Advertisement

ಗ್ರಾಮ ವಾಸ್ತವ್ಯದ ನಾಟಕ ನಿಲ್ಲಿಸಿ, ಬರ ನಿರ್ವಹಿಸಿ

09:08 PM Jun 17, 2019 | Team Udayavani |

ಮೈಸೂರು: ಮುಖ್ಯಮಂತ್ರಿಗಳೇ ಗ್ರಾಮ ವಾಸ್ತವ್ಯದ ನಾಟಕ ನಿಲ್ಲಿಸಿ, ಬರ ಪರಿಸ್ಥಿತಿ ನಿರ್ವಹಣೆಯತ್ತ ಗಮನ ಕೊಡಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ತೀವ್ರ ಬರ ಪರಿಸ್ಥಿತಿ ಇದ್ದು, ಮೈಸೂರು -ಚಾಮರಾಜ ನಗರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಶೇ.80ರಷ್ಟು ಹಳ್ಳಿಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ.

ಬರ ಪರಿಸ್ಥಿತಿಯಿಂದಾಗಿ ರೈತ ಕಂಗಾಲಾಗಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೆ ಗ್ರಾಮ ವಾಸ್ತವ್ಯ ಏಕೆ ಬೇಕು? ನಿಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಅವರಿಂದ ಬರ ಪರಿಸ್ಥಿತಿ ನಿರ್ವಹಣೆ ಮಾಡಿಸಲು ಆಗಲ್ಲವೇ, ಅವರ ಮೇಲೊಂದು ಕಣ್ಣಿಟ್ಟು ಕೆಲಸ ಮಾಡಿಸಿ ಎಂದು ಒತ್ತಾಯಿಸಿದರು.

ಜಿಂದಾಲ್‌ ಕಂಪನಿಗೆ ಭೂಮಿ ಹಂಚಿಕೆ ವಿಚಾರದಲ್ಲಿ ರಾಜಕೀಯ ಮಾಡಬೇಕಾದ ಅಗತ್ಯ ನನಗಿಲ್ಲ. ಜಿಂದಾಲ್‌ ಕಂಪನಿಗೆ ಭೂಮಿ ಪರಭಾರೆ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅವರು ತೀರ್ಮಾನ ಮಾಡುವುದೂ ಇಲ್ಲ.

ಈ ಕಾರಣಕ್ಕೆ ನಾವು ಪ್ರತಿಭಟನಾ ಧರಣಿ ಮಾಡುವುದು ವಾರದ ಹಿಂದೆಯೇ ಮುಖ್ಯಮಂತ್ರಿಗೆ ಗೊತ್ತಿತ್ತು. ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ, ನಾವು ಅಹೋರಾತ್ರಿ ಧರಣಿ ಮುಗಿಸಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮಾತುಕತೆಗೆ ಕರೆಯುವ ನಾಟಕವಾಡಿ, ಯಡಿಯೂರಪ್ಪ ಮಾತುಕತೆಗೆ ಬರಲಿಲ್ಲ.

Advertisement

ಸಹಕಾರ ಕೊಡದೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ನನಗೆ ರಾಜ್ಯದ ಒಳಿತು ಮುಖ್ಯವೇ ಹೊರತು, ಜಿಂದಾಲ್‌ ನಂತಹ ಕಂಪನಿ ವಿಚಾರದಲ್ಲಿ ರಾಜಕೀಯ ಮಾಡಬೇಕಾದ ಅಗತ್ಯ ನನಗಿಲ್ಲ ಎಂದು ತಿರುಗೇಟು ನೀಡಿದರು.

ಶ್ರೀಕಂಠೇಶ್ವರನ ದರ್ಶನ ಪಡೆದ ಬಿಎಸ್‌ವೈ
ನಂಜನಗೂಡು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಂಜನಗೂಡಿನಲ್ಲಿ ಶ್ರೀಕಂಠೇಶ್ವರನ ದರ್ಶನ ಪಡೆದರು. ಫ‌ಲನೀಡುವ ಹುಣ್ಣಿಮೆ ಎಂದೇ ಪ್ರಸಿದ್ಧವಾದ ಜೇಷ್ಠ ಮಾಸದ ಹುಣ್ಣಿಮೆ ಈ ಬಾರಿ ಸೋಮವಾರದಂದು ಬಂದಿದ್ದು, ಈ ಪುಣ್ಯಕಾಲದಲ್ಲಿ ದಕ್ಷಿಣ ಕಾಶಿ ಖ್ಯಾತಿಯ ಶ್ರೀಕಂಠನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ದೇವಾಲಯದ ಸನ್ನಿಧಿಗೆ ಬಂದ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪ ಅವರನ್ನು ಶಾಸಕ ಬಿ.ಹರ್ಷವರ್ಧನ , ನಗರಸಭಾ ಸದಸ್ಯ ಮಹದೇವಸ್ವಾಮಿ, ಮೀನಾಕ್ಷಿ ನಾಗರಾಜು, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್‌, ತಾಪಂ ಅಧ್ಯಕ್ಷ ಬಿ.ಎಸ್‌.ಮಹದೇವಪ್ಪ, ರಾಮು ಮತ್ತಿತರರು ಸ್ವಾಗತಿಸಿ ಬರಮಾಡಿಕೊಂಡರು.

ಈ ವೇಳೆ ಮುಖಂಡರಾದ ಎಸ್‌.ಮಹದೇವಯ್ಯ, ನಗರಾಧ್ಯಕ್ಷ ಬಾಲಚಂದ್ರ, ಕಾಪು ಸಿದ್ಧಲಿಂಗಸ್ವಾಮಿ, ವಿನಯಕುಮಾರ್‌, ಕೃಷ್ಣಪ್ಪ ಗೌಡ, ಬಸವಣ್ಣ, ದೇವಾಲಯದ ಅಭಿವೃದ್ಧಿ ಮಂಡಳಿ ಸದಸ್ಯ ಇಂಧನ ಬಾಬು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next