Advertisement

ಕಟ್ಟೆಯಲ್ಲಿ ಮಣ್ಣು ತೆಗೆಯುವುದನ್ನು ನಿಲ್ಲಿಸಿ

03:01 PM May 10, 2019 | Team Udayavani |

ಹಾಸನ: ತಾಲೂಕಿನ ಸಾಲಗಾಮೆ ಗ್ರಾಮಕ್ಕೆ ಸೇರಿದ ಕಟ್ಟೆಯ ಮಣ್ಣನ್ನು ಅಕ್ರಮವಾಗಿ ತೆಗೆಯುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾಲಗಾಮೆ ಗ್ರಾಮಸ್ಥರು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

Advertisement

ತಾಲೂಕಿನ ಸಾಲಗಾಮೆ ಗ್ರಾಮದ ಸರ್ವೆ ನಂ. 158 ರಲ್ಲಿ 2.34 ಎಕರೆ ವಿಸ್ತೀರ್ಣದ ಮುಗುಳಿಕಟ್ಟೆ ಶಂಖ ಗ್ರಾಮಕ್ಕೆ ಹೋಗುವ ದಾರಿಯ ಪಕ್ಕದಲ್ಲಿದೆ. ಈ ಕಟ್ಟೆಯಲ್ಲಿ ಸುಮಾರು 15 ರಿಂದ 20 ಅಡಿ ಆಳದಲ್ಲಿ ಸ್ವಂತ ಜಮೀನಿಗಾಗಿ ಮಣ್ಣನ್ನು ತೆಗೆಯುತ್ತಿದ್ದಾರೆ ಎಂದು ಆಪಾದಿಸಿದರು.

ಕಟ್ಟೆಗೆ ಹೊಂದಿಕೊಂಡಂತೆ ನಮ್ಮ ಜಮೀನಿದೆ. ಆಳವಾಗಿ ಮಣ್ಣು ತೆಗೆಯುವುದರಿಂದ ಕಟ್ಟೆಯ ಬಳಿ ಭೂಮಿ ಕುಸಿಯುವ ಸಂಭವವಿದೆ. ದನ-ಕರುಗಳು ಕಟ್ಟೆಯ ಒಳಗಡೆ ಇರುವ ನೀರನ್ನು ಕುಡಿಯಲು ಇಳಿದರೆ ಮತ್ತೆ ಮೇಲಕ್ಕೆ ಬರುವುದು ಕಷ್ಟವಾಗಿ ಸಾಯುವ ಸಂಭವ ಇದೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದರೇ ಜಗಳಕ್ಕೆ ಬರುತ್ತಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಸ್ಥಳೀಯ ನಾಡ ಕಚೇರಿ, ತಹಶೀಲ್ದಾರ್‌ ಕಚೇರಿ, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಗುಳಿಕಟ್ಟೆ ಮಣ್ಣು ತೆಗೆದು ಅಪಾಯದ ಸ್ಥಿತಿ ತಂದಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ ಅವರು ತಕ್ಷಣವೇ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೆ.ಎಸ್‌. ನಿರ್ಮಲಾ, ಸಾಲಗಾಮೆ ಗ್ರಾಮದ ನಿವಾಸಿಗಳಾದ ಪ್ರಕಾಶ್‌, ಶಿವಲಿಂಗಯ್ಯ, ಸವಿತ, ಜಯಲಕ್ಷ್ಮೀ, ರುಕ್ಮಿಣಿ, ಅಕ್ಕಯಮ್ಮ, ರಮೇಶ್‌, ಸೂರಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next