ಶಿರಸಿ: ಇಲ್ಲಿನ ಶಿರಸಿ ಹುಸರಿ ಮಾರ್ಗವಾಗಿ ಗೋಣರು, ಕಂಡ್ರಾಜಿಗೆ ಬಸ್ ಬಿಡಬೇಕು. ಈ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಹುಸರಿಯಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಸಾರಿಗೆ ಬಸ್‌ಗಳನ್ನು ತಡೆದು ಸೋಮವಾರ ಪ್ರತಿಭಟಿಸಿದರು.
ಶಿರಸಿಯಿಂದ ಕಂಡ್ರಾಜಿ ಹೋಗುವ ಬಸ್ ಹಾಗೂ ಜಡೆಯಿಂದ ಶಿರಸಿಗೆ ಬರುವ ಈ ಎರಡು ಬಸ್‌ಗಳನ್ನು ತಡೆದು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ಸ್ಥಳಕ್ಕೆ ಸಾರಿಗೆ ಅಧಿಕಾರಿಗಳು ಬಾರದೆ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಶಿರಸಿ-ಹುಸರಿ ಮಾರ್ಗದಲ್ಲಿ ವಿವಿಧ ಸಮಯದಲ್ಲಿ 3 ಬಸ್‌ಗಳು ಸಂಚರಿಸುತ್ತಿದ್ದರೂ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮಯಕ್ಕೆ ಅನುಕೂಲವಾಗುವಂತೆ ಇಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಶಿರಸಿಯಿಂದ ಹುಸರಿ-ಗೊಣೂರು ಮಾರ್ಗವಾಗಿ ಹೆಚ್ಚುವರಿ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು.
ಬೆಳಗಿನ ಬಸ್ ಜಡೆಯಿಂದ ಆರಂಭಿಸಿ ಒಂದೆರಡು ನಿಲುಗಡೆ ಸ್ಥಳಗಳಲ್ಲಿಯೇ ಭರ್ತಿಯಾಗಿ ಬರುತ್ತದೆ. ಇದರಿಂದ ಬಚಗಾಂವ, ಬಸಳೇಕೊಪ್ಪ, ಕಾಳೆಹೊಂಡ, ಬಿಕ್ಕನಳ್ಳಿ, ಹುಸರಿ, ನುರಕಲಕೊಪ್ಪ, ಬ್ಯಾಗದ್ದೆ, ಬದ್ರಾಪುರ, ಕಾನಕೊಪ್ಪ, ಮಾಡನಕೇರಿ, ಗೌಡಕೊಪ್ಪ, ಗೋಣೂರು, ಕಾಯಗುಡ್ಡಿ, ಕಂಡ್ರಾಜಿ ಭಾಗದ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಜಾಗವೇ ಇರುವುದಿಲ್ಲ. ಈ ಬಸ್ ತಪ್ಪಿದರೆ ನಂತರದ ಬಸ್ ವಿಳಂಬವಾಗಿ ಬರುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಶಾಲೆಗೆ ಸಮಯಕ್ಕೆ ಸರಿಯಾಗಿ ತೆರಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಅಳಲು ತೋಡಿಕೊಂಡರು. ಸಾರಿಗೆ ಅಧಿಕಾರಿಗಳಾದ ಎಸ್.ಎಂ. ಕುರ್ತಕೋಟಿ ಹಾಗೂ ಎಸ್.ಟಿ. ಭಟ್ಟ ಸ್ಥಳಕ್ಕೆ ತೆರಳಿ ಗ್ರಾಮಸ್ಥರ, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ಕೊಡುವುದಾಗಿ ಭರವಸೆಯಿತ್ತರು.
ಗ್ರಾಮಸ್ಥರೊಂದಿಗೆ ರವಿ ಹೆಗಡೆ, ರವಿ ಗುನಗಾ, ದಾಮೋದರ ಗೌಡ, ಈಶ್ವರ ಗೌಡ, ಮಹೇಶ ನಾಯ್ಕ, ಶ್ರೀಕಾಂತ ಗಂಗೇಮತ, ಸುಭಾಸ ಗುನಗಾ, ಶ್ರೀಪತಿ ಭಟ್ಟ, ವಿವೇಕಾನಂದ ಶಿರಾಲಿ, ಸತೀಶ ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು.