Advertisement

ಅಕ್ರಮ ಗಣಿಗಾರಿಕೆ ತಡೆಯಿರಿ: ಆಚಾರ್‌

06:08 PM Jul 16, 2022 | Team Udayavani |

ಬೆಳಗಾವಿ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಹಾಗೂ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆ ತಡೆಗಟ್ಟಬೇಕು. ಅಕ್ರಮ ಸಾಗಾಣಿಕೆ ತಡೆಗಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಚೆಕ್‌ ಪೋಸ್ಟ್‌ ಗಳನ್ನು ತೆರೆಯಬೇಕು ಎಂದು ಗಣಿ ಮತ್ತು ಭೂ  ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವ ಹಾಲಪ್ಪ ಆಚಾರ್‌ ಸೂಚನೆ ನೀಡಿದರು.

Advertisement

ಸುವರ್ಣ ವಿಧಾನ ಸೌಧದ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಣಿ ಮತ್ತು ಭೂ ವಿಜ್ಞಾನ, ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರಿ ಜಮೀನುಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಯಾವುದೇ ರೀತಿಯ ದೂರುಗಳು ಬಂದಲ್ಲಿ, ತಕ್ಷಣ ಅವುಗಳನ್ನು ಗಣನೆಗೆ ತೆಗೆದುಕೊಂಡು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಮರಳು ಬ್ಲಾಕ್‌ ಗಳನ್ನು ಗುರುತಿಸಿ ಕೂಡಲೇ ನಿಯಮಾವಳಿ ಪ್ರಕಾರ ಹಂಚಿಕೆ ಮಾಡಬೇಕು. ಇದರಿಂದ ಅಕ್ರಮ ಗಣಿಗಾರಿಯನ್ನು ನಿಯಂತ್ರಿಸುವುದು ಸಾಧ್ಯವಾಗಲಿದೆ. ಹಂಚಿಕೆಗೆ ಸಂಬಂಧಿಸಿದಂತೆ ವಿನಾಕಾರಣ ವಿಳಂಬ ಮಾಡುವ ಇಲಾಖೆಯ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಪೌಷ್ಟಿಕತೆ ನಿವಾರಣೆಗೆ ಕ್ರಮ:ಅಪೌಷ್ಟಿಕತೆ ನಿವಾರಣೆಗಾಗಿ ಗರ್ಭಿಣಿಯರು, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಶೇ.85 ರಷ್ಟು ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಲ್ಲಿ ಬಂದು ಊಟ ಮಾಡುತ್ತಿದ್ದಾರೆ. ಆದರೂ ಕೆಲವು ಕಡೆಗಳಲ್ಲಿ ಮನೆಗಳಿಗೆ ಆಹಾರ ಪೂರೈಸುವಂತೆ ಬೇಡಿಕೆಗಳು ಬರುತ್ತವೆ. ಅಂತಹ ಸಂದರ್ಭದಲ್ಲಿ ಅನಿವಾರ್ಯವಿದ್ದರೆ ಮಾತ್ರ ಫಲಾನುಭವಿಗಳ ಮನೆಗಳಿಗೆ ಆಹಾರ ಕಿಟ್‌ ಪೂರೈಸಬೇಕು ಎಂದು ಸಚಿವರು ಹೇಳಿದರು. ಯಾವುದೇ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಬಾರದು.

ನಿಖರವಾದ ಸಮೀಕ್ಷೆ ಮೂಲಕ ಗುರುತಿಸಿ, ಫಲಾನುಭವಿಗಳ ಮನೆಯಿಂದ ಅಂಗನವಾಡಿ ಕೇಂದ್ರಗಳು ದೂರು ಇದ್ದಲ್ಲಿ, ಆವರಿಗೆ ಆಹಾರ ಕಿಟ್‌ ವಿತರಣೆ ಮಾಡಬೇಕು ಎಂದ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2021-22 ನೇ ಸಾಲಿನ ಉದ್ಯೋಗ ಯೋಜನೆ, ಉದ್ಯೋಗಿನಿ ಯೋಜನೆ, ಕಿರುಸಾಲ ಯೋಜನೆ, ಚೇತನಾ ಯೋಜನೆ ಹಾಗೂ ಧನಶ್ರೀ ಯೋಜನೆಗಳು ಸಮರ್ಪಕ ಬಳಕೆ ಆಗಬೇಕು ಎಂದು ಹೇಳಿದರು.

ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ವಿಕಲಚೇನರಿಗೆ ಯುಡಿಐಡಿ ಕಾರ್ಡ್‌: ಜಿಲ್ಲೆಯಲ್ಲಿ ಒಟ್ಟು 67,988 ಜನ ವಿಕಲಚೇತನರಿದ್ದು, 44,598 ಜನ ವಿಕಲಚೇತನರಿಗೆ ಯುಡಿಐಡಿ ಗುರುತಿನ ವಿತರಿಸಲಾಗಿದೆ. ಬಾಕಿ ಉಳಿದ 23,390 ವಿಕಲಚೇತನರಿಗೆ ಯುಡಿಐಡಿ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಇದೇ ಸಂದರ್ಭದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಸಾಂಕೇತಿಕವಾಗಿ ವಿಕಲಚೇತನ ಮಕ್ಕಳಿಗೆ ಲ್ಯಾಪ್‌ ಟಾಪ್‌, ಟ್ಯಾಬ್‌, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಬಾಣಂತಿಯರಿಗೆ ಪುಡ್‌ ಕಿಟ್‌, ಸ್ವ ಸಹಾಯ ಗುಂಪುಗಳಿಗೆ ಚೆಕ್‌ ವಿತರಿಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಡಾ.ಸಾಬಣ್ಣ ತಳವಾರ, ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದರ್ಶನ್‌ ಹೆಚ್‌. ವಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜ್‌, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next