Advertisement

DCM ಹುದ್ದೆ ಚರ್ಚೆ ನಿಲ್ಲಿಸಿ: ಸಚಿವರಿಗೆ ಮಲ್ಲಿಕಾರ್ಜುನ ಖರ್ಗೆ ತಾಕೀತು

12:41 AM Jan 12, 2024 | Team Udayavani |

ಬೆಂಗಳೂರು: ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಯಾವೊಬ್ಬ ಸಚಿವರೂ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ಲೋಕಸಭಾ ಚುನಾವಣೆ ಸಿದ್ಧತೆ ಸಂಬಂಧ ಹೊಸದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಗುರು ವಾರ ನಡೆದ ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್‌ ಸರಕಾರದ ಸಚಿವರ ಸಭೆಯಲ್ಲಿ ಖರ್ಗೆ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಪುನರಾವರ್ತನೆ ಸಹಿಸುವುದಿಲ್ಲ
ಕರ್ನಾಟಕದಲ್ಲಿ ನಾಲ್ಕೈದು ತಿಂಗಳುಗಳಿಂದ ಉಪ ಮುಖ್ಯ ಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಕೆಲವು ಸಚಿವರು ಅನಗತ್ಯವಾಗಿ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಎಲ್ಲಿ ಚರ್ಚಿಸಬೇಕು, ಯಾರೊಂದಿಗೆ ಚರ್ಚಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ. ಈ ವಿಷಯದಲ್ಲಿ ಹೈಕಮಾಂಡ್‌ ಈಗಾಗಲೇ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದ ಬಳಿಕವೂ ಒಂದಿಬ್ಬರು ಮತ್ತೆ ಅದೇ ವಿಷಯಗಳನ್ನು ಕೆಣಕುವ ಮೂಲಕ ಗೊಂದಲದ ವಾತಾವರಣ ಮುಂದುವರಿಸಲು ಪ್ರಯತ್ನಿಸಿದ್ದಾರೆ.

ಈ ರೀತಿಯ ವರ್ತನೆಯನ್ನು ಪಕ್ಷ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಖರ್ಗೆ ಸೂಚ್ಯವಾಗಿ ಹೇಳಿದರೆಂದು ತಿಳಿದುಬಂದಿದೆ. ಪ್ರತಿಯೊಬ್ಬ ಸಚಿವರಿಗೂ ಅತ್ಯಂತ ಮಹತ್ವದ ಜವಾಬ್ದಾರಿಗಳಿವೆ, ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಬದಲಿಗೆ ಅನಗತ್ಯ ವಾಗಿ ಅದರಲ್ಲೂ ಡಿಸಿಎಂ ಹುದ್ದೆ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿ ಪಕ್ಷದೊಳಗೆ ಗೊಂದಲದ ವಾತಾ ವರಣ ನಿರ್ಮಿಸುವುದು ಸರಿಯಲ್ಲ, ಈ ರೀತಿಯ ಹೇಳಿಕೆಗಳಿಂದ ಲಾಭ ಏನು ಎಂಬುದನ್ನು ಅರಿತುಕೊಂಡು ಹೋಗುವುದು ಒಳಿತು ಎಂದು ಖರ್ಗೆ ಅವರು ಕಿವಿ ಮಾತು ಹೇಳಿದರೆಂದು ಮೂಲಗಳು ಖಚಿತಪಡಿಸಿವೆ.

ಪ್ರಸ್ತಾವನೆ ಇಲ್ಲವೆಂದು ಹೇಳಿದ್ದ ಖರ್ಗೆ
ಡಿಸಿಎಂ ಹುದ್ದೆ ಸೃಷ್ಟಿ ವಿಚಾರದ ಬಗ್ಗೆ ಸಚಿವರಾದ ಸತೀಶ್‌ ಜಾರಕಿಹೊಳಿ, ಡಾ|ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಎಂ.ಬಿ. ಪಾಟೀಲ್‌, ಡಾ| ಎಚ್‌.ಸಿ. ಮಹದೇವಪ್ಪ ಹಾಗೂ ಕೆ.ಎನ್‌.ರಾಜಣ್ಣ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುಜೇìವಾಲ ಅವರನ್ನು ಭೇಟಿಯಾಗಿ ಪ್ರಸ್ತಾವಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿರುವ ಪ್ರಮುಖ ಸಮುದಾಯಗಳಿಗೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಡಿಸಿಎಂ ಹುದ್ದೆ ಕೊಡಬೇಕೆಂದು ಮನವಿ ಮಾಡಿದ್ದ ಮಾರನೇ ದಿನವೇ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಹೈಕಮಾಂಡ್‌ ಮುಂದೆ ಆ ರೀತಿಯ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಾರಸಗಟಾಗಿ ತಿರಸ್ಕರಿಸಿದ್ದರು.

Advertisement

ಇಷ್ಟರ ನಡುವೆಯೂ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಅವರು ತಮ್ಮ ನಿಲುವು ಪುನರುಚ್ಚರಿಸುವ ಮೂಲಕ ಹೈಕಮಾಂಡ್‌ಗೆ ಸೆಡ್ಡು ಹೊಡೆದಂತೆೆ ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕೆಂದು ಹೇಳಿದ್ದರು. ಈ ಬೆಳವಣಿಗೆ ಕಾಂಗ್ರೆಸ್‌ ಹೈಕಮಾಂಡನ್ನು ಕೆರಳಿಸಿದ್ದು, ದಿಲ್ಲಿ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಲಾಗಿದೆ.

ಸಚಿವರಿಗೆ ಖರ್ಗೆ ಕೊಟ್ಟ ಎಚ್ಚರಿಕೆಯೇನು?
ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ
ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬೇಡಿ
ಪಕ್ಷ, ಸರಕಾರದ ವರ್ಚಸ್ಸಿಗೆ ಧಕ್ಕೆ ತರಬೇಡಿ
ಬಹಿರಂಗ ಹೇಳಿಕೆ ನೀಡಿ ಏನನ್ನು ಸಾಧಿಸುತ್ತೀರಿ?
ಇಂಥ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ

ಎಐಸಿಸಿ ಅಧ್ಯಕ್ಷರನ್ನು ಅವಮಾನಿಸಬೇಡಿ: ಡಿ.ಕೆ. ಸುರೇಶ್‌
ರಾಜ್ಯದಲ್ಲಿ 30 ಮಂದಿಯನ್ನು ಡಿಸಿಎಂ ಮಾಡಿದರೂ ಸ್ವಾಗತಿಸುತ್ತೇವೆ. ಆದರೆ ಎಐಸಿಸಿ ಅಧ್ಯಕ್ಷರನ್ನು ಅವಮಾನಿಸುವ ಕೆಲಸ ಕೆಲವು ನಾಯಕರಿಂದ ಆಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್‌ ಆರೋಪಿಸಿದ್ದಾರೆ. “ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೇ ಆಗಿದ್ದಾರೆ. ಅಧ್ಯಕ್ಷರಿಗೆ ಇರುಸುಮುರುಸು ಉಂಟುಮಾಡಿಸುವ ಕೆಲಸ ನಡೆಯುತ್ತಿದೆ. ಡಿಕೆಶಿ ಪ್ರಶ್ನೆ ಅಲ್ಲ. ಡಿಕೆಶಿ ಅವರು ಅಧ್ಯಕ್ಷರಾಗಿ ಐವರು ಕಾರ್ಯಾಧ್ಯಕ್ಷರೊಂದಿಗೆ ಕೆಲಸ ಮಾಡಿದ್ದಾರೆ. 30 ಜನರನ್ನು ಡಿಸಿಎಂ ಮಾಡಿದರೂ ನಾವು ಸ್ವಾಗತಿಸುತ್ತೇವೆ. ಆದರೆ ಎಐಸಿಸಿ ಅಧ್ಯಕ್ಷರನ್ನು ಅವಮಾನಿಸುವ ಕೆಲಸ ಆಗಬಾರದು’ ಎಂದರು.

ಮೂವರು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಈಗಾಗಲೇ ನಮ್ಮ ಅಭಿಪ್ರಾಯಗಳನ್ನು ಹೈಕಮಾಂಡ್‌ ಮುಂದೆ ಇಟ್ಟಿದ್ದೇವೆ. ಪಕ್ಷದ ವರಿಷ್ಠರು ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದು, ಅದಕ್ಕೆ ನಾವು ಬದ್ಧ.
– ಕೆ.ಎನ್‌. ರಾಜಣ್ಣ, ಸಹಕಾರ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next