ಯಾದಗಿರಿ: ಜಿಲ್ಲೆಯಲ್ಲಿ ಅನಧಿಕೃತವಾಗಿ ಬಯೋ-ಡೀಸೆಲ್ ಮಾರಾಟ ಮಾಡುತ್ತಿರುವ ದೂರು ಹಾಗೂ ಜಿಲ್ಲೆಯ ಕೆಲವೊಂದು ಪೆಟ್ರೋಲ್‌ಬಂಕ್‌ಗಳಲ್ಲಿ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿರುವುದರಿಂದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲು ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿಯವರೆಗೂ ಒಟ್ಟು 85 ರೈತರು ನೋಂದಣಿ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಖರೀದಿ ಕೇಂದ್ರಗಳಲ್ಲಿ ನಿಯೋಜಿಸಿದ ಅಧಿಕಾರಿ/ಸಿಬ್ಬಂದಿ ಕಡ್ಡಾಯವಾಗಿಕೇಂದ್ರ ಸ್ಥಾನದಲ್ಲೇ ಲಭ್ಯವಿದ್ದು, ಕಡ್ಡಾಯವಾಗಿಕಾರ್ಯನಿರ್ವಹಣೆ ಮಾಡಬೇಕು. ಇನ್ನೂ ವ್ಯಾಪಕಪ್ರಚಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 96,129 ಪಡಿತರ ಚೀಟಿದಾರರು ಪಡಿತರಪಡೆದಿದ್ದು, ಪ್ರತಿಶತ 34.94 ಪಡಿತರ ಚೀಟಿದಾರರು ಪಡಿತರ ಪಡೆದಿರುವುದಾಗಿ ತಿಳಿಸಿದರು. ತಾಲೂಕಿನ ಆಹಾರ ಶಿರಸ್ತೇದಾರರು/ನಿರೀಕ್ಷಕರುಗಳಿಗೆ ಉಪ ನಿರ್ದೇಶಕರ ಮೂಲಕ ಜಿಲ್ಲೆಯಲ್ಲಿ ಪಡಿತರ ಚೀಟಿಗಳನ್ನು ಹೊಂದಿದ್ದರೂ 3 ತಿಂಗಳಿಂದ ಪಡಿತರ ಪಡೆಯದ ಕುಟುಂಬ ಪಡಿತರ ಚೀಟಿಗಳ ವಿವರಗಳನ್ನು ಕೂಡಲೇ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆ ಕುರಿತು ಇದುವರೆಗೂ ಶೇ.71.14 ಪ್ರಗತಿ ಸಾಧಿಸಿದ್ದು,ಮುಂದಿನ ಸಭೆಯೊಳಗಾಗಿ ಪ್ರತಿ ತಾಲೂಕಿನಿಂದಲೂ ಶೇ.10ರಷ್ಟು ಪ್ರಗತಿ ಸಾಧಿಸಿ ಇ-ಕೆವೈಸಿ ಸಂಗ್ರಹಣೆಗಾಗಿ ಇನ್ನೂ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಸಾರ್ವಜನಿಕ ವಿತರಣಾ ಪದ್ಧತಿಯ ತಂತ್ರಾಂಶದಲ್ಲಿ ಕುಟುಂಬದ ಮುಖ್ಯಸ್ಥರು ಇಲ್ಲದ 3104 ಪಡಿತರ ಚೀಟಿಗಳಲ್ಲಿ 950 ಪಡಿತರ ಚೀಟಿಗಳು ಹಾಗೂ 255 ಆಧಾರ್ ನಂಬರ್ ಸೀಡಿಂಗ್ ಆಗದೇ ಇರುವ ಪಡಿತರ ಚೀಟಿಗಳಲ್ಲಿ 243 ಮತ್ತು ಒಂದಕ್ಕಿಂತ ಹೆಚ್ಚು ಕುಟುಂಬದ ಮುಖ್ಯಸ್ಥರು ಹೊಂದಿರುವ 40 ಪಡಿತರ ಚೀಟಿಗಳಲ್ಲಿ 20 ಪಡಿತರ ಚೀಟಿಗಳ ಕುರಿತು ಕ್ರಮ ಕೈಗೊಂಡಿರುವುದಾಗಿ ಉಪ ನಿರ್ದೇಶಕರು ತಿಳಿಸಿದರು. ಇನ್ನೂಳಿದ 2186 ಪಡಿತರ ಚೀಟಿಗಳ ಕುರಿತು ಕೂಡಲೇ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಕೋರಿ 13376 ಅರ್ಜಿಗಳು ಸ್ವೀಕೃತ ಗೊಂಡಿದ್ದು, ಅದರಲ್ಲಿ 13317 ಪಡಿತರ ಚೀಟಿಗಳನ್ನು ಆಹಾರ ನಿರೀಕ್ಷಕರ ಲಾಗಿನ್ನಲ್ಲಿ ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ 4537 ಪಡಿತರ ಚೀಟಿ ಅರ್ಜಿಗಳನ್ನು ತಿರಸ್ಕರಿಸಬಹುದಾಗಿದೆ. ಪ್ರಸ್ತುತ ಹೊಸಪಡಿತರ ಚೀಟಿಗಳ ಅರ್ಜಿಗಳನ್ನು ವಿಲೀನಗೊಳಿಸುವ ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ಅದಕ್ಕೆ ಜಿಲ್ಲಾಧಿಕಾರಿ ಸರ್ಕಾರದಿಂದ ಪಡಿತರ ಚೀಟಿಗಳನ್ನು ವಿಲೀನಗೊಳಿಸುವಂತೆ ನಿರ್ದೇಶನ ಬಂದ ಕೂಡಲೇ ಕಾಲಮಿತಿಯಲ್ಲಿ ವಿಳಂಬಕ್ಕೆ ಆಸ್ಪದ ನೀಡದಂತೆ ಪಡಿತರ ಚೀಟಿಗಳನ್ನು ವಿಲೀನಗೊಳಿಸುವಂತೆ ಆದೇಶಿಸಿದರು.
ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ರಾಜು, ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕಿ ಶಿಲ್ಪಾ ಸುರಪುರ ಹಾಗೂ ಜಿಲ್ಲೆಯ ತಾಲೂಕಿನ ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರು ಉಪಸ್ಥಿತರಿದ್ದರು.