇಳಿದರು.
ಗುರುವಾರ ಸ್ಥಳೀಯ ಬ್ಯಾಂಕ್ ಆಫ್ ಬರೋಡಾ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರ ಸಾಲಕ್ಕಾಗಿ ಭೂಮಿ ಹರಾಜು ಮಾಡುವ ಪ್ರಕ್ರಿಯೆ ಎಲ್ಲೂ ನಡೆದಿಲ್ಲ. ರೈತರು ಬಹಳಷ್ಟು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ರೈತರ ಸಾಲಕ್ಕಾಗಿ ಅವರ ಜಮೀನನ್ನು ಹರಾಜು ಮಾಡಬಾರದು ಎಂದು ಸರ್ಕಾರವೇ ತಿಳಿಸಿದ್ದರೂ ಬ್ಯಾಂಕ್ ಹರಾಜು ಪ್ರಕ್ರಿಯೆಗೆ ಮುಂದಾಗಿರುವುದು ಖಂಡನೀಯ. ರಾಜ್ಯ ರೈತರ ರಕ್ಷಣೆ ಎಲ್ಲರ ಹೊಣೆಯಾಗಿದೆ. ಅ ಧಿಕಾರಿಗಳು ಹರಾಜು ಪ್ರಕ್ರಿಯೆ ನಿಲ್ಲಿಸಿ ರೈತನಿಗೆ ಒಂದೇ ಕಂತಿನಲ್ಲಿ ಹಣ ತುಂಬಲು ಅವಕಾಶ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ ರೈತ ಸಂಘ ಉಗ್ರ
ಹೋರಾಟ ಕೈಗೊಳ್ಳಲಿದೆ ಎಂದು ಮುತ್ತಪ್ಪ ಕೋಮಾರ ಎಚ್ಚರಿಕೆ ನೀಡಿದರು. ರೈತ ಮುತ್ತಪ್ಪ ಗಣಿ ಮಾತನಾಡಿದರು.
ಮುತ್ತಪ್ಪ ಕೋಮಾರ ದೂರವಾಣಿಯ ಮೂಲಕ ಬ್ಯಾಂಕ್ ವಿಭಾಗೀಯ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಕೂಡಾ ಪ್ರಯೋಜನಕ್ಕೆ ಬರಲಿಲ್ಲ. ಈ ಕುರಿತು ಇದೇ 13 ರಂದು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು. ರೈತ ಮುಖಂಡರಾದ ಗಂಗಾಧರ ಮೇಟಿ, ಸುಭಾಸ ಶಿರಬೂರ, ಭೀಮಶಿ ಕರಿಗೌಡರ, ಈರಪ್ಪ ಹಂಚಿನಾಳ, ಸಂಗಪ್ಪ ನಾಗರೆಡ್ಡಿ, ಸುರೇಶ ಚಿಂಚಲಿ, ಶಿವಪ್ಪ ಹೋಟಕರ ಇದ್ದರು.