Advertisement
ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೀಡಿದ ಸ್ಪಷ್ಟ ಸಂದೇಶ. ಸೋಮವಾರ ಬೆಂಗಳೂರಿನ ಭಾರತ್ ಜೋಡೋ ಭವನದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲೇ ಚಾಟಿ ಬೀಸಿರುವ ಅವರು ಎಲ್ಲರಿಗೂ ಶಿಸ್ತಿನ ಪಾಠ ಮಾಡಿದ್ದಾರೆ. “ಪಕ್ಷದ ಶಿಸ್ತಿನ ವಿಷಯದಲ್ಲಿ ನಾನು ಮಾತನಾಡುವುದಿಲ್ಲ; ಸಿಎಂ ಮಾತನಾಡುತ್ತಾರೆ’ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರೆ, “ನಾನು ಮತ್ತು ಡಿ.ಕೆ.ಶಿವಕುಮಾರ್ ಸಹಿತ ಎಲ್ಲರೂ ಹೈಕಮಾಂಡ್ ಆದೇಶಕ್ಕೆ ಬದ್ಧರಾಗಿರೋಣ, ಸರಕಾರ ಹಾಗೂ ಪಕ್ಷದ ವಿಷಯಗಳಿಗೆ ಸಂಬಂಧಿಸಿ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ನಮ್ಮ ನಾಯಕರಲ್ಲಿ ಕೆಲವರು ಶಿಸ್ತಿನಿಂದ ಇಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ನಾಯಕರ ಭಾವನೆಗಳು ಅರ್ಥವಾಗುತ್ತವೆ. ಕಾರ್ಯಕರ್ತರಿಗೆ ಬೆಲೆ ಕೊಡುವುದನ್ನು ಕಲಿಯಿರಿ. ನಾಯಕರಲ್ಲೇ ಶಿಸ್ತಿಲ್ಲ ಎಂದರೆ ಕಾರ್ಯಕರ್ತರಿಗೆ ಏನು ಹೇಳುವುದು? ನಮಗೆ ಪಕ್ಷ, ಅದರ ರಕ್ಷಣೆ ಮುಖ್ಯ. ಭಿನ್ನಮತಗಳು ಆಂತರಿಕವಾಗಿ ಇರಬೇಕೇ ವಿನಾ ಬಹಿರಂಗ ಆಗಬಾರದು. ಯಾವ ಬಣದ ಪರ-ವಿರೋಧದ ಚರ್ಚೆಯೂ ಮಾಧ್ಯಮಗಳ ಮುಂದೆ ಆಗಲೇಬಾರದು ಎಂದು ಒತ್ತಿ ಹೇಳಿದರು.
Related Articles
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಪೂರ್ವಭಾವಿ ಸಭೆಗೆ ಸಚಿವರಾದ ಡಾ| ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಗೈರುಹಾಜರಾಗಿದ್ದರು.
Advertisement
ಈ ಪೂರ್ವಭಾವಿ ಸಭೆಯಲ್ಲಿ ಪಕ್ಷದಲ್ಲಿ ಈಚೆಗೆ ಕಂಡುಬರುತ್ತಿರುವ ಅಶಿಸ್ತಿನ ಬಗ್ಗೆ ಸುರ್ಜೇವಾಲಾ ಚಾಟಿ ಬೀಸಿದರು. ಆದರೆ ಆ ಸಭೆಯಲ್ಲಿ ಇಬ್ಬರೂ ಸಚಿವರು ಗೈರು ಹಾಜರಾಗಿದ್ದರು. ಒಮ್ಮೆಲೆ ಸಂಜೆ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಕಾಣಿಸಿಕೊಂಡರು. ತುಮಕೂರಿನಲ್ಲಿ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಸಭೆ ಬಳಿಕ ಸುರ್ಜೇವಾಲಾ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜಣ್ಣ ಹಾಗೂ ಪರಮೇಶ್ವರ ಗೈರು ಬಗ್ಗೆ ಕೇಳಿದಾಗ, ಪರಮೇಶ್ವರ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಪಕ್ಷವನ್ನು ಮುನ್ನಡೆಸಿದವರು. ಅವರಿಗೆ ಪಕ್ಷದ ಶಿಸ್ತಿನ ಬಗ್ಗೆ ಅರಿವಿದೆ. ಅವರ ಬಗ್ಗೆ ನಮಗೆ ಸದಭಿಪ್ರಾಯ ಇದೆ. ನಾನು ಪಕ್ಷದ ಒಳಗೆ ನಮ್ಮ ನಾಯಕರಿಗೆ ನನ್ನ ಸಂದೇಶ ತಲುಪಿಸಿದ್ದೇನೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದಿರುವ ಸುರ್ಜೇವಾಲಾ, 58 ಸಾವಿರ ಕೋಟಿ ರೂ. ಯೋಜನೆಯ ಲಾಭ ನಾಡಿನ ಜನರಿಗೆ ಸಿಗುತ್ತಿದೆ. ಕಾಂಗ್ರೆಸ್ ಗ್ಯಾರಂಟಿಗಳು ದೇಶದ ದೊಡ್ಡ ಯೋಜನೆಗಳು. ಇದರಿಂದ ಬಿಜೆಪಿಗೆ ಹತಾಶೆ ಆರಂಭವಾಗಿದೆ. ವಿಜಯೇಂದ್ರ ವಿರುದ್ಧ ವಾಗ್ಧಾಳಿ ನಡೆಸುವ ಯತ್ನಾಳ್‌ಗೆ ರಮೇಶ್ ಜಾರಕಿಹೊಳಿ ಸಾಥ್ ನೀಡುತ್ತಿದ್ದಾರೆ. ಬಿಜೆಪಿಯಲ್ಲೇ ಕಿತ್ತಾಟ ಇದೆ. ಜೆಡಿಎಸ್ ಕೂಡ ಬಿಜೆಪಿಗೆ ಬೆಂಬಲ ನೀಡಿದೆ. ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿಲ್ಲ. ಅವರ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಾಗಲಿ, ಶಿವಕುಮಾರ್ ಅವರಾಗಲಿ ಅರ್ಜುನನಂತೆ ತಮ್ಮ ಗುರಿಯತ್ತ ದೃಷ್ಟಿ ನೆಟ್ಟಿದ್ದಾರೆ. ಇವರ ಗುರಿ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಸಮರ್ಥವಾಗಿ ಸರಕಾರವನ್ನು ನಡೆಸುವುದು. ಬಿಜೆಪಿಯವರು ಅನಗತ್ಯವಾಗಿ ಗ್ಯಾರಂಟಿ ವಿರುದ್ಧ ಟೀಕೆ ಮಾಡಿ ಗೊಂದಲ ಮೂಡಿಸಲು ಮುಂದಾಗಿದ್ದಾರೆ ಎಂದರು. ನಮಗೆ ಅನ್ವಯಿಸುವುದಿಲ್ಲ: ಸತೀಶ್ ಜಾರಕಿಹೊಳಿ
ಒಂದೆಡೆ ಪರಮೇಶ್ವರ್, ರಾಜಣ್ಣ ಗೈರು ಹಾಜರಾದದ್ದು ಬೇರೆಯ ಸಂದೇಶವನ್ನೇ ಕೊಟ್ಟರೆ, “ನಾವು ಪಕ್ಷದ ಮಿತಿಯಲ್ಲೇ ಇರುವುದರಿಂದ ಸುರ್ಜೇವಾಲಾ ಹೇಳಿದ್ದು ನಮಗೆ ಅನ್ವಯಿಸುವುದಿಲ್ಲ’ ಎನ್ನುವ ಮೂಲಕ ಸಚಿವ ಸತೀಶ್ ಜಾರಕಿಹೊಳಿ ಮತ್ತೂಂದು ಸಂದೇಶ ಕೊಟ್ಟಂತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಸುರ್ಜೆವಾಲಾ ಅವರು ಹೇಳಿರುವುದಲ್ಲಿ ಏನು ತಪ್ಪಿದೆ? ಎಲ್ಲರೂ ಪಕ್ಷದ ಶಿಸ್ತು ಪಾಲಿಸಲೇಬೇಕು. ಪಕ್ಷ ಬಿಟ್ಟು ದೊಡ್ಡವರು ಯಾರೂ ಇಲ್ಲ ಎಂದಿದ್ದಾರೆ. ಅವರು ಹೇಳಿರುವುದು ಸರಿಯಿದೆ. ಕಾರ್ಯಕರ್ತರಿಗೆ ಪ್ರಾಮುಖ್ಯ ಕೊಡಬೇಕೆಂದು ನಾವೂ ಹೇಳಿದ್ದೇವೆ. ನಮ್ಮ ಹೋರಾಟ ಮತ್ತು ವಿಷಯಗಳೂ ಪಕ್ಷದ ಒಳಗೇ ಇದೆ. ಪಕ್ಷ ಬಿಟ್ಟು ಹೋಗಿಲ್ಲ. ಹೀಗಾಗಿ ಅವರು ಹೇಳಿದ್ದು ನಮಗೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನೊಂದೆಡೆ ನಮ್ಮ ಔತಣಕೂಟ ಸಭೆ ರದ್ದಾಗಿಲ್ಲ, ಮುಂದೂಡಿಕೆಯಷ್ಟೇ ಎಂದಿರುವ ಪರಮೇಶ್ವರ್, ನಮ್ಮ ಔತಣಕೂಟ ಸಭೆಗೆ ಸುರ್ಜೇವಾಲಾ ಅವರನ್ನೂ ಆಹ್ವಾನಿಸುತ್ತೇವೆ ಎನ್ನುವ ಮೂಲಕ ಪಟ್ಟು ಬಿಟ್ಟುಕೊಡಲು ತಯಾರಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಸೋಮವಾರ ಇಡೀ ದಿನ ಸರಣಿ ಸಭೆಗಳನ್ನು ನಡೆಸಿ ಪಕ್ಷದ ನಾಯಕರಿಗೆ ಶಿಸ್ತಿನ ಪಾಠ ಮಾಡಿದ ಸುರ್ಜೇವಾಲಾ, ಔತಣಕೂಟ ಸಭೆ ರದ್ದತಿಯ ಗಾಯಕ್ಕೆ ಮುಲಾಮು ಹಚ್ಚಿದರೋ ಅಥವಾ ಉಪ್ಪು ಸುರಿದರೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಹೈಕಮಾಂಡ್ ಆದೇಶಕ್ಕೆ ಬದ್ಧರಾಗಿರೋಣ: ಸಿಎಂ
ನಗರದ ಖಾಸಗಿ ಹೊಟೆಧೀಲ್‌ನಲ್ಲಿ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ “ಶಿಸ್ತಿನ’ ಆದೇಶದ ಚರ್ಚೆ ಆಗಿದೆ. “ನಾನು ಮತ್ತು ಡಿ.ಕೆ. ಶಿವಕುಮಾರ್ ಸೇರಿ ಎಲ್ಲರೂ ಹೈಕಮಾಂಡ್ ಆದೇಶಕ್ಕೆ ಬದ್ಧರಾಗಿರೋಣ. ಶಾಸಕರು ಹಾಗೂ ಸಚಿವರಿಗೂ ಇದು ಅನ್ವಯವಾಗುತ್ತದೆ. ಅನಗತ್ಯವಾಗಿ ಹೇಳಿಕೆಗಳನ್ನು ನೀಡುವುದರಿಂದ ಸರಕಾರ ಹಾಗೂ ಪಕ್ಷದಲ್ಲಿ ಗೊಂದಲಗಳಿಗೆ ಅವಕಾಶ ಕೊಡಬಾರದು. ಯಾರೂ ಬಹಿರಂಗವಾಗಿ ಮಾತನಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್‌ನಲ್ಲಿ ರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿನವಿಡೀ ನಡೆದ ಸರಣಿ ಸಭೆಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಮಾರಂಭ ಯಶಸ್ಸಿಗೆ ಎಲ್ಲರೂ ಸಕ್ರಿಯವಾಗಿ ಕೈಜೋಡಿಸಬೇಕೆಂದು ಮನವಿ ಮಾಡಿದರು. ಆದರೆ ಪಕ್ಷದ ಶಿಸ್ತಿನ ವಿಷಯದಲ್ಲಿ ನಾನು ಮಾತನಾಡುವುದಿಲ್ಲ, ಸಿಎಂ ಮಾತನಾಡುತ್ತಾರೆ ಎಂದಷ್ಟೇ ಹೇಳಿ ಭಾಷಣ ಮುಗಿಸಿದರು. ಇದಕ್ಕೆ ಮುನ್ನ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಬೆಳಗ್ಗೆ ವಿಸ್ತೃತ ಸರ್ವಸದಸ್ಯರ ಸಭೆ, ಪದಾಧಿಕಾರಿಗಳ ಸಭೆಯಲ್ಲಿ ಮಾಡಿದ ನೀತಿಪಾಠವನ್ನೇ ಶಾಸಕಾಂಗ ಸಭೆಯಲ್ಲೂ ಮಾಡಿದರಲ್ಲದೆ, ಅಶಿಸ್ತನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿದರು. ಸಿಎಂ ಇಂದು ದಿಲ್ಲಿಗೆ: ಕಾಂಗ್ರೆಸ್ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸಂಜೆ ನವದೆಹಲಿಗೆ ತೆರಳಲಿದ್ದು, ಅಲ್ಲಿ ಬುಧವಾರ ಬೆಳಗ್ಗೆ ನಡೆಯಲಿರುವ ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಚೇರಿ ಇಂದಿರಾ ಗಾಂಧಿ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಗಳವಾರ ಸಂಜೆ 5 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ನಿರ್ಗಮಿಸಲಿದ್ದಾರೆ. ರಾತ್ರಿ ಕರ್ನಾಟಕ ಭವನದಲ್ಲಿ ತಂಗಲಿರುವ ಅವರು ಬುಧವಾರ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಪ್ರಧಾನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ ಕೇಂದ್ರದ ಸಚಿವರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದಾರೆ. ಸಂಜೆ 5 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದ್ದಾರೆ.