Advertisement

ಜಾತಿ ಒಡೆದಾಳುವ ನೀತಿ ನಿಲ್ಲಿಸಿ

12:39 PM Aug 06, 2018 | |

ಮೈಸೂರು: ಇತ್ತೀಚಿಗೆ ಎಲ್ಲವನ್ನೂ ಜಾತಿ, ಧರ್ಮದ ದೃಷ್ಟಿಯಿಂದ ನೋಡಲಾಗುತ್ತಿದ್ದು, ಹೀಗಾಗಿ ಜಾತಿಯ ಆಧಾರದ ಮೇಲೆ ವೀರಶೈವ-ಲಿಂಗಾಯತ, ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವವರ ವಿರುದ್ಧ ಎಚ್ಚರಿಕೆಯಿಂದ ಇರಬೇಕಿದೆ ಎಂದು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಹೇಳಿದರು.

Advertisement

ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ಭಾನುವಾರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ವೀರಶೈವ, ಲಿಂಗಾಯತ ಶಾಸಕರು, ಸಂಸದರು ಮತ್ತು ಸಚಿವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿಗೆ ಒತ್ತುಕೊಡಿ: ಇಂದು ಎಲ್ಲವನ್ನೂ ಜಾತಿ, ಧರ್ಮದ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಇದರಿಂದ ನಾವು ಸದೃಢರಾಗಬೇಕಿದೆ. ಆ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಡೆಗಣನೆ ಮಾಡುತ್ತಿರುವ ಮನಸ್ಸನ್ನು ಸರಿಪಡಿಸಿ, ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸಿ, ಬದುಕುವುದನ್ನು ಕಲಿಯಬೇಕು. ಇದರೊಂದಿಗೆ ರಾಜ್ಯವನ್ನು ಪ್ರತ್ಯೇಕಿಸುವ ಷಡ್ಯಂತ್ರ ತಡೆಯದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಇದಕ್ಕಾಗಿ ನಾವೆಲ್ಲರೂ ಒಂದಾಗಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸೋಣ ಎಂದು ಹೇಳಿದರು. 

ರಾಜಕೀಯ ಕುತಂತ್ರ: ಬಸವಣ್ಣನ ಕಾಲದಿಂದಲೂ ಜಾತಿ, ಧರ್ಮ ಸ್ಥಾಪನೆಯ ಹಿಂದೆ ಮಾನವ ಕುಲ ಉದ್ಧಾರವಾಗಬೇಕೆಂಬ ಉದ್ದೇಶವಿತ್ತು. ಅಲ್ಲದೆ ಯಾರಧ್ದೋ ರಾಜಕೀಯ ಲಾಭಕ್ಕಾಗಿ ಲಿಂಗಾಯತ-ವೀರಶೈವರು ಬಲಿಯಾಗದೆ ಇರುವುದಕ್ಕೆ ಬಸವ ತತ್ವ ಗಟ್ಟಿಯಾಗಿರುವುದೇ ಕಾರಣ. ಆದ್ದರಿಂದ ಯಾರೂ ಕೂಡ ಧರ್ಮ ರಾಜಕೀಯದ ಕುತಂತ್ರಕ್ಕೆ ಬಲಿಯಾಗಬಾರದು ಎಂದರು.

ಒಡೆಯುವ ಕೆಲಸ ಬೇಡ: ಇತ್ತೀಚೆಗೆ ಕೆಲವರು ಅಖಂಡ ಕರ್ನಾಟಕವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದ್ದು, ಜತೆಗೆ ಧರ್ಮ ಮತ್ತು ದಾರ್ಶನಿಕರನ್ನು ಜಾತಿಮಟ್ಟಕ್ಕೆ ಇಳಿಸುತ್ತಿರುವುದು ದುರ್ದೈವದ ಸಂಗತಿ. ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಸೇರಿದಂತೆ ಹಲವು ಮಹನೀಯರು ಇಲ್ಲದಿದ್ದರೆ ಇಷ್ಟೊತ್ತಿಗೆ ವೀರಶೈವ ಲಿಂಗಾಯತರನ್ನು ಪ್ರತ್ಯೇಕಿಸಲಾಗುತ್ತಿತ್ತು.

Advertisement

ಇದೇ ರೀತಿಯಲ್ಲಿ ಕರ್ನಾಟಕದ ಏಕೀಕರಣದಲ್ಲಿ ಸಾಕಷ್ಟು ಮಂದಿಯ ತ್ಯಾಗ, ಬಲಿದಾನವಿದೆ. ಆದರೂ ಉತ್ತರ ಕರ್ನಾಟಕದ ಪ್ರತ್ಯೇಕಿಸುವ ಮಾತು ಕೇಳಿ ಬರುತ್ತಿದೆ ಎಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಸಂಸದ ಪ್ರತಾಪ್‌ಸಿಂಹ, ವಿಧಾನ ಪರಿಷತ್‌ ಸದಸ್ಯ ಮಹಂತೇಶ್‌ ಮಲ್ಲಿಕಾರ್ಜುನ್‌ ಕವಟಗಿಮಠ,

ಅಲ್ಲಂ ವೀರಭದ್ರಪ್ಪ, ಆಯನೂರು ಮಂಜುನಾಥ್‌, ರುದ್ರೇಗೌಡ, ಶಾಸಕರಾದ ಬಸವರಾಜ ಬೊಮ್ಮಾಯಿ, ವೀರಣ್ಣ ಚರಂತಿಮಠ, ನಂಬಣ್ಣ, ನಿರಂಜನಕುಮಾರ್‌, ಸುರೇಶ್‌, ಲಿಂಗೇಶ್‌, ವಿರೂಪಾಕ್ಷಪ್ಪ, ಶಶಿಕಲಾ ಜೊಲ್ಲೆ, ಬೆಳ್ಳಿ ಪ್ರಕಾಶ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಪಾಟೀಲ್‌, ರೇಣುಕಾಚಾರ್ಯ, ಉದಾಸಿ, ನೈಸ್‌ ಸಂಸ್ಥೆ ಎಂಡಿ ಅಶೋಕ ಖೇಣಿ, ವೀರಶೈವ ಮಹಾಸಭಾ ಕಾರ್ಯಾಧ್ಯಕ್ಷ ತಿಪ್ಪಣ್ಣ ಮತ್ತಿತರರು ಹಾಜರಿದ್ದರು. 

ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸಬೇಕೆಂಬ ಆದೇಶ ಹೊರಡಿಸಿದಾಗ, ಅವರನ್ನು ವೀರಶೈವ ಮಹಾಸಭಾ ಸನ್ಮಾನಿಸಿತ್ತು. ಆ ವೇಳೆ ವೀರಶೈವ-ಲಿಂಗಾಯತ ವಿಷಯ ಪ್ರಸ್ತಾಪವಾಯಿತು. ಹೀಗಾಗಿ ರಾಜ್ಯದಲ್ಲಿ ವೀರಶೈವ ಮತ್ತು ಲಿಂಗಾಯಿತ ಎಂಬ ಕೂಗು ಆರಂಭವಾಗಲು ಒಂದು ರೀತಿಯಲ್ಲಿ ನಾವೇ ಮಾಡಿದ ತಪ್ಪು.
-ಡಾ.ಶಾಮನೂರು ಶಿವಶಂಕರಪ್ಪ, ಶಾಸಕ

ನಾನು ಕಳೆದ ಬಾರಿ ಶಾಸಕನಾಗಿ ಮಾಡಿದ ಕೆಲಸವನ್ನು ಯಾರೂ ಮಾಡಿರಲಿಲ್ಲ. ಆದರೂ 35 ಸಾವಿರ ಜನ ಮಾತ್ರ ನನಗೆ ಮತ ನೀಡಿದರು. ಮಠಗಳು ಶಿಕ್ಷಣದಂತೆ ಜನರಲ್ಲಿ ಬದ್ಧತೆಯನ್ನು ಕಲಿಸಬೇಕು. ಕಾಯಕವೇ ಕೈಲಾಸ ಎಂಬುದನ್ನು ಅರಿಯಬೇಕಿದೆ. 
-ಅಶೋಕ್‌ ಖೇಣಿ, ವ್ಯವಸ್ಥಾಪಕ ನಿರ್ದೇಶಕ, ನೈಸ್‌ ಸಂಸ್ಥೆ 

Advertisement

Udayavani is now on Telegram. Click here to join our channel and stay updated with the latest news.

Next