ಬೆಳ್ತಂಗಡಿ : ಪ್ರಸ್ತುತ ರಾಜ್ಯದಲ್ಲಿ ಸರಕಾರಿ ಕನ್ನಡ ಶಾಲೆಗಳ ಶಿಕ್ಷಕರ ವರ್ಗಾವಣೆಯ ದಂಧೆ ನಡೆಯುತ್ತಿದ್ದು, ಇದು ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದೆ. ಹೀಗಾಗಿ ಕನ್ನಡ ಶಾಲೆಗಳ ಉಳಿವಿನ ದೃಷ್ಟಿಯಿಂದ ರಾಜ್ಯದ ಮುಖ್ಯಮಂತ್ರಿಯವರು ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಿ, ಬಡ ವಿದ್ಯಾರ್ಥಿಗಳು, ಶಿಕ್ಷಕರಿಗೆ ನ್ಯಾಯ ಒದಗಿಸಲಿ ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.
ಅವರು ಗುರುವಾರ ಇಲ್ಲಿನ ಮಿನಿ ವಿಧಾನಸೌಧದ ಆವರಣದಲ್ಲಿ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಿ ಮೋದಿಯವರು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರೈಲ್ವೇಯಲ್ಲಿ ಮೊದಲ ಬಾರಿಗೆ ಕನ್ನಡದ ಮುದ್ರಣ, ನೋಟಿನಲ್ಲಿ ಹಂಪಿ ಕನ್ನಡದ ರಥದ ಅಚ್ಚು, ವಿಶ್ವ ವಿಖ್ಯಾತ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯ ತಳದಲ್ಲಿ ಹಿಂದಿಗಿಂತಲೂ ಮೊದಲ ಸ್ಥಾನದಲ್ಲಿ ಕನ್ನಡವಿದೆ ಎಂದು ಪ್ರಶಂಸಿಸಿದರು.
ತಹಶೀಲ್ದಾರ್ ಮದನ್ ಮೋಹನ್ ಸಿ. ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ದಿನ ಮಾತ್ರ ನಾವು ಕನ್ನಡವನ್ನು ಆರಾಧಿಸುವ ಬದಲು ನಿತ್ಯವೂ ಪ್ರೀತಿಸುವ ಕೆಲಸ ಮಾಡಬೇಕು. ಇಡೀ ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಅಂದರೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಸಮೃದ್ಧ ಭಾಷೆ ಕನ್ನಡ ಎಂಬ ಹೆಮ್ಮೆ ನಮಗಿರಬೇಕು ಎಂದರು. ಪ್ರಧಾನ ಭಾಷಣ ಮಾಡಿದ ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ| ಎನ್.ಜಿ. ಪಟವರ್ಧನ್, ಪಂಚ ದ್ರಾವಿಡ ಭಾಷೆಗಳಲ್ಲಿ ತಮಿಳನ್ನು ಬಿಟ್ಟರೆ ಕನ್ನಡಕ್ಕೆ ಅತ್ಯಂತ ಪುರಾತನ ಭಾಷೆ ಎಂಬ ಹೆಗ್ಗಳಿಕೆ ಇದೆ. ಆದರೆ ಇಂದು ಇಂಗ್ಲಿಷ್ ವ್ಯಾಮೋಹದಿಂದ ನಾವು ಕನ್ನಡಕ್ಕೆ ಅನ್ಯಾಯ ಮಾಡುತ್ತಿದ್ದೇವೆ. ಅವುಗಳೆಲ್ಲವನ್ನು ಬಿಟ್ಟು ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು. ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಸದಸ್ಯರಾದ ಕೃಷ್ಣ ಆಚಾರ್ಯ, ಪ್ರವೀಣ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆ, ನಿವೃತ್ತ ಸೈನಿಕ ಎಂ.ಆರ್. ಜೈನ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಬಿ., ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮೊದಲಾದವರಿದ್ದರು.
ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ಎಸೆಸೆಲ್ಸಿಯ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಣ ಸಂಯೋಜಕ ಸುಭಾಸ್ ಜಾಧವ್ ಸ್ವಾಗತಿಸಿ, ಗೃಹರಕ್ಷಕ ದಳದ ಘಟಕಾಧಿಕಾರಿ ಜಯಾನಂದ ಲಾೖಲ ವಂದಿಸಿದರು. ವಾಣಿ ಪ.ಪೂ. ಕಾಲೇಜಿನ ಉಪನ್ಯಾಸಕ ಮಹಾಬಲ ಗೌಡ ನಿರೂಪಿಸಿದರು. ಬಳಿಕ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಅರ್ಥಪೂರ್ಣ ಆಗಲಿ
ಕನ್ನಡ ಶಾಲೆಗಳೇ ಉಳಿಯದಿದ್ದರೆ ಕರ್ನಾಟಕ ರಾಜ್ಯೋತ್ಸವಕ್ಕೆ ಅರ್ಥವಿಲ್ಲದಂತಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಈ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಪ್ರಯತ್ನದ ಜತೆಗೆ ಕನ್ನಡಕ್ಕಾಗಿ ಹೋರಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಕಾರ್ಯವಾಗಬೇಕು.
– ಹರೀಶ್ ಪೂಂಜ
ಶಾಸಕರು