ಬಾಗಲಕೋಟೆ: ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಯಾರೇ ಭಾಗಿಯಾದರೂ ಯಾವುದೇ ಮುಲಾಜಿಲ್ಲದೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಹಮ್ಮಿಕೊಂಡಿದ್ದ ಸಮಾಲೋಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಮುಕ್ತ ಸಲಹೆ ನೀಡಬಹುದು. ಎಲ್ಲಿಯೇ ಕಾನೂನು ಬಾಹಿರ ಚಟುವಟಕೆ ನಡೆದರೆ, ನೇರವಾಗಿ ನನ್ನ ಗಮನಕ್ಕೆ ತಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು ತಿಳಿಸಿದರು.
ಸಂಚಾರ ದಟ್ಟಣೆ: ಮುಧೋಳ ಹಾಗೂ ಬಾಗಲಕೋಟೆ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ವಾಹನ ಸವಾರರು ಸಂಚಾರ ನಿಯಮ ಪಾಲನೆ ಮಾಡುವ ಜತೆಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬಾಗಲಕೋಟೆ ನಗರದಲ್ಲಿ ಹಗಲು ಹೊತ್ತಿನಲ್ಲಿ ಭಾರಿ ವಾಹನ ಪ್ರವೇಶ ನಿಷೇಧಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಅನಿರೀಕ್ಷಿತ ಭೇಟಿ: ಸಂಚಾರಿ ನಿಯಮ ಪಾಲನೆ, ನಗರದ ವಿವಿಧೆಡೆ ಇರುವ ಮಹಿಳಾ ವಸತಿ ನಿಲಯ, ಕಾಲೇಜು ಮುಂಭಾಗ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುವ ಕುರಿತು ಮಾಹಿತಿ ಇದ್ದು, ಈ ಕುರಿತು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುವುದು.
ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗುವಾಗ ಮತ್ತು ಮರಳಿ ಹಾಸ್ಟೆಲ್, ಮನೆಗೆ ತೆರಳುವಾಗ ಕಿಡಿಗೇಡಿ ಯುವಕರು ತೊಂದರೆ ಕೊಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.