Advertisement

ರಾಜಕಾಲುವೆ ಉದ್ಯಾನ ಕಾಮಗಾರಿ ಸ್ಥಗಿತಕ್ಕೆ ಸೂಚನೆ

03:53 PM Sep 23, 2022 | Team Udayavani |

ಗದಗ: ಶಾಸಕ ಎಚ್‌.ಕೆ. ಪಾಟೀಲ ಅವರು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದ ರಾಜಕಾಲುವೆ ಮೇಲಿನ ಉದ್ಯಾನವನ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನಗರಸಭೆ ಪೌರಾಯುಕ್ತರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಈ ಸಂಗತಿ ಅವಳಿ ನಗರದಲ್ಲಿ ಬಹು ಚರ್ಚಿತ ವಿಷಯವಾಗಿ ಮುನ್ನೆಲೆಗೆ ಬಂದಿದೆ.

Advertisement

ಈಗಾಗಲೇ ವಿಧಾನಸಭೆ ಅಧಿವೇಶನದಲ್ಲಿ ಬೆಂಗಳೂರು ನಗರದಲ್ಲಿ ರಾಜಕಾಲುವೆ ಕಬಳಿಕೆ, ಕೆರೆಗಳನ್ನು ಮುಚ್ಚಿ ಒತ್ತುವರಿ ಮಾಡಿರುವ ಕುರಿತಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ, ಅವಳಿ ನಗರದಲ್ಲಿ ರಾಜಕಾಲುವೆ ಮೇಲೆ ಉದ್ಯಾನವನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶವಿದೆಯಾ?, ಉದ್ಯಾನ ನಿರ್ಮಾಣ ಹೇಗೆ ಸಾಧ್ಯ ಎಂಬ ಪ್ರಶ್ನೆ ಸಾರ್ವಜನಿಕರ ಚರ್ಚೆಯ ವಿಷಯವಾಗಿದೆ.

ಶಾಸಕ ಎಚ್‌.ಕೆ. ಪಾಟೀಲ ಅವರು ಆ. 13ರಂದು ರಾಜ್ಯದ ಮೊದಲ ಪ್ರಯೋಗವೆಂದು ಸ್ಟೇಶನ್‌ ರಸ್ತೆಗೆ ಹೊಂದಿಕೊಂಡಿರುವ ನಾಲಾದ ಪಾಯಿಂಟ್‌ ನಿಂದ 450ಮೀ ಉದ್ದದವರೆಗೆ 4 ಮೀಟರ್‌ ಅಗಲದ ರಾಜನಾಲಾ ಮೇಲೆ ಮಕ್ಕಳ ಉದ್ಯಾನ, ಓಪನ್‌ ಜಿಮ್‌, ಮಕ್ಕಳಿಗಾಗಿ ಈಜುಕೋಳ, ಹಿರಿಯರು ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆ ಕಲ್ಪಿಸಲು 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ, ನಗರಸಭೆ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಪೌರಾಯುಕ್ತರು ಕಾಮಗಾರಿ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ.

ಹಸಿರು ಪೀಠ ನಿಯಮ ಉಲ್ಲಂಘನೆ ಆರೋಪ: ಗದಗ-ಬೆಟಗೇರಿ ನಗರಸಭೆ 17, 18ನೇ ವಾರ್ಡಿನ ರಾಜಕಾಲುವೆ ಮೇಲೆ ಉದ್ಯಾನ ನಿರ್ಮಿಸುತ್ತಿರುವುದು ಹಸಿರು ಪೀಠದ ನಿಯಮಗಳ ಉಲ್ಲಂಘನೆಯಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ರಾಜಕಾಲುವೆ ಒತ್ತುವರಿ ಹಾಗೂ ಸಂರಕ್ಷಿತ ಪ್ರದೇಶಗಳಲ್ಲಿ ಸಾಕಷ್ಟು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇಷ್ಟಿದ್ದರೂ ರಾಜಕಾಲುವೆ ಮೇಲೆ ಕಾನೂನು ಬಾಹಿರ ಕಾಮಗಾರಿ ನಡೆಸಲು ಅನುಮತಿ ನೀಡಿರುವುದು ಸರಿಯಲ್ಲ ಎಂದು ಜಾಗತಿಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಘಟನೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌.ವಿ. ಮುತ್ತಿನಪೆಂಡಿಮಠ ಅವರು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

ಹಸಿರು ಪೀಠದ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ರಾಜಕಾಲುವೆ ಮೇಲೆ ಉದ್ಯಾನ ನಿರ್ಮಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಪೌರಾಯುಕ್ತರು ಕಾಮಗಾರಿ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ರಾಜಕೀಯ ಒತ್ತಡದಿಂದ ಮತ್ತೆ ಕಾಮಗಾರಿ ಆರಂಭವಾದರೆ ಹಸಿರು ಪೀಠಕ್ಕೆ ಹೋಗಿ ತಡೆಯಾಜ್ಞೆ ತರಲಾಗುವುದು. -ಎಸ್‌.ವಿ. ಮುತ್ತಿನಪೆಂಡಿಮಠ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಘಟನೆ

Advertisement

ಗದಗ-ಬೆಟಗೇರಿ ನಗರಸಭೆ 17, 18ನೇ ವಾರ್ಡಿನಲ್ಲಿ ಗೌರಿಶಂಕರ ಲಾಡ್ಜ್ನಿಂದ ಡಿಸಿ ಮಿಲ್‌ ರಸ್ತೆವರೆಗಿನ ಜವಳದ ದೊಡ್ಡ ಚರಂಡಿ ಮೇಲೆ ನಗರಸಭೆಯಿಂದ ಪೂರ್ವಾನುಮತಿ ಪಡೆಯದೇ ಉದ್ಯಾನ ನಿರ್ಮಾಣ ಕಾಮಗಾರಿ ಆರಂಭಿಸಿರುವುದು ಗಮನಕ್ಕೆ ಬಂದಿದ್ದು, ಕಾಮಗಾರಿ ಸ್ಥಗತಿಗೊಳಿಸಲು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಿಗೆ ಸೂಚನೆ ನೀಡಲಾಗಿದೆ. –ರಮೇಶ ಸುಣಗಾರ, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ

ಶಾಸಕ ಎಚ್‌.ಕೆ. ಪಾಟೀಲ ಅವರು ತಮ್ಮ ಶಾಸಕರ ಅನುದಾನದಲ್ಲಿ ಜವುಳಗಲ್ಲಿ ಭಾಗದಲ್ಲಿ ಸ್ವಚ್ಚತೆಯ ಹಿತದೃಷ್ಟಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ಮೇಲೆ ಉದ್ಯಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮಗಳಿಲ್ಲ. ಆದಾಗ್ಯೂ ಪೂರ್ವಾನುಮತಿ ಪಡೆಯುವುದು ಅವಶ್ಯಕವೆಂದಾದರೆ ಕಾಮಗಾರಿ ಮುಂದುವರಿಸಲು ಅನುಮತಿಗೆ ಮನವಿ ಸಲ್ಲಿಸಲಾಗುವುದು. –ಜೀವನಸಾಬ್‌ ನಮಾಜಿ, ಸದಸ್ಯರು, ನಗರಸಭೆ 18ನೇ ವಾರ್ಡ್‌

ಗದಗ-ಬೆಟಗೇರಿ ಅವಳಿ ನಗರದ 17 ಮತ್ತು 18ನೇ ವಾರ್ಡಿನ ಜವಳಗಲ್ಲಿಯ ರಾಜಕಾಲುವೆ ಮೇಲೆ ನಗರಸಭೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿತ್ತು. ಈ ವಿಷಯ ನನ್ನ ಗಮನಕ್ಕೆ ಬರುತ್ತಿದ್ದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೂ ದೂರದೃಷ್ಟಿ ಇಲ್ಲದೇ ರಾಜಕಾಲುವೆಯ ಅಕ್ಕಪಕ್ಕ ಕಟ್ಟಡ, ಲೇಔಟ್‌, ವಸತಿ ಸಮುತ್ಛಯಗಳನ್ನು ನಿರ್ಮಿಸಿದ ಕಾರಣ, ಮಳೆ ನೀರು ಸರಾಗವಾಗಿ ಹರಿಯದೇ ಬಹಳಷ್ಟು ತೊಂದರೆಗಳಾಗಿರುವುದು ಕಣ್ಮುಂದೆಯೇ ಇದೆ. ಹೀಗಿದ್ದಾಗಲೂ ಸ್ಥಳೀಯ ಶಾಸಕರು ರಾಜಕಾಲುವೆ ಮೇಲೆ ಉದ್ಯಾನ ನಿರ್ಮಿಸಲು ಹೊರಟಿರುವುದು ದುರಂತದ ಸಂಗತಿ. ಇದಕ್ಕೆ ಜನರೇ ತಕ್ಕಪಾಠ ಕಲಿಸಲಿದ್ದಾರೆ. –ಉಷಾ ಎಂ. ದಾಸರ, ಅಧ್ಯಕ್ಷರು, ಗದಗ-ಬೆಟಗೇರಿ ನಗರಸಭೆ 

-ಅರುಣಕುಮಾರ ಹಿರೇಮಠ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next